ಜನವರಿ ೨೬ರಂದು ಮಂಗಳೂರಿನಲ್ಲಿ ರೈತರ ಗಣರಾಜ್ಯೋತ್ಸವ ಪೆರೇಡ್: ಯಾದವ ಶೆಟ್ಟಿ

ಮೂಡುಬಿದಿರೆ, ಜ.೯- ಕೇಂದ್ರ ಸರ್ಕಾರ ಜಾರಿಗೆ ತಂದಿರುವ ನೂತನ ಕೃಷಿ ಕಾಯ್ದೆಯನ್ನು ಕೈಬಿಡದಿದ್ದಲ್ಲಿ ಈ ಕಾಯ್ದೆ ವಿರುದ್ಧ ಜನವರಿ ೨೬ರಂದು ಮಂಗಳೂರಿನಲ್ಲಿ ರೈತರ ಗಣರಾಜ್ಯೋತ್ಸವ ಪೆರೇಡ್ ನಡೆಯಲಿದೆ ಎಂದು ಕರ್ನಾಟಕ ಪ್ರಾಂತ ರೈತ ಸಂಘದ ರಾಜ್ಯ ಉಪಾಧ್ಯಕ್ಷ ಯಾದವ ಶೆಟ್ಟಿ ಎಚ್ಚರಿಸಿದ್ದಾರೆ.

ಕೃಷಿ ಕಾಯ್ದೆ ವಿರೋಧಿಸಿ ಇಲ್ಲಿನ ಮೂಡುಬಿದಿರೆ ಕಚೇರಿ ಎದುರು ಶುಕ್ರವಾರ ರೈತ ಕಾರ್ಮಿಕ ಸಂಘಟನೆಗಳ ಪ್ರತಿಭಟನಾ ಸಭೆಯಲ್ಲಿ ಅವರು ಮಾತನಾಡಿದರು.

ದೆಹಲಿಯಲ್ಲಿ ರೈತರ ಹೋರಾಟ ತೀವ್ರಗೊಂಡಿದ್ದು ಹಲವು ಮಂದಿ ಸಾವನಪ್ಪಿದ್ದಾರೆ. ಆದರೆ ರೈತರು ದೃತಿಗೆಡದೆ ಹೋರಾಟವನ್ನು ಮುಂದುವರಿಸಿದ್ದಾರೆ. ದೆಹಲಿಯಲ್ಲಿ ಗಣರಾಜ್ಯೋತ್ಸವದಂದು ಸರ್ಕಾರದ ವತಿಯಿಂದ ಪೆರೇಡ್ ನಡೆದ ಬಳಿಕ ರೈತ ಸಂಘಟನೆಗಳಿಂದ ಪೆರೇಡ್ ನಡೆಯಲಿದೆ. ಇದಕ್ಕೆ ಬೆಂಬಲವಾಗಿ ಮಂಗಳೂರಲ್ಲು ರೈತ ಸಂಘಟನೆಗಳು, ವಿವಿಧ ಕಾರ್ಮಿಕ ಸಂಘಟನೆಗಳು, ವಿದ್ಯಾರ್ಥಿ ಸಾಹಿತಿಗಳನ್ನೊಳಗೊಂಡ ಗಣರಾಜ್ಯೋತ್ಸವ ಪೆರೇಡ್ ನಡೆಯಲಿದೆ ಎಂದರು.

ಮೂಡುಬಿದಿರೆ ಪ್ರಾಂತ ರೈತ ಸಂಘದ ಅಧ್ಯಕ್ಷ ಸುಂದರ ಶೆಟ್ಟಿ, ಸಿಐಟಿಯು ಕಾರ್ಯದರ್ಶಿ ರಾಧಾ, ಬಿಸಿಯೂಟ ಸಂಘದ ಜಿಲ್ಲಾ ಕಾರ್ಯದರ್ಶಿ ಗಿರಿಜಾ, ಕಟ್ಟಡ ಕಾರ್ಮಿಕ ಸಂಘದ ಮುಖಂಡ ಶಂಕರ್ ವಾಲ್ಪಾಡಿ ಮತ್ತಿತರರು ಉಪಸ್ಥಿತರಿದ್ದರು.