ಸಂಜೆವಾಣಿ ವಾರ್ತೆ
ಹೊಸಪೇಟೆ ಜು27: ಕಾಂಗ್ರೆಸ್ ಪಕ್ಷ ಬಂದರೆ ಹೊಟ್ಟೆ ತುಂಬುತ್ತೆ ಎಂದು ವಿಶ್ವಾಸ ಇಟ್ಟು ಅಧಿಕಾರಕ್ಕೆ ತಂದ ಜನರ ವಿಶ್ವಾಸವನ್ನು ರಾಜ್ಯ ಸರ್ಕಾರ ಹುಸಿಗೊಳಿಸಲ್ಲ ಎಂದು ಶಾಸಕ ಎಚ್.ಆರ್. ಗವಿಯಪ್ಪ ಹೇಳಿದರು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ತಾಲೂಕು ಆಡಳಿತ, ತಾಲೂಕು ಪಂಚಾಯಿತಿಯಿಂದ ನಗರದ ಸಾಯಿಲೀಲಾ ರಂಗ ಮಂದಿರದಲ್ಲಿ ಬುಧವಾರ ನಡೆದ ಗೃಹ ಲಕ್ಷ್ಮಿ, ಗೃಹ ಜ್ಯೋತಿ, ಅನ್ನಭಾಗ್ಯ ಯೋಜನೆಯ ವ್ಯಾಪಕ ಪ್ರಚಾರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ಇದೊಂದು ಐತಿಹಾಸಿಕ ದೇಶ. ಈ ದೇಶದಲ್ಲಿ ಮೊದಲ ಬಾರಿಗೆ ಉಚಿತವಾಗಿ ಯೋಜನೆಗಳನ್ನು ನೀಡಲು ಸರ್ಕಾರ ಹೇಳಿದಂತೆ ನಡೆದುಕೊಂಡಿದೆ. ನಾವು ಚುನಾವಣಾ ಪ್ರಚಾರ ಮಾಡುವಾಗ ಸಿಲಿಂಡರ್‍ಗೆ 500 ರು. ಮಾಡಿದರೆ ಸಾಕು ಅಂದುಕೊಂಡಿದೆ. ಆದರೆ ರಾಜ್ಯ ಸರ್ಕಾರ ಐದು ಉಚಿತ ಯೋಜನೆ ಘೋಷಣೆ ಮಾಡಿ ನಮಗೆ ಬೇರಗಾಗುವಂತೆ ಮಾಡಿತು. ಆದ್ದರಿಂದ ಜನರು ಕಾಂಗ್ರೆಸ್ ಪಕ್ಷದ ಮೇಲೆ ನಂಬಿಕೆಯಿಂದ ಅಧಿಕಾರಕ್ಕೆ ತಂದರು. ಈ ಯೋಜನೆಗಳು ಬೀದಿಗಳಿಗೆ ಮುಟ್ಟುವ ಯೋಜನೆಯಲ್ಲ, ಮನೆಗಳಿಗೆ ಮುಟ್ಟುವ ಯೋಜನೆಗಳಾಗಿವೆ. ನನ್ನ ರಾಜಕೀಯ ಜೀವನದಲ್ಲಿ ಇಂತಹ ಕಾರ್ಯಕ್ರಮ ಯಾವ ಸರ್ಕಾರ ಕೂಡ ಮಾಡಿಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ಈಗಿನ ಸಕಾರ ಜನರ ನಂಬಿಕೆಯಂತೆ ಯೋಜನೆಗಳನ್ನು ಜಾರಿ ಮಾಡಿದೆ ಎಂದರು.
ಇಲಾಖೆಯ ಉಪನಿರ್ದೇಶಕ ವೀರಣ್ಣ ಪ್ರಾಸ್ತಾವಿಕ ಮಾತನಾಡಿ, 63,827 ಮಹಿಳೆಯರ ಹೆಸರಿನಲ್ಲಿ ಪಡಿತರ ಚೀಟಿ ಇದೆ. 8 ಸಾವಿರ ನೋಂದಾಣಿಯಾಗಿದೆ. ಮಹಿಳೆಯರು ಆರ್ಥಿಕವಾಗಿ ಅಭಿವೃದ್ಧಿಯಾಗಲು ರಾಜ್ಯ ಸರ್ಕಾರದ ಯೋಜನೆ ಲಾಭ ಪಡೆಯಬೇಕು ಎಂದರು.
ಜೆಸ್ಕಾಂ ಎಇ ಶ್ರೀನಿವಾಸ್ ಮಾತನಾಡಿ, ಗೃಹಜ್ಯೋತಿ ಯೋಜನೆ ಶೇ.60ರಷ್ಟು ನೋಂದಣಿಯಾಗಿದೆ. ಪ್ರತಿ ವರ್ಷದ ಬಳಕೆಯಾದ ವಿದ್ಯುತ್ ಸರಾಸರಿಯಂತೆ ಶೇ.10ರಷ್ಟು ಉಚಿತ ಯೋಜನೆ ಪಡೆಯಬಹುದು. ಗೊಂದಲಗಳಿದ್ದರೆ ಇಲಾಖೆಗೆ ಸಂಪರ್ಕಿಸಿ ಎಂದರು.
ಆಹಾರ ಇಲಾಖೆಯ ನಾಗರಾಜ್ ಮಾತನಾಡಿ, ಅನ್ನ ಭಾಗ್ಯ ಯೋಜನೆ ಕಟ್ಟಕಡೆಯ ವ್ಯಕ್ತಿಗೆ ಸಿಗುತ್ತದೆ. 51,334 ಕಾರ್ಡ್‍ಗಳ ಅನ್ವಯ 1.98 ಲಕ್ಷ ಜನರಿಗೆ
3 ಕೋಟಿ ರು. ಪ್ರತಿ ತಿಂಗಳು ಸಂದಾಯವಾಗಲಿದೆ. ಹೆಚ್ಚಿನ ಮಾಹಿತಿಗಾಗಿ ಆಹಾರ ಇಲಾಖೆಗೆ ಸಂಪರ್ಕಿಸಿ ಎಂದರು.
ತಹಸೀಲ್ದಾರ್ ವಿಶ್ವಜಿತ್ ಮೆಹತಾ, ಎಂಎಸ್‍ಪಿಎಲ್ ಸಂಸ್ಥೆಯ ಮಹೇಶ್, ನಗರಸಭೆ ಪೌರಾಯುಕ್ತ ಮನೋಹರ್, ನಗರಸಭೆ ಸದಸ್ಯರಾದ ಕೆ.ಮಹೇಶ್, ಮುನ್ನಿ ಖಾಸಿಂ, ಹುಡಾ ಮಾಜಿ ಅಧ್ಯಕ್ಷ ವೆಂಕಟೇಶ್, ಮುಖಂಡರಾದ ಕೆ. ಬಡಾವಲಿ, ಸಣ್ಣಮಾರೆಪ್ಪ, ಅಶ್ವಿನ್ ಕೊತ್ತಂಬರಿ ಮತ್ತಿತರರಿದ್ದರು.
ಸರ್ಕಾರಿ ಕಾರ್ಯಕ್ರಮದಲ್ಲಿ ಚುನಾವಣೆ ಪ್ರಚಾರ!
ಸರಕಾರದ ಉಚಿತ ಯೋಜನೆಗಳ ವ್ಯಾಪಕ ಪ್ರಚಾರ ಕಾರ್ಯಕ್ರಮದಲ್ಲಿ ಶಾಸಕ ಎಚ್.ಆರ್. ಗವಿಯಪ್ಪ ಅವರು ಬಡವರ ಚಿಂತೆ ಮಾಡುವುದು ಕಾಂಗ್ರೆಸ್ ಮಾತ್ರ. ಅನ್ನಭಾಗ್ಯ, ನರೇಗಾ ಸೇರಿದಂತೆ ಇತರೆ ಜನಪರ ಯೋಜನೆ ಕಾಂಗ್ರೆಸ್ ಸರ್ಕಾರದಲ್ಲಿ ಬರುತ್ತದೆ. ಸಿದ್ದರಾಮಯ್ಯ ಅವರು ಯಾರ ಕನಸು ಕೂಡ ಹುಸಿಗೊಳಿಸಲ್ಲ. ಆದ್ದರಿಂದ ಮುಂದಿನ ಕೇಂದ್ರ ಸರ್ಕಾರ ಬರಬೇಕು ಎಂದರೆ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಗೆಲ್ಲಿಸಬೇಕು ಎಂದು ಸರ್ಕಾರಿ ಕಾರ್ಯಕ್ರಮದಲ್ಲಿ ಸಂಸತ್ ಚುನಾವಣಾ ಪ್ರಚಾರ ನಡೆಸಿದರು.
ಶಿಷ್ಟಚಾರ ಉಲ್ಲಂಘನೆ:
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ತಾಲೂಕು ಆಡಳಿತ, ತಾಲೂಕು ಪಂಚಾಯಿತಿಯಿಂದ ನಗರದ ಸಾಯಿಲೀಲಾ ರಂಗ ಮಂದಿರದಲ್ಲಿ ಬುಧವಾರ ನಡೆದ ಗೃಹ ಲಕ್ಷ್ಮಿ, ಗೃಹ ಜ್ಯೋತಿ, ಅನ್ನಭಾಗ್ಯ ಯೋಜನೆಯ ವ್ಯಾಪಕ ಪ್ರಚಾರ ಕಾರ್ಯಕ್ರಮದಲ್ಲಿ ಶಿಷ್ಟಚಾರ ಉಲ್ಲಂಘನೆಯಾಗಿದೆ ಎಂಬ ಆರೋಪ ಕೇಳಿ ಬಂದಿವೆ.
ಇದೊಂದು ಸರ್ಕಾರಿ ಕಾರ್ಯಕ್ರಮವೋ ಅಥವಾ ಪಕ್ಷದ ಕಾರ್ಯಕ್ರಮ ಎಂದು ತಿಳಿಯದಾಗಿದೆ. ಸರ್ಕಾರಿ ಕಾರ್ಯಕ್ರಮದಲ್ಲಿ ಪಕ್ಷದ ಕಾರ್ಯಕರ್ತರು ಸೇರಿ ಇತರರು ಕೂಡ ವೇದಿಕೆಯಲ್ಲಿ ಕಾಣಿಸಿಕೊಂಡು ಶಿಷ್ಟಚಾರ ಉಲ್ಲಂಘನೆ ಮಾಡಿದ್ದಾರೆ ಎಂಬ ದೂರು ಕೇಳಿ ಬಂದಿದೆ.
ಶಾಸಕ ಗವಿಯಪ್ಪ, ತಹಶೀಲ್ದಾರ್, ಜೆಸ್ಕಾಂ, ಸಿಡಿಪಿಓ ಇಲಾಖಾ ಅಧಿಕಾರಿಗಳು ಹಾಗೂ ನಗರಸಭೆ ಸದಸ್ಯರಾದ ಕೆ.ಮಹೇಶ್, ಮುನ್ನಿಕಾಸಿಂ ಹೊರತು ಪಡಿಸಿ, ಬಹುತೇಕ ಪಕ್ಷದ ಕಾರ್ಯಕರ್ತರು ಮತ್ತು ಮುಖಂಡರು ವೇದಿಕೆ ಹಂಚಿಕೊಂಡಿದ್ದಾರೆ ಎಂದು ದೂರಲಾಗಿದೆ.
ಗೃಹ ಲಕ್ಷ್ಮಿ, ಗೃಹ ಜ್ಯೋತಿ, ಅನ್ನಭಾಗ್ಯ ಯೋಜನೆಯ ವ್ಯಾಪಕ ಪ್ರಚಾರಕ್ಕಾಗಿ ಕಾರ್ಯಕ್ರಮ ಆಯೋಜನೆ ಮಾಡಿರುವುದರಿಂದ ಇದು ಶಿಷ್ಟಚಾರ ಉಲ್ಲಂಘನೆ ಆಗುವುದಿಲ್ಲ. ಉದ್ಘಾಟನೆ ಕಾರ್ಯಕ್ರಮದಲ್ಲಿ ಮಾತ್ರ ಶಿಷ್ಟಚಾರ ಪಾಲನೆ ಇರುತ್ತದೆ.
ವಿಶ್ವಜೀತ್ ಮೆಹತಾ, ತಹಶೀಲ್ದಾರ್, ಹೊಸಪೇಟೆ.