ಜನರ ಮುಂದೆ ಸಂಕಲ್ಪ ಪತ್ರ

ಬೆಂಗಳೂರು, ಏ. ೧೪- ದೇಶದ ಉಜ್ವಲ ಭವಿಷ್ಯದ ಸಂಕಲ್ಪ ಪತ್ರವನ್ನು ಬಿಜೆಪಿ ಜನರ ಮುಂದಿಟ್ಟಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಬಣ್ಣಿಸಿದ್ದಾರೆ.
ಲೋಕಸಭಾ ಚುನಾವಣೆಗೆ ಬಿಜೆಪಿ ಬಿಡುಗಡೆ ಮಾಡಿರುವ ಚುನಾವಣಾ ಪ್ರಣಾಳಿಕೆಯ ಸಂಕಲ್ಪ ಪತ್ರದ ಬಗ್ಗೆ ಇಂದು ಪ್ರತಿಕ್ರಿಯೆ ನೀಡಿರುವ ಅವರು, ದೇಶದ ಸಮಗ್ರ ಅಭಿವದ್ಧಿಗೆ ಒತ್ತು ನೀಡುವ ಸಂಕಲ್ಪ ಪತ್ರ ಇದಾಗಿದೆ. ಇದು ದೇಶದ ಉಜ್ವಲ ಭವಿಷ್ಯವನ್ನು ರೂಪಿಸುವ ಚಿಂತನೆಗಳನ್ನು ಒಳಗೊಂಡಿದೆ ಎಂದು ಹೇಳಿದರು.
ಕಾಂಗ್ರೆಸ್ ಪಕ್ಷದಂತೆ ಪೊಳ್ಳು ಭರವಸೆಗಳನ್ನು ನೀಡದೆ ಜನಪರ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸುವ ಅಂಶಗಳು ಸಂಕಲ್ಪ ಪತ್ರದಲ್ಲಿದೆ. ಈ ಸಂಕಲ್ಪ ಪತ್ರ ದೇಶದ ಸಮಗ್ರ ಅಭಿವೃದ್ಧಿಗೆ ಪೂರಕವಾಗಿದೆ ಎಂದು ಅವರು ಹೇಳಿದರು.
ಸಂಕಲ್ಪ ಪತ್ರದಲ್ಲಿ ಪ್ರಸ್ತಾಪಿಸಿರುವ ಒಂದು ದೇಶ ಒಂದು ಚುನಾವಣೆ, ಯುವ ಪೀಳಿಗೆಯ ಅಭಿವೃದ್ಧಿ, ಮಹಿಳೆಯರ ಅಭಿವೃದ್ಧಿ ಇವೆಲ್ಲಾ ದೇಶದ ಅಭಿವೃದ್ಧಿಯ ಭದ್ರ ಬುನಾದಿಗೆ ಕಾರಣವಾಗಲಿದೆ. ೨೦೪೭ರ ವೇಳೆಗೆ ಅಭಿವೃದ್ಧಿ ಹೊಂದುವ ಜನರ ಕನಸನ್ನು
ಈ ಸಂಕಲ್ಪ ಪತ್ರ ನನಸು ಮಾಡಲಿದೆ ಎಂದು ಅವರು ಹೇಳಿದರು.
ಬಿಜೆಪಿಯ ಈ ಸಂಕಲ್ಪ ಪತ್ರದಿಂದ ದೇಶಕ್ಕೆ ಒಳಿತಾಗಲಿದೆ. ಜಾಗತೀಕ ಮಟ್ಟದಲ್ಲೂ ಭಾರತ ಶಕ್ತಿಶಾಲಿ ರಾಷ್ಟ್ರವಾಗಿ ಹೊರಹೊಮ್ಮಲು ಕಾರಣವಾಗಲಿದೆ ಎಂದು ಅವರು ಹೇಳಿದರು.
ಮೂಲಭೂತ ಸೌಕರ್ಯಗಳಿಗೂ ಈ ಪತ್ರದಲ್ಲಿ ಒತ್ತು ನೀಡಲಾಗಿದೆ. ದೇಶದ ಸರ್ವಾಂಗೀಣ ಅಭಿವೃದ್ಧಿಯ ಆಶಯವನ್ನು ಈ ಸಂಕಲ್ಪ ಪತ್ರ ಹೊಂದಿದೆ ಎಂದು ಅವರು ಹೇಳಿದರು.