ಜನರ ಸಮಸ್ಯೆಗಳಿಗೆ ಪರಿಹಾರ ಒದಗಿಸಲು ಜನತಾ ದರ್ಶನ ಕಾರ್ಯಕ್ರಮ ಆಯೋಜನೆ:ಸಚಿವ ಈಶ್ವರ.ಬಿ.ಖಂಡ್ರೆ

ಬೀದರ: ಸೆ.26:ಜನರ ಸಮಸ್ಯೆಗಳನ್ನು ಸ್ಥಳದಲ್ಲಿಯೇ ಪರಿಹಾರ ಒದಗಿಸಲು ಹಾಗೂ ಜನರು ತಮ್ಮ ಸಮಸ್ಯೆಗಳನ್ನು ತೆಗೆದುಕೊಂಡು ಜನಪ್ರತಿನಿಧಿಗಳ ಬಳಿಗೆ ಹಾಗೂ ಕಛೇರಿಗಳಿಗೆ ಅಲೆದಾಡುವ ಪರಿಸ್ಥಿತಿಯನ್ನು ನಿವಾರಿಸುವ ನಿಟ್ಟಿನಲ್ಲಿ ಸನ್ಮಾನ್ಯ ಮುಖ್ಯಮಂತ್ರಿಗಳು ಈ ಜನತಾ ದರ್ಶನ ಕಾರ್ಯಕ್ರಮವನ್ನು ಜಾರಿಗೆ ತಂದಿದ್ದಾರೆ ಎಂದು ಅರಣ್ಯ, ಜೈವಿಕ ಹಾಗೂ ಪರಿಸರ ಮತ್ತು ಬೀದರ ಜಿಲ್ಲಾ ಉಸ್ತುವಾರಿ ಸಚಿವರಾದ ಈಶ್ವರ ಬಿ.ಖಂಡ್ರೆ ಹೇಳಿದರು.

ಅವರು ಸೋಮವಾರ ಬೀದರನ ಚನ್ನಬಸವ ಪಟ್ಟದೇವರು ರಂಗಮಂದಿರದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ ಬೀದರ ಇವರ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ ಸಾರ್ವಜನಿಕರ ಕುಂದು ಕೊರತೆಯ ಅಹವಾಲು ಸ್ವೀಕರಿಸುವ ಜನತಾ ದರ್ಶನ ಕಾರ್ಯಕ್ರಮದ ಅಧ್ಯಕ್ಷತೆವಹಿಸಿ ಮಾತನಾಡಿದರು.

ಈ ಜನತಾ ದರ್ಶನ ಕಾರ್ಯಕ್ರಮವು ಏಕಕಾಲಕ್ಕೆ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ನಡೆಯುತ್ತಿದೆ. ಜನತಾ ದರ್ಶನದಲ್ಲಿ ಬರುವ ಸಾರ್ವಜನಿಕರ ಸಮಸ್ಯೆಗಳ ಅರ್ಜಿಗಳನ್ನು ಸ್ಥಳದಲ್ಲಿಯೇ ಪರಿಹರಿಸಲಾಗುವುದು. ಅರ್ಜಿ ವಿಲೇವಾರಿಗೆ ಕಾನೂನಾತ್ಮಕ ತೊಡಕುಗಳಿದ್ದರೆ ಅವುಗಳಿಗೆ ನಿಗದಿತ ಸಮಯ ನೀಡಿ ಪರಿಹಾರ ನೀಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದೆನೆ. ಬೀದರ ಜಿಲ್ಲೆಯ ಜನರು ಈ ಕಾರ್ಯಕ್ರಮದ ಲಾಭ ಪಡೆಯಬೇಕೆಂದರು.

ಇತ್ತಿಚೇಗೆ ನಮ್ಮ ಸರ್ಕಾರ ಬಂದ ಮೇಲೆ ಬೀದರ ಜಿಲ್ಲೆಯ ಸಾರ್ವಜನಿಕರ ಸಮಸ್ಯೆಗಳ ಬವಣೆಯನ್ನು ನೀಗಿಸುವ ನಿಟ್ಟಿನಲ್ಲಿ ಅಗಸ್ಟ್ 28 ರಂದು ನನ್ನ ಅಧ್ಯಕ್ಷತೆಯಲ್ಲಿ ಜನ ಸ್ಪಂದನಾ ಕಾರ್ಯಕ್ರಮ ಆಯೋಜಿಸಲಾಗಿತ್ತು. ಈ ಜನ ಸ್ಪಂದನಾ ಕಾರ್ಯಕ್ರಮದಲ್ಲಿ 308 ಅರ್ಜಿಗಳು ಬಂದಿದ್ದವು. ಇವುಗಳಲ್ಲಿ 151 ಅರ್ಜಿಗಳಿಗೆ ಸ್ಥಳದಲ್ಲಿಯೇ ವಿಲೇವಾರಿ ಮಾಡಲಾಗಿತ್ತು. ಉಳಿದ ಅರ್ಜಿಗಳಲ್ಲಿ 141 ಅರ್ಜಿಗಳನ್ನು ನಂತರ ವಿಲೇವಾರಿ ಮಾಡಲಾಗಿದ್ದು. ಇನ್ನು 16 ಅರ್ಜಿಗಳು ಬಾಕಿ ಇವೆ ಅವುಗಳನ್ನು ಸಹ ಆದಷ್ಟು ಶೀಘ್ರವಾಗಿ ವಿಲೇವಾರಿ ಮಾಡುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಿದ್ದೆನೆ ಎಂದರು.

ಸಾಮಾಜಿಕ ಬದ್ಧತೆ ಯೋಜನೆಯಡಿ ಸೇರಿದಂತೆ ವಿವಿಧ ಯೋಜನೆಯಡಿ ತಮ್ಮ ಕಛೇರಿಗೆ ಬರುವ ಅರ್ಜಿಗಳನ್ನು ಅಧಿಕಾರಿಗಳು ನಿಗದಿತ ಸಮಯಕ್ಕೆ ಪರಿಹರಿಸಬೇಕು. ಜಿಲ್ಲೆಯ ಕೆಲವು ಗ್ರಾಮಗಳಲ್ಲಿ ಸ್ಮಶಾನ ಭೂಮಿಯ ಕೊರೆತೆ ಇದೆ ಎಂಬ ದೂರುಗಳಿವೆ, ಯಾವ ಭಾಗದಲ್ಲಿ ಸರ್ಕಾರಿ ಜಮೀನುಗಳಿವೆಯೋ ಅಂತಹ ಸ್ಥಳಗಳಲ್ಲಿ ಆದಷ್ಟು ಬೇಗ ಮಂಜೂರು ಮಾಡಬೇಕು. ಯಾವ ಸ್ಥಳಗಳಲ್ಲಿ ಸರ್ಕಾರಿ ಜಮೀನು ಇರುವುದಿಲ್ಲವೋ ಅಂತಹ ಭಾಗಗಳಲ್ಲಿ ಖಾಸಗಿ ಜಮೀನು ಖರಿದಿ ಮಾಡಿ ಮಂಜೂರು ಮಾಡಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.

ಮುಂದಿನ ದಿನಗಳಲ್ಲಿ ಈ ಕಾರ್ಯಕ್ರವನ್ನು ಜಿಲ್ಲೆಯ ಎಲ್ಲಾ ತಾಲ್ಲೂಕಿನಲ್ಲಿ ಪ್ರತಿ ತಿಂಗಳು ಆಯೋಜಿಸಲಾಗಿವುದು. ಇದÀರಿಂದ ಜನರ ಸಮಸ್ಯೆಗಳನ್ನು ನಿವಾರಿಸಲು ಸಾಧ್ಯವಿದೆ ಎಂದ ಅವರು ಬೀದರ ಜಿಲ್ಲೆಯ ಮೂರು ತಾಲ್ಲೂಕುಗಳನ್ನು ಈಗಾಗಲೇ ಬರಪೀಡಿದ ಎಂದು ಘೋಷಣೆ ಮಾಡಲಾಗಿದೆ. ಮುಂದಿನ ದಿನಗಳಲ್ಲಿ ಉಳಿದ ತಾಲ್ಲೂಕುಗಳಲ್ಲಿ ಮತ್ತೊಮ್ಮೆ ಸಮೀಕ್ಷೆ ನಡೆಸಿ ಅವುಗಳಲ್ಲಿಯೂ ಯಾವುದಾದರು ತಾಲ್ಲೂಕಿನಲ್ಲಿ ಹೆಚ್ಚಿನ ಹಾನಿಗಳಾಗಿದ್ದರೆ ಕಾನೂನು ವ್ಯಾಪ್ತಿಯ ಅಡಿಯಲ್ಲಿ ಅವುಗಳನ್ನು ಬರ ಪೀಡಿದ ಎಂದು ಘೋಷಿಸಲು ಕ್ರಮ ವಹಿಸಲಾಗುವುದು. ಚುನಾವಣೆ ಪೂರ್ವದಲ್ಲಿ ನೀಡಿದ ಭರವಸೆಯಂತೆ ಐದು ಗ್ಯಾರಂಟಿ ಯೋಜನೆಗಳಲ್ಲಿ ಈಗಾಗಲೇ ನಾಲ್ಕು ಯೋಜನೆಗಳನ್ನು ಜಾರಿಗೆ ತರಲಾಗಿದೆ. ಬಾಕಿ ಉಳಿಯ ಯುವನಿಧಿ ಯೋಜನೆಯನ್ನು ಆದಷ್ಟು ಶೀಘ್ರದಲ್ಲಿ ಜಾರಿಗೆ ತರಲಾಗುವುದು ಎಂದರು.

ಜನತಾ ದರ್ಶನ ಕಾರ್ಯಕ್ರಮದಲ್ಲಿ 250 ಅರ್ಜಿಗಳನ್ನು ಜನರು ನೀಡಿದ್ದಾರೆ. ಕೆಲವು ಸಮಸ್ಯೆಗಳಿಗೆ ಸ್ಥಳದಲ್ಲಿಯೇ ಪರಿಹಾರ ನೀಡಲಾಗಿದ್ದು. ಉಳಿದ ಅರ್ಜಿಗಳಿಗೆ ಕಾಲಾವಕಾಶ ನೀಡಿ ಅವುಗಳನ್ನು ಒಂದು ವಾರ ಅಥವಾ 10 ದಿನಗಳಲ್ಲಿ ಪರಿಹಾರ ನೀಡಲು ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದೆನೆ. ಹದ್ದುಬಸ್ತು, ಮುಟೇಶನ್, ಕುಡಿಯುವ ನೀರು, ಬೆಳಕಿನ ವ್ಯವಸ್ತೆಗಳ ಕೆಲಸವನ್ನು ತುರ್ತಾಗಿ ಮಾಡಲು ಅಧಿಕಾರಿಗಳಿಗೆ ಸೂಚಿಸಿದ್ದೆನೆ. ಬೀದರನಲ್ಲಿ ನಡೆದ ಜನತಾ ದರ್ಶನ ಕಾರ್ಯಕ್ರಮಕ್ಕೆ ಜಿಲ್ಲೆಯ ವಿವಿಧ ಭಾಗಗಳಿಂದ ಆಗಮಿಸಿದ ಸಾರ್ವಜನಿಕರು ಹಾಗೂ ವಿವಿಧ ಇಲಾಖೆಯ ಹಿರಿಯ ಮತ್ತು ಕಿರಿಯ ಅಧಿಕಾರಿಗಳಿಗೆ ಸರ್ಕಾರ ಮತ್ತು ನನ್ನ ವತಿಯಿಂದ ಅವರಿಗೆ ಧನ್ಯವಾದಂಗಳನ್ನು ತಿಳಿಸುತ್ತೆನೆ ಎಂದರು.

ಪೌರಾಡಳಿತ ಹಾಗೂ ಹಜ್ ಖಾತೆ ಸಚಿವರಾದ ರಹೀಂಖಾನ್ ಮಾತನಾಡಿ, ಸಾರ್ವಜನಿಕರು ತಮ್ಮ ಕಛೇರಿಗಳಿಗೆ ಸಮಸ್ಯೆಗಳನ್ನು ತೆಗೆದುಕೊಂಡು ಬಂದಾಗ ಅವರಿಗೆ ಗೌರವದಿಂದ ಕಾಣಬೇಕು ಅವರ ಸಮಸ್ಯೆಗಳಿಗೆ ತಕ್ಷಣ ಸ್ಪಂದಿಸಬೇಕು. ತಮ್ಮ ಕಛೇರಿಗೆ ಜನರು ಅವರ ಬವಣೆಯನ್ನು ತೆಗೆದುಕೊಂಡು ಬಂದಾಗ ಅವರಿಗೆ ಸ್ಪಂದನೆ ನೀಡಿದರೆ ಅವರು ಇಲ್ಲಿಗೆ ಬರುವ ಪ್ರಶ್ನೆಯೆ ಉದ್ಭವಿಸುವುದಿಲ್ಲಾ ಆದರಿಂದ ಅಧಿಕಾರಿಗಳು ಸರಿಯಾಗಿ ಕೆಲಸ ಮಾಡಬೇಕು ಎಂದು ಹೇಳಿದರು.

ಮುಂದಿನ ದಿನಗಳಲ್ಲಿ ನಡೆಯುವ ಜನತಾ ದರ್ಶನದ ಪ್ರಚಾರವು ಹೆಚ್ಚಾಗಿ ನಡೆಯಬೇಕು. ಇಂತಹ ಕಾರ್ಯಕ್ರಮಗಳ ಮಾಹಿತಿ ಜನರಿಗೆ ತಲುಪಿದಾಗಲೇ ಅವರು ತಮ್ಮ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಸಾಧ್ಯವಾಗುತ್ತದೆ. ಜನರ ಹಾಗೂ ಅಧಿಕಾರಿಗಳ ಸಹಕಾರ ವಿದ್ಧಾಗಲೇ ಇಂತಹ ಕಾರ್ಯಕ್ರಮಗಳು ಯಶಸ್ವಿಯಾಗಲು ಸಾಧ್ಯ ಎಂದರು.

ಕಾರ್ಯಕ್ರಮದಲ್ಲಿ ಸರ್ಕಾರ ವಿವಿಧ ಇಲಾಖೆಯ ಫಲಾನುಭವಿಗಳಿಗೆ ಸಚಿವರು ಹಕ್ಕುಪತ್ರಗಳನ್ನು ವಿತರಿಸಿದರು.

ಈ ಸಂದರ್ಭದಲ್ಲಿ ಬೀದರ ನಗರಸಭೆ ಅಧ್ಯಕ್ಷ ಮೋಹ್ಮದ್ ಗೌಸೋದ್ದಿನ್, ಜಿಲ್ಲಾಧಿಕಾರಿ ಗೋವಿಂದರೆಡ್ಡಿ, ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶಿಲ್ಪಾ.ಎಂ., ಬೀದರ ಉಪ ಅರಣ್ಯ ಸಂರಕ್ಷಣಾಧಿಕಾರಿ ವಾನತಿ.ಎಂ.ಎಂ., ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಚನ್ನಬಸವಣ್ಣ.ಎಸ್.ಎಲ್., ಅಪರ ಜಿಲ್ಲಾಧಿಕಾರಿ ಶಿವಕುಮಾರ ಶೀಲವಂತ, ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದ ವಿವಿಧ ಇಲಾಖೆಯ ಅಧಿಕಾರಿಗಳು, ಜಿಲ್ಲೆಯ ವಿವಿಧ ತಾಲ್ಲೂಕಿನಿಂದ ತಮ್ಮ ಅಹವಾಲುಗಳೊಂದಿಗೆ ಆಗಮಿಸಿದ ಸಾರ್ವಜನಿಕರು ಉಪಸ್ಥಿತರಿದ್ದರು.