ಜನವರಿಯಲ್ಲಿ ಕಾಂಗ್ರೆಸ್ ಸಾಂಸ್ಥಿಕ ಚುನಾವಣೆ ಸಾಧ್ಯತೆ

ನವದೆಹಲಿ ಡಿಸೆಂಬರ್ ೨೭. ಜನವರಿ ಮೊದಲ ವಾರದಿಂದ ಕಾಂಗ್ರೆಸ್ ಪಕ್ಷದ ಸಾಂಸ್ಥಿಕ ಚುನಾವಣೆಗಳು ನಡೆಯುವ ಸಾಧ್ಯತೆಗಳು ಕಂಡುಬರುತ್ತಿವೆ. ಪಕ್ಷದ ಸಂಘಟನೆಯ ಆಂತರಿಕ ಚುನಾವಣೆ ಗಳನ್ನು ನಡೆಸಲು ಕಾಂಗ್ರೆಸ್ ಪಕ್ಷ ತೀರ್ಮಾನಿಸಿದೆ ಎಂದು ವಿಶ್ವಸನೀಯ ಮೂಲಗಳು ತಿಳಿಸಿವೆ.

ಕಾಂಗ್ರೆಸ್ ಪಕ್ಷದ ಕೇಂದ್ರೀಯ ಚುನಾವಣಾ ಪ್ರಾಧಿಕಾರ ಸಾಂಸ್ಥಿಕ ಚುನಾವಣೆಗಳನ್ನು ನಡೆಸುವ ಬಗ್ಗೆ ಈ ತಿಂಗಳ ಅಂತ್ಯಕ್ಕೆ ವೇಳಾಪಟ್ಟಿ ಪ್ರಕಟಿಸುವ ಸಾಧ್ಯತೆಗಳಿವೆ ಎಂದು ಪ್ರಾಧಿಕಾರದ ಸದಸ್ಯರೊಬ್ಬರು ತಿಳಿಸಿದ್ದಾರೆ.

ಪಕ್ಷದ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಸುವ ಕುರಿತು ಒಮ್ಮತ ಮೂಡಿಸಲು ಪ್ರಯತ್ನಗಳು ನಡೆದಿವೆ ಎಂದು ಅವರು ಹೇಳಿದ್ದಾರೆ. ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿಯವರು ಇತ್ತೀಚೆಗೆ ಪಕ್ಷದ ಮುಖಂಡರೊಂದಿಗೆ ನಡೆಸಿದ ಸಭೆಯಲ್ಲಿ ಈ ಕುರಿತು ಚರ್ಚೆಗಳು ನಡೆದಿವೆ.

ಪಕ್ಷದ ನಾಯಕತ್ವದ ವಿರುದ್ಧ ಅಪಸ್ವರ ಎತ್ತಿ ಪತ್ರ ಬರೆದಿದ್ದ ೨೩ ನಾಯಕರೊಂದಿಗೆ ಸೋನಿಯಾಗಾಂಧಿಯವರು ಮುಕ್ತವಾಗಿ ಚರ್ಚೆ ನಡೆಸಿದ ನಂತರ ಸಾಂಸ್ಥಿಕ ಚುನಾವಣೆಗಳ ಪ್ರಕ್ರಿಯೆ ಆರಂಭಿಸುವ ಕುರಿತು ಚರ್ಚಿಸಿದ್ದಾರೆ ಎಂದು ಹೇಳಲಾಗಿದೆ.

ಪಕ್ಷದ ಚುನಾವಣಾ ಸಮಿತಿ ಜನವರಿ ಮೊದಲ ವಾರದಲ್ಲಿ ಸಭೆ ಸೇರಿ ಸಾಂಸ್ಥಿಕ ಚುನಾವಣೆಗಳ ವೇಳಾಪಟ್ಟಿ ಕುರಿತು ಅಂತಿಮ ನಿರ್ಧಾರವನ್ನು ಪ್ರಕಟಿಸಲಿದೆ ಎಂದು ಹೆಸರು ಹೇಳಲು ಬಯಸದ ಪ್ರಾಧಿಕಾರದ ಸದಸ್ಯರೊಬ್ಬರು ತಿಳಿಸಿದ್ದಾರೆ.

ಇದಾದನಂತರ ಕಾಂಗ್ರೆಸ್ ಕಾರ್ಯಕಾರಿಣಿ ಸಮಿತಿ ಸಭೆ ಸೇರಿ ಸ್ಪಷ್ಟ ನಿರ್ಧಾರವನ್ನು ಕೈಗೊಳ್ಳಲಿದೆ ಎಂದು ಅವರು ಹೇಳಿದ್ದಾರೆ. ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ಡಿಸೆಂಬರ್ ೧೯ರಂದು ಪಕ್ಷದ ಮುಖಂಡರೊಂದಿಗೆ ತಮ್ಮ ನಿವಾಸದಲ್ಲಿ ನಡೆಸಿದ ಚರ್ಚೆಯ ಫಲವಾಗಿ ಈ ರೀತಿಯ ಚಿಂತನೆಗಳು ಹೊರಬಂದಿವೆ.