ಜನವಿರೋಧಿ ವಿದ್ಯುತ್ ತಿದ್ದುಪಡಿ ಮಸೂದೆ ಹಿಂಪಡೆಯಲು ಆಗ್ರಹಿಸಿ ಪ್ರತಿಭಟನೆ

(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ, ನ.29: ಎಸ್.ಯು.ಸಿ.ಐ ಕಮ್ಯುನಿಸ್ಟ್ ಪಕ್ಷದ ವತಿಯಿಂದ ಜನವಿರೋಧಿ ವಿದ್ಯುತ್ ತಿದ್ದುಪಡಿ ಮಸೂದೆ 2021ನ್ನು ಕೂಡಲೇ ಹಿಂಪಡೆಯಲು ಆಗ್ರಹಿಸಿ ಜಿಲ್ಲಾಧಿಕಾರಗಳ ಕಛೇರಿ ಎದರು ಪ್ರತಿಭಟನೆ ನಡೆಸಿ ಪ್ರಧಾನ ಮಂತ್ರಿಗಳಿಗೆ ಜಿಲ್ಲಾಧಿಕಾರಿಗಳ ಮೂಲಕ ಮನವಿ ಸಲ್ಲಸಲಾಯಿತು.
ಈ ಪ್ರತಿಭಟನೆ ಉದ್ದೇಶಿಸಿ ಎಸ್.ಯು.ಸಿ.ಐ ಕಮ್ಯುನಿಸ್ಟ್ ಪಕ್ಷದ ಜಿಲ್ಲಾ ಸಮಿತಿ ಸದಸ್ಯರಾದ ಎ.ದೇವದಾಸ್ ಮಾತನಾಡುತ್ತಾ, “ವಿದ್ಯುತ್ (ತಿದ್ದುಪಡಿ) ಮಸೂದೆ- 2021 ರಂತೆ ವಿದ್ಯುತ್ ಉತ್ಪಾದನೆ ಮೇಲೆ ನಿಯಂತ್ರಣ ಸಾಧಿಸುವತ್ತ ಖಾಸಗಿ ಉತ್ಪಾದಕರು ಈಗಾಗಲೇ ಬಿರುಸಿನ ಹೆಜ್ಜೆ ಇಡುತ್ತಿದ್ದಾರೆ. ಇಡೀ ದೇಶದ ವಿತರಣಾ ವ್ಯವಸ್ಥೆಯನ್ನು ಖಾಸಗಿಯವರಿಗೆ ಒಪ್ಪಿಸುವ ನಿಟ್ಟಿನಲ್ಲಿ, ಸುಧಾರಣೆಯ ನೆಪವೊಡ್ಡಿ ಹೊಸ ವಿದ್ಯುತ್ ಮಸೂದೆಯೊಂದನ್ನು ರೂಪಿಸಲಾಗಿದೆ. ಎಂದು ಆರೋಪಿಸಿದರು.
ಈ ಪ್ರತಿಭಟನೆಯ ಅಧ್ಯಕ್ಞತೆಯನ್ನು ವಹಿಸಿದ್ದಎಸ್.ಯು.ಸಿ.ಐ ಕಮ್ಯುನಿಸ್ಟ್ ಪಕ್ಷದ ಜಿಲ್ಲಾ ಸಮಿತಿ ಸದಸ್ಯರಾದ ಆರ್.ಸೋಮಶೇಖರ್ ಗೌಡ ಮಾತನಾಡುತ್ತಾ, “ನಮ್ಮ ರಾಜ್ಯದಲ್ಲಿ ಬಡವರಿಗಾಗಿ ಜಾರಿಯಲ್ಲಿದ್ದ ಭಾಗ್ಯಜ್ಯೋತಿ, ಕುಟೀರ ಜ್ಯೋತಿಯಂತಹ ಯೋಜನೆಗಳು ಕಣ್ಮರೆಯಾಗಿವೆ. ಕೊಳೆಗೇರಿಯ, ಹಳ್ಳಿಕೇರಿಗಳ ಗುಡಿಸಲುಗಳಿಗೆ, ಆದಿವಾಸಿಗಳ ಸೂರುಗಳಿಗೂ ಹಳೆಬಾಕಿಯ ಹೆಸರಿನಲ್ಲಿ ಹತ್ತಾರು ಸಾವಿರ ರೂ.ಗಳ ಬಿಲ್ ನೀಡಿ ಸಂಪರ್ಕ ಕಡಿತಗೊಳಿಸಲಾಗುತ್ತಿದೆ. ಇದರ ಮೂಲಕ ಎಲ್ಲ ರಿಯಾಯಿತಿಗಳನ್ನು ರದ್ದುಮಾಡಿ, ಖಾಸಗೀಕರಣಕ್ಕೆ ಅನುವು ಮಾಡಿಕೊಡುವ ಪ್ರಕ್ರಿಯೆ ಚಾಲ್ತಿಯಲ್ಲಿದೆ. ವಿದ್ಯುತ್ (ತಿದ್ದುಪಡಿ) ಮಸೂದೆ-2021ನ್ನು ಹಿಂಪಡೆಯುವಂತೆ ಆಗ್ರಹಿಸಿ ಸಾಮಾನ್ಯ ಬಳಕೆದಾರರು, ರೈತರು ಮತ್ತು ಸಣ್ಣ ವ್ಯಾಪಾರಿಗಳು ಬೇಡಿಕೆಗಳು ಈಡೇರದಿದ್ದರೆ ದೇಶವ್ಯಾಪಿ ಆಂದೋಲನಕ್ಕೆ ಸಜ್ಜಾಗಬೇಕಾಗುತ್ತದೆ ಎಂದು ಕರೆ ನೀಡಿದರು.
ಈ ಸಂದರ್ಭದಲ್ಲಿ ಎಸ್.ಯು.ಸಿ.ಐ ಕಮ್ಯುನಿಸ್ಟ್ ಪಕ್ಷದ ಜಿಲ್ಲಾ ಸಮಿತಿ ಸದಸ್ಯರಾದ ಡಾ.ಎನ್.ಪ್ರಮೋದ್, ಶಾಂತಾ, ಸುರೇಶ್, ಈಶ್ವರಿ ಸದಸ್ಯರು ಹಾಗೂ ಸಾರ್ವಜನಿಕರು ಭಾಗವಹಿಸಿದ್ದರು.