ಜನರ ಬದುಕನ್ನು “ಹೈರಾಣು” ಮಾಡಿದ “ವೈರಾಣು”

ಅದು ಮಾರ್ಚ್ ತಿಂಗಳು. ಬಿಸಿಲನಾಡು ಕಲಬುರಗಿ ರಣಬಿಸಿಲಿಗೆ ಸಜ್ಜಾಗುವ ಕಾಲ. ಬೆಂಕಿಯಂತಹ ಬಿಸಿಲಿಗೂ ಬಗ್ಗದ ಜನ ಅಕ್ಷರಶ: ಬೆಚ್ಚಿಬಿದ್ದಿದ್ದು ಕೊರೊನಾ ಮಹಾಮಾರಿಗೆ.

ಸೌದಿ ಅರೇಬಿಯಾದಿಂದ ಆಗಮಿಸಿದ ವೃದ್ಧ ಕೊರೊನಾ ಸೋಂಕಿನಿಂದ ಮೃತಪಟ್ಟ ಸುದ್ದಿ ಕ್ಷಣಾರ್ಧದಲ್ಲಿಯೇ ಎಲ್ಲೆಡೆ ಹರಡಿ ಜಿಲ್ಲೆಯ ಜನರ ಜಂಘಾಬಲವನ್ನೇ ಉಡುಗಿಸಿತ್ತು. ಕೊರೊನಾಗೆ ಮೊದಲ ಸಾವು ಸಂಭವಿಸುವುದರ ಮೂಲಕ ಕಲಬುರಗಿಯ ಹೆಸರು ಕ್ಷಣಾರ್ಧದಲ್ಲಿಯೇ ದೇಶವ್ಯಾಪಿ ಮನೆಮಾತಾಯಿತು.

ಮಾಧ್ಯಮಗಳಲ್ಲಿ ಈ ಸುದ್ದಿ ಭಿತ್ತರವಾಗುತ್ತಿದ್ದಂತೆಯೇ ಎಲ್ಲೆಡೆ ಭಯ, ಆತಂಕದ ವಾತಾವರಣ ನಿರ್ಮಾಣವಾಗಿ ಹೋಗಿತ್ತು. ಕೊರೊನಾ ಮೊದಲ ಸಾವು ಕಲಬುರಗಿಯಲ್ಲಿಯೇ ಸಂಭವಿಸಿದ್ದರಿಂದ ಜಿಲ್ಲಾಡಳಿತ ಸಹ ಕಂಗಾಲಾಗಿತ್ತು. ದೇಶದಲ್ಲಿ ಅದೀಗ ತಾನೆ ಕೊರೊನಾ ಕಾಲಿಟ್ಟಾಗಿತ್ತು. ಆದರೆ ಎಲ್ಲಿಯೂ ಸಾವು ಸಂಭವಿಸಿದ ವರದಿಯಾಗಿರಲಿಲ್ಲ. ಹೀಗಾಗಿ ಇಡೀ ರಾಷ್ಟ್ರ ಮತ್ತು ರಾಜ್ಯದ ಗಮನ ಕಲಬುರಗಿ ಕಡೆಗೆ ನೆಟ್ಟಂತಾಗಿತ್ತು.

ಜಿಲ್ಲೆಯಲ್ಲಿ ಮೊದಲ ಕೊರೊನಾ ಸೋಂಕು ಪತ್ತೆಯಾಗುತ್ತಿದ್ದಂತೆಯೇ ಭಯ, ಆತಂಕದಿಂದ ಜನದಿಂದ ಜನ ಮನೆಯಿಂದ ಹೊರಬರಲಾಗದೆ ಒಂದು ರೀತಿ ಅಘೋಷಿತ ಬಂದ್ ಸ್ಥಿತಿ ನಿರ್ಮಾಣವಾಯಿತು.

ಎಚ್ಚೆತ್ತ ಜಿಲ್ಲಾಡಳಿತ :


ದೇಶದಲ್ಲಿಯೇ ಕೊರೊನಾ ಸೋಂಕಿಗೆ ಮೊದಲ ಸಾವು ಕಂಡ ಬಿಸಿಲು ನಗರ ಕಲಬುರಗಿ ಜಿಲ್ಲೆಯಲ್ಲಿ ಕೊರೊನಾ ಸೋಂಕು ಹರಡದಂತೆ ತಡೆಗಟ್ಟಲು ಮತ್ತು ಜನರಲ್ಲಿ ಜಾಗೃತಿ ಮೂಡಿಸಲು ಜಿಲ್ಲಾಡಳಿತ ಟೊಂಕಕಟ್ಟಿ ನಿಂತಿತು. ಜಿಲ್ಲಾಧಿಕಾರಿ ಶರತ್ ಬಿ. ಅವರು ತಮ್ಮ ನೇತೃತ್ವದಲ್ಲಿ ಆರೋಗ್ಯ, ಪೋಲೀಸ್, ನಗರ-ಸ್ಥಳೀಯ ಸಂಸ್ಥೆಗಳು, ಗ್ರಾಮೀಣಾಭಿವೃದ್ಧಿ ಹೀಗೆ ವಿವಿಧ ಇಲಾಖೆಗಳನ್ನೊಳಗೊಂಡ ಅಧಿಕಾರಿಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ತಂದ ರಚಿಸಿ ಮಹಾಮಾರಿ ಕೊರೊನಾ ಸೋಂಕಿನ ನಿಯಂತ್ರಣಕ್ಕೆ ಸಮರ ಸಾರಿದರು.

ಯುದ್ದೋಪಾದಿಯಲ್ಲಿ ಜಿಲ್ಲೆಯಾದ್ಯಂತ ಜನಸಂದಣಿ ನಿಯಂತ್ರಣ, ಸಾಮಾಜಿಕ ಅಂತರ ಪರಿಪಾಲನೆಯ ಅರಿವಿನ ಶಿಕ್ಷಣಕ್ಕೆ ಮುಂದಾದರು. ಪಾಸಿಟಿವ್ ಪ್ರಕರಣ ಪತ್ತೆಯಾದ ಕೂಡಲೆ ಸೋಂಕಿತ ವ್ಯಕ್ತಿ ವಾಸಿಸುವ ಪ್ರದೇಶವನ್ನು ಕಂಟೇನ್ ಮೆಂಟ್ ಝೋನ್ ಮತ್ತು ಬಫರ್ ಝೋನ್ ಎಂದು ಗುರುತಿಸಿ ಅಲ್ಲಿ ಸ್ಕ್ರೀನಿಂಗ್ ಮತ್ತು ಮುಂಜಾಗ್ರತೆಯ ಅರಿವು ಮೂಡಿಸಲು ಸಜ್ಜಾದರು.

ಮೊದಲ ಲಾಕ್ ಡೌನ್:

ಜಿಲ್ಲೆಯಲ್ಲಿ ಕೊರೊನಾ ಸೋಂಕು ಪತ್ತೆಯಾದ ಕೂಡಲೆ ಡಿ.ಸಿ ಶರತ್ ಬಿ. ಅವರು ಸೋಂಕು ಹರಡದಂತೆ ಮುಂಜಾಗ್ರತವಾಗಿ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಿ, ಜನಸಂದಣಿ ಸೇರುವ ಸಿನಿಮಾ-ಚಿತ್ರಮಂದಿರಗಳನ್ನು ಬಂದ್ ಮಾಡಿಸಿದರು. ಧಾರ್ಮಿಕ ಕಾರ್ಯಕ್ರಮಗಳನ್ನು ನಿಬರ್ಂಧಿಸಿದಲ್ಲದೆ ಸಾರಿಗೆ ಸೇವೆಯನ್ನು ಕಡಿಮೆಗೊಳಿಸಿದರು. ಅಗತ್ಯ ಸೇವೆಗಳನ್ನು ಹೊರತುಪಡಿಸಿ ಉಳಿದೆಲ್ಲವು ಬಂದ್ ಮಾಡಿ ಸಾರ್ವಜನಿಕರು ಅನಗತ್ಯ ಮನೆಯಿಂದ ಹೊರಗಡೆ ಬಾರದಂತೆ ಮನವಿ ಮಾಡಿದರು.

ಮಾರ್ಚ್ ೧೯ರ ರಿಂದಲೇ ಜಿಲ್ಲೆಯಾದ್ಯಂತ ಸಿ.ಆರ್.ಪಿ.ಸಿ. ಕಾಯ್ದೆ ೧೯೭೩ ಕಲಂ ೧೪೪ರನ್ವಯ ನಿಷೇಧಾಜ್ಞೆ ಜಾರಿಗೊಳಿಸಿ ಅಧಿಕೃತ “ಲಾಕ್ ಡೌನ್” ಘೋಷಿಸುವ ದಿಟ್ಟ ನಿರ್ಧಾರ ಕೈಗೊಂಡರು. ಇದು ದೇಶದಲ್ಲಿ ಕೊರೋನಾ ಸೋಂಕು ಹರಡುವಿಕೆಯ ನಿಯಂತ್ರಣಕ್ಕೆ ಮೊದಲ ಲಾಕ್ ಡೌನ್ ಜಿಲ್ಲೆಯಾಗಿ ಕಲಬುರಗಿ ಗುರುತಿಸಿಕೊಂಡಿತ್ತು.

ಅಂತರ ರಾಜ್ಯ ಗಡಿ ಬಂದ್:

ನೆರೆಯ ಮಹಾರಾಷ್ಟ್ರದಲ್ಲಿ ಕೊರೋನಾ ಹಾವಳಿ ದಿನದಿಂದ ದಿನಕ್ಕೆ ಹೆಚ್ಚಳವಾಗುತ್ತಿರುವುದನ್ನು ಗಮನಿಸಿದ ಜಿಲ್ಲಾಡಳಿತ ಮಹಾರಾಷ್ಟ್ರಕ್ಕೆ ಸಂಪರ್ಕಿಸುವ ಅಂತರ ರಾಜ್ಯ ಖಾಸಗಿ-ಸಾರ್ವಜನಿಕ ಸಾರಿಗೆ ಸೇವೆ ಬಂದ್ ಮಾಡಿದಲ್ಲದೆ ಜಿಲ್ಲೆಯ ಗಡಿಯಲ್ಲಿ ಚೆಕ್ ಪೋಸ್ಟ್ ಸ್ಥಾಪಿಸಿ ಬೇರೆ ಜಿಲ್ಲೆ ಮತ್ತು ರಾಜ್ಯದಿಂದ ಬರುವವರನ್ನು ತಪಾಸಣೆ ಮಾಡಿ ಒಳಗಡೆ ಬಿಡಲಾಯಿತು.

ತಬ್ಲಿಘಿ ನಂಟು :


ಕೊರೊನಾ ನಿಯಂತ್ರಣಕ್ಕೆ ಜಿಲ್ಲಾಡಳಿತ ಅಗತ್ಯವಾದ ಕ್ರಮ ಕೈಗೊಂಡ ಬೆನ್ನಲ್ಲಿಯೇ ದೆಹಲಿಯಲ್ಲಿ ನಡೆದ ತಬ್ಲಿಘಿ ಜಮಾತ್ ಸಮಾವೇಶದಲ್ಲಿ ಭಾಗವಹಿಸಿದವರು ಜಿಲ್ಲೆಗೆ ಆಗಮಿಸಿದ ಸುದ್ದಿ ಮತ್ತೆ ಆತಂಕ್ಕಿಡುಮಾಡಿತ್ತು. ತಬ್ಲಿಘಿ ಜಮಾತ್ ಸಮಾವೇಶದಲ್ಲಿ ಭಾಗವಹಿಸಿದವರಿಗೆ ಸೋಂಕು ತಗುಲಿರುವ ಸುದ್ದಿ ಅದಾಗಲೇ ದೇಶವ್ಯಾಪಿ ಹರಡಿತ್ತು. ಕೊರೊನಾ ನಿಯಂತ್ರಣದಲ್ಲಿದೆ ಅನ್ನುವಷ್ಟರಲ್ಲಿಯೇ ಜಿಲ್ಲಾಡಳಿತಕ್ಕೆ ಮತ್ತೊಂದು ಹೊಸ ತಲೆನೋವು ಶುರುವಾಯಿತು. ತಬ್ಲಿಘಿ ಜಮಾತ್ ಸಮಾವೇಶದಲ್ಲಿ ಭಾಗವಹಿಸಿ ಜಿಲ್ಲೆಗೆ ಆಗಮಿಸಿದವರನ್ನು ಪತ್ತೆ ಹಚ್ಚಿ ಅವರನ್ನು ಕೊರೊನಾ ಪರೀಕ್ಷೆಗೆ ಒಳಪಡಿ ಚಿಕಿತ್ಸೆ ಕೊಡಿಸುವಲ್ಲಿಯೂ ಯಶಸ್ವಿಯಾಯಿತು.

ವಲಸೆ ಕಾರ್ಮಿಕರ ಸಂಕಷ್ಟ:

ತಬ್ಲಿಘಿ ನಂಟಿನ ಸಮಸ್ಯೆ ಮುಗಿದಿದೆ ಅನ್ನುವಷ್ಟರಲ್ಲಿಯೇ ದೇಶದ ವಿವಿಧ ರಾಜ್ಯಗಳಿಂದ ಆಗಮಿಸಿದ ವಲಸೆ ಕಾರ್ಮಿಕರನ್ನು ಕ್ವಾರಂಟೈನ್ ಕೇಂದ್ರದಲ್ಲಿರುವ, ಅವರ ಆರೋಗ್ಯ ತಪಾಸಣೆ ನಡೆಸಿ ಚಿಕಿತ್ಸೆ ಕೊಡಿಸುವ ಜವಾಬ್ದಾರಿ ಹೊತ್ತುಕೊಂಡಿತು. ಹೊಟ್ಟೆ ಪಾಡಿಗಾವಿ ಮಹಾರಾಷ್ಟ್ರ, ಆಂಧ್ರ ಪ್ರದೇಶ ಸೇರಿದಂತೆ ವಿವಿಧ ರಾಜ್ಯಗಳಿಗೆ ತೆರಳಿದ್ದ ಜಿಲ್ಲೆಯ ವಲಸೆ ಕಾರ್ಮಿಕರನ್ನು ವಿಶೇಷ ರೈಲು ಮತ್ತು ಬಸ್ಸಿನಲ್ಲಿ ಕರೆತಂದು ಕ್ವಾರಂಟೈನ್ ಮಾಡುವ, ಅವರ ಆರೋಗ್ಯ ತಪಾಸಣೆ ನಡೆಸುವ ಕೆಲಸವನ್ನು ಜಿಲ್ಲಾಡಳಿತ ಸಮರ್ಥವಾಗಿ ನಿಭಾಯಿಸಿತ್ತು. ಇದರ ಜೊತೆಗೆ ಗುಣಮುಖರಾದ ವಲಸೆ ಕಾರ್ಮಿಕರಿಗೆ ಉದ್ಯೋಗ ಕಲ್ಪಿಸುವ ಬಹುದೊಡ್ಡ ಜವಾಬ್ದಾರಿಯೂ ಜಿಲ್ಲಾಡಳಿತದ ಮೇಲಿತ್ತು. ವಲಸೆ ಕಾರ್ಮಿಕರಿಗೆ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯಲ್ಲಿ ಕೆಲಸ ಕೊಡಿಸುವುದರ ಜೊತೆಗೆ ಕೃಷಿ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳಲು ಅನುವು ಮಾಡಿಕೊಟ್ಟಿತ್ತು.

ಹೊಟ್ಟೆ ತುಂಬಿಸಿಕೊಳ್ಳಲು ಮಕ್ಕಳು ಮರಿಯೊಂದಿಗೆ ಕುಟುಂಬ ಸಮೇತ ದೂರದ ಊರುಗಳಿಗೆ ತೆರಳಿದ್ದ ವಲಸೆ ಕಾರ್ಮಿಕರು ಲಾಕ್ ಡೌನ್ ಸಂದರ್ಭದಲ್ಲಿ ಸಾಕಷ್ಟು ಸಮಸ್ಯೆ ಎದುರಿಸುವಂತಾಯಿತು. ಅದೇಷ್ಟೋ ಜನ, ಬಸ್ಸು, ರೈಲು ಸಿಗದೆ ಹಗಲು ಇರುಳು ಮಕ್ಕಳೊಂದಿಗೆ ಸಿಕ್ಕಸಿಕ್ಕ ವಾಹನ ಹಿಡಿದು, ಕೆಲವರು ನಡೆದುಕೊಂಡ ಬಂದು ತಮ್ಮ ಊರುಗಳನ್ನು ಸೇರಿದ್ದ ಪ್ರಸಂಗಗಳು ನಡೆದವು. ಕೊರೊನಾ ಮತ್ತು ಲಾಕ್ ಡೌನ್ ಸಂದರ್ಭದಲ್ಲಿ ಬೇರೆಲ್ಲರಿಗಿಂತ ವಲಸೆ ಕಾರ್ಮಿಕರು ಸಾಕಷ್ಟು ಸಂಕಷ್ಟ ಎದುರಿಸುವಂತಾಯಿತು.

ಜಾತ್ರೆ, ಉತ್ಸವ ರದ್ದು:
ಕೊರೊನಾ ಸೋಂಕು ಹರಡದಂತೆ ತಡೆಯಲು ಸರ್ಕಾರದ ಮಾರ್ಗಸೂಚಿ ಅನುಸಾಗರ ಜಿಲ್ಲಾಡಳಿತ ಜಾತ್ರೆ, ಉತ್ಸವ, ಮದುವೆ, ಮುಂಜಿಯಂತಹ ಸಮಾರಂಭಗಳನ್ನು ರದ್ದು ಪಡಿಸಿತ್ತು. ಇದರಿಂದಾಗಿ ಜನ ಜಾತ್ರೆ, ಉತ್ಸವಗಳಲ್ಲಿ ಪಾಲ್ಗೊಳ್ಳದಂತಾಯಿತು. ನೆಂಟರ ಮಕ್ಕಳ ಮದುವೆ, ಮುಂಜಿ ಸಮಾರಂಭದಲ್ಲೂ ಭಾಗವಹಿಸದಂತಹ ಸ್ಥಿತಿ ನಿರ್ಮಾಣವಾಗಿದ್ದಕ್ಕೆ ಮಮ್ಮಲು ಮರುವಂತಾಯಿತು.
ಕೊರೊನಾ ಹಿನ್ನೆಲೆಯಲ್ಲಿ ಲಾಕ್ ಡೌನ್ ಜಾರಿ ಮಾಡಿದ್ದರಿಂದ ಅಸಂಘಟಿತ ವಲಯದ ಕಾರ್ಮಿಕರು ಸಂಕಷ್ಟಕ್ಕೆ ಗುರಿಯಾಗುವಂತಾಯಿತು. ಅದೇಷ್ಟು ಜನರು ಉದ್ಯೋಗ ಕಳೆದುಕೊಂಡು ಇನ್ನಿಲ್ಲದ ಸಂಕಷ್ಟ ಎದುರಿಸುವಂತಾಯಿತು. ಅದೆಷ್ಟು ಜನರು ಈ ಸಂಕಷ್ಟವನ್ನು ಎದುರಿಸಲಾಗದೆ ಆತ್ಮಹತ್ಯೆ ಮಾಡಿಕೊಳ್ಳುವಂತಾಯಿತು. ಕೊರೊನಾ ಮಹಾಮಾರಿ ಜನರ ಬದುಕನ್ನು ಬೀದಿಗೆ ತಳ್ಳವುದರ ಮೂಲಕ ತನ್ನ ಅಟ್ಟಹಾಸ ಮೆರೆದಿತ್ತು.

ಉದ್ಯಮಗಳಿಗೆ ಹೊಡೆತ:

The interior of the restaurant Balthazar in New York. All bars, restaurants and nightclubs were ordered shut by Governor Cuomo, effectively putting New York City under lockdown to combat the COVID-19 coronavirus. NYC, March 17, 2020.

ಕೊರೊನಾ ಮಹಾಮಾರಿ ಮತ್ತು ಲಾಕ್ ಡೌನ್ ನಿಂದಾಗಿ ಅದೆಷ್ಟೋ ಉದ್ಯಮೆಗಳು ಬಾಗಿಲು ಮುಚ್ಚುವಂತಾಗಿ ಅಲ್ಲಿ ಕೆಲಸ ಮಾಡುತ್ತಿದ್ದವರ ಬದುಕು ಅಕ್ಷರಶ: ಬೀದಿಗೆ ಬಿದ್ದಂತಾಗಿದೆ. ಸಣ್ಣ ಕೈಗಾರಿಕೆಗಳು, ಗುಡಿ ಕೈಗಾರಿಕೆಗಳು, ಹೋಟೆಲ್ ಉದ್ಯಮ ಸೇರಿದಂತೆ ಅನೇಕ ಉದ್ಯಮಗಳ ಮೇಲೆ ಕೊರೊನಾ ಕರಿನೆರಳು ಆವರಿಸಿ ಅವರು ಚೇತರಿಸಿಕೊಳ್ಳದಂತಹ ಸ್ಥಿತಿ ನಿರ್ಮಾಣವಾಗಿದೆ. ಸಣ್ಣ, ಸಣ್ಣ ಉದ್ಯಮೆಗಳಲ್ಲಿ ಕೆಲಸ ಮಾಡುತ್ತಿದ್ದವರು ಕೆಲಸ ಕಳೆದುಕೊಂಡು ತಾವಿರುವ ಸ್ಥಳದಲ್ಲಿಯೂ ಇರಲಾಗದೆ, ಅತ್ತ ತಮ್ಮ ಹುಟ್ಟೂರಿಗೂ ಹೋಗಲಾಗದೆ ಅತಂತ್ರಸ್ಥಿತಿ ಎದುರಿಸುವಂತಾಗಿತ್ತು.

ಅವಸರದ ಬದುಕಿಗೆ ಅಲ್ಪವಿರಾಮ:
ಕಣ್ಣು ಕಟ್ಟಿದ ಕುದುರಂತೆ ಒಂದೇ ಸಮನೆ ಓಡುತ್ತಿದ್ದ ಮನುಷ್ಯನ ಅವಸರದ ಬದುಕಿಗೆ ಕೊರೊನಾ ಅಲ್ಪವಿರಾಮ ಹಾಕಿದಂತು ಸತ್ಯ. ಇದೀಗ ಎಲ್ಲವೂ ಸಹಜ ಸ್ಥಿತಿಗೆ ಬಂದಿದ್ದರೂ ಜನರ ಮನಸ್ಸಿನಲ್ಲಿ ಮನೆ ಮಾಡಿರುವ ಭಯ, ಆತಂಕವಿನ್ನೂ ಹಾಗೇ ಇದೆ. ಆದರೆ ಎಲ್ಲಕ್ಕಿಂತ ಬದುಕು ದೊಡ್ಡದು. ಹೀಗಾಗಿ ಮನುಷ್ಯ ಈ ಬದುಕಿಗಾಗಿ ಹೋರಾಟ ನಡೆಸಲೇಬೇಕು, ಕೊರೊನಾ ಮಹಾಮಾರಿ ಮನುಷ್ಯನ ಬದುಕಿನಲ್ಲಿ ಸಂತೋಷ, ಸಂಭ್ರಮ, ನೆಮ್ಮದಿ ಕಸಿದುಕೊಂಡಿದ್ದು ಮುಂಬುರುವ ದಿನಗಳಲ್ಲಿ ಈ ಮಹಾಮಾರಿಯ ಅಟ್ಟಹಾಸ ಕೊನೆಗೊಂಡು ಜನ ಮತ್ತೆ ನಿರುಮ್ಮಳವಾಗಿ ಬದುಕುವ ದಿನಗಳು
ದೂರಿಲ್ಲ.

ಬದುಕು ಸಹಜ ಸ್ಥಿತಿಯತ್ತ:

ಕೊರೊನಾದೊಂದಿಗೆ ಹೋರಾಡುತ್ತ ಬದುಕು ಸಾಗಿಸುವುದು ಅನಿವಾರ್ಯವಾಗಿರುವುದರಿಂದ ಸರ್ಕಾರ ಲಾಕ್ ಡೌನ್ ತೆರವುಗೊಳಿಸಿ ಎಲ್ಲವೂ ಮೊದಲಿನಂತೆ ಸಹಜ ಸ್ಥಿತಿಗೆ ಮರಳಲು ಅನುವು ಮಾಡಿಕೊಟ್ಟಿದೆ. ಆದರೆ ಕೊರೊನಾ ವೈರಸ್ ಸೋಂಕಿನ ಪ್ರಕರಣಗಳು ಮತ್ತು ಸಾವಿನ ಪ್ರಕರಣಗಳು ಸಂಪೂರ್ಣವಾಗಿ ನಿಂತಿಲ್ಲವಾದ್ದರಿಂದ ಜನ ಅಗತ್ಯ ಸುರಕ್ಷತಾ ಕ್ರಮಗಳೊಂದಿಗೆ ಸ್ವಲ್ಪಮಟ್ಟಿನ ಭಯ, ಆತಂಕದ ನಡುವೆ ದಿನ ಕಳೆಯುತ್ತಿದ್ದಾರೆ. ಕೊರೊನಾ ಒಂದು ಸಾಮಾನ್ಯ ಕಾಯಿಲೆ ಎಂಬ ಅರಿವು ಜನರ ಮನಸ್ಸಿನಲ್ಲಿ ಮನೆ ಮಾಡಿದ್ದು, ಇದೀಗ ಸ್ವಲ್ಪಮಟ್ಟಿಗೆ ಭಯ, ಆತಂಕ ಕಡಿಮೆಯಾದಂತಾಗಿದೆ..

ನಾಗರಾಜ ಹೂವಿನಹಳ್ಳಿ .ಕಲಬುರಗಿ