ಜನವಿರೋಧಿ ನೀತಿಗಳ ವಿರುದ್ಧ ಎಸ್ ಯು ಸಿ ಐ  ಪ್ರತಿಭಟನೆ


(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ, ಫೆ.28: ಕೇಂದ್ರ ಮತ್ತು ರಾಜ್ಯ ಸರ್ಕಸರದ ಜನ ವಿರೋಧಿ ನೀತಿಗಳ ವಿರುದ್ದ ಇಂದು ನಗರದ ಗಾಂಧಿ ಭವನದಿಂದ ಡಿಸಿ ಕಚೇರಿ ವರೆಗೆ ಎಸ್ ಯು ಸಿ ಐ ಪ್ರತಿಭಟನಾ ಮೆರವಣಿಗೆ ನಡೆಸಿತು.
ವಿದ್ಯಾರ್ಥಿಗಳು, ರೈತ-ಕಾರ್ಮಿಕರು  ಜನವಿರೋಧಿ ನೀತಿಗಳ ವಿರುದ್ಧ ಘೋಷಣೆ ಕೂಗುತ್ತ ಮೆರವಣಿಗೆಯಲ್ಲಿ ಸಾಗಿದರು.
ಈ ಸಂದರ್ಭದಲ್ಲಿ  ಎಸ್ ಯು ಸಿ ಐ ಕಮ್ಯುನಿಸ್ಟ್ ಪಕ್ಷದ ಜಿಲ್ಲಾ ಕಾರ್ಯದರ್ಶಿ ರಾಧಾಕೃಷ್ಣ ಉಪಾಧ್ಯಾ ಮಾತನಾಡಿ  ” ಪ್ರತಿ ಐದು ವರ್ಷದಂತೆ ಈ ಬಾರಿಯೂ ಚುನಾವಣೆ ಸಮೀಪಿಸುತ್ತಿದೆ.ದೊಡ್ಡ ದೊಡ್ಡ ಘೋಷಣೆಗಳೊಂದಿಗೆ ಎಲ್ಲಾ ರಾಜಕೀಯ ಪಕ್ಷಗಳ ಪ್ರಣಾಳಿಕೆಗಳು ತಯಾರಾಗುತ್ತಿವೆ. ಏನೇ ದೊಡ್ಡ ಘೋಷಣೆಗಳು ಇದ್ದರೂ, ಜನರು ತಮ್ಮ ಜೀವನದಲ್ಲಿ  ಸ್ವಲ್ಪ  ಮಾತ್ರವೂ ಸುಧಾರಣೆಯನ್ನು ಕಾಣುವುದಿಲ್ಲ.  ಶಿಕ್ಷಣ, ಆರೋಗ್ಯ ಕ್ಷೇತ್ರಗಳು ಖಾಸಗೀಕರಣಗೊಂಡು ಜನಗಳ ಕೈಗೆಟುಕದಂತಾಗಿವೆ. ಉದ್ಯೋಗವಿಲ್ಲದೆ ಯುವಜನತೆ ಪರದಾಡುತ್ತಿದ್ದಾರೆ. ವರ್ಷಕ್ಕೆ ಎರಡು ಕೋಟಿ ಉದ್ಯೋಗದ ಭರವಸೆ ಇತ್ತ ಕೇಂದ್ರ ಮೋದಿ ಸರ್ಕಾರ ಈಗ ಅದರ ಬಗ್ಗೆ ಮಾತೇ ಎತ್ತುತ್ತಿಲ್ಲ. ಇನ್ನು ಕಾಯಂ ಉದ್ಯೋಗದ ಮಾತು ಕನಸಾಗಿಯೇ ಉಳಿದಿದೆ. ಏರುತ್ತಿರುವ ಅಗತ್ಯ ವಸ್ತುಗಳ ಬೆಲೆಗಳು ಇಳಿಯುವ ಸೂಚನೆಯೇ ಕಾಣುತ್ತಿಲ್ಲ. ಇದರಿಂದಾಗಿ ಜನತೆಯ ಬದುಕು ಬೀದಿಗೆ ಬರುವಂತಾಗಿದೆಂದರು.
ಎಸ್ ಯು ಸಿ ಐ(ಸಿ)ನ ಜಿಲ್ಲಾ ಸಮಿತಿ ಸದಸ್ಯ   ಎಂ.ಎನ್.ಮಂಜುಳಾ ‘ಬೇಟಿ ಬಚಾವೋ ಬೇಟಿ ಪಡಾವೋ’,’ ಸಬ್ ಕಾ ಸಾಥ್ ಸಬ್ ಕಾ ವಿಕಾಸ್’ ಎಂಬ ಮೋದಿ ಸರ್ಕಾರದ ಘೋಷಣೆಗಳು ಕೇವಲ ಘೋಷಣೆಗಳಾಗಿವೆ. ಮಹಿಳೆಯರ, ದಲಿತರ, ಅಲ್ಪಸಂಖ್ಯಾತರ ಮೇಲಿನ ದೌರ್ಜನ್ಯಗಳು ಹೆಚ್ಚುತ್ತಲೆ ಇವೆ. ಈ ದೌರ್ಜನ್ಯಗಳನ್ನು ತಡೆಗಟ್ಟಲು ಯಾವುದೇ ಕ್ರಮಗಳನ್ನು ಕೂಡ ಕೈಗೊಳ್ಳುತ್ತಿಲ್ಲ.ಬದಲಾಗಿ ಜಾತಿ-ಧರ್ಮದಂತಹ ಭಾವನಾತ್ಮಕ ವಿಷಯಗಳನ್ನು ಮುನ್ನಲೆಗೆ ತಂದು ಜನರ ನೈಜ ಸಮಸ್ಯೆಗಳನ್ನು ಮರೆಮಾಚುತ್ತಿದೆ. ಹಸುಗೂಸನ್ನು ಬಿಡದ ಅತ್ಯಾಚಾರಗಳು ಸಮಾಜ ಯಾವ ಮಟ್ಟಿಗೆ ಅಧಃಪತನಕ್ಕೆ ಹೋಗಿದೆ ಎಂಬುದನ್ನು ತೋರಿಸುತ್ತವೆಂದರು
ನಂತರ ಎಸ್ ಯು ಸಿ ಐ ನ ಜಿಲ್ಲಾ ಸಮಿತಿ ಸದಸ್ಯ ಎ.ದೇವದಾಸ್ ” ರಾಜ್ಯದಲ್ಲಿ ಬರ ಬರುತ್ತಿದೆ. ಕುಡಿಯಲು ನೀರಿಲ್ಲದೆ ಜನಗಳು ಪರದಾಡುವಂತಾಗಿದೆ. ಬೆಳೆದ ಬೆಳೆ ಕೈಗು ಬರದೇ ,ಸರಿಯಾದ ಬೆಲೆ ಸಿಗದೆ ರೈತರು ಕಂಗಾಲಾಗಿದ್ದಾರೆ.ರೈತರ ಬೆಳೆಗಳಿಗೆ ಬೆಂಬಲ ಬೆಲೆ ವಿಷಯದಲ್ಲಿ ಕೇಂದ್ರ ಸರ್ಕಾರ ತಾನೇ ನೀಡಿದ ಭರವಸೆಯನ್ನು ಗಾಳಿಗೆ ತೂರಿದೆ. ಗ್ರಾಮೀಣ ಪ್ರದೇಶದಲ್ಲಿ ಅಲ್ಪ ಸ್ವಲ್ಪ ಉದ್ಯೋಗ ನೀಡುವ ನರೇಗಾ ಯೋಜನೆ ಕೂಡ ಸರಿಯಾಗಿ ಅನುಷ್ಠಾನಗೊಳ್ಳದೆ ಹಲವಾರು ಲೋಪದೋಷಗಳಿಂದ ಕೂಡಿದೆ. ಇನ್ನು ಕಾರ್ಮಿಕರ ಜೀವನವಂತೂ ಆಧೋಗತಿಗೆ ಹೋಗಿದೆ. ಸರಿಯಾದ ಸಂಬಳ, ಸೇವಾ ಭದ್ರತೆ ಇಲ್ಲದೆ ಗುಲಾಮರ ರೀತಿ ಕೆಲಸ ಮಾಡುತ್ತಿದ್ದಾರೆ. ಹೋರಾಟದಿಂದ ಗಳಿಸಿಕೊಂಡ ಹಕ್ಕುಗಳನ್ನು ಕೂಡ ಕಾರ್ಮಿಕ ಸಂಹಿತೆಗಳನ್ನು ಜಾರಿಗೆ ತರುವುದರ ಮೂಲಕ ಕೇಂದ್ರ ಸರ್ಕಾರ ಕಸಿದುಕೊಳ್ಳಲು ಹೊರಟಿದೆಂದರು.
ನಿವೃತ್ತ ಉಪನ್ಯಾಸಕರು ನರಸಣ್ಣ ಅವರು ಜನ ಸಮಸ್ಯೆಗಳ ಕುರಿತು ಮಾತನಾಡಿದರು.
ಪ್ರತಿಭಟನೆಯಲ್ಲಿಜಿಲ್ಲಾ ಸಮಿತಿ ಸದಸ್ಯ ಡಾ.ಪ್ರಮೋದ್ಪಕ್ಷದ ಜಿಲ್ಲಾ ಸಮಿತಿ ಸದಸ್ಯರಾದ ನಾಗಲಕ್ಷ್ಮಿ, ಸೋಮಶೇಖರ್ ಗೌಡ, ಶಾಂತ, ಗೋವಿಂದ ಪದಾಧಿಕಾರಿಗಳಾದ ನಾಗರತ್ನ, ಪಂಪಾಪತಿ ಕೋಳೂರು,ಹನುಮಪ್ಪ, ಈಶ್ವರಿ, ಜಗದೀಶ್ , ರಾಜ, ವಿಜಯಲಕ್ಷ್ಮಿ, ರವಿಕಿರಣ್ ಮತ್ತಿತರರು ಭಾಗವಹಿಸಿದ್ದರು.