ಜನರ ಬದುಕು ಸುಧಾರಣೆಗೆ ಒತ್ತಾಯ

ಕೋಲಾರ,ಮೇ:೧೫:ಜಿಲ್ಲಾಧ್ಯಂತ ಒತ್ತುವರಿಯಾಗಿರುವ ಕೆರೆ, ರಾಜಕಾಲುವೆ, ತೆರವುಗೊಳಿಸಲು ವಿಶೇಷ ತಂಡ ರಚನೆ ಮಾಡಿ ಮುಂಗಾರು ಮಳೆಯಿಂದ ರೈತರ ಬೆಳೆ ಜನ ಸಾಮಾನ್ಯರ ಬದುಕನ್ನು ರಚನೆ ಮಾಡಬೇಕೆಂದು ರೈತ ಸಂಘದಿಂದ ಉಪ ವಿಭಾಗಾಧಿಕಾರಿಗಳಿಗೆ ಮನವಿ ನೀಡಿ ಒತ್ತಾಯಿಸಲಾಯಿತು.
ರಾಜ್ಯ ಉಪಾದ್ಯಕ್ಷ ಕೆ.ನಾರಾಯಣಗೌಡ ಮಾತನಾಡಿ ಕೆರೆ, ರಾಜಕಾಲುವೆ, ಅಭಿವೃದ್ದಿಗೆ ಸರ್ಕಾರದಿಂದ ಸಂಬಂಧಪಟ್ಟ ಇಲಾಖೆಗಳಿಗೆ ಕೋಟ್ಯಾಂತರ ರೂಪಾಯಿ ಅನುದಾನ ಬಿಡುಗಡೆಯಾಗುತ್ತಿದ್ದರೂ, ಅಭಿವೃದ್ದಿ ಮಾತ್ರ ಮರಚಿಕೆಯಾಗಿ ಗುತ್ತಿಗೆದಾರರು ಹಾಗೂ ಅಧಿಕಾರಿಗಳ ಜೋಬು ತುಂಬಿಸುವ ದಂದೆಯಾಗಿ ಮಾರ್ಪಟ್ಟಿದೆ. ಜಿಲ್ಲಾಧ್ಯಂತ ಯಾವುದೇ ಕೆರೆ, ರಾಜಕಾಲುವೆ, ಅಭಿವೃದ್ದಿಯಾಗಿರುವುದು ಕಂಡಿಲ್ಲ. ಅನುದಾನ ಮಾತ್ರ ಆ ಕೆರೆ, ಈ. ಕೆರೆ ಎಂದು ದುರುಪಯೋಗ ಆಗುತ್ತಿರುವುದು ಮಾತ್ರ ಸತ್ಯವಾದ ವಿಚಾರವಾಗಿದೆ. ಅಧಿಕಾರಿಗಳ ಅವ್ಯವಸ್ಥೆ ಬಗ್ಗೆ ಅಸಮದಾನ ವ್ಯಕ್ತಪಡಿಸಿದರು.
ಲಕ್ಷಾಂತರ ರೂಪಾಯಿ ಬಂಡವಾಳ ಹಾಕಿ ಹಗಲು ರಾತ್ರಿ ಎನ್ನದೆ ದುಡಿದಿದ್ದರೆ ರೈತರ ಬೆಲೆ ಅಧಿಕಾರಿಗಳಿಗೆ ಗೊತ್ತಾಗುತ್ತಿತ್ತು, ಎ.ಸಿ.ರೂಮಿನಲ್ಲಿ ಕುಳಿತು ಜನರ ತೆರಿಗೆ ಹಣದಲ್ಲಿ ಸಂಬಳ ಪಡೆದು ರೈತರ ಬೆವರ ಹನಿಯಲ್ಲಿ ಅನ್ನುತ್ತಿರುವ ಅಧಿಕಾರಿಗಳಿಗೆ ರೈತರ ಕಷ್ಟದ ಅರಿವಿಲ್ಲವೆಂದು ಕಿಡಿಕಾರಿದರು.
ಸಾವಿರಾರು ಕೆರೆಗಳನ್ನು ಹೊಂದಿರುವ ಜಿಲ್ಲೆಯನ್ನು ಕೆರೆಗಳ ತವರು ಎಂದು ಪ್ರಸಿದ್ದಿ ಪಡೆದಿರುವ ಪೂರ್ವಜರು ಬೆವರು ಸುರಿಸಿ ಒಗ್ಗಟ್ಟಿನಿಂದ ಕಟ್ಟಿ ಅಭಿವೃದ್ದಿ ಪಡಿಸಿರುವ ಕೆರೆಗಳು ದಿನೇ ದಿನೇ ಒತ್ತುವರಿದಾರರಿಂದ ತನ್ನ ಸ್ವರೂಪವನ್ನು ಕಳೆದುಕೊಂಡು ಮಳೆ ನೀರು ಹಿಡಿದಿಟ್ಟುಕೊಳ್ಳುವ ಸಾಮರ್ಥ್ಯವನ್ನು ಕಳೆದುಕೊಳ್ಳುತ್ತಿದೆ. ಇದಕ್ಕೆ ಮನುಷ್ಯನ ದುರಾಸೆಯೇ ಮೂಲ ಕಾರಣವಾಗಿದೆ ಎಂದರು.
ಜಿಲ್ಲಾ ಕಾರ್ಯಾಧ್ಯಕ್ಷ ವಕ್ಕಲೇರಿ ಹನುಮಯ್ಯ ಮಾತನಾಡಿ ಮಳೆ ನೀರಿನಿಂದ ನಷ್ಟವಾಗಿರುವ ಸ್ಥಳ ಪರಿಶೀಲನೆಗೆ ಬರುವ ಅಧಿಕಾರಿಗಳು ಸಂತಸ್ತ್ರರಿಗೆ ದಿಕ್ಕುತಪ್ಪಿಸಲು ನೂರೊಂದು ನೆಪ ಹೇಳಿ ೨೪ ಗಂಟೆಯಲ್ಲಿ ಒತ್ತುವರಿಗಳನ್ನು ತೆರವುಗೊಳಿಸುತ್ತೇವೆ. ಜೊತೆಗೆ ರೈತರಿಗೆ ಜನ ಸಾಮಾನ್ಯರಿಗೆ ಪರಿಹಾರವನ್ನು ನೀಡುತ್ತೇವೆಂದು ಹೇಳಿ ಹೋಗುವ ಅಧಿಕಾರಿಗಳು ಮತ್ತೆ ೩೬೪ ದಿನ ನಾಪತ್ತೆಯಾಗಿ ಸಮಸ್ಯೆಯಾದಾಗ ಪ್ರತ್ಯಕ್ಷವಾಗಿ ಹರಿಕಥೆ ಹೇಳಿ ತಪ್ಪಿಸಿಕೊಳ್ಳುತ್ತಿದ್ದಾರೆಂದು ಅವ್ಯವಸ್ಥೆ ಬಗ್ಗೆ ಕಿಡಿಕಾರಿದರು.
ಉಪ ವಿಭಾಗಾಧಿಕಾರಿಗಳು ಜಿಲ್ಲಾಧ್ಯಂತ ಒತ್ತುವರಿಯಾಗಿರುವ ಕೆರೆ, ರಾಜಕಾಲುವೆ ತೆರವುಗೊಳಿಸಲು ವಿಶೇಷ ತಂಡ ರಚನೆ ಮಾಡಿ ಮುಂಗಾರು ಮಳೆಯಿಂದ ಜನ ಸಾಮಾನ್ಯರ ಬದುಕನ್ನು ರೈತರ ಬೆಳೆಯನ್ನು ರಕ್ಷಣೆ ಮಾಡಬೇಕು ಇಲ್ಲವಾದರೆ ನೊಂದ ರೈತರಿಂದಲೇ ಕಾನೂನು ಕೈಗೆತ್ತಿಕೊಳ್ಳುವ ಕಾಲ ದೂರವಿಲ್ಲವೆಂದು ಮನವಿ ಮುಖಾಂತರ ತಮ್ಮ ಗಮನಕ್ಕೆ ತಂದು ಮನವಿ ನೀಡಿ ಒತ್ತಾಯಿಸಿದರು.
ಮನವಿ ಸ್ವೀಕರಿಸಿದ ಉಪ ವಿಭಾಗಾಧಿಕಾರಿಗಳು ಒಂದು ವಾರದಲ್ಲಿ ಎಲ್ಲಾ ತಾಲ್ಲೂಕು ದಂಡಾಧಿಕಾರಿಗಳು ಸರ್ವೆ ಅಧಿಕಾರಿಗಳು ಸಭೆ ಕರೆದು ಒತ್ತುವರಿ ಬಗ್ಗೆ ಮಾಹಿತಿ ತರಿಸಿಕೊಂಡು ಸಮಸ್ಯೆಯನ್ನು ಬಗೆಹರಿಸುವ ಭರವಸೆಯನ್ನು ನೀಡಿದರು.ಹೋರಾಟದಲ್ಲಿ ಮಹಿಳಾ ಜಿಲ್ಲಾದ್ಯಕ್ಷೆ ಎ.ನಳಿನಿಗೌಡ, ಜಿಲ್ಲಾಧ್ಯಕ್ಷ ಈಕಂಬಳ್ಳಿ ಮಂಜುನಾಥ, ರಾಜ್ಯ ಪ್ರಧಾನ ಕಾರ್ಯದರ್ಶಿ ಪಾರುಕ್‌ಪಾಷ, ಮಂಗಸಂದ್ರ ತಿಮ್ಮಣ್ಣ, ವೆಂಕಟೇಶಪ್ಪ, ಕುವಣ್ಣ, ಮುದುವಾಡಿ ಚಂದ್ರಪ್ಪ, ಮಾಲೂರು ತಾಲ್ಲೂಕು ಅಧ್ಯಕ್ಷ ಯಲ್ಲಣ್ಣ, ಮಾಸ್ತಿ ವೆಂಕಟೇಶ್, ಹರೀಶ್, ರಾಮಸಾಗರ ವೇಣು, ಸುರೇಶ್‌ಬಾಬು ಕದಿನತ್ತ ಅಪ್ಪೋಜಿರಾವ್, ಯಲುವಳ್ಳಿ ಪ್ರಭಾಕರ್ ಮುಂತಾದವರು ಇದ್ದರು.