ಜನರ ಸೇವೆ ಮಾಡುವುದೇ ನಿಜವಾದ ರಾಜಕಾರಣ: ಮಾಧುಸ್ವಾಮಿ

ಅಫಜಲಪುರ:ಜ.6: ಸರ್ಕಾರಗಳು ಬಂದು ಹೋಗುತ್ತವೆ ಆದರೆ ನಿಜವಾಗಿ ರೈತರು ತಲೆ ಎತ್ತಿ ನಡೆಯುವಂತಾಗಬೇಕು ಹಾಗೂ ಜನರ ಸೇವೆ ಮಾಡುವುದೇ ನಿಜವಾದ ರಾಜಕಾರಣ ಎಂದು ಸಣ್ಣ ನೀರಾವರಿ ಹಾಗೂ ಕಾನೂನು ಮತ್ತು ಸಂಸದಿಯ ವ್ಯವಹಾರ ಸಚಿವ ಜೆ.ಸಿ ಮಾಧುಸ್ವಾಮಿ ಹೇಳಿದರು.
ಅಫಜಲಪುರ ತಾಲೂಕಿನ ಘೂಳನೂರ ಹಾಗೂ ಜೇವರ್ಗಿ ತಾಲೂಕಿನ ಮೋಗನ ಇಟಗಾ ಗ್ರಾಮಗಳ ನಡುವೆ ಭೀಮಾ ನದಿಗೆ ಅಡ್ಡಲಾಗಿ ಸಣ್ಣ ನೀರಾವರಿ ಮತ್ತು ಅಂತಜರ್ಲ ಅಭಿವೃದ್ದಿ ಇಲಾಖೆ 2019-20ನೇ ಸಾಲಿನ ಲೆಕ್ಕ ಶಿರ್ಷಿಕೆ 4702 ಆಣೆಕಟ್ಟು ಮತ್ತು ಪಿಕಪ ಪ್ರಧಾನ ಕಾಮಗಾರಿಗಳ ಯೋಜನೆ ಅಡಿಯಲ್ಲಿ 72 ಕೋಟಿ ವೆಚ್ಚದ ಸೇತುವೆ ಸಹಿತ ಬಾಂದಾರ ನಿರ್ಮಾಣ ಕಾಮಗಾರಿಗೆ ಅಡಿಗಲ್ಲು ನೇರವೇರಿಸಿ ಮಾತನಾಡುತ್ತಾ ಜೇವರ್ಗಿ ಶಾಸಕ ಅಜಯ್ ಸಿಂಗ್ ಹಾಗೂ ಅಫಜಲಪುರ ಶಾಸಕ ಎಂ.ವೈ ಪಾಟೀಲ್‍ರ ನಡುವಿನ ಬಾಂಧವ್ಯದ ನಡುವೆ ನಾನು ಸೇತುವೆ ಮಾಡಿಸಿದ್ದೇನೆ. ಕಾಮಗಾರಿಗೆ ಅಡಿಗಲ್ಲು ನೇರವೇರಿಸಿದ್ದು ಖುಷಿ ತಂದಿದೆ. ಸರ್ಕಾರ ಯಾವುದೇ ಇರಲಿ ಕೆಲಸ ತೆಗೆದುಕೊಳ್ಳುವಲ್ಲಿ ಎಂ.ವೈ ನಿಸ್ಸಿಮರು. ಅವರಿಂದ ನಾವುಗಳು ಬಹಳಷ್ಟು ಕಲಿಬೇಕಾಗಿದೆ. ಇಳಿ ವಯಸ್ಸಿನಲ್ಲೂ ಓಡಾಡಿ ಕ್ಷೇತ್ರದ ಅಭಿವೃದ್ದಿಗಾಗಿ ಶ್ರಮಿಸುತ್ತಿದ್ದಾರೆ. ಇದನ್ನು ನೋಡಿದರೆ ಅವರು ಮತದಾರರಿಗೆ ಹೇಗೆ ಸೇವೆ ಸಲ್ಲಿಸುತ್ತಿದ್ದಾರೆಂದು ಗೊತ್ತಾಗುತ್ತದೆ ಎಂದ ಅವರು ಪ್ರವಾಹ ಮತ್ತು ಕೊವಿಡ್‍ನಿಂದ ಸರ್ಕಾರದ ಬೊಕ್ಕಸ ಖಾಲಿಯಾಗಿದೆ. ಆದರೂ ಜನ ಸಮಸ್ಯೆಗಳಿಗೆ ಸ್ಪಂದಿಸಿ ಶಕ್ತಿ ಮೀರಿ ಕೆಲಸ ಮಾಡುತ್ತಿದ್ದೇವೆ. ಪಕ್ಷ ರಾಜಕಾರಣ, ಜಾತಿರಾಜಕಾರಣ ಬಹಳ ದಿನ ನಡೆಯಲ್ಲ, ರಾಜಕಾರಣದಲ್ಲಿ ಜನರ ಸೇವೆ ಮಾಡುವುದೇ ನಿಜವಾದ ರಾಜಕಾರಣವಾಗಿದ್ದು ನಾವು ಕೂಡ ಜನರ ಕೆಲಸದಲ್ಲಿ ರಾಜಕಾರಣ ಮಾಡದೆ ಜನಸೇವೆ ಮಾಡುತ್ತಿದ್ದೇವೆ ಎಂದರು.
ಶಾಸಕ ಎಂ.ವೈ ಪಾಟೀಲ್ ಮಾತನಾಡುತ್ತಾ ಸಚಿವ ಮಾಧುಸ್ವಾಮಿ ನಮ್ಮ ಪಾಲಿಗೆ ಆಪತ್ಭಾಂಧವರಾಗಿದ್ದಾರೆ. ಘೂಳನೂರ ಬಾಂದಾರ ನಿರ್ಮಾಣವಾದ ಬಳಿಕ ಜೇವರ್ಗಿ, ಅಫಜಲಪುರ ತಾಲೂಕಿನ ಹತ್ತಾರು ಗ್ರಾಮಗಳ ಸುಮಾರು 4 ಸಾವಿರಕ್ಕಿಂತ ಹೆಚ್ಚು ಎಕರೆ ಪ್ರದೇಶಕ್ಕೆ ನೀರವಾರಿ ಸೌಲಭ್ಯ ದೊರಕಲಿದೆ. ಇಷ್ಟು ದೊಡ್ಡ ಮೊತ್ತದ ಯೋಜನೆಗೆ ಅನುದಾನ ಮಂಜೂರು ಮಾಡಿ ನಮ್ಮಲ್ಲಿಗೆ ಬಂದು ಶಂಕುಸ್ಥಾಪನೆ ಮಾಡಿದ್ದಾರೆ. ಅವರು ಜನಪರ ರಾಜಕಾರಣಿಯಾಗಿದ್ದಾರೆ. ಇನ್ನೂ ನಮ್ಮಲ್ಲಿ ಸಾಕಷ್ಟು ನೀರಾವರಿ ಕೆಲಸಗಳು ಆಗಬೇಕಾಗಿದೆ. ಅದರ ಮೇಲೂ ಸಚಿವರು ಗಮನ ಹರಿಸಿ ಅನುದಾನ ನೀಡಬೇಕು. ಘೂಳನೂರನಲ್ಲಿ ಹೈಡ್ರಾಲಿಕ್ ಗೇಟ್ ಅಳವಡಿಸುವಂತೆ, ಸುಕ್ಷೇತ್ರ ದೇವಲ ಗಾಣಗಾಪೂರದಲ್ಲೂ ಹೈಡ್ರಾಲಿಕ್ ಗೇಟ್ ಅಳವಡಿಸಿ ನೀರು ನಿಲ್ಲಿಸುವ ಕೆಲಸ ಮಾಡಬೇಕು. ಭೋರಿ, ಅಮರ್ಜಾ ನಾಲಾಗಳಲ್ಲಿರುವ ಬ್ಯಾರೇಜ್‍ಗಳ ಗೇಟ್‍ಗಳು ತುಕ್ಕು ಹಿಡಿದಿವೆ. ಅವುಗಳಿಗೆ ಹೊಸ ಗೇಟ್ ಅಳವಡಿಸಿ ನೀರು ನಿಲ್ಲಿಸಬೇಕಾಗಿದ್ದು ಅದಕ್ಕೆ ಸಚಿವರು ಅನುದಾನ ನೀಡಬೇಕು ಎಂದರು.
ಜೇವರ್ಗಿ ಶಾಸಕ ಅಜಯ ಸಿಂಗ್ ಮಾತನಾಡುತ್ತಾ ನೆರೆ ಬಂದು ಅಫಜಲಪುರ ಮತ್ತು ಜೇವರ್ಗಿ ತಾಲೂಕಿನ ಭೀಮಾ ನದಿ ದಂಡೆಯ ಗ್ರಾಮಗಳಲ್ಲಿ ಬಹಳಷ್ಟು ಹಾನಿಯಾಗಿದೆ. ಸಚಿವರು ಬಹಳ ಪ್ರಬುದ್ದರಾಗಿದ್ದಾರೆ. ನಮ್ಮ ಸಮಸ್ಯೆಗಳು ಮತ್ತು ನಮಗಾದ ನಷ್ಟದ ಕುರಿತು ಸಚಿವರು ಗಮನ ಹರಿಸಿ ಅನುದಾನ ನೀಡಬೇಕು. ಈ ಕುರಿತು ಅಧಿವೇಶನದಲ್ಲೂ ಧ್ವನಿ ಎತ್ತಿದ್ದೇವೆ. ಸಚಿವ ಮಾಧುಸ್ವಾಮಿ ಸುಪರ್ ಸಿಎಂ ಆಗಿದ್ದಾರೆ. ಹೀಗಾಗಿ ಅವರಿಂದ ನಮ್ಮ ಸಮಸ್ಯಗಳಿಗೆ ಪರಿಹಾರ ಸಿಗುವ ಭರವಸೆ ಇದೆ ಎಂದು ಹೇಳಿದರು.
ಘೂಳನೂರ ಮಠದ ಜಗದ್ಗುರು ಡಾ. ಸಾರಂಗಧರ ದೇಶಿಕೇಂದ್ರ ಮಹಾಸ್ವಾಮಿಗಳು ಸಾನಿಧ್ಯ ವಹಿಸಿ ಮಾತನಾಡಿದರು. ಅಫಜಲಪುರದ ಶ್ರೀ ವಿಶ್ವರಾಧ್ಯ ಮಳೇಂದ್ರ ಶಿವಾಚಾರ್ಯರು, ಅತನೂರಿನ ಗುರುಬಸವ ಶಿವಾಚಾರ್ಯರು ಸಾನಿಧ್ಯ ವಹಿಸಿದ್ದರು.
ಈ ಸಂದರ್ಭದಲ್ಲಿ ಜಿ.ಪಂ ಅಧ್ಯಕ್ಷೆ ಸುವರ್ಣ ಮಾಲಾಜಿ, ಉಪಾಧ್ಯಕ್ಷೆ ಶೋಭಾ ಶಿರಸಗಿ, ಸದಸ್ಯರಾದ ಅರುಣಕುಮಾರ ಪಾಟೀಲ್, ದಿಲೀಪ ಪಾಟೀಲ್, ರತ್ನವ್ವ ಕಲ್ಲೂರ, ತಾ.ಪಂ ಉಪಾದ್ಯಕ್ಷ ಭೀಮಾಶಂಕರ ಹೊನ್ನಕೇರಿ, ಮಾಜಿ ವಿಧಾನ ಪರಿಷತ್ ಸದಸ್ಯ ತಿಪ್ಪಣ್ಣಪ್ಪ ಕಮಕನೂರ, ಬಿಜೆಪಿ ಜಿಲ್ಲಾಧ್ಯಕ್ಷ ಶಿವರಾಜ ಪಾಟೀಲ್ ರದ್ದೇವಾಡಗಿ, ಮುಖಂಡರಾದ ಮಹಾಂತೇಶ ಪಾಟೀಲ್, ಮತೀನ್ ಪಟೇಲ್, ಮಕ್ಬೂಲ್ ಪಟೇಲ್, ಸಿದ್ದಾರ್ಥ ಬಸರಿಗಿಡ, ಪ್ರಕಾಶ ಜಮಾದಾರ, ಪಪ್ಪು ಪಟೇಲ್, ತುಕಾರಾಮಗೌಡ ಪಾಟೀಲ್, ಶರಣು ಕುಂಬಾರ, ಶಿವಶರಣಪ್ಪ ಹೀರಾಪುರ, ಬೀರಣ್ಣ ಕಲ್ಲೂರ, ಸುರೇಶ ತಿಬಶೆಟ್ಟಿ, ಸಿದ್ದು ಶಿರಸಗಿ, ಅಧಿಕಾರಿಗಳಾದ ಸರ್ಕಾರದ ಕಾರ್ಯದರ್ಶಿ ಮೃತುಂಜಯ ಸ್ವಾಮಿ, ಮುಖ್ಯ ಅಭಿಯಂತರ ಜಿ.ಟಿ ಸುರೇಶ, ಎಇಇ ಶಾಂತಪ್ಪ ಜಾಧವ, ಕಾರ್ಯನಿರ್ವಾಹಕ ಅಭಿಯಂತ ಅಶೋಕ ಅಂಬಲಗಿ ಸೇರಿದಂತೆ ಅನೇಕರು ಇದ್ದರು.