ಜನವರಿ ೬ ನಗರಕ್ಕೆ ಜನಾರ್ಧನ್ ರೆಡ್ಡಿ ಶಕ್ತಿ ಪ್ರದರ್ಶನ

ಸಿಂಧನೂರು.ಜ.೪- ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ಸಂಸ್ಥಾಪಕ ಅಧ್ಯಕ್ಷರಾದ ಗಾಲಿ ಜನಾರ್ಧನ್ ರೆಡ್ಡಿ ನಗರಕ್ಕೆ ಬರಲಿದ್ದಾರೆ, ಅಂದು ಬೃಹತ್ ಬೈಕ್ ರ್‍ಯಾಲಿ ಮುಖಾಂತರ ಅವರನ್ನು ಸ್ವಾಗತಿಸಲಾಗುತ್ತದೆ ಎಂದು ಪಕ್ಷದ ವಿಧಾನ ಸಭೆಯ ಸೇವಾಕಾಂಕ್ಷಿ ಅಭ್ಯರ್ಥಿಯಾದ ಮಲ್ಲಿಕಾರ್ಜುನ ನೆಕ್ಕಂಟಿ ತಿಳಿಸಿದರು.
ತಾಲ್ಲೂಕಿನ ಅರಗಿನಮರ ಕ್ಯಾಂಪನಲ್ಲಿರುವ ತಮ್ಮ ನಿವಾಸದಲ್ಲಿ ಕರೆದ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ಅವರು ಜನವರಿ ೬ ರಂದು ಮುಂಜಾನೆ ನಗರದ ಪಿಡಬ್ಲ್ಯೂಡಿ ಕ್ಯಾಂಪ್‌ನಿಂದ ಬಸವ ವೃತ್ತದ ತನಕ ಬೈಕ್ ರ್‍ಯಾಲಿ ನಡೆಸಲಾಗುತ್ತಿದೆ ಎಂದರು.
ಬೈಕ್ ಮೆರವಣಿಗೆಯ ನಂತರ ಸ್ತ್ರೀಶಕ್ತಿ ಭವನದಲ್ಲಿ ಪಕ್ಷದ ವತಿಯಿಂದ ಸಾರ್ವಜನಿಕ ಬಹಿರಂಗ ಸಭೆಯ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು, ಅಂದು ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಪಕ್ಷಗಳ ಬೆಂಬಲಿತ ಗ್ರಾಮ ಪಂಚಾಯಿತಿ ಸದಸ್ಯರು ಕಾರ್ಯಕರ್ತರು, ಮುಖಂಡರು ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ ಎಂದರು.
ಅಂದಿನ ಪಕ್ಷ ಸೇರ್ಪಡೆ ಕಾರ್ಯಕ್ರಮದಲ್ಲಿ ಸಿಂಧನೂರು ಅಲ್ಲದೆ ಕೊಪ್ಪಳ ಸೇರಿದಂತೆ ರಾಜ್ಯದ ಇತರ ಜಿಲ್ಲೆ ಹಾಗೂ ತಾಲೂಕುಗಳಿಂದ ವಿವಿಧ ಪಕ್ಷಗಳ ಮುಖಂಡರು ಕಲ್ಯಾಣ ರಾಜ್ಯ ಪ್ರಗತಿ ಪಕ್ಷವನ್ನು ಜನಾರ್ಧನ್ ರೆಡ್ಡಿಯವರ ಸಮ್ಮುಖದಲ್ಲಿ ಸೇರಲಿದ್ದಾರೆ. ಅಂದು ತಾಲೂಕಿನಲ್ಲಿ ಪಕ್ಷದ ಶಕ್ತಿಯ ಪ್ರದರ್ಶನ ನಡೆಸಲಾಗುತ್ತೆದೆ ಎಂದು ಮಲ್ಲಿಕಾರ್ಜುನ ನೆಕ್ಕಂಟಿ ಹೇಳಿದರು.
ಪತ್ರಿಕಾ ಗೋಷ್ಠಿಯಲ್ಲಿ ವೆಂಕಟರೆಡ್ಡಿ, ರಾಮು ಲಿಂಗಯ್ಯ, ಕರಿಯಪ್ಪ, ಶ್ರೀಕಾಂತ, ಸುರೇಶ ಬಂಡಿ, ಕೆ.ರಾಮರೆಡ್ಡಿ ಸೇರಿದಂತೆ ಇತರರು ಹಾಜರಿದ್ದರು.