ಜನವಿರೋಧಿ ಸರ್ಕಾರದ ವಿರುದ್ಧ ಪೋಸ್ಟರ್ ಪ್ರತಿಭಟನೆ

ಕಲಬುರಗಿ,ಮೇ.26- ರೈತ ವಿರೋಧಿ ಕೃಷಿ ಕಾಯ್ದೆಗಳು, ಕಾರ್ಮಿಕ ವಿರೋಧಿ ಸಂಹಿತೆಗಳು ಮತ್ತು ಕೇಂದ್ರ ಸರ್ಕಾರದ ಏಳು ವರ್ಷಗಳ ದುರಾಡಳಿತದ ವಿರುದ್ದ ಎಐಯುಟಿಯುಸಿ ಸಂಘಟನೆ ನೇತೃತ್ವದಲ್ಲಿಂದ ಕರಾಳ ದಿನಾಚರಣೆ ಆಚರಿಸಲಾಯಿತು.
ರೈತ ವಿರೋಧಿ ಕೃಷಿ ಕಾಯ್ದೆಗಳ ರದ್ದತಿ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ದೆಹಲಿ ಗಡಿಗಳಲ್ಲಿ ನಡೆಯುತ್ತಿರುವ ಧೀರೋದ್ದಾತ ರೈತ ಹೋರಾಟಕ್ಕೆ ಇಂದು 6 ತಿಂಗಳು ಪೂರೈಸಿದೆ. ಹಾಗೆಯೇ ಜನವಿರೋಧಿ ಮೋದಿ ಸರ್ಕಾರಕ್ಕೆ 7 ವರ್ಷ ತುಂಬುತ್ತಿದೆ. ಈ ಹಿನ್ನೆಲೆಯಲ್ಲಿ ಇಂದು ರಾಷ್ಟ್ರವ್ಯಾಪಿ ಕರಾಳ ದಿನಾಚರಣೆಯನ್ನು ಆಚರಿಸುವಂತೆ ಕರೆ ನೀಡಿದ ಸಂಯುಕ್ತ ಕಿಸಾನ್ ಮೊರ್ಚ ಹಾಗೂ ಕೇಂದ್ರೀಯ ಕಾರ್ಮಿಕ ಸಂಘಟನೆಗಳ ಒಕ್ಕೂಟಕ್ಕೆ ಬೆಂಬಲಿಸಿ ಇಲ್ಲಿಯೂ ಎಐಯುಟಿಯುಸಿ ಸಂಘಟನೆ ನೇತೃತ್ವದಲ್ಲಿ ಪ್ರತಿಭಟನೆ ಕೈಗೊಳ್ಳಲಾಯಿತು.
ಸಂಘಟನೆ ಜಿಲ್ಲಾ ಅಧ್ಯಕ್ಷರಾದ ವಿ. ಜಿ. ದೇಸಾಯಿ ಜಿಲ್ಲಾ ಕಾರ್ಯದರ್ಶಿ ಎಸ್.ಎಂ. ಶರ್ಮಾ, ಉಪಾಧ್ಯಕ್ಷರಾದ ರಾಘವೇಂದ್ರ ಎಂ. ಜಿ., ಬಾಗಣ್ಣ ಬುಕ್ಕ್, ಸಹ ಕಾರ್ಯದರ್ಶಿ ಶರಣು ಹೋರೂರ, ಮಲ್ಲಿನಾಥ ಸಿಂಘೆ, ಶಿವಲಿಂಗಮ್ಮ, ಶಿವಲೀಲಾ, ನಾಗಮಣಿ, ಲಕ್ಷ್ಮೀ ಕದಲಾಪೂರ ಹಾಗೂ ಇತರ ಪದಾಧಿಕಾರಿಗಳು ತಮ್ಮ ತಮ್ಮ ಕಾರ್ಯಕ್ಷೇತ್ರ ಹಾಗೂ ವಸತಿ ಪ್ರದೇಶಗಳಲ್ಲಿ ಪೋಸ್ಟರ್ ಪ್ರತಿಭಟನೆ ಮಾಡಿದರು.
ಇಡೀ ಜಿಲ್ಲೆಯಾದ್ಯಂತ ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರು, ಕಟ್ಟಡ ಕಾರ್ಮಿಕರು, ಜೆಸ್ಕಾಂ ಗುತ್ತಿಗೆ ನೌಕರರು, ಹಾಸ್ಟೇಲ್ ಕಾರ್ಮಿಕರು ಆನ್ಲೈನ್ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.
ಅದೇ ರೀತಿ ಕೋವಿಡ್ ಮಾರ್ಗಸೂಚಿ ಪಾಲನೆಯ ಜೊತೆಗೆ ಮನೆ ಮನೆಗಳಲ್ಲಿ ಕಪ್ಪು ಬಾವುಟಗಳ ಪ್ರದರ್ಶನ, ಕಪ್ಪು ಪಟ್ಟಿ, ಕಪ್ಪು ಮಾಸ್ಕ ಧರಿಸಿ ಭಿತ್ತಿ ಪತ್ರಗಳನ್ನು ಹಿಡಿದು ಸಾವಿರಾರು ಕಾರ್ಮಿಕರು ಆನ್ಲೈನ್ ಪ್ರತಿಭಟನೆ ಮಾಡುವ ಮೂಲಕ ಕರಾಳ ದಿನಾಚರಣೆಯನ್ನು ಅತ್ಯಂತ ಯಶಸ್ವಿಯಾಗಿ ನಡೆಸಲಾಯಿತು.
ಮೂರು ಕೃಷಿ ಕಾಯ್ದೆಗಳ ರದ್ದತಿಗಾಗಿ, ವಿದ್ಯುತ್ ಮಸೂದೆ ವಾಪಸ್ ಪಡೆಯಬೇಕು, ಕೃಷಿ ಉತ್ಪನ್ನಗಳಿಗೆ ಕನಿಷ್ಠ ಬೆಂಬಲ ಬೆಲೆ ಖಾತ್ರಿ ಮಾಡುವ ಕೇಂದೀಯ ಶಾಸನ ಜಾರಿ ಮಾಡಬೇಕೆಂದು ಆಗ್ರಹಿಸಿ ಕಳೆದ ಆರು ತಿಂಗಳಿಂದ ಲಕ್ಷಾಂತರ ರೈತರು ದೆಹಲಿಯ ಹೊರ ವಲಯದಲ್ಲಿ ಪ್ರತಿಭಟಿಸುತ್ತಿದ್ದಾರೆ. ಚಳಿ, ಗಾಳಿ, ಮಳೆ, ಸುಡು ಬಿಸಿಲಿನ ತಾಪವನ್ನು ಲೆಕ್ಕಿಸದೆ ಚರಿತ್ರಾರ್ಹವಾದ ನಿದರ್ಶನೀಯ ಹೋರಾಟವನ್ನು ನಡೆಸುತ್ತಿದ್ದಾರೆ. ಈ ಹೋರಾಟಕ್ಕೆ ವಿಶ್ವದಾದ್ಯಂತ ಮೆಚ್ಚುಗೆ ಬೆಂಬಲ ವ್ಯಕ್ತವಾಗಿದೆ.
ಸುಮಾರು 400 ಕ್ಕೂ ಹೆಚ್ಚು ರೈತರು ಅಸುನೀಗಿ ಹುತಾತ್ಮರಾಗಿದ್ದಾರೆ. ಈ ಹಿಂದೆ ಕೇಂದ್ರ ಸರ್ಕಾರ ಮಾತುಕಥೆಯ ನಾಟಕವನ್ನಾಡಿ ಇದೀಗ ತನ್ನ ಪಾಶವೀ ನಿರ್ಲಕ್ಷ್ಯತನವನ್ನು ತೋರಿದೆ. ಮಾಧ್ಯಮಗಳು ಹೋರಾಟವನ್ನು ಸಂಪೂರ್ಣವಾಗಿ ಕಡೆಗಣಿಸಿದೆ. ಇದನ್ನು ನಾವು ತೀವ್ರವಾಗಿ ಖಂಡಿಸುತ್ತೇವೆ ಮತ್ತು ಈ ಕೂಡಲೇ ಕೇಂದ್ರ ಸರ್ಕಾರ ಬೇಷರತ್ ಆಗಿ ಮಾತುಕತೆಗೆ ಮುಂದುವರೆದು ಬೇಡಿಕೆ ಈಡೇರಿಸುವಂತೆ ಆಗ್ರಹಿಸಲಾಯಿತು.
ಕೇಂದ್ರ ಹಾಗೂ ವಿವಿಧ ರಾಜ್ಯ ಸರ್ಕಾರಗಳ ಬೇಜವಾಬ್ದಾರಿ ನಡೆಗಳಿಂದಾಗಿ ಕೋರೋನಾ ಸಾಂಕ್ರಾಮಿಕ ವ್ಯಾಪಕವಾಗಿ ಹಬ್ಬುತ್ತಿದೆ. ಸಾವು ನೋವುಗಳ ಜೊತೆಗೆ ಅಸಾಹಾಯಕ ಜನ ಸಾಮಾನ್ಯರ ಆಕ್ರಂದನ ಮುಗಿಲು ಮುಟ್ಟುತ್ತಿದೆ.
ಈ ಸಂದರ್ಭದಲ್ಲಿ ದೇಶದಲ್ಲಿ ಹಿಂದೆ ಇದ್ದಂತಹ ಕಾರ್ಮಿಕ ಕಾನೂನುಗಳಿಗೆ ತಿಲಾಂಜಲಿ ನೀಡಿ ನಾಲ್ಕು ಕಾರ್ಮಿಕ ಸಂಹಿತೆಗಳನ್ನು ಕೇಂದ್ರ ಸರ್ಕಾರ ಜಾರಿ ಮಾಡಿದೆ. ಜೊತೆಗೆ ಅವುಗಳಿಗೆ ಕಾನೂನು ರಚಿಸಲು ಎಲ್ಲಾ ರಾಜ್ಯ ಸರ್ಕಾರಗಳಿಗೆ ಒತ್ತಡವನ್ನು ಹಾಕುತ್ತಿದೆ. ನಮ್ಮ ರಾಜ್ಯ ಸರ್ಕಾರ ಕೈಗಾರಿಕಾ ಬಾಂಧವ್ಯ ಮತ್ತು ವೇತನ ಸಂಹಿತೆಗಳಿಗೆ ಕಾನೂನನ್ನು ರಚಿಸಿ ಜಾರಿಮಾಡಲು ಮುಂದಾಗಿದೆ. ಇದನ್ನು ಸಮಸ್ತ ಕಾರ್ಮಿಕ ವರ್ಗದ ಪರವಾಗಿ ಪ್ರತಿಭಟನೆಯ ಮೂಲಕ ಖಂಡಿಸಲಾಯಿತು.
ಕಳೆದ 2020 ನವೆಂಬರ್ 26 ರಂದು ಅಖಿಲ ಬಾರತ ಮುಷ್ಕರವನ್ನು ನಾವು ಸಂಘಟಿಸಿದ್ದೆವು. ಕೋಟ್ಯಾಂತರ ದುಡಿಯುವ ಜನರ ಭಾಗವಹಿಸುವಿಕೆಯಿಂದ ಅದು ಯಶಸ್ವಿಯಾಗಿತ್ತು. ಇದೀಗ ಬೆಲೆ ಏರಿಕೆಗೆ ಕಡಿವಾಣ, ಜನರ ಜೀವ ಹಾಗೂ ಜೀವನೋಪಾಯ ರಕ್ಷಣೆ ಸಾರ್ವತ್ರಿಕವಾಗಿ ಉಚಿತ ಲಸಿಕೆ ನೀಡಬೇಕು, ಉದ್ಯೋಗ ಸೃಷ್ಟಿಗೆ ಆದ್ಯತೆ, ದುಡಿಯುವ ವರ್ಗಕ್ಕೆ ಉಚಿತ ದಿನಸಿಯ ಜೊತೆಗೆ ಮಾಸಿಕ ರೂ. 7500/- ನಗದು ನೀಡಬೇಕು, ಕೃಷಿ ಕಾಯ್ದೆ ಮತ್ತು ಲೇಬರ್ ಕೋಡ್ ವಾಪಸ್ಸಾಗಬೇಕು, ಪಿಎಸ್‍ಯು ಖಾಸಗೀಕರಣ ನಿಲ್ಲಿಸಬೇಕೆಂದು ಕೇಂದ್ರ ಮತ್ತು ರಾಜ್ಯ ಸರ್ಕಾರಗಳನ್ನು ಆಗ್ರಹಿಸಲಾಯಿತು. ಎಸ್.ಎಂ.ಶರ್ಮಾ, ವಿ.ಜಿ.ದೇಸಾಯಿ ಸೇರಿದಂತೆ ಹಲವರು ಪಾಲ್ಗೊಂಡಿದ್ದರು.