ಜನಸಂಖ್ಯಾ ನಿಯಂತ್ರಣಕ್ಕೆ ಯುವಜನ ಎಚ್ಚರವಹಿಸಿ

ವಿಜಯಪುರ ಜು.18- ಸರಕಾರಿ ಪ್ರಥಮ ದರ್ಜೆ ಕಾಲೇಜ ನವಭಾಗ ವಿಜಯಪುರದಲ್ಲಿ ವಿಶ್ವ ಜನಸಂಖ್ಯಾ ದಿನಾಚರಣೆ ಕಾರ್ಯಕ್ರಮ ಜರುಗಿತು.
ಡಾ. ಸಂಪತ್ ಗುಣಾರಿ ಜಿಲ್ಲಾ ಕುಷ್ಠ ರೋಗ ನಿಯಂತ್ರಣಾಧಿಕಾರಿಗಳು ಕಾರ್ಯಕ್ರಮವನ್ನು ಉದ್ಘಾಟಿಸಿ ಜನಸಂಖ್ಯೆ ನಿಯಂತ್ರಣಕ್ಕಾಗಿ ರಾಜ್ಯ ಸರಕಾರ ಹಲವಾರು ಕುಟುಂಬ ಕಲ್ಯಾಣ ಯೋಜನೆಯ ತಾತ್ಕಾಲಿಕ ಹಾಗೂ ಶಾಶ್ವತ ವಿಧಾನಗಳನ್ನು ಜಾರಿಗೆ ತಂದಿರುತ್ತದೆ. ಅದರ ಪ್ರಯೋಜನವನ್ನು ಯುವಕರು ಪಡೆದುಕೊಳ್ಳಬೇಕು. ಅನಪೇಕ್ಷಿತ ಗರ್ಭಧಾರಣೆ ತಡೆಗಟ್ಟಬೇಕು. ಮದುವೆಯಾಗಿ 3 ವರ್ಷದವರೆಗೆ ಗರ್ಭಧಾರಣೆ ಮುಂದೂಡಲು ಸರಕಾರಿ ಆಸ್ಪತ್ರೆಗಳಲ್ಲಿ ಲಭ್ಯವಿರುವ ತಾತ್ಕಾಲಿಕ ಗರ್ಭನಿರೋಧಕ ಗುಳಿಗೆಗಳಾದ ಮಾಲಾ-ಡಿ ಛಾಯಾ, ಅಂತರ ಚುಚ್ಚು ಮದ್ದು ಹಾಗೂ ಪುರುಷರಿಗಾಗಿ ನಿರೋಧ ಇತ್ಯಾದಿ ತಾತ್ಕಾಲಿಕ ವಿಧಾನಗಳನ್ನು ಉಪಯೋಗಿಸಿಕೊಳ್ಳಬೇಕು ಎಂದು ಹೇಳಿದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಡಾ. ಕವಿತಾ ದೊಡ್ಡಮನಿ ಜಿಲ್ಲಾ ಸರ್ವೇಕ್ಷಣಾಧಿಕಾರಿಗಳು ವಿಜಯಪುರ ರವರು ವಿಶ್ವ ಜನಸಂಖ್ಯಾತ ದಿನಾಚರಣೆಯ ಉದ್ದೇಶದ ಬಗ್ಗೆ ಹೇಳಿದರು. 1987 ಜುಲೈ 11ಕ್ಕೆ ಪ್ರಚಂಚದ ಜನಸಂಖ್ಯೆ 500 ಕೋಟಿಗೆ ತಲುಪಿದ್ದ ಪ್ರಯುಕ್ತ ವಿಶ್ವ ಸಂಸ್ಥೆಯ ತಜ್ಞರೆಲ್ಲರೂ ಒಟ್ಟಿಗೆ ಸೇರಿ ಜನಸಂಖ್ಯೆ ನಿಯಂತ್ರಣ ಮಾಡದಿದ್ದರೆ ಮುಂದೊಂದು ದಿನ ತೀವ್ರ ಪರಿಣಾಮವನ್ನು ಅನುಭವಿಸಬೇಕಾಗುತ್ತದೆ. ಎಂದು ಮನಗುಂಡು 1989 ರಂದು ಪ್ರಪ್ರಥಮವಾಗಿ ವಿಶ್ವ ಜನಸಂಖ್ಯೆ ದಿನಾಚರಣೆಯನ್ನು ಆಚರಿಸಲಾಯಿತು. ಅಂದಿನಿಂದ ಪ್ರಪಂಚದ 200 ಕ್ಕಿಂತ ಹೆಚ್ಚು ದೇಶಗಳಲ್ಲಿ ಹಲವಾರು ಕಾರ್ಯಕ್ರಮಗಳನ್ನು ಕೈಗೊಂಡು ಜನ ಸಾಮಾನ್ಯರಲ್ಲಿ ಜನ ಸಂಖ್ಯಾ ಸ್ಪೋಟದಿಂದ ಆಗುವ ದುಷ್ಪರಿಣಾಮಗಳ ಬಗ್ಗೆ ಜಾಗೃತಿ ಮೂಡಿಸಲಾಗುತ್ತಿದೆ ಎಂದು ಹೇಳಿದರು.
ಸದರಿ ಕಾರ್ಯಕ್ರಮದ ಅಂಗವಾಗಿ ಜನಸಂಖ್ಯೆ ನಿಯಂತ್ರಣದಲ್ಲಿ ಯುವರ ಪಾತ್ರ ಎಂಬ ವಿಷಯದ ಮೇಲೆ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿಗಳಿಗೆ ಭಾಷಣ ಸ್ಪರ್ಧೆಯನ್ನು ಏರ್ಪಡಿಸಲಾಗಿತ್ತು. ಅದರಲ್ಲಿ 16 ಜನ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಉತ್ತಮ ಭಾಷಣ ಮಾಡಿದ 3 ಜನ ವಿದ್ಯಾರ್ಥಿಗಳಾದ ಮಹಮ್ಮದ ಮನ್ಸೂರ, ಪವಿತ್ರಾ ಗೊರನಾಳ, ಧನರಾಜ ಆರ್. ಚವ್ಹಾಣ ಅವರಿಗೆ ನಗದು ಬಹುಮಾನ ವಿತರಿಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರಾಚಾರ್ಯರಾದ ಎ.ಟಿ. ಮುದಕಣ್ಣವರ ವಹಿಸಿದ್ದರು. ಡಾ. ಸಂಪತ್ ಗುಣಾರಿ ಡಿ.ಎಲ್.ಓ. ಡಾ. ಕವಿತಾ ಡಿ.ಎಸ್.ಓ. ಜಿ.ಎಮ್. ಕೊಲೂರ, ಗುರು ಹಿರೇಮಠ, ಸುರೇಶ ಹೊಸಮನಿ, ಆರ್.ಎಂ. ಹಂಚಿನಾಳ, ಎಸ್.ಎಸ್. ಚಟ್ಟೇರ, ಕುಮಾರ ರಾಠೋಡ, ಕಾಲೇಜಿನ ಪ್ರಾಧ್ಯಾಪಕರು ಹಾಗೂ ವಿದ್ಯಾರ್ಥಿಗಳು ಹಾಜರಿದ್ದರು.