ಜನರ ಸಮಸ್ಯೆ ಪರಿಹಾರಕ್ಕೆ ಆದ್ಯತೆ: ಸಿದ್ದು ಪಾಟೀಲ

ಚಿಟಗುಪ್ಪ: ಜೂ.24:ಸರ್ಕಾರಿ ಅಧಿಕಾರಿಗಳು ತಮ್ಮ ಕಚೇರಿಗೆ ಬರುವ ನಾಗರಿಕರ ಸಮಸ್ಯೆಗಳ ಪರಿಹಾರಕ್ಕೆ ಪ್ರಥಮ ಆದ್ಯತೆ ನೀಡಬೇಕು’ ಎಂದು ಶಾಸಕ ಡಾ.ಸಿದ್ದಲಿಂಗಪ್ಪ ಪಾಟೀಲ ಹೇಳಿದರು.

ಇಲ್ಲಿಯ ತಹಶೀಲ್ದಾರ ಹಾಗೂ ಪುರಸಭೆ ಕಚೇರಿಗಳ ಪ್ರಗತಿ ಪರಿಶೀಲನಾ ಸಭೆ ನಡೆಸಿ ಮಾತನಾಡಿದರು.

ತಹಶೀಲ್ದಾರ ಕಚೇರಿಯಲ್ಲಿ ಆದಾಯ ಮತ್ತು ಜಾತಿ ಪ್ರಮಾಣ ಪತ್ರ ವಿತರಣೆ ಅಧಿಕಾರಿಗಳು ವಿಳಂಬ ಮಾಡುತ್ತಿದ್ದಾರೆ ಎಂದು ನಾಗರಿಕರು ಆರೋಪಿಸಿದ್ದಕ್ಕೆ ತಹಶೀಲ್ದಾರ ರವೀಂದ್ರ ದಾಮಾ ಅವರಿಗೆ ತಕ್ಷಣ ಸಮಸ್ಯೆ ಸರಿಪಡಿಸಿ ಆಡಳಿತ ವ್ಯವಸ್ಥೆ ಚುರುಕುಗೊಳಿಸಲು ಸೂಚಿಸಿದರು.

ಪುರಸಭೆ ಅಧಿಕಾರಿಗಳು ಸದಸ್ಯರ ಗಮನಕ್ಕೆ ತರದೇ ವಾರ್ಡ್‍ಗಳಲ್ಲಿ ವಿವಿಧ ಕಾಮಗಾರಿ ನಡೆಸುತ್ತಿರುವುದರಿಂದ ಚುನಾಯಿತ ಜನಪ್ರತಿನಿಧಿಗಳಿಗೆ ಮುಜುಗರವಾಗುತ್ತಿದೆ ಎಂದು ಸದಸ್ಯರು ದೂರಿದಕ್ಕೆ ಮುಖ್ಯಾಧಿಕಾರಿ ಹುಸಾಮೋದ್ದಿನ್ ಅವರಿಗೆ ಸೌಹಾರ್ದಯುತವಾಗಿ ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕಾಮಗಾರಿ ನಡೆಸಲು ತಿಳಿಸಿದರು.

ಪಟ್ಟಣದ ಸಮಗ್ರ ಪ್ರಗತಿಗೆ ಹೆಚ್ಚಿನ ಆದ್ಯತೆ ನೀಡಬೇಕು. ಚರಂಡಿ, ಕುಡಿಯುವ ನೀರು, ಬೀದಿ ದೀಪಗಳಿಗೆ ಮಹತ್ವ ಕೊಡಬೇಕು. ನಾಗರಿಕರಿಂದ ದೂರು ಬರದಂತೆ ಸರ್ಕಾರಿ ಸಿಬ್ಬಂದಿ ಜವಾಬ್ದಾರಿಕೆಯಿಂದ ಕೆಲಸ ನಿರ್ವಹಿಸಬೇಕು ಎಂದು ತಿಳಿಸಿದರು.

ತಹಶೀಲ್ದಾರ ರವೀಂದ್ರ ದಾಮಾ, ಮುಖ್ಯಾಧಿಕಾರಿ ಹುಸಾಮೋದ್ದಿನ್ ಪುರಸಭೆ ಅಧ್ಯಕ್ಷೆ ಮಾಲಾಶ್ರಿ ಶಾಮರಾವ್, ಪುರಸಭೆ ಹಾಲಿ ಮಾಜಿ ಸದಸ್ಯರು ಇದ್ದರು.