ಜನವರಿಯಲ್ಲಿ ಹಂಪಿ ಉತ್ಸವ    -ಜಿಲ್ಲಾಧಿಕಾರಿ ಅನಿರುದ್ಧ್ ಶ್ರವಣ್


ಸಂಜೆವಾಣಿ ವಾರ್ತೆ
ಹೊಸಪೇಟೆ: ಡಿಸೆಂಬರ್ ಅಂತ್ಯ ಅಥವಾ ಜನವರಿ ತಿಂಗಳಲ್ಲಿ ವಿಶ್ವವಿಖ್ಯಾತ ಹಂಪಿ ಉತ್ಸವ ನಡೆಸಲು ಚಿಂತನೆ ನಡೆಸಿದೆ ಎಂದು ಜಿಲ್ಲಾಧಿಕಾರಿ ಅನಿರುದ್ಧ್ ಶ್ರವಣ್ ತಿಳಿಸಿದರು.
ಹಂಪಿ ಎದುರು ಬಸವಣ್ಣ ಮಂಟಪದಲ್ಲಿ ಕೋಟಿ ಕಂಠ ಗಾಯನ ಕಾರ್ಯಕ್ರಮದಲ್ಲಿ ಭಾಗವಹಿಸಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಂಪಿ ಉತ್ಸವ ಕುರಿತಂತೆ ಜಿಲ್ಲಾ ಉಸ್ತುವಾರಿ ಸಚಿವೆ ಶಶಿಕಲಾ ಅಣ್ಣಾ ಸಾಹೇಬ್ ಜೊಲ್ಲೆ ಅವರ ಅಧ್ಯಕ್ಷತೆಯಲ್ಲಿ  ಪೂರ್ವಭಾವಿ ಸಭೆ ನಡೆಸಿ ಬಹುತೇಕ ಡಿಸೆಂಬರ್ ಕೊನೆವಾರ ಅಥವಾ ಜನವರಿ ಮೊದಲ ವಾರದಲ್ಲಿ ದಿನಾಂಕ ನಿಗದಿಗೊಳಿಸಲಾಗುವುದು ಎಂದರು.
ನ.1ರಂದು ಕನ್ನಡ ರಾಜೋತ್ಸವ ದಿನದಂದ ಹಂಪಿ ಬೈನೈಟ್‍ಗೆ ಪ್ರಾಯೋಗಿಕವಾಗಿ ಚಾಲನೆ ನೀಡಲಾಗುವುದು. ಜಿಲ್ಲಾ ಉಸ್ತುವಾರಿ ಸಚಿವೆ ಶಶಿಕಲಾ ಜೊಲ್ಲೆ, ಸಚಿವ ಆನಂದಸಿಂಗ್ ಈ ಭಾಗದ ಸಂಸದರು, ಜನಪ್ರತಿನಿಧಿಗಳು ಭಾಗವಹಿಸಲಿದ್ದಾರೆ ಎಂದರು.
ಮೂಲಭೂತ ಸೌಕರ್ಯಗಳ ಕೊರತೆ:
ಅನೇಕ ವರ್ಷಗಳಿಂದ ಹಂಪಿಯಲ್ಲಿ ಮೂಲಭೂತ ಸೌಲಭ್ಯಗಳ ಕೊರತೆ ಕಾಡುತ್ತಿದೆ. ಅದರ ಜೊತೆಯಲ್ಲಿ ಮೂಲಭೂತ ಸೌಕರ್ಯ ಒದಗಿಸಲು ಕೆಲ ತಾಂತ್ರಿಕ ತೊಂದರೆಗಳು ಇವೆ. ಇದರ ನಡುವೆ ಹಂಪಿಯ ಕೆಲ ಭಾಗದಲ್ಲಿ ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ ಕುಡಿಯುವ ನೀರು ಸೇರಿದಂತೆ ಮೂಲಸೌಕರ್ಯಗಳನ್ನು ವ್ಯವಸ್ಥೆ ಮಾಡಿದೆ ಆದರೂ ಸರಿಯಾಗಿ ನಿರ್ವಹಣೆಯಾಗಬೇಕಿದೆ ಎಂದರು.
ಬ್ಯಾಟರಿ ವಾಹನಗಳ ಕೊರತೆ
ಹಂಪಿಯಲ್ಲಿ ಗೆಜ್ಜಲ ಮಂಟಪದಿಂದ ವಿಜಯವಿಠಲ ದೇವಾಲಯದವರೆಗೆ ಪ್ರವಾಸಿಗರನ್ನು ಸಾಗಿಸುತ್ತಿರುವ ಬ್ಯಾಟರಿ ಚಾಲಿತ ವಾಹನಗಳ ಕೊರತೆ ನೀಗಿಸಲಾಗುವುದು. ಹೆಚ್ಚಿನ ಬ್ಯಾಟರಿ ಚಾಲಿತ ವಾಹನಗಳನ್ನು ಒದಗಿಸುವ ಮೂಲಕ ಪ್ರವಾಸಿಗರಿಗೆ ಅನುಕೂಲ ಮಾಡಿಕೊಡಲಾಗುವುದು ಎಂದರು.
ರಂಗಮಂದಿರ ನಿರ್ಮಾಣ:
ನಗರದ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಜಿಲ್ಲಾ ಖನಿಜ ನಿಧಿಯಿಂದ 3 ಕೋಟಿ ರೂ ವೆಚ್ಚದಲ್ಲಿ ರಂಗ ಮಂದಿರ ನಿರ್ಮಾಣ ಮಾಡಲಾಗುವುದು. ಪ್ರಸ್ತುತ 2 ಕೋಟಿ ರೂ ಅನುದಾನ ಬಿಡುಗಡೆಯಾಗಿದೆ. ಇನ್ನು 1 ಕೋಟಿ ರೂ ಅನುದಾನ ಬಿಡುಗಡೆಗೆ ಕ್ರಮ ಕೈಗೊಳ್ಳಲಾಗುವುದು ಎಂದರು.