ಜನವರಿಯಿಂದ ಕರಾವಳಿ ಜಿಲ್ಲೆಗಳಿಗೆ ಕುಚ್ಚಲಕ್ಕಿ ವಿತರಣೆ

ಮಂಗಳೂರು, ನ.೧೧- ದಕ್ಷಿಣ ಕನ್ನಡ, ಉಡುಪಿ ಹಾಗೂ ಉತ್ತರ ಕನ್ನಡ ಜಿಲ್ಲೆಗಳಲ್ಲಿ ಮುಂದಿನ ವರ್ಷದ ಜನವರಿ 1ರಿಂದ ಪಡಿತರದಲ್ಲಿ ಕುಚ್ಚಲಕ್ಕಿ ವಿತರಿಸಲು ನಿರ್ಧಾರ ಕೈಗೊಳ್ಳಲಾಗಿದೆ ಎಂದು ಸಮಾಜ ಕಲ್ಯಾಣ ಸಚಿವ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದ್ದಾರೆ. 

ವಿಧಾನಸೌಧದ ತಮ್ಮ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಗುರುವಾರ ಮಾತನಾಡಿದ ಅವರು, ಕರಾವಳಿ ಜಿಲ್ಲೆಗಳ ಜನರು ಪಡಿತರ ಮೂಲಕ ಕುಚಲಕ್ಕಿಯನ್ನು ನೀಡುವಂತೆ ಬಹಳ ಹಿಂದಿನಿಂದಲೂ ಬೇಡಿಕೆ ಇಟ್ಟಿದ್ದರು. ಇದನ್ನು ಗಮನಿಸಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಕರವಾಳಿ ಜಿಲ್ಲೆಗಳಲ್ಲಿ ಕುಚಲಕ್ಕಿ ವಿತರಣೆಗೆ ಸಹಮತಿ ವ್ಯಕ್ತಪಡಿಸಿದ್ದಾರೆ. ಉಡುಪಿ ಜಿಲ್ಲೆಗೆ ಸಿಎಂ ಆಗಮಿಸಿದ್ದ ಸಂದರ್ಭದಲ್ಲಿ ಕುಚ್ಚಲಕ್ಕಿ ವಿತರಿಸುವ ಘೋಷಣೆ ಮಾಡಿದ್ದರು. ಮುಂದಿನ ವರ್ಷಾರಂಭದಿಂದ ಕುಚ್ಚಲಕ್ಕಿ ವಿತರಿಸಲಾಗುವುದು. ಕೇಂದ್ರ ಸರಕಾರವು ಪ್ರತೀ ಕ್ವಿಂಟಾಲ್ ಭತ್ತಕ್ಕೆ 2040 ರೂ. ಬೆಂಬಲ ಬೆಲೆ ನಿಗದಿ ಮಾಡಿದೆ. ಆದರೆ, ರೈತರು ಈ ದರದಲ್ಲಿ ಭತ್ತ ನೀಡಲು ಸಿದ್ಧರಿಲ್ಲ. ಆದುದರಿಂದ, ರಾಜ್ಯ ಸರಕಾರವು ಪ್ರತೀ ಕ್ವಿಂಟಾಲ್ ಭತ್ತಕ್ಕೆ ಹೆಚ್ಚುವರಿಯಾಗಿ 500 ರೂ. ಸೇರಿಸಿ, 2540 ರೂ.ನೀಡಿ ಭತ್ತ ಖರೀದಿ ಮಾಡಲಿದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.