ಜನವರಿ ಅಂತ್ಯಕ್ಕೆ ಕ್ಷೇತ್ರದ ಕೆರೆಗಳಿಗೆ ನೀರು ತುಂಬಿಸುವ ಕಾಮಗಾರಿ ಪೂರ್ಣ

ಸಂಜೆವಾಣಿ ವಾರ್ತೆಚಿತ್ರದುರ್ಗ.ಡಿ.31: ಮೊಳಕಾಲ್ಮೂರು ಕ್ಷೇತ್ರ ಹಿಂದುಳಿದ ಹಾಗೂ ಗಡಿ ಪ್ರದೇಶವಾಗಿದೆ. ಇಲ್ಲಿ ನೀರಾವರಿ ಅಭಿವೃದ್ಧಿಯಾದರೆ ಕ್ಷೇತ್ರದ ಜನರ ಹಲವಾರು ಸಮಸ್ಯೆಗಳು ಬಗೆ ಹರಿಯುತ್ತವೆ. ಈ ನಿಟ್ಟಿನಲ್ಲಿ ಕ್ಷೇತ್ರದ 46 ಕೆರೆಗಳಿಗೆ ನೀರು ತುಂಬಿಸುವ ಕಾಮಗಾರಿ ಜನವರಿ ಅಂತ್ಯಕ್ಕೆ ಪೂರ್ಣಗೊಳ್ಳಲಿದೆ ಎಂದು ಶಾಸಕ ಎನ್.ವೈ.ಗೋಪಾಲಕೃಷ್ಣ ಭರವಸೆ ವ್ಯಕ್ತಪಡಿಸಿದರು. ಮೊಳಕಾಲ್ಮೂರು ಪಟ್ಟಣದ ತಾಲ್ಲೂಕು ಆಡಳಿತ ಸೌಧ ಆವರಣದಲ್ಲಿ ಆಯೋಜಿಸಲಾದ ಜನತಾ ದರ್ಶನ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.ವಿಶ್ವೇಶ್ವರಯ್ಯ ಜಲ ನಿಗಮದ ವ್ಯವಸ್ಥಾಪಕ ಸಣ್ಣಚಿತ್ತಪ್ಪ ನಮ್ಮ ಭಾಗದವರೇ ಆಗಿದ್ದು, ಜನವರಿ ಕೊನೆಯ ವೇಳೆಗೆ ಕೆರೆಗಳಿಗೆ ಭದ್ರೆಯ ನೀರು ಹರಿಸುವುದಾಗಿ ಹೇಳಿದ್ದಾರೆ. ನೀರಾವರಿ ಯೋಜನೆಯು ವಿಳಂಬವಾದರೆ ನ್ಯಾಯಾಲಯದ ಮೊರೆ ಹೋಗಿ ಹೋರಾಟ ನಡೆಸುವ ಎಚ್ಚರಿಕೆಯನ್ನು ಸಂಬAಧಪಟ್ಟ ಅಧಿಕಾರಿಗಳಿಗೆ ನೀಡಿದ್ದೇನೆ. ರಾಜ್ಯ ಸರ್ಕಾರವು ನೀರಾವರಿ ಕಾಮಗಾರಿಗಳನ್ನು ಆದ್ಯತೆ ಮೇರೆಗೆ ಕೈಗೊಳ್ಳಲಿದೆ ಎಂದು ಶಾಸಕ ಎನ್.ವೈ.ಗೋಪಾಲಕೃಷ್ಣ ಹೇಳಿದರು.ಕಳೆದ 20 ವರ್ಷಗಳಿಂದ ಶಾಸಕನಾಗಿ ಕೆಲಸ ನಿರ್ವಹಿಸುತ್ತಿದ್ದೇನೆ. ಜನಸಂಖ್ಯೆ ಹೆಚ್ಚಾದ ಹಾಗೇ ಜನರ ಸಮಸ್ಯೆಗಳು ಹೆಚ್ಚಾಗುತ್ತಿವೆ. ಈ ಸಮಸ್ಯೆಗೆ ಸ್ಪಂದಿಸಿ ಬಗೆಹರಿಸುವ ಕೆಲಸವನ್ನು ಮುಖ್ಯಮಂತ್ರಿ ಸಿದ್ಧರಾಮಯ್ಯನವರು ಜನತಾ ದರ್ಶನ ಮೂಲಕ ಸಕಾರಗೊಳಿಸಿದ್ದಾರೆ. ಪರಿಶಿಷ್ಟ ಜಾತಿ, ಪಂಗಡ, ಅಲ್ಪಸಂಖ್ಯಾತರು ಹಾಗೂ ಹಿಂದುಳಿದ ವರ್ಗಗಳ ಅಭಿವೃದ್ಧಿಗೆ ಸರ್ಕಾರ ಬದ್ದವಾಗಿದೆ. ರಾಜ್ಯದ ಮಹಿಳೆಯರ ಅಭ್ಯುದಯಕ್ಕಾಗಿ ಉಚಿತ ಸಾರಿಗೆ ವ್ಯವಸ್ಥೆಯ ಶಕ್ತಿ ಯೋಜನೆ ಹಾಗೂ ಬಡಕುಟುಂಬಗಳಿಗೆ ಸಹಾಯಧನ ಒದಗಿಸುವ ಗೃಹಲಕ್ಷ್ಮೀ ಯೋಜನೆ ಜಾರಿಗೆ ತರಲಾಗಿದೆ. ಇದರೊಂದಿಗೆ 200 ಯನಿಟ್ ವರೆಗಿನ ಉಚಿತ ವಿದ್ಯುತ್, 10 ಕೆ.ಜಿ.ಅಕ್ಕಿಯನ್ನು ಅನ್ನಭಾಗ್ಯ ಯೋಜನೆಯಡಿ ನೀಡಲಾಗುತ್ತಿದೆ ಎಂದರು.ಗ್ಯಾರೆಂಟಿ ಯೋಜನೆಗಳ ಜಾರಿಯಿಂದಾಗಿ ಈ ಬಾರಿ ಶಾಸಕರ ಅನುದಾನದಲ್ಲಿ ಕೊರತೆಯಾಗಿದೆ. ಮುಂದಿನ ಆಯ್ಯವ್ಯಯದಲ್ಲಿ ಎಲ್ಲಾ ಶಾಸಕರಿಗೂ ಹೆಚ್ಚಿನ ಅನುದಾನ ಒದಗಿಸುವ ಭರವಸೆಯನ್ನು ಬೆಳಗಾವಿ ಚಳಿಗಾಲದ ಅಧಿವೇಶನದಲ್ಲಿ ಮುಖ್ಯಮಂತ್ರಿಗಳು ನೀಡಿದ್ದಾರೆ. ಏಪ್ರಿಲ್ ನಂತರ ಹೊಸ ಶಾಲಾ ಕಟ್ಟಡ ಹಾಗೂ ರಸ್ತೆ ಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕರ ಅನುದಾನ ಒದಗಿಸುವ ಭರವಸೆಯನ್ನು ಶಾಸಕ ಎನ್.ವೈ.ಗೋಪಾಲಕೃಷ್ಣ ನೀಡಿದರು.ಜಿಲ್ಲೆಯಲ್ಲಿ ಕಳೆದ 3 ತಿಂಗಳಿನಲ್ಲಿ 6 ಜನತಾ ದರ್ಶನ ಕಾರ್ಯಕ್ರಗಳನ್ನು ವಿವಿಧ ತಾಲ್ಲೂಕುಗಳಲ್ಲಿ ಹಮ್ಮಿಕೊಳ್ಳಲಾಗಿದೆ. ಈ ಜನತಾ ದರ್ಶನದಲ್ಲಿ ಒಟ್ಟು 1393 ಅರ್ಜಿಗಳು ಸ್ವೀಕರಿಸಲಾಗಿದ್ದು, 1268 ಅರ್ಜಿಗಳನ್ನು ವಿಲೆ ಮಾಡಿ ಜನರ ಸಮಸ್ಯೆಗಳಿಗೆ ಪರಿಹಾರ ನೀಡಲಾಗಿದೆ ಎಂದು ಜಿಲ್ಲಾಧಿಕಾರಿ ದಿವ್ಯಪ್ರಭು.ಜಿ.ಆರ್.ಜೆ ವೇದಿಕೆ ಕಾರ್ಯಕ್ರಮದಲ್ಲಿ ಮಾಹಿತಿ ನೀಡಿದರು.ಜನರ ಮನೆ ಬಾಗಿಲಿಗೆ ತೆರಳಿಸಿ ಸಮಸ್ಯೆಗಳನ್ನು ಆಲಿಸಿ ಪರಿಹರಿಸುವ ಉದ್ದೇಶವನ್ನು ಜನತಾ ದರ್ಶನ ಕಾರ್ಯಕ್ರಮ ಹೊಂದಿದೆ. ಜನರು ತಮ್ಮ ಸಮಸ್ಯೆಗಳ ಪರಿಹಾರಕ್ಕಾಗಿ ಜಿಲ್ಲಾ ಕೇಂದ್ರಗಳಿಗೆ ಅಲೆದಾಟ ಮಾಡುವುದನ್ನು ತಪ್ಪಿಸಿ, ಸ್ಥಳದಲ್ಲಿಯೇ ಪರಿಹಾರ ನೀಡಲಾಗುವುದು. ಜನತಾ ದರ್ಶನದಲ್ಲಿ ಸಲ್ಲಿಸಿದ ಅರ್ಜಿಗಳನ್ನು ಐ.ಪಿ.ಆರ್.ಜಿ.ಎಸ್ ಪೋರ್ಟಲ್ ಮೂಲಕ ಗಣಕೀಕೃತಗೊಳಿಸಲಾಗುವುದು. ಇದರಿಂದ ಸಲ್ಲಿದ ಅರ್ಜಿ ಕಳೆದು ಹೊಯಿತು ಎನ್ನುವ ಪ್ರಸಂಗ ಎದುರಾಗುವುದಿಲ್ಲ. ಗಣಕೀಕೃತಗೊಂಡ ಅರ್ಜಿಗಳನ್ನು ಇಲಾಖಾವಾರು ವಿಂಗಡಿಸಿ ಸಂಬAದಪಟ್ಟ ಅಧಿಕಾರಿಗಳಿಗೆ ರವಾನಿಸಲಾಗುವುದು. ಇದಕ್ಕೆ ಅಧಿಕಾರಿಗಳು ತಕ್ಷಣವೇ ಪರಿಹಾರ ಒದಗಿಸಬೇಕು. ಸರ್ವೇ, ಕಂದಾಯ ಹಾಗೂ ನ್ಯಾಯಾಲಯದಲ್ಲಿ ಬಾಕಿ ಇರುವ ಸಮಸ್ಯೆಗಳ ಇತ್ಯರ್ಥಕ್ಕೆ ಒಂದು ತಿಂಗಳ ಗಡುವು ನೀಡಲಾಗಿದೆ. ಜಿಲ್ಲೆಯ ಎಲ್ಲಾ ತಾಲ್ಲೂಕುಗಳ ಕಂದಾಯ ಇಲಾಖೆಯಲ್ಲಿ ಇ ಆಫೀಸ್ ಜಾರಿ ಮಾಡಲಾಗಿದೆ. ಗೃಹಲಕ್ಷ್ಮೀ ಸೇರಿದಂತೆ ಗ್ಯಾರೆಂಟಿ ಯೋಜನೆಗಳ ಜಾರಿ ಚಿತ್ರದುರ್ಗ ಜಿಲ್ಲೆ ಮುಂಚೂಣಿಯಲ್ಲಿದೆ ಎಂದು ಜಿಲ್ಲಾಧಿಕಾರಿದಿವ್ಯಪ್ರಭು.ಜಿ.ಆರ್.ಜೆ ಹೇಳಿದರು.ಈ ಸಂದರ್ಭದಲ್ಲಿ ಉವಿಭಾಗಧಿಕಾರಿ ಎಂ.ಕಾರ್ತಿಕ್, ಕೃಷಿ ಇಲಾಖೆ ಜಂಟಿ ನಿರ್ದೇಶಕ ಮಂಜುನಾಥ, ತೋಟಗಾರಿಕೆ ಇಲಾಖೆ ಉಪನಿರ್ದೇಶಕಿ ಸವಿತಾ, ತಹಶೀಲ್ದಾರ್ ರೆಹಮಾನ್ ಪಾಷ, ತಾ.ಪಂ.ಇಓ ಪ್ರಕಾಶ್ ಸೇರಿದಂತೆ ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.