ಜನಸಂಖ್ಯಾ ನಿಯಂತ್ರಣಕ್ಕೆ ಸಮುದಾಯದ ಸಹಭಾಗಿತ್ವ ಅಗತ್ಯ :ನ್ಯಾ.ಸತೀಶ್ ಜೆ.ಬಾಳಿ

????????????????????????????????????


ಬಳ್ಳಾರಿ,ಜು.21: ಜನಸಂಖ್ಯಾ ನಿಯಂತ್ರಣಕ್ಕೆ ಆರೋಗ್ಯ ಇಲಾಖೆಗಳ ಜೊತೆಗೆ ಜನ ಸಮುದಾಯವು ಸಕ್ರಿಯವಾಗಿ ಭಾಗವಹಿಸಿದ್ದಲ್ಲಿ ಮಾತ್ರ ಮುಂದಿನ ದಿನಗಳಲ್ಲಿ ದೇಶದ ಜನಸಂಖ್ಯೆಯನ್ನು ನಿಯಂತ್ರಣ ಮಾಡಲು ಸಾಧ್ಯವಿದೆ ಎಂದು ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳಾದ ಸತೀಶ್ ಜೆ.ಬಾಳಿ ಅವರು ಹೇಳಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಜಿಲ್ಲಾ ಅರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಸಂಯುಕ್ತಾಶ್ರಯದಲ್ಲಿ ವಿಶ್ವ ಜನಸಂಖ್ಯಾ ದಿನಾಚರಣೆ ಅಂಗವಾಗಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳ ಕಚೇರಿಯ ಆವರಣದಲ್ಲಿ ಬುಧವಾರದಂದು ಹಮ್ಮಿಕೊಂಡಿದ್ದ ಜನ ಜಾಗೃತಿ ಜಾಥಾಗೆ ಚಾಲನೆ ನೀಡಿ ಮಾತನಾಡಿದರು.
ನಮ್ಮ ದೇಶದ ಜನಸಂಖ್ಯೆ 141 ಕೋಟಿ ದಾಟಿದ್ದು ಜಗತ್ತಿನ ಶೇ.17.86 ಜನಸಂಖ್ಯೆ ಭಾರತದಲ್ಲಿದ್ದು, ಕರ್ನಾಟಕದ ಜನಸಂಖ್ಯೆ 6.68 ಕೋಟಿಯನ್ನು ದಾಟಿದೆ. ಹೆಚ್ಚುತ್ತಿರುವ ಜನಸಂಖ್ಯೆ ದೇಶದ ಸಾಮಾಜಿಕ ಆರ್ಥಿಕ ಅಭಿವೃದ್ದಿಯಲ್ಲಿ ಅನೇಕ ತೊಂದರೆಗಳನ್ನು ಅನುಭವಿಸುತ್ತಿದ್ದೇವೆ. ಈ ನಿಟ್ಟಿನಲ್ಲಿ ಆರೋಗ್ಯ ಇಲಾಖೆ ಅಡಿಯಲ್ಲಿರುವ ಕುಟುಂಬ ಕಲ್ಯಾಣ ವಿಧಾನಗಳನ್ನು ಪರಿಣಾಮಕಾರಿಯಾಗಿ ಜನರಿಗೆ ತಲುಪಿಸುವ ಮೂಲಕ ಕನಿಷ್ಠ 3 ವರ್ಷಗಳ ಅಂತರವನ್ನು ಮಗುವಿನ ಜನನದ ನಡುವೆ ಅನುಸರಿಸುವ ಮೂಲಕ ಚಿಕ್ಕ ಸಂಸಾರಕ್ಕೆ ಆದ್ಯತೆ ನೀಡಲು ಪ್ರತಿಯೊಬ್ಬರು ಮುಂದೆ ಬರಬೇಕು ಎಂದು ಕರೆ ನೀಡಿದರು.
ಜಿಲ್ಲಾ ಅರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳಾದ ಡಾ.ಜನಾರ್ಧನ್ ಹೆಚ್.ಎಲ್ ಅವರು ಮಾತನಾಡಿ, ಜನಸಂಖ್ಯೆ ನಿಯಂತ್ರಣದಲ್ಲಿ ಅಲ್ಪಮಟ್ಟಿಗೆ ಸಾಧನೆ ಮಾಡಿದ್ದೇವೆ. ಆದರೆ ನಮ್ಮ ಮುಂದಿರುವ ಸಮಸ್ಯೆ ಎಂದರೆ ಜನಸಂಖ್ಯಾ ಸ್ಥಿರತೆಯನ್ನು ಕಾಯ್ದುಕೊಳ್ಳುವುದಕ್ಕೆ ಆದ್ಯತೆ ನೀಡಲಾಗುತ್ತಿದ್ದು, ಮದುವೆಯಾದ ಮೊದಲ 2 ವರ್ಷಗಳ ಅವಧಿಗೆ ತಾತ್ಕಾಲಿಕ ವಿಧಾನಗಳನ್ನು ಬಳಸಬೇಕು ಹಾಗೂ ಮೊದಲ ಜನನದ ನಂತರ ಮುಂದಿನ ಮಗುವಿಗೆ ಕನಿಷ್ಠ 3 ವರ್ಷಗಳ ಅಂತರಕ್ಕಾಗಿ ಮಾಲಾ ಮತ್ತು ಛಾಯಾ ಹೆಸರಿನ ನುಂಗುವ ಮಾತ್ರೆ ಸೇವಿಸಬೇಕು ಎಂದು ತಿಳಿಸಿದರು.
ಹೆರಿಗೆಯಾದ ತಕ್ಷಣ ಪಿಪಿಐಯುಸಿಡಿ ಮಹಿಳೆಯರಿಗೆ ಅಳವಡಿಸುವುದು ಹಾಗೂ 5 ರಿಂದ 10 ವರ್ಷಗಳವರೆಗೆ ಮಕ್ಕಳ ಜನನ ತಡೆಯಬಹುದಾದ ಐಯುಇಸಿಡಿ 375, 380ಎ ಗಳನ್ನು ಬಳಸುವುದು ಇತ್ತೀಚೆಗೆ ಅತ್ಯಂತ ಜನಪ್ರಿಯವಾಗಿರುವ ಮಹಿಳೆಗೆ ಪ್ರತಿ 3 ತಿಂಗಳಿಗೊಮ್ಮೆ ಕೊಡಬಹುದಾದ ಅಂತರ ಚುಚ್ಚುಮದ್ದು ಬಳಸಬಹುದಾಗಿದೆ ಎಂದು ಅಭಿಪ್ರಾಯ ಪಟ್ಟರು.
ಮಕ್ಕಳು ಬೇಡವೆಂದು ನಿರ್ಧರಿಸಿದ್ದಲ್ಲಿ ಮಹಿಳೆಯರಿಗೆ ಶಾಶ್ವತ ಶಸ್ತ್ರಚಿಕಿತ್ಸಾ ವಿಧಾನಗಳಾದ ಲ್ಯಾಪ್ರೋಸ್ಕೋಫಿಕ್, ಟ್ಯುಬೆಕ್ಟಮಿ ಪುರುಷರಿಗೆ ನೊಸ್ಕಾಲ್‍ಪೆಲ್ ವ್ಯಾಸಕ್ಟಮಿ (ಎನ್.ಎಸ್.ವಿ) ಲಬ್ಯವಿದ್ದು ಎಲ್ಲಾ ಸೇವೆಗಳು ಸರ್ಕಾರಿ ಆಸ್ಪತ್ರೆಯಲ್ಲಿ ಉಚಿತವಾಗಿ ದೊರಕುತ್ತವೆ ಎಂದು ಹೇಳಿದ ಅವರು, ಬಳ್ಳಾರಿ ಜಿಲ್ಲೆಯಲ್ಲಿ 8050 ಮಹಿಳಾ ಫಲಾನುಭವಿಗಳಿಗೆ ಹಾಗೂ ಇಬ್ಬರು ಪುರುಷ ಫಲಾನುಭವಿಗಳಿಗೆ ಶಸ್ತ್ರಚಿಕಿತ್ಸೆ ಮಾಡಲಾಗಿದೆ. ಮಕ್ಕಳ ಜನನದ ಮಧ್ಯೆ ಅಂತರವಿಡಲು ತಾತ್ಕಾಲಿಕ ವಿಧಾನಗಳ ಅಡಿ 6424 ಮಹಿಳೆಯರಿಗೆ ವಂಕಿ ಅಳವಡಿಸಲಾಗಿದ್ದು, 4040 ನುಂಗುವ ಮಾತ್ರೆ ವಿತರಿಸಲಾಗಿದೆ ಎಂದರು.
ಅಂತರ ಚುಚ್ಚುಮದ್ದನ್ನು 1137 ಡೋಸ್‍ಗಳನ್ನು ಫಲಾನುಭವಿಗಳಿಗೆ ನೀಡಲಾಗಿದೆ. ವಿಶೇಷವಾಗಿ ಹೆರಿಗೆಯಾದ ತಕ್ಷಣ ಪಿಪಿಐಯುಸಿಡಿ(ವಂಕಿ) 48 ಗಂಟೆ ಒಳಗಡೆ 3159 ಮಹಿಳೆಯರಿಗೆ ಪಿಪಿಐಯುಸಿಡಿ ಅಳವಡಿಸುವುದರಿಂದ ಗಣನೀಯವಾಗಿ ಜನಸಂಖ್ಯೆಯನ್ನು ನಿಯಂತ್ರಿಸಲಾಗಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಶಸ್ತ್ರಚಿಕಿತ್ಸಕರಾದ ಡಾ.ಬಸರೆಡ್ಡಿ, ಜಿಲ್ಲಾ ಆರೋಗ್ಯ ತರಬೇತಿ ಕೇಂದ್ರದ ಪ್ರಾಂಶುಪಾಲರಾದ ಡಾ.ಗುರುನಾಥ್ ಬಿ.ಚೌವ್ಹಾಣ್, ಜಿಲ್ಲಾ ಕುಟುಂಬ ಕಲ್ಯಾಣ ಅನುಷ್ಠಾನ ಅಧಿಕಾರಿ ಡಾ.ಪೂರ್ಣಿಮಾ ಕಟ್ಟಿಮನಿ, ಜಿಲ್ಲಾ ಆರ್.ಸಿ.ಹೆಚ್ ಅಧಿಕಾರಿ ಡಾ.ಅನಿಲ್ ಕುಮಾರ್.ಆರ್, ಜಿಲ್ಲಾ ಕ್ಷಯರೋಗ ನಿಯಂತ್ರಣ ಅಧಿಕಾರಿ ಡಾ.ಇಂದ್ರಾಣಿ.ವಿ, ಜಿಲ್ಲಾ ಕುಷ್ಠರೋಗ ನಿಯಂತ್ರಣ ಅಧಿಕಾರಿ ಡಾ.ವೀರೇಂದ್ರ ಕುಮಾರ್, ತಾಲ್ಲೂಕು ಆರೋಗ್ಯ ಅಧಿಕಾರಿ ಡಾ.ಮೋಹನಕುಮಾರಿ, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಈಶ್ವರ.ಹೆಚ್ ದಾಸಪ್ಪನವರ, ಕಿರಿಯ ಮಹಿಳಾ ಆರೋಗ್ಯ ಸಹಾಯಕಿಯರ ತರಬೇತಿ ಕೇಂದ್ರದ ಪ್ರಾಂಶುಪಾಲರಾದ ಸತ್ಯವತಿ, ಡಿ.ಎನ್.ಒ ಮಹಾದೇವಿ ಹಾಗೂ ಸಿಬ್ಬಂದಿಗಳಾದ ಡಾ.ರಾಘವೇಂದ್ರ, ಗೋಪಾಲ್, ಅರುಣ್ ಕುಮಾರ್, ಮೇಘರಾಜ್ ಸೇರಿದಂತೆ ಜಾಥಾದಲ್ಲಿ ನಗರ ಆರೋಗ್ಯ ಸಿಬ್ಬಂದಿ, ಆಶಾ ಕಾರ್ಯಕರ್ತೆಯರು ಹಾಗೂ ಕಿರಿಯ ಮಹಿಳಾ ಆರೋಗ್ಯ ಸಹಾಯಕಿಯರ ತರಬೇತಿ ಕೇಂದ್ರದ ಪ್ರಶಿಕ್ಷಣಾರ್ಥಿಗಳು ಹಾಗೂ ಇತರರು ಹಾಜರಿದ್ದರು. ಜಾಥಾವು ನಗರದ ವಿವಿಧೆಡೆ ಸಂಚರಿಸಿ ಜಾಗೃತಿ ಮೂಡಿಸಿತು.