ಜನವರಿ-೧ ರಿಂದ ಮಾರ್ಚ್- ೩೧ ರವರೆಗೆ ’ಜನರ ಬಳಿಗೆ ನಮ್ಮ ಬ್ಯಾಂಕ್’ ಎಸ್‌ಸಿಡಿಸಿಸಿ ಬ್ಯಾಂಕ್ ಅಭಿಯಾನ

ಸಹಕಾರಿ ಬ್ಯಾಂಕುಗಳಲ್ಲಿ ಮುಂಚೂಣಿಯಲ್ಲಿರುವ ಎಸ್‌ಸಿಡಿಸಿಸಿ ಬ್ಯಾಂಕ್ ಸದಾ ಗ್ರಾಹಕರ ಪರವಾದ ನಿಲುವಿಗೆ ಕಟಿಬದ್ಧವಾಗಿದ್ದು, ಬ್ಯಾಂಕಿಂಗ್ ಚಟುವಟಿಕೆಗಳಿಗೆ ಉತ್ತೇಜನ ನೀಡುವ ಅತ್ಯಂತ ಮಹತ್ತರವಾದ ಯೋಜನೆಯಾದ ಜನರ ಬಳಿಗೆ ನಮ್ಮ ಬ್ಯಾಂಕ್” ಎನ್ನುವ ಅಭಿಯಾನವನ್ನು ಹೊಸ ವರ್ಷದ ಜನವರಿ ೧ ರಿಂದ ಆರಂಭಿಸಲಿದೆ.
ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ (ಎಸ್‌ಸಿಡಿಸಿಸಿ ಬ್ಯಾಂಕ್) ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ೧೦೫ ಶಾಖೆಗಳನ್ನು ಹೊಂದಿದ್ದು, ಅತ್ಯಾಧುನಿಕ ತಂತ್ರಜ್ಞಾನದ ಮೂಲಕ ಜನಮನ್ನಣೆಯನ್ನು ಪಡೆದುಕೊಂಡಿದೆ. ಜನರಿಗೆ ಆಧುನಿಕ ತಂತ್ರಜ್ಞಾನದ ಬ್ಯಾಂಕಿಂಗ್ ಸೇವೆ ನೀಡುವ ಮೂಲಕ ಜನಮನ್ನಣೆಯನ್ನು ಗಳಿಸಿದೆ.
ಮೂರು ತಿಂಗಳ ಅಭಿಯಾನ
ಬ್ಯಾಂಕಿನ ಇತಿಹಾಸದಲ್ಲೇ ಪ್ರಥಮವಾಗಿ ಎಸ್‌ಸಿಡಿಸಿಸಿ ಬ್ಯಾಂಕ್ ಜನರ ಬಳಿಗೆ ನಮ್ಮ ಬ್ಯಾಂಕ್’ ಎಂಬ ಆಶಯದೊಂದಿಗೆ ವಿಶೇಷ ಅಭಿಯಾನವನ್ನು ಆರಂಭಿಸಲಿದೆ. ೨೦೨೧ರ ಹೊಸ ವರ್ಷದ ಜನವರಿ ೧ರಿಂದ ಮಾರ್ಚ್ ೩೧ರ ವರೆಗೆ ಅಭಿಯಾನ ನಡೆಯಲಿದೆ. ಸಾರ್ವಜನಿಕರಿಗೆ ಬ್ಯಾಂಕಿಂಗ್ ಸೇವೆಯ ಬಗ್ಗೆ ಜಾಗೃತಿ ಮೂಡಿಸಿ, ಜನರನ್ನು ಬ್ಯಾಂಕಿಂಗ್ ಸೌಲಭ್ಯದೊಂದಿಗೆ ಸ್ವಾವಲಂಬಿಗಳನ್ನಾಗಿ ಮಾಡುವಂತೆ ಉತ್ತೇಜನ ನೀಡುವುದು ಮತ್ತು ಹೊಸ ಗ್ರಾಹಕರನ್ನು ಆಕರ್ಷಿಸುವ ಉದ್ದೇಶವನ್ನು ಎಸ್‌ಸಿಡಿಸಿಸಿ ಬ್ಯಾಂಕ್ ಹೊಂದಿದೆ.
ಮೂರು ತಿಂಗಳ ಈ ಅಭಿಯಾನದಡಿ ಸಂಚಯ/ಚಾಲ್ತಿ ಖಾತೆ ತೆರೆಯುವ, ಸಣ್ಣ ಉದ್ದಿಮೆಗಳಿಗೆ ಸಾಲ, ಗೃಹಸಾಲ, ವಾಹನ ಸಾಲ, ವೈಯಕ್ತಿಕ ಸಾಲ, ಕೃಷಿ/ಕೃಷಿಯೇತರ ಸಾಲ ಮತ್ತು ಸ್ವಸಹಾಯ ಗುಂಪುಗಳಿಗೆ ವಿಶೇಷವಾಗಿ ಸಾಲ ನೀಡಲು ನಿರ್ಧರಿಸಲಾಗಿದೆ. ಈ ಅಭಿಯಾನದ ಅವಧಿಯಲ್ಲಿ ಅರ್ಜಿದಾರರಿಗೆ ಶೀಘ್ರ ಸಾಲ ಮಂಜೂರಾತಿ ಹಾಗೂ ಪಡೆದ ಸಾಲಗಳಿಗೆ ಪ್ರಥಮ ತಿಂಗಳ ಬಡ್ಡಿ ವಿನಾಯಿತಿಯನ್ನು ನೀಡಲಾಗುವುದು.
ಸಂಚಯ /ಚಾಲ್ತಿ ಖಾತೆಗಳಿಗೆ ವಿಮಾ ಸೌಲಭ್ಯ:
ಎಸ್‌ಸಿಡಿಸಿಸಿ ಬ್ಯಾಂಕ್ ತನ್ನ ಗ್ರಾಹಕರ ಹಿತವನ್ನು ಕಾಪಾಡುವಲ್ಲೂ ಮುಂದಿದೆ. ಬ್ಯಾಂಕಿನಲ್ಲಿ ಸಂಚಯ ಹಾಗೂ ಚಾಲ್ತಿ ಖಾತೆ ತೆರೆಯುವ ಗ್ರಾಹಕರಿಗೆ ವಿಶೇಷ ವಿಮಾ ಸೌಲಭ್ಯವನ್ನು ಬ್ಯಾಂಕ್ ನೀಡಲಿದೆ. ಸಂಚಯ/ಚಾಲ್ತಿ ಖಾತೆಗಳಲ್ಲಿ ಅಪಘಾತಕ್ಕೆ ಮೊದಲಿನ ೯೦ ದಿನಗಳಲ್ಲಿ ಸತತವಾಗಿ ರೂ.೨೦,೦೦೦ ಇದ್ದಲ್ಲಿ ಗ್ರಾಹಕ ಮೃತಪಟ್ಟಲ್ಲಿ ರೂ.೨.೦೦ ಲಕ್ಷದವರೆಗೆ ವಿಮಾ ಸೌಲಭ್ಯ, ಅಂಗ ಊನತೆಗೆ ರೂ.೧.೦೦ ಲಕ್ಷ ವಿಮಾ ಪರಿಹಾರ ಮತ್ತು ರೂ.೨೫,೦೦೦/- ದವರೆಗೆ ಆಸ್ಪತ್ರೆ ವೆಚ್ಚದ ಸೌಲಭ್ಯ ಲಭ್ಯವಿದೆ.
ಜನರೊಂದಿಗೆ ಬ್ಯಾಂಕ್
ಜನರ ಕಷ್ಟ, ಸಂಕಷ್ಟ, ಏಳಿಗೆಯ ವೇಳೆ ಎಸ್‌ಸಿಡಿಸಿಸಿ ಬ್ಯಾಂಕ್ ಕೈ ಜೋಡಿಸುತ್ತದೆ ಎಂಬುದನ್ನು ಮತ್ತೊಮ್ಮೆ ತಿಳಿಸುವ ಉದ್ದೇಶದಿಂದ ಈ ಅಭಿಯಾನ ಆಯೋಜಿಸಲಾಗಿದೆ. ಹೆಚ್ಚು ಖಾತೆ ತೆರೆಯುವ, ಠೇವಣಿ ಸಂಗ್ರಹ ಹಾಗೂ ಸಾಲ ನೀಡುವ ಮೂಲಕ ನಿರಂತರ ಬ್ಯಾಂಕಿಂಗ್ ವ್ಯವಹಾರ ನಡೆಸುವ ಗ್ರಾಹಕರನ್ನು ಆಕರ್ಷಿಸುವುದು ಈ ಅಭಿಯಾನದ ಉದ್ದೇಶವಾಗಿದೆ. ಇಲ್ಲಿಯವರೆಗೂ ಬ್ಯಾಂಕಿನ ವ್ಯವಸ್ಥಾಪಕರು ಮತ್ತು ಗ್ರಾಹಕರ ನಡುವೆ ಮಾತ್ರವೇ ಸಂವಹನ ನಡೆಯುತ್ತಿತ್ತು. ಈ ಅಭಿಯಾನದಿಂದಾಗಿ ಬ್ಯಾಂಕಿನ ಎಲ್ಲಾ ಸಿಬ್ಬಂದಿಗಳೂ ಸಾರ್ವಜನಿಕರೊಂದಿಗೆ ಬೆರೆಯುವುದರ ಜೊತೆಗೆ ಪರಿಣಾಮಕಾರಿ ಸೇವೆಯನ್ನು ನೀಡಲು ಇದು ಸಹಕಾರಿಯಾಗಿದೆ.
ನವೋದಯ ಸಂಘಕ್ಕೆ ಸೇರಿ ಸ್ವಾವಲಂಬಿ ಜೀವನ ರೂಪಿಸಿ:
ಎಸ್‌ಸಿಡಿಸಿಸಿ ಬ್ಯಾಂಕ್ ಪ್ರವರ್ತಿತ ನವೋದಯ ಸ್ವ-ಸಹಾಯ ಸಂಘಗಳು ಗ್ರಾಮೀಣ ಹಾಗೂ ನಗರ ಪ್ರದೇಶದ ಬಡ ಜನರಿಗೆ ಆರ್ಥಿಕ ಚೈತನ್ಯವನ್ನು ತುಂಬಿದೆ. ಈ ನೆಲೆಯಲ್ಲಿ ನವೋದಯ ಸಂಘಗಳ ಶಕ್ತಿ ಇನ್ನಷ್ಟು ಸುಧೃಢಗೊಳಿಸಬೇಕು ಎನ್ನುವ ಉದ್ದೇಶದಿಂದ ಹೊಸ ಯೋಜನೆ ರೂಪಿಸಲಾಗಿದೆ. ಪರಿಪೂರ್ಣ ಬದುಕಿಗೆ ನವೋದಯ ಸಂಘಗಳು ಆಶಾಕಿರಣವಾಗಿರುವ ಈ ಕಾಲಘಟ್ಟದಲ್ಲಿ ಇನ್ನೂ ಹೆಚ್ಚು ಭರವಸೆಯನ್ನು ಮೂಡಿಸುವ ಉದ್ದೇಶವನ್ನು ಎಸ್‌ಸಿಡಿಸಿಸಿ ಬ್ಯಾಂಕ್ ಹೊಂದಿದೆ. ನವೋದಯ ಗ್ರಾಮ ವಿಕಾಸ ಚಾರಿಟೆಬಲ್ ಟ್ರಸ್ಟ್ ರಿ, ಮಂಗಳೂರು ಹಾಗೂ ಎಸ್‌ಸಿಡಿಸಿಸಿ ಬ್ಯಾಂಕ್ ಜಂಟಿಯಾಗಿ ನವೋದಯ ಸಂಘಕ್ಕೆ ಸೇರಿ ಸ್ವಾವಲಂಬಿ ಜೀವನ ರೂಪಿಸಿ”
ಎನ್ನುವ ಮೂಲಕ ಜನಜಾಗೃತಿಯನ್ನು ಮೂಡಿಸಲಿದೆ.
ಉಡುಪಿ ಜಿಲ್ಲೆಗೆ ಮೊಬೈಲ್ ಬ್ಯಾಂಕಿಂಗ್
ದೇಶದ ಇತಿಹಾಸದಲ್ಲೇ ಪ್ರಪ್ರಥಮ ಬಾರಿಗೆ ಎಸ್‌ಸಿಡಿಸಿಸಿ ಬ್ಯಾಂಕ್ “ಗ್ರಾಹಕರ ಮನೆ ಬಾಗಿಲಿಗೆ ಬ್ಯಾಂಕ್” ಎನ್ನುವ ವಿನೂತನ ಮೊಬೈಲ್ ಬ್ಯಾಂಕಿಂಗ್ ಯೋಜನೆಯನ್ನು ೨೦೦೭ರ ಡಿಸೆಂಬರ್ ೧೯ರಂದು ಜಾರಿಗೆ ತಂದಿತ್ತು. ಸುಸಜ್ಜಿತ ವಾಹನದ ಮೂಲಕ ನಿರ್ದಿಷ್ಟ ದಿನಗಳಲ್ಲಿ, ನಿರ್ದಿಷ್ಟ ಸಮಯಕ್ಕೆ, ನಿರ್ದಿಷ್ಟ ಸ್ಥಳಗಳಲ್ಲಿ ಬ್ಯಾಂಕಿಂಗ್ ವ್ಯವಹಾರ ನಡೆಯುತ್ತಿದ್ದು, ಇದು ಮಂಗಳೂರಿಗೆ ಮಾತ್ರ ಸೀಮಿತವಾಗಿತ್ತು. ಇದೀಗ ಉಡುಪಿ ಜಿಲ್ಲೆಗೂ ಈ ಯೋಜನೆಯನ್ನು ವಿಸ್ತರಿಸುವ ಕಾರ್ಯಯೋಜನೆಯನ್ನು ಬ್ಯಾಂಕ್ ರೂಪಿಸಿದೆ.
ಕಂಕನಾಡಿ ಹಾಗೂ ಬಿ.ಸಿ.ರೋಡ್‌ನಲ್ಲಿ ಶೀಘ್ರದಲ್ಲಿಯೇ ಎ.ಟಿ.ಎಂ.. ಕೇಂದ್ರ
ಎಸ್‌ಸಿಡಿಸಿಸಿ ಬ್ಯಾಂಕ್ ಜನರಿಗೆ ಹೆಚ್ಚಿನ ಸೇವೆಯನ್ನು ನೀಡುವ ಉದ್ದೇಶವನ್ನು ಹೊಂದಿದೆ. ದಿನದ ೨೪ ಗಂಟೆ ಗ್ರಾಹಕರ ಅವಶ್ಯಕತೆಗೆ ಸ್ಪಂದಿಸುವ ಉದ್ದೇಶದಿಂದ ಮಂಗಳೂರಿನ ಕಂಕನಾಡಿಯಲ್ಲಿ ಮತ್ತು ಬಿ.ಸಿ.ರೋಡ್‌ನಲ್ಲಿ ಎ.ಟಿ.ಎಂ. ಕೇಂದ್ರವನ್ನು ಶೀಘ್ರದಲ್ಲಿ ತೆರೆಯಲು ಮುಂದಾಗಿದೆ. ಮುಂದಿನ ದಿನಗಳಲ್ಲಿ ತಾಲೂಕು ಮಟ್ಟದಲ್ಲಿ
ಎ.ಟಿ.ಎಂ. ಸೌಲಭ್ಯವನ್ನು ವಿಸ್ತರಿಸಲಾಗುವುದು.