ಜನರ ಹೈರಾಣಾಗಿಸಿದ ಹಳ್ಳಿ ರಸ್ತೆಗಳು

ಗಬ್ಬೂರು,ಮಾ.೦೧- ಸಂಪರ್ಕ ಸಾಧನವಾಗಿರುವ ರಸ್ತೆಗಳನ್ನು ಸುಧಾರಿಸುವುದರತ್ತ ಯಾರೊಬ್ಬರೂ ದೃಷ್ಟಿ ನೆಡುತ್ತಿಲ್ಲ. ದೇವದುರ್ಗ ತಾಲೂಕಿನಾದ್ಯಂತ ಹಳ್ಳಿ ರಸ್ತೆಗಳು ಹಾಳಾಗಿದ್ದು, ಜನರಿಗೆ ಸುಗಮ ಸಂಚಾರಕ್ಕೆ ಸಂಚಕಾರ ಬಂದಂತಾಗಿದೆ ಎಂದು ಜೆಡಿಎಸ್ ಯುವ ಮುಖಂಡ ಮಲ್ಲು ಕೊತ್ತದೊಡ್ಡಿ ಆರೋಪಿಸಿದ್ದಾರೆ.
ಸಂಜೆವಾಣಿಯೊಂದಿಗೆ ಮಾತನಾಡಿದ ಅವರು ರಸ್ತೆಗಳೆಂದರೆ ಅಭಿವೃದ್ಧಿಗೆ ಆತ್ಮವಿದ್ದಂತೆ, ವ್ಯಾಪಾರ, ವಹಿವಾಟು, ಜನಸಾಮಾನ್ಯರ ಸುಗಮ ಸಂಚಾರಕ್ಕೆ, ಶಾಲಾ ಕಾಲೇಜುಗಳಿಗೆ ಹೋಗುವ ವಿದ್ಯಾರ್ಥಿಗಳು ಸಕಾಲಕ್ಕೆ ತಲುಪುವುದಕ್ಕೆ ತುರ್ತು ಸಂದರ್ಭದಲ್ಲಿ ಸೂಕ್ತ ಸಮಯದಲ್ಲಿ ಆಸ್ಪತ್ರೆಗೆ ದಾಖಲಿಸುವಲ್ಲಿ, ಈ ರಸ್ತೆಗಳ ಪಾತ್ರ ದೊಡ್ಡದಾಗಿರುತ್ತದೆ. ಆದರೆ ದೇವದುರ್ಗ ತಾಲೂಕಿನಲ್ಲಿ ಗ್ರಾಮೀಣ ರಸ್ತೆಗಳ ಪರಿಸ್ಥಿತಿ ತೀರಾ ಹದಗೆಟ್ಟಿದ್ದು, ಜನಪ್ರತಿನಿಧಿಗಳಾಗಲಿ, ಅಧಿಕಾರಿಗಳಾಗಲಿ, ಹದಗೆಟ್ಟ ಗ್ರಾಮೀಣ ರಸ್ತೆಗಳ ಸುಧಾರಣೆಯತ್ತ ಗಮನ ಹರಿಸುತ್ತಿಲ್ಲ.
ಹೀಗಾಗಿ ಜನ ಸಾಮಾನ್ಯರು ಹೈರಾಣುಗುವಂತಾಗಿದೆ. ಅದರಲ್ಲೂ ದೇವದುರ್ಗ ತಾಲೂಕಿನ ಗಬ್ಬೂರು ಹೋಬಳಿಯ ಖಾನಾಪುರ, ಹೀರೆಕೂಡ್ಲಿಗಿ, ಶಾವಂತಗೇರಾ, ಹೀರೆರಾಯಕುಂಪಿ, ಗೂಗಲ್, ಹಂಚಿನಾಳ, ಹದ್ದಿನಾಳ ರಸ್ತೆಗಳು ಹದಗೆಟ್ಟು ಹೋಗಿದ್ದು ಯಾವುದೇ ವಾಹನಗಳು ಸುಗಮವಾಗಿ ಸಂಚರಿಸಲಾಗುತ್ತಿಲ್ಲ.
ಈಗ ಚುನಾವಣೆಗಳು ಹತ್ತಿರವಾಗುತ್ತಿದ್ದಂತೆ ಮತ ಕೇಳಲು ಜನರ ಬಳಿ ಬರುವ ಭ್ರಷ್ಟ ರಾಜಕಾರಣಿಗಳಿಗೆ ಗುಣಮಟ್ಟದ ರಸ್ತೆಗಳನ್ನು ಮಾಡಬೇಕೆನ್ನುವ ಪರಿಜ್ಞಾನ ಇರಲಿಲ್ಲವೇ? ಎಂದ ಅವರು ಜನ ಕೆಲಸ ಮಾಡದವರನ್ನು ತಿರಸ್ಕರಿಸಿ ಯಾರು ಜನರ ಸಮಸ್ಯೆಗಳಿಗೆ ಸ್ವಂದಿಸುತ್ತಾರೋ ಅವರಿಗೆ ಬಲ ತುಂಬುವ ಕೆಲಸ ಮಾಡಲಿ ಎಂದು ತಿಳಿಸಿದ್ದಾರೆ.