ಜನಸಂಖ್ಯಾ ನಿಯಂತ್ರಣಕ್ಕೆ ಕುಟುಂಬ ಕಲ್ಯಾಣ ವಿಧಾನಗಳು ಬಹುಮುಖ್ಯ

ಚಿತ್ರದುರ್ಗ,ಸೆ.೨೪: ಜನಸಂಖ್ಯಾ ನಿಯಂತ್ರಣ ಮಾಡಲು ಹಾಗೂ ಶಿಶು ಮರಣ ಮತ್ತು ತಾಯಿ ಮರಣ ಕಡಿಮೆ ಮಾಡಲು ಸಾರ್ವಜನಿಕರಿಗೆ ಕುಟುಂಬ ಕಲ್ಯಾಣ ವಿಧಾನಗಳು ಬಹುಮುಖ್ಯ ಎಂದು ಜಿಲ್ಲಾ ಕುಟುಂಬ ಕಲ್ಯಾಣಾಧಿಕಾರಿ ಡಾ.ರೇಣು ಪ್ರಸಾದ್ ಹೇಳಿದರು.
ಚಳ್ಳಕೆರೆ ತಾಲ್ಲೂಕಿನ ರಾಮಜೋಗಿಹಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ  ಆರೋಗ್ಯ ಇಲಾಖೆ ಸಿಬ್ಬಂದಿ ಸಭೆಯಲ್ಲಿ ಅವರು ಮಾತನಾಡಿದರು.ಜನಸಂಖ್ಯಾ ನಿಯಂತ್ರಣ ಮಾಡಲು ಸಾರ್ವಜನಿಕರಿಗೆ ಕುಟುಂಬ ಕಲ್ಯಾಣ ತಾತ್ಕಾಲಿಕ ವಿಧಾನಗಳಾದ ತಾಯಂದಿರುಗಳಿಗೆ ವೆಂಕಿ ಅಳವಡಿಕೆ, ಮೂರು ತಿಂಗಳಿಗೊಮ್ಮೆ ಡಿಂಪ ಇಂಜಕ್ಷನ್, ವಾರಕ್ಕೆ ಒಂದು ಬಾರಿ ಛಾಯಾ ಮಾತ್ರೆಗಳು, ಪುರುಷರು ನಿರೋದ್ ಬಳಕೆ ಮಾಡಿ ಒಂದು ಮಗುವಿನಿಂದ ಮತ್ತೊಂದು ಮಗುವಿಗೆ ಅಂತರವನ್ನು ಕಾಯ್ದುಕೊಂಡಲ್ಲಿ ಕುಟುಂಬದ ಗಾತ್ರವನ್ನು ಕಡಿಮೆ ಮಾಡಿಕೊಳ್ಳುವುದಲ್ಲದೆ, ಶಿಶು ಮತ್ತು ತಾಯಿ ಮರಣ ತಪ್ಪಿಸಬಹುದು ಎಂದು ತಿಳಿಸಿದರು.
ಸಾರ್ವಜನಿಕ ವಲಯದಲ್ಲಿ ಆಶಾ ಕಾರ್ಯಕರ್ತೆಯರು ಮತ್ತು ಆರೋಗ್ಯ ಇಲಾಖೆಯ ಅಧಿಕಾರಿಗಳು ಕರ್ತವ್ಯ ನಿರ್ವಹಿಸುವ ಸಂದರ್ಭದಲ್ಲಿ ಫಲಾನುಭವಿಗಳಿಗೆ ಮಾರ್ಗದರ್ಶನ, ಮಾಹಿತಿ ನೀಡಿ, ಕುಟುಂಬ ಕಲ್ಯಾಣ ಕಾರ್ಯಕ್ರಮಗಳ ಬಗ್ಗೆ ಜಾಗೃತಿ ಮೂಡಿಸಿ ಸಾರ್ವಜನಿಕರು ಚಿಕ್ಕ ಕುಟುಂಬ ಹೊಂದಲು ಹೆಚ್ಚು ಒತ್ತು ಕೊಡಬೇಕು ಎಂದು ಸಲಹೆ ನೀಡಿದರು.
ಕಳೆದ ವರ್ಷ ಜಿಲ್ಲೆಯಲ್ಲಿ 14 ಫಲಾನುಭವಿಗಳಿಗೆ ಪುರುಷ ಸಂತಾನ ನಿರೋಧ ಶಸ್ತ್ರ  ಚಿಕಿತ್ಸೆ ಮಾಡಿಸಿದ್ದು ಎಲ್ಲಾ ಫಲಾನುಭವಿಗಳು ಆರೋಗ್ಯದಿಂದ ಇದ್ದಾರೆ. ಯಾರೂ ಕೂಡ ಆತಂಕ ಪಡದೆ ಅನಾರೋಗ್ಯದಿಂದ ಇರುವ ತಾಯಂದಿರುಗಳಿಗೆ ಕುಟುಂಬ ಕಲ್ಯಾಣ ಶಸ್ತ್ರಚಿಕಿತ್ಸೆ ಮಾಡಿಸುವುದಕ್ಕಿಂತ ಅರ್ಹ ಪುರುಷ ಫಲಾನುಭವಿಗಳಿಗೆ ಮನವೊಲಿಸಿ ಶಸ್ತ್ರಚಿಕಿತ್ಸೆ  ಮಾಡಿಸಿ ತಾಯಂದಿರ ಆರೋಗ್ಯ ಕಾಪಾಡಿಕೊಳ್ಳಲು ಶ್ರಮಿಸಬೇಕು ಎಂದರು.ಕೋವಿಡ್ ಲಸಿಕೆ 18 ರಿಂದ 44 ವರ್ಷದ ಫಲಾನುಭವಿಗಳು ಸಾರ್ವಜನಿಕ ವಲಯದಲ್ಲಿ ಲಸಿಕೆ ಪಡೆಯಲು ಬಾಕಿ ಇದ್ದು ಅವರನ್ನು ಗುರುತಿಸಿ ಲಸಿಕೆ ನೀಡಬೇಕೆಂದು ಮಾರ್ಗದರ್ಶನ ನೀಡಿದರು.ಈ ಸಂದರ್ಭದಲ್ಲಿ ವೈದ್ಯಾಧಿಕಾರಿ ಡಾ. ಮಂಜುನಾಥ ರೆಡ್ಡಿ, ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಬಿ.ಮೂಗಪ್ಪ ಮತ್ತು ಇತರೆ ಆರೋಗ್ಯ ಅಧಿಕಾರಿ, ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.