ಜನರ ಹತ್ತಿರ ನ್ಯಾಯಾಲಯಗಳು – ನ್ಯಾ.ಕೆ.ನಟರಾಜ

ಸಿಂಧನೂರು.ಮಾ.೨೦-ನ್ಯಾಯಾಲಯ, ನ್ಯಾಯವಾದಿಗಳ ಸಂಘ ಹಾಗೂ ನ್ಯಾಯಾಲಯದ ಸಿಬ್ಬಂದಿಗಳು ಈ ಮೂರು ಜನ ಒಂದಾಗಿ ಕೆಲಸ ಮಾಡಿದಾಗ ಮಾತ್ರ ಜನರಿಗೆ ಶೀಘ್ರದಲ್ಲಿ ನ್ಯಾಯದಾನ ಒದಗಿಸಲು ಸಾಧ್ಯವಾಗುತ್ತದೆ. ಇಲ್ಲದಿದ್ದರೆ ವಿಳಂಬವಾಗುತ್ತದೆ ಎಂದು ರಾಜ್ಯ ಉಚ್ಚ ನ್ಯಾಯಾಲಯದ ನ್ಯಾಯಮೂರ್ತಿಗಳು ಹಾಗೂ ಜಿಲ್ಲಾ ಆಡಳಿತಾತ್ಮಕ ನ್ಯಾಯಮೂರ್ತಿಗಳಾದ ಕೆ.ನಟರಾಜ ಹೇಳಿದರು.
ನಗರದ ನ್ಯಾಯಾಲಯದ ಸಭಾಂಗಣದಲ್ಲಿ ತಾಲೂಕು ನ್ಯಾಯವಾದಿಗಳ ಸಂಘದಿಂದ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು ನಾನು ರಾಯಚೂರು ಜಿಲ್ಲಾ ನ್ಯಾಯಾಲಯದ ಆಡಳಿತಾತ್ಮಕ ನ್ಯಾಯಾಧೀಶರಾಗಿ ನೇಮಕಗೊಂಡಿದ್ದು ಬೆಂಗಳೂರಿನಲ್ಲಿ ಕುಳಿತುಕೊಂಡು ಸಮಸ್ಯೆಗಳನ್ನು ಕೇಳದೆ ನ್ಯಾಯಾಲಯಗಳಿಗೆ ತೆರಳಿ ಸಮಸ್ಯೆಗಳನ್ನು ತಿಳಿದುಕೊಂಡು ಪರಿಹರಿಸುವ ನಿಟ್ಟಿನಲ್ಲಿ ಜಿಲ್ಲಾ ಪ್ರವಾಸ ಕೈಗೊಂಡಿದ್ದೇನೆ. ರಾಯಚೂರು ಜಿಲ್ಲೆ ನ್ಯಾಯಾಲಯಕ್ಕೆ ಭೇಟಿ ನೀಡದೆ ತಾಲೂಕು ಮಟ್ಟದ ಅದು ಸಿಂಧನೂರು ನ್ಯಾಯಾಲಯದ ಸಮಸ್ಯೆಗಳನ್ನು ತಿಳಿದುಕೊಂಡು ಜಿಲ್ಲೆಯ ಎಲ್ಲಾ ನ್ಯಾಯಾಲಯಗಳ ಸಮಸ್ಯೆಗಳನ್ನು ತಿಳಿದುಕೊಂಡು ಪರಿಹರಿಸುತ್ತೇನೆ.
ನ್ಯಾಯಾದಾನ ಜನರಿಗೆ ಬೇಗ ಸಿಗಬೇಕು ಎಂದರೆ ನ್ಯಾಯಾಲಯದ ನ್ಯಾಯಾಧೀಶರು ವಕೀಲರುಗಳು ಮತ್ತು ನ್ಯಾಯಾಲಯದ ಸಿಬ್ಬಂದಿಗಳು ಒಂದಾಗಿ ಕೆಲಸ ಮಾಡಿದಾಗ ಮಾತ್ರ ಬೇಗ ನ್ಯಾಯದಾನ ಸಿಗುತ್ತದೆ ಜೊತೆಗೆ ನ್ಯಾಯಾಲಯಗಳು ಸಹ ಜನರ ಹತ್ತಿರ ಬರಲು ಸಾಧ್ಯ.
ಇಡೀ ದೇಶದಲ್ಲೆ ರಾಜ್ಯದ ನ್ಯಾಯಾಂಗದ ವ್ಯವಸ್ಥೆ ಮಾದರಿಯಾಗಿದೆ. ಅಷ್ಟೊಂದು ಉತ್ತಮವಾಗಿ ರಾಜ್ಯದ ನ್ಯಾಯಾಲಯ ಕೆಲಸ ಮಾಡುತ್ತಿದೆ. ಸಿಂಧನೂರು ನ್ಯಾಯಾಲಯದ ಸಮಸ್ಯೆಗಳು ಹಾಗೂ ವಕೀಲರ ಸಂಘದ ಸಮಸ್ಯೆಗಳನ್ನು ಖುದ್ದಾಗಿ ಭೇಟಿ ನೀಡಿ ತಿಳಿದುಕೊಂಡಿದ್ದೇನೆ ಆದಷ್ಟು ಬೇಗನೆ ಸಮಸ್ಯೆಯನ್ನು ಬಗೆಹರಿಸುತ್ತೇನೆ ಎಂದರು.
ಸಿಂಧನೂರಿನಲ್ಲಿ ಹಿರಿಯ ಸಿವಿಲ್ ನ್ಯಾಯಾಲಯದ ನ್ಯಾಯಾಧೀಶರ ಕೊರತೆ ಇದ್ದು ಅಲ್ಲದೆ ನ್ಯಾಯಾಲಯದ ಸಿಬ್ಬಂದಿಗಳು ಸಹ ಕೊರತೆಯಿದ್ದು, ವಕೀಲರ ಸಂಘದ ಕಚೇರಿ ಹಾಗೂ ಅಧ್ಯಕ್ಷರ ಕೊಠಡಿ, ಗ್ರಂಧಾಲಯ ಸೇರಿದಂತೆ ಇನ್ನಿತರ ಸಮಸ್ಯೆಗಳನ್ನು ಅದಷ್ಟು ಬೇಗನೆ ಬಗೆಹರಿಸಬೇಕು ಎಂದು ವಕೀಲರ ಸಂಘದ ತಾಲೂಕು ಅಧ್ಯಕ್ಷರಾದ ಎನ್.ರಾಮನಗೌಡ ವಕೀಲರು ಉಚ್ಚ ನ್ಯಾಯಾಲಯದ ನ್ಯಾಯಾಧೀಶರಲ್ಲಿ ಮನವಿ ಮಾಡಿದರು.
ಜಿಲ್ಲಾ ನ್ಯಾಯಾಧೀಶರಾದ ಮಲ್ಲಿಕಾರ್ಜುನಗೌಡ, ಪ್ರಧಾನ ಸಿವಿಲ್ ನ್ಯಾಯಾಧೀಶ ಶ್ರೆಯಾಂಸ ದೊಡ್ಡಮನಿ, ಅಪರ ಸಿವಿಲ್ ನ್ಯಾಯಾಧೀಶ ರವಿಕುಮಾರ.ಕೆ. ವಕೀಲರ ಸಂಘದ ಕಾರ್ಯದರ್ಶಿ ಸುರೇಶರೆಡ್ಡಿ ಚನ್ನಳ್ಳಿ ಸೇರಿದಂತೆ ಇತರರು ಇದ್ದರು. ಲಕ್ಷ್ಮಿಕಾಂತರೆಡ್ಡಿ ವಕೀಲರು ನಿರೂಪಿಸಿದರು.