ಜನವರಿ ಅಂತ್ಯಕ್ಕೆ 30 ಕಿ.ಮೀ ರಾಜಕಾಲುವೆ ಪೂರ್ಣ:ಸಿಎಂ

ಬೆಂಗಳೂರು, ನ.24- ರಾಜಧಾನಿ ಬೆಂಗಳೂರಿನಲ್ಲಿ 30 ಕಿ.ಮೀ ರಾಜಕಾಲುವೆ ಕಾಮಗಾರಿಯನ್ನು ಜನವರಿ ಅಂತ್ಯಕ್ಕೆ ಪೂರ್ಣಗೊಳಿಸಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

ನಗರದಲ್ಲಿಂದು ಬೃಹತ್ ಕಾಲುವೆಗಳ ಕುರಿತಂತೆ ಬಿಬಿಎಂಪಿಯಲ್ಲಿ ಸಭೆ ನಡೆಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಗರದಲ್ಲಿ ಅತಿ ಹೆಚ್ಚು ಮಳೆಯಾಗಿರುವ ಹಿನ್ನೆಲೆಯಲ್ಲಿ ತಗ್ಗು ಪ್ರದೇಶಗಳಲ್ಲಿ ನೀರು ಮನೆಗಳಿಗೆ ನುಗ್ಗಿದೆ.
ಕೆರೆ ಕೆಳಗೆ ಇರುವ ರಾಜಕಾಲುವೆಗಳನ್ನು ದುರಸ್ತಿ ಮಾಡಿ, ಅದರ ನೀರಿನ ಸಾಗಣೆ ಸಾಮರ್ಥ್ಯವನ್ನು ಹೆಚ್ಚಿಸಬೇಕು ಎನ್ನುವ ವಿಚಾರದ ಬಗ್ಗೆ ಇಂದು ಸಭೆಯಲ್ಲಿ ಚರ್ಚಿಸಲಾಗಿದೆ ಎಂದರು.

ನಗರದೊಳಗಿನ ರಾಜಕಾಲುವೆಗಳ ಕಲ್ಲಿನ ಕಟ್ಟಡಗಳನ್ನು ಆರ್.ಸಿಸಿ ಕಟ್ಟಡಗಳಿಗೆ ಪರಿವರ್ತಿಸಬೇಕು.ಹೊರವಲಯದ ಗ್ರಾಮೀಣ ಪ್ರದೇಶಗಳಲ್ಲಿ ಮಣ್ಣಿನ ಕಾಲುವೆಗಳಿವೆ.110 ಗ್ರಾಮಗಳಲ್ಲಿ ಆರ್.ಸಿಸಿ ಕಾಲುವೆಗಳನ್ನು ನಿರ್ಮಿಸಿ, ಅವುಗಳ ಅಗಲ ವಿಸ್ತರಿಸಬೇಕು. ಅಲ್ಲಲ್ಲಿ ಇರುವ ಅಡಚಣೆಗಳನ್ನು ತೆಗೆಯಲು ವಿಶೇಷ ಕ್ರಮ ಕೈಗೊಳ್ಳಬೇಕಿದೆ. ಈ ಬಗ್ಗೆ ಇಂದಿನ ಸಭೆಯಲ್ಲಿ ಸುದೀರ್ಘವಾಗಿ ಚರ್ಚಿಸಲಾಗಿದೆ ಎಂದು ತಿಳಿಸಿದರು.

ಪ್ರತಿಯೊಬ್ಬ ಕಾರ್ಯನಿರ್ವಾಹಕ ಅಭಿಯಂತರರು ಅವರವರ ವ್ಯಾಪ್ತಿಗೆ ಬರುವ ವಿಚಾರಗಳಿಂದ ಮಾಹಿತಿ ಪಡೆದುಕೊಂಡು, ಕಟ್ಟುನಿಟ್ಟಿನ ಆದೇಶವನ್ನು ನೀಡಲಾಗಿದೆ. ವೃಷಭಾವತಿ, ಹೆಬ್ಬಾಳ, ಚಲ್ಲಘಟ್ಟ ಮತ್ತು ಕೋರಮಂಗಲ ನಗರದ ನಾಲ್ಕು ವ್ಯಾಲಿಗಳಿಗೆ 842 ರಾಜಕಾಲುವೆ ಇವೆ. ಈ ಪೈಕಿ 415 ಕಿ.ಮೀ ಈಗಾಗಲೇ ಪೂರ್ಣಗೊಂಡಿದೆ.

2019 -20 ರಲ್ಲಿ 75 ಕಿ.ಮೀ ರಾಜಕಾಲುವೆ ನಿರ್ಮಾಣಕ್ಕೆ ಅನುಮತಿ ನೀಡಲಾಗಿದ್ದು, ಅದರಲ್ಲಿ 40 ಕಿ.ಮೀ ಕಾಮಗಾರಿ ಪೂರ್ಣಗೊಂಡಿದೆ. ಹಲವು ಗಂಭೀರ ಸ್ಥಳಗಳನ್ನು ಗುರುತಿಸಲಾಗಿದ್ದು, ಅವುಗಳಲ್ಲಿ ಸುಮಾರು 94 ಗಂಭೀರ ಸ್ಥಳಗಳಿವೆ. ಅವುಗಳ ವಿವರಗಳನ್ನು ಪಡೆದಿದ್ದೇನೆ.
ಅವುಗಳನ್ನು ಇನ್ನು 2 ತಿಂಗೊಳಗೆ ಪೂರ್ಣಗೊಳಿಸಲು ಸೂಚನೆ ನೀಡಿದ್ದೇನೆ ಎಂದರು.

ಇನ್ನೂ, 130 ಇಂಜಿನಿಯರ್ ಗಳನ್ನು ಗುತ್ತಿಗೆ ಆಧಾರದ ಮೇಲೆ ನೇಮಕಾತಿ ಮಾಡಕೊಳ್ಳಲು ಸೂಚನೆ ನೀಡಲಾಗಿದೆ ಎಂದ ಅವರು, ಸಂಸ್ಕರಿಸದ ನೀರನ್ನು ಮಳೆ ನೀರು ಚರಂಡಿಗೆ ಕಡ್ಡಾಯವಾಗಿ ಹರಿಸಬಾರದು. ಅದಕ್ಕಾಗಿ ಎಸ್.ಟಿ.ಪಿಗಳನ್ನು ಸರಿಪಡಿಸುವುದು.
ಬಿಡಿಎ ಬಡಾವಣೆಗಳಲ್ಲಿ ವಿದ್ಯುಚ್ಚಕ್ತಿ, ಚರಂಡಿ ಹಾಗೂ ನೀರಿನ ವ್ಯವಸ್ಥೆ ಮಾಡುವ ಬಗ್ಗೆ ಪ್ರತ್ಯೇಕ ಸಭೆ ನಡೆಸಲಾಗುವುದು ಎಂದು ನುಡಿದರು.