
(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ, ಮಾ.12: ಕಳೆದ ಎರಡು ದಶಕಗಳಿಂದ ನಗರದ ಅಭಿವೃದ್ಧಿಗೆ ಶ್ರಮಿಸಿದ್ದೇನೆ. ಬೀದಿಬೀದಿ ಅಲೆದು ಜನರ ಕಷ್ಟ ಸುಖಗಳನ್ನು ಅರಿತು ಅವರಿಗೆ ಮೂಲಸೌಲಭ್ಯಗಳನ್ನು ಕಲ್ಪಿಸಿದ್ದೇನೆಂದು ನಗರ ಶಾಸಕ ಗಾಲಿ ಸೋಮಶೇಖರ ರೆಡ್ಡಿ ಹೇಳಿದ್ದಾರೆ.
ಬಳ್ಳಾರಿ ಪತ್ರಕರ್ತರ ಒಕ್ಕೂಟದಿಂದ ನಿನ್ನೆ ಹಮ್ಮಿಕೊಂಡಿದ್ದ ಮಾಧ್ಯಮ ಸಂವಾದದಲ್ಲಿ ಅವರು ಎರೆಡು ಬಾರಿ ಶಾಸಕರಾಗಿ, ನಗರ ಸಬೆ ಅಧ್ಯಕ್ಷರು, ಪಾಲಿಕೆಯ ಮೇಯರ್ ಆಗಿ ನಗರಕ್ಕೆ ಸಲ್ಲಿಸಿದ ಸೇವೆ ಮತ್ತು ಅಭಿವೃದ್ದಿ ಕುರಿತಾಗಿ ವಿವರವಾಗಿ ತಿಳಿಸಿದರು.
ಕಳೆದ 2001ರಲ್ಲಿ ಬಳ್ಳಾರಿ ನಗರಸಭೆ ಸದಸ್ಯನಾಗುವ ಮೂಲಕ ರಾಜಕೀಯ ಪ್ರವೇಶ ಮಾಡಿದ ನಾನು ನಗರಸಭೆ ಉಪಾಧ್ಯಕ್ಷನಾಗಿ, ಅಧ್ಯಕ್ಷನಾಗಿ, ಬಳ್ಳಾರಿ ಮಹಾನಗರ ಪಾಲಿಕೆಯಾಗಿ ಮೇಲ್ದರ್ಜೆಗೇರಿದ ಬಳಿಕ ಮೊದಲ ಮೇಯರ್ ಆದೆ. ನಗರದ ಬೀದಿ ಬೀದಿ ಅಲೆದು ಜನರ ಕಷ್ಟಸುಖ ಕೇಳಿದ್ದೇನೆ. ಅನೇಕ ಸಂಕಷ್ಟಗಳ ಕಾಲದಲ್ಲಿ ಕೈಲಾ್ಷ್ಟು ಪರಿಹಾರವನ್ನು ಸಹ ನೀಡುವ ಮೂಲಕ ಜನರ ನೋವಿಗೆ ನೆರವಾಗಿದ್ದೇನೆ. ಬಳ್ಳಾರಿ ನಗರ ಕ್ಷೇತ್ರ ರಚನೆ ಬಳಿಕ ಮೊದಲ ಶಾಸಕನಾಗಿ ಆಯ್ಕೆಯಾಗಿ ನಗರದ ಅಭಿವೃದ್ಧಿಗಾಗಿ ಶ್ರಮಿಸಿದ್ದೇನೆಂದರು.
ಮೊದಲ ಬಾರಿಗೆ ಶಾಸಕನಾಗಿದ್ದಾಗ
ರಸ್ತೆಗಳ ಅಕಲೀಕರಣ, ಬೀದಿ ಬದಿಯ ಲೈಟಿಂಗ್, ರಿಂಗ್ ರೋಡ್ ನಿರ್ಮಾಣ ಸೇರಿ ಹಲವು ಅಭಿವೃದ್ಧಿ ಕಾರ್ಯಗಳನ್ನು ಕೈಗೊಂಡಿದ್ದೇನೆ.
ಎರಡನೇ ಬಾರಿ 2018ರಲ್ಲಿ ಎರಡನೇ ಬಾರಿಗೆ ಶಾಸಕನಾಗಿ ಆಯ್ಕೆಯಾದ ಬಳಿಕ ಜನರ ಆಶಯಗಳಿಗೆ ತಕ್ಕಂತೆ ಕೆಲಸ ಮಾಡಿದ್ದೇನೆ. ನಾನು ಯಾವ ರೀತಿ ಕೆಲಸ ಮಾಡಿದ್ದೇನೆ ಎಂಬುದು ನಾನು ಹೇಳುವುದಕ್ಕಿಂತ ನನ್ನ ಕ್ಷೇತ್ರದ ಮತದಾರರಿಗೆ ತಿಳಿದಿದೆಂದರು.
ಪಾಲಿಕೆ ಸದಸ್ಯರಾದ ಸಿ. ಇಬ್ರಾಹಿಂ ಬಾಬು ಶ್ರೀನಿವಾಸ್ ಮೋತ್ಕರ್, ಮಾಜಿ ಸದಸ್ಯ ಮಲ್ಲನಗೌಡ, ಬುಡಾ ಅಧ್ಯಕ್ಷ ಎಸ್. ಮಾರುತಿ ಪ್ರಸಾದ್, ರಾಬಕೋ ಹಾಲು ಒಕ್ಕೂಟದ ನಿರ್ದೇಶಕ ವೀರಶೇಖರ ರೆಡ್ಡಿ ಸಂವಾದಲ್ಲಿ ಪಾಲ್ಗೊಂಡಿದ್ದರು.
ಶಾಸಕರು ಸಂವಾದದಲ್ಲಿ:
ಕೋವಿಡ್‍ನಲ್ಲಿ ಎಲ್ಲಿಗೆ ಹೋಗಿದ್ದರು?
ಬಳ್ಳಾರಿ ನಗರ ವಿಧಾನಸಭೆ ಕ್ಷೇತ್ರದಲ್ಲಿ ಕೆಆರ್‍ಪಿಪಿ ಅಭ್ಯರ್ಥಿ ಲಕ್ಷ್ಮಿ ಅರುಣಾ ಸೇರಿದಂತೆ ಈ ಬಾರಿ ಸ್ಪರ್ಧೆ ಮಾಡಲು ಬಯಸಿರುವವರು ವಾರ್ಡ್‍ವಾರು ಮನೆಮನೆಗೆ ತೆರಳಿ ಮತ ಕೇಳುತ್ತಿರುವವರು ಕೋವಿಡ್ನ ಸಂಕಷ್ಟ ಕಾಲದಲ್ಲಿ ಎಲ್ಲಿಗೆ ಹೋಗಿದ್ದರೆಂದರು.
ನನಗೆ ಶಾಸಕನಾಗಿಯೇ ಇರಬೇಕೆಂಬ ಅಧಿಕಾರದ ಆಸೆ ಇಲ್ಲ. ಸೇವಾ ಮನೋಭಾವನೆಯಿಂದ ರಾಜಕೀಯಕ್ಕೆ ಬಂದಿದ್ದೇನೆ. ಹಾಗಾಗಿ ಜನರಿಗೆ ಅನುಕೂಲ ಮಾಡುವುದು ನನ್ನ ಕೆಲಸ. ಕೋವಿಡ್ ವೇಳೆ ನಗರದ ಪ್ರತಿ ಮನೆಗೆ ಭೇಟಿ ನೀಡಿ, 70 ಸಾವಿರ ಆಹಾರದ ಕಿಟ್ ವಿತರಣೆ ಮಾಡಿದ್ದೇನೆ. ಆಗ ಜನರ ಸೇವೆ ಮಾಡಲು ಮುಂದೆ ಬಾರದವರು, ಈಗ ಚುನಾವಣೆ ಸಮೀಪಿಸುತ್ತಿದ್ದಂತೆ ಎಲ್ಲರೂ ಅದು ಇದು ಹಂಚುತ್ತಿದ್ದಾರೆ. ಜನರೇನು ದಡ್ಡರಲ್ಲಿ ಇಗ ಬಂದವರಿಗೆ ಸೂಕ್ತ ತೀರ್ಮಾನ ನೀಡುತ್ತಾರೆ.
ಆಸ್ಪತ್ರೆಗಳ ಅಭಿವೃದ್ಧಿ;
ನಗರದ ಟಿಬಿ ಸ್ಯಾನಿಟೋರಿಯಂ ಆಸ್ಪತ್ರೆ ಆವರಣದಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣಕ್ಕೆ 2009ರಲ್ಲಿ ಭೂಮಿ ಪೂಜೆ ನೆರವೇರಿಸಲಾಗಿತ್ತು. 134 ಕೋಟಿ ರೂ. ವೆಚ್ಚದಲ್ಲಿ ಬೃಹತ್ ಕಟ್ಟಡವನ್ನು ನಿರ್ಮಿಸಲಾಗಿದೆ. ಕೆಲ ತಾಂತ್ರಿಕ ಕಾರಣಗಳಿಂದ ಅಂತಿಮ ಹಂತದ ಕಾಮಗಾರಿ ನೆನೆಗುದಿಗೆ ಬಿದ್ದಿದೆ. ಇದೀಗ 42 ಕೋಟಿ ರೂ.ಗಳ ಹೆಚ್ಚುವರಿ ಅನುದಾನ ನೀಡಲು ಸರ್ಕಾರ ಅನುಮೋದನೆ ನೀಡಿದ್ದು, ಶೀಘ್ರದಲ್ಲೇ ಉಳುದ ಕಾಮಗಾರಿ ಮಾಡಿ ಅದನ್ನು ಜನತೆಗೆ ಸಮರ್ಪಿಸಲಿದೆ.
ಇನ್ನು ಬಳ್ಳಾರಿ ಜಿಲ್ಲಾಸ್ಪತ್ರೆಯಲ್ಲಿ ರಾಷ್ಟ್ರೀಯ ಆರೋಗ್ಯ ಮಿಷನ್ ಯೋಜನೆಯಡಿ 21 ಕೋಟಿ ರೂ. ವೆಚ್ಚದಲ್ಲಿ ಜಿಲ್ಲಾ ಸಾರ್ವಜನಿಕ ಆರೋಗ್ಯ ಪ್ರಯೋಗಾಲಯ, 100 ಹಾಸಿಗೆ ಆಸ್ಪತ್ರೆಯನ್ನು ನಿರ್ಮಿಸಲಾಗಿದೆ. ಜಿಲ್ಲಾ ಖನಿಜ ನಿಧಿಯ 10.27 ಕೋಟಿ ರೂ. ವೆಚ್ಚೆದಲ್ಲಿ ಅನಸ್ತೇಶಿಯಾ, ನರ್ಸಿಂಗ್ ರೂಮ್, ಐಸಿಯು ರೂಮ್, ಸ್ಕೂಲ್ ಆಫ್ ನರ್ಸಿಂಗ್‍ಗಳನ್ನು ತೆರೆಯಲಾಗಿದೆ. ವಿಮ್ಸ್ ನಲ್ಲಿ 8.60 ಕೋಟಿ ರೂ. ಗಳಲ್ಲಿ ಶಸ್ತ್ರಚಿಕಿತ್ಸಾ ಕೊಠಡಿಗಳ ಕಾಂಪ್ಲೆಕ್ಸ್ ನಿರ್ಮಾಣ ಸೇರಿದಂತೆ ಹಲವಾರು ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಲಾಗಿದೆಂದರು.
ಆಶ್ರಯ ಮನೆ ನಿರ್ಮಾಣ;
ನಗರದ ಬಡ ಜನರಿಗೆ ಸೂರು ಕಲ್ಪಿಸುವ ಸಲುವಾಗಿ 2008ರಲ್ಲಿ ಪಾಲಿಕೆಗೆ ಎನ್‍ಎಂಡಿಸಿ ನೀಡಿದ್ದ 20 ಕೋಟಿ ಸಿಎಸ್‍ಆರ್ ಅನುದಾನದಲ್ಲಿ ಮುಂಡ್ರಿಗಿ ಬಳಿ 300 ಎಕರೆ ಜಮೀನು ಖರೀದಿಸಲಾಗಿತ್ತು. ಆ ಜಮೀನಿನಲ್ಲಿ 5616 ಮನೆಗಳನ್ನು ನಿರ್ಮಿಸುವ ಗುರಿ ಹೊಂದಲಾಗಿದ್ದು, ಈಗಾಗಲೇ 1 ಸಾವಿರಕ್ಕೂ ಹೆಚ್ಚು ಮನೆಗಳನ್ನು ನಿರ್ಮಿಸಲಾಗಿದೆ. 809 ಮನೆಗಳನ್ನು ಈಗಾಗಲೇ ಫಲಾನುಭವಿಗಳಿಗೆ ಹಂಚಿಕೆ ಮಾಡಲಾಗಿದೆ. ಈ ಫಲಾನುಭವಿಗಳಿಗೆ ಕೆಎಂಇಆರ್‍ಸಿ ಅನುದಾನದಲ್ಲಿ 1 ಲಕ್ಷ ರೂ.ಗಳನ್ನು ಕಾಯ್ದಿರಿಸಲಾಗಿದೆ. ಈ ಪ್ರದೇಶದಲ್ಲಿ 37 ಕೋಟಿ ವೆಚ್ಚದಲ್ಲಿ ಕುಡಿವ ನೀರು, ಒಳಚರಂಡಿ ಸೇರಿ ಮೂಸೌಲಭ್ಯಗಳನ್ನು ಕಲ್ಪಿಸಲಾಗುತ್ತಿದೆಂದರು.
ಸ್ಲಂಬೋರ್ಡ್‍ನಿಂದ:
ನಗರದಲ್ಲಿ ಸ್ಲಂ ಬೋರ್ಡ್ ನಿಂದ 2300 ಮನೆಗಳು ಮಂಜೂರಾಗಿದ್ದು, ಈಗಾಗಲೇ 1300 ಮನೆಗಳು ನಿರ್ಮಾಣ ಕಾರ್ಯ ಮುಕ್ತಾಯ ಹಂತದಲ್ಲಿದೆ. ಬಾಕಿ 1 ಸಾವಿರ ಮನೆಗಳು ಕಾಮಗಾರಿ ಪ್ರಗತಿಯಲ್ಲಿದೆ ಎಂದಿದ್ದಾರೆ
ನೀರಿನ ಭರ ನಿವಾರಣೆ;
ಬಳ್ಳಾರಿ ನಗರಕ್ಕೆ ಕುಡಿವ ನೀರು ಪೂರೈಸಲು ಅಲ್ಲೀಪುರ ಕೆರೆ ಇತ್ತು ಆದರೂ ಸಹ ಬೇಸಿಗೆಯ ಮೂರು ತಿಂಗಳಲ್ಲಿ ಕುಡಿವ ನೀರಿನ ಸಮಸ್ಯೆಯಾಗುತ್ತಿತ್ತು. ಅದಕ್ಕಾಗಿ ಆಗ ಮುಖ್ಯ ಮಂತ್ರಿಗಳಾಗಿದ್ದ ಯಡಿಯೂರಪ್ಪ ಅವರಿಂದ ಕಲ್ಬುರ್ಗಿ ಕ್ಯಾಬಿನೇಟ್‍ನಲ್ಲಿ 114 ಕೋಟಿ ರೂ.ಗಳ ಕಾಮಗಾರಿಗೆ
ಅನುಮೋದನೆ ಪಡೆದು ತಾಲೂಕಿನ ಮೋಕಾ ಬಳಿಯ ಎಲ್‍ಎಲ್‍ಸಿ ಕಾಲುವೆಯಿಂದ ಅಲ್ಲೀಪುರ ನೀರು ಶುದ್ಧೀಕರಣ ಘಟಕಕ್ಕೆ ಪೈಪ್‍ಲೈನ್ ಅಳವಡಿಸುವ ಮೂಲಕ ಬೇಸಿಗೆಯ ಮೂರು ತಿಂಗಳ ನೀರಿನ ಸಮಸ್ಯೆಗೂ ನಿವಾರಣೆ ಮಾಡಿದೆ ಇದು ನನ್ನ ಕನಸಿನಯೋಜನೆಯಾಗಿದೆ. ಇನ್ನೂ ತುಂಗಭದ್ರ ಜಲಾಶಯದಿಂದ ಅಲ್ಲಿಪುರ ಕೆರೆಗೆ ನೀರು ತರುವ ಯೋಜನೆ ಕೆಎಂಇಆರ್ ಸಿ ನಿಧಿಯಡಿ ಜಾರಿಗೆ ತರಲಿದೆಂದರು.
ಪಟ್ಟಾ ವಿತರಣೆ:
ಬಳ್ಳಾರಿ ನಗರದ ಕೊಳಚೆ ಪ್ರದೇಶಗಳಲ್ಲಿ ದಶಕಗಳಿಂದ ವಾಸಿಸುತ್ತಿದ್ದ 12800 ಕುಟುಂಬಗಳಿಗೆ ಪಟ್ಟಾ ನೀಡಿದೆ ನೋಂದಣಿಯನ್ನು ಸಹ ಮಾಡಿಸುವ ಕಾರ್ಯ ನಡೆದಿದೆ. ಮುಂಬರುವ ದಿನಗಳಲ್ಲಿ ಇನ್ನು 30 ಕೊಳಚೆ ಪ್ರದೇಶಗಳನ್ನು ಅಧಿಕೃತವಾಗಿ ಘೋಷಿಸಲಾಗುವುದು. ಅಲ್ಲದೇ, ಖಾಸಗಿ ಪ್ರದೇಶಗಳಲ್ಲಿನ ಕೊಳಚೆ ಪ್ರದೇಶಗಳ ಫಲಾನುಭವಿಗಳಿಗೂ ಪಟ್ಟ ವಿತರಿಸುವ ಕುರಿತು ಚಿಂತನೆಯಿದೆಂದು ಹೇಳಿದರು.
ಒಟ್ಟಾರೆ ಒಬ್ಬ ಶಾಸಕನಾಗಿ ಪಕ್ಷದಲ್ಲಿನ ಮುಖಂಡರ ಸಹಾಯ, ಸಹಕಾರ, ಕಾರ್ಯಕರ್ತರ ಬೆಂಬಲದಿಂದ, ಅಧಿಕಾರಿಗಳ, ಮಾಧ್ಯಮಗಳ ಸಹಕಾರದಿಂದಲೂ ಸಾಕಷ್ಟು ಕೆಲಸ ಮಾಡಿರುವೆ. ಅಪ ಪ್ರಚಾರದ ಬಗ್ಗೆ ನಾನು ತಲೆ ಕೆಡಿಸಿಕೊಳ್ಳಲ್ಲ. ಉತ್ತಮ ಕಾರ್ಯ ನನ್ನ ಧ್ಯೇಯೆ ಮತ್ತೊಮ್ಮೆ ನನ್ನ ಸೇವೆಗೆ ಜನ ಬಯಸಿದ್ದಾರೆಂದು ಹೇಳಲು ಬಯಸುವೆ ಎಂದರಿ.