ಜನವರಿಯಿಂದ ಲಸಿಕೆ ನೀಡಿಕೆ: ಹರ್ಷ

ನವದೆಹಲಿ, ಡಿ. ೨೧- ಭಾರತದಲ್ಲಿ ಕೊರೊನಾ ಲಸಿಕೆಯನ್ನು ಜನವರಿಯಿಂದ ನೀಡಲಾಗುವುದು ಎಂದು ಕೇಂದ್ರ ಆರೋಗ್ಯ ಸಚಿವ ಡಾ. ಹರ್ಷವರ್ಧನ್ ಹೇಳಿದ್ದಾರೆ.
ಕೊರೊನಾ ಲಸಿಕೆಯ ಪ್ರಾಯೋಗಿಕ ಪರೀಕ್ಷೆಗಳು ಅಂತಿಮ ಹಂತದಲ್ಲಿದ್ದು, ಜನವರಿಯಲ್ಲಿ ಲಸಿಕೆ ನೀಡಿಕೆ ಆರಂಭವಾಗುವುದು ನಿಶ್ಚಿತ. ಜನವರಿಯಲ್ಲಿ ಮೊದಲ ಲಸಿಕೆ ನೀಡಿಕೆ ನಡೆಯಲಿದೆ ಎಂದು ಅವರು ಸುದ್ದಿಸಂಸ್ಥೆಯೊಂದಕ್ಕೆ ನೀಡಿರುವ ಸಂದರ್ಶನದಲ್ಲಿ ತಿಳಿಸಿದ್ದಾರೆ.
ಕೊರೊನಾ ಲಸಿಕೆಯ ಸುರಕ್ಷತೆ ಹಾಗೂ ಅದರ ಪರಿಣಾಮದ ಬಗ್ಗೆ ಸರ್ಕಾರ ಹೆಚ್ಚಿನ ಆದ್ಯತೆ ನೀಡಿದೆ. ಜನವರಿಯಲ್ಲಿ ಆರೋಗ್ಯ ಕಾರ್ಯಕರ್ತರಿಗೆ ಲಸಿಕೆ ನೀಡುವ ಕಾರ್ಯ ಆರಂಭವಾಗಲಿದೆ ಎಂದು ಅವರು ಹೇಳಿದ್ದಾರೆ.
ಕೊರೊನಾ ಲಸಿಕೆಯನ್ನು ತುರ್ತು ಸಂದರ್ಭದಲ್ಲಿ ಬಳಸುವ ಬಗ್ಗೆ ಔಷಧ ನಿಯಂತ್ರಣ ಇಲಾಖೆ ಪರಿಶೀಲನೆ ನಡೆಸಿದೆ. ಏನೇ ಆದರೂ ಜನವರಿಯಲ್ಲಿ ಲಸಿಕೆ ನೀಡುವ ಕಾರ್ಯ ಆರಂಭವಾಗಲಿದೆ ಎಂಬ ವಿಶ್ವಾಸ ಅವರು ವ್ಯಕ್ತಪಡಿಸಿದ್ದಾರೆ.
ಲಸಿಕೆಯ ಸುರಕ್ಷತೆ ಹಾಗೂ ಪರಿಣಾಮದ ಬಗ್ಗೆ ಸರ್ಕಾರ ಹೆಚ್ಚಿನ ಆದ್ಯತೆ ನೀಡಿದ್ದು, ಲಸಿಕೆಯ ಬಗ್ಗೆ ಔಷಧ ನಿಯಂತ್ರಣ ಇಲಾಖೆ ಸಂಪೂರ್ಣ ವಿಶ್ಲೇಷಣೆಯಲ್ಲಿ ನಿರತವಾಗಿದೆ. ಲಸಿಕೆ ಸುರಕ್ಷಿತ ಎಂಬುದು ಖಚಿತಪಟ್ಟ ನಂತರವೇ ಲಸಿಕೆ ನೀಡಿಕೆ ಆರಂಭವಾಗಲಿದೆ ಎಂದು ಅವರು ಹೇಳಿದರು.
ಕಳೆದ ೭ – ೮ ತಿಂಗಳಿಂದ ತಜ್ಞರು, ವಿಜ್ಞಾನಿಗಳು, ಲಸಿಕೆ ಅಭಿವೃದ್ಧಿಯಲ್ಲಿ ತೊಡಗಿದ್ದಾರೆ. ಲಸಿಕೆ ಲಭ್ಯವಾದ ನಂತರ, ಮೊದಲ ಹಂತದಲ್ಲಿ ೩೦ ಕೋಟಿ ಜನರಿಗೆ ಲಸಿಕೆ ನೀಡಲಾಗುವುದು ಎಂದರು.
ಲಸಿಕೆ ಲಭ್ಯವಾದ ನಂತರ, ಮೊದಲು ಕೊರೊನಾ ವಾರಿಯರ್‍ಸ್ ಗಳಿಗೆ ನೀಡಲಾಗುವುದು. ಭಾರತ ಸೇರಿದಂತೆ, ಜಗತ್ತಿನ ವಿವಿಧೆಡೆ ಕೊರೊನಾಗೆ ೬ ಲಸಿಕೆಗಳನ್ನು ಅಭಿವೃದ್ಧಿಪಡಿಸಲಾಗುತ್ತಿದೆ. ಈ ಲಸಿಕೆಗಳು ವಿವಿಧ ಹಂತದ ಪ್ರಾಯೋಗಿಕ ಪರೀಕ್ಷೆಗೆ ಒಳಪಟ್ಟಿವೆ ಎಂದರು.
ಭಾರತದಲ್ಲಿ ಅಭಿವೃದ್ಧಿಯಾಗುತ್ತಿರುವ ಕೋವಾಶೀಲ್ಡ್, ಕೋವ್ಯಾಕ್ಸಿನ್, ಜೈಕೋ ವಿ – ಡಿ, ರಷ್ಯಾದ ಸ್ಫುಟ್ನಿಕ್, ಅಮೆರಿಕಾದ ಫೈಜರ್ ಹೀಗೆ ಹಲವು ಲಸಿಕೆಗಳು ಸದ್ಯದಲ್ಲೇ ಲಭ್ಯವಾಗಲಿವೆ ಎಂದು ಅವರು ತಿಳಿಸಿದರು.