ಜನರ ಸಮಸ್ಯೆಗಳಿಗೆ ಸ್ಪಂದಿಸಲು ಕ್ರಮ-ಸಂಸದರ ಸಲಹೆ

ಕೋಲಾರ,ಏ.೧೭; ಸರ್ಕಾರದ ವಿವಿಧ ಇಲಾಖೆಗಳಿಂದ ಸಾರ್ವಜನಿಕರಿಗೆ ಅನುಕೂಲವಾಗುವ ರೀತಿಯಲ್ಲಿ ಸುಧಾರಣಾ ಕ್ರಮಗಳನ್ನು ಕೈಗೊಳ್ಳಲು ಅನುವಾಗುವಂತೆ ಅಧಿಕಾರಿ,ನೌಕರರನ್ನೊಳಗೊಂಡಂತೆ ಒಂದು ಕಾರ್ಯಾಗಾರ ಹಮ್ಮಿಕೊಳ್ಳುವಂತೆ ಸಂಸದ ಎಸ್.ಮುನಿಸ್ವಾಮಿ ಜಿಲ್ಲಾ ನೌಕರರ ಸಂಘದ ಅಧ್ಯಕ್ಷ ಸುರೇಶ್‌ಬಾಬು ಅವರಿಗೆ ಸಲಹೆ ನೀಡಿದರು.
ನಗರದಲ್ಲಿಂದು ಸಂಸದರನ್ನು ಅವರ ಹುಟ್ಟುಹಬ್ಬದ ಅಂಗವಾಗಿ ಜಿಲ್ಲಾ ನೌಕರರ ಸಂಘದ ಪದಾಧಿಕಾರಿಗಳು ಅವರನ್ನು ಭೇಟಿಯಾಗಿ ಶುಭಾಷಯ ಸಲ್ಲಿಸಿದ ಸಂದರ್ಭದಲ್ಲಿ ಅವರು ಮಾತನಾಡಿ, ಕಾರ್ಯಾಗಾರ ಹಮ್ಮಿಕೊಂಡರೇ ತಾವೂ ಭಾಗವಹಿಸುವುದಾಗಿ ತಿಳಿಸಿದರು.
ಕೇಂದ್ರ,ರಾಜ್ಯ ಸರ್ಕಾರಗಳ ಹಲವಾರು ಯೋಜನೆಗಳ ಕುರಿತು ಜನತೆಗೆ ಅರಿವು ಮೂಡಿಸುವ ಕೆಲಸವೂ ಆಗಬೇಕಾಗಿದೆ, ಜತೆಗೆ ಜನತೆಗೆ ಅನುಕೂಲವಾಗುವ ರೀತಿಯಲ್ಲಿ ಆಡಳಿತದಲ್ಲೂ ಬದಲಾವಣೆ ತರುವ ಅಗತ್ಯವೂ ಇದೆ ಎಂದು ಅಭಿಪ್ರಾಯಪಟ್ಟರು.
ಸರ್ಕಾರ,ಆಡಳಿತ,ನೌಕರರ, ಜನಪ್ರತಿನಿಧಿಗಳು ಎಲ್ಲರ ಮೂಲ ಉದ್ದೇಶ ಸಾರ್ವಜನಿಕರ ಸಮಸ್ಯೆಗಳಿಗೆ ಸ್ಪಂದನೆ ಹಾಗೂ ಸರ್ಕಾರದ ಕಾರ್ಯಕ್ರಮಗಳನ್ನು ಅವರಿಗೆ ತಲುಪಿಸುವುದೇ ಆಗಿದೆ, ಈ ನಿಟ್ಟಿನಲ್ಲಿ ಆಡಳಿತದಲ್ಲಿ ಸುಧಾರಣೆ ತರುವ ಅಗತ್ಯವಿದೆ ಎಂದು ಪ್ರತಿಪಾದಿಸಿದರು.
ಸರ್ಕಾರಗಳು ಬಡತನ ನಿರ್ಮೂಲನೆ, ಸಾಮಾಜಿಕ ಭದ್ರತಾ ಯೋಜನೆಗಳನ್ನು ಜನರಿಗಾಗಿ ಜಾರಿಗೆ ತಂದಿದೆ, ಕೆಲವು ಕಡೆಗಳಲ್ಲಿ ಅವು ಸೂಕ್ತ ಫಲಾನುಭವಿಗಳಿಗೆ ತಲುಪಿಸುವಲ್ಲಿ ಅಡಚಣೆಯೂ ಆಗಿದೆ, ಈ ಹಿನ್ನಲೆಯಲ್ಲಿ ಜನರ ಕಷ್ಟಗಳಿಗೆ ಸ್ಪಂದಿಸುವ ಕೆಲಸ ಜನಪ್ರತಿನಿಧಿಗಳ ಜತೆಗೆ ಆಡಳಿತ ನಡೆಸುವ ನೌಕರರ ಕಡೆಯಿಂದಲೂ ಆಗಬೇಕು ಎಂದರು.
ಕೋವಿಡ್ ೨ನೇ ಅಲೆಯೂ ವ್ಯಾಪಕವಾರಿ ಹರಡುತ್ತಿದೆ, ಜನತೆಯಲ್ಲಿ ಲಾಕ್ ಡೌನ್ ಭೀತಿಯೂ ಆವರಿಸಿದೆ ಆದರೆ ಲಾಕ್‌ಡೌನ್ ಮಾಡಿದರೆ ಜನತೆಗೆ ಮತ್ತಷ್ಟು ಸಂಕಷ್ಟ ಎದುರಾಗುವ ಸಾಧ್ಯತೆಯೂ ಇರುವುದರಿಂದ ಸೋಂಕು ತಡೆಗೆ ಜನತೆಯಲ್ಲಿ ಅರಿವು ಮೂಡಿಸುವ ಕೆಲಸ ಆಗಬೇಕು, ಈ ಕಾರ್ಯದಲ್ಲಿ ಸರ್ಕಾರಿ ನೌಕರರು ಹೆಚ್ಚು ಕ್ರಿಯಾಶೀಲರಾಗಿ ಕೆಲಸ ಮಾಡಬೇಕು ಎಂದರು.
ಕೋವಿಡ್ ಮೊದಲನೆ ಅಲೆ ಸಂದರ್ಭದಲ್ಲಿ ಸರ್ಕಾರಿ ನೌಕರರು ಅತ್ಯಂತ ಹೆಚ್ಚಿನ ಮುತುವರ್ಜಿ ವಹಿಸಿ ಕೊರೋನಾ ವಾರಿಯರ್ಸ್ ರೀತಿ ಕೆಲಸ ಮಾಡಿದ್ದೀರಿ ಎಂದು ಅಭಿನಂದಿಸಿದ ಅವರು, ಈಗಲೂ ಅದೇ ಮಾದರಿಯಲ್ಲಿ ೨ನೇ ಅಲೆಯನ್ನು ನಿಯಂತ್ರಿಸಲು ಯುದ್ದೋಪಾದಿಯಲ್ಲಿ ಕೆಲಸ ಮಾಡಬೇಕಾಗಿದೆ ಎಂದು ತಿಳಿಸಿ, ಸರ್ಕಾರಿ ನೌಕರರ ಎಲ್ಲಾ ಸಮಸ್ಯೆಗಳಿಗೂ ಸ್ಪಂದಿಸುವುದಾಗಿ ಭರವಸೆ ನೀಡಿದರು.
ಸಂಸದರನ್ನು ಅಭಿನಂದಿಸಿದ ಸಂದರ್ಭದಲ್ಲಿ ಜಿಲ್ಲಾ ನೌಕರರ ಸಂಘದ ಅಧ್ಯಕ್ಷ ಜಿ.ಸುರೇಶ್‌ಬಾಬು, ಖಜಾಂಚಿ ಕೆ.ವಿಜಯ್, ಗೌರವಾಧ್ಯಕ್ಷ ಶ್ರೀನಿವಾಸರೆಡ್ಡಿ, ರಾಜ್ಯ ಜಂಟಿ ಕಾರ್ಯದರ್ಶೀ ಕೆ.ಎನ್.ಮಂಜುನಾಥ್, ಹಿರಿಯ ಉಪಾಧ್ಯಕ್ಷ ಸುಬ್ರಮಣಿ, ಆಂತರಿಕ ಲೆಕ್ಕ ಪರಿಶೋಧಕ ವೆಂಕಟೇಶಬಾಬು, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಂ.ನಾಗರಾಜ್, ತಾಲ್ಲೂಕು ಕಾರ್ಯಾಧ್ಯಕ್ಷ ಆರ್,ನಾಗರಾಜ್, ಭೂಮಾಪನಾ ಇಲಾಖೆಯ ಸುಭಾಷ್ ಮತ್ತಿತರರಿದ್ದರು.