
ಸಂಜೆವಾಣಿ ವಾರ್ತೆ
ದಾವಣಗೆರೆ.ಸೆ.೧೨; ಮಡಿವಾಳ ಸಮುದಾಯ ಸಣ್ಣ ಸಮುದಾಯವಾದರೂ ಸಹ ಜನರ ಬಟ್ಟೆಗಳನ್ನು ಶುಭ್ರ ಮಾಡುವಂತಹ ಸ್ವಚ್ಛ ಸಮಾಜ. ಕಾಯಕವೇ ಪ್ರಧಾನವಾದ ಸಮಾಜ ಇದಾಗಿದೆ ಎಂದು ಸಂಸದ ಡಾ.ಜಿ.ಎಂ.ಸಿದ್ಧೇಶ್ವರ್ ತಿಳಿಸಿದರು.ಇಲ್ಲಿನ ವಿನೋಬ ನಗರದಲ್ಲಿರುವ ಶ್ರೀಮಾಚಿದೇವ ಸಮುದಾಯ ಭವನದಲ್ಲಿ ಜಿಲ್ಲಾ ಶ್ರೀಮಡಿವಾಳ ಮಾಚಿದೇವ ಸಂಘ, ಮಹಿಳಾ ಸಂಘ ಹಾಗೂ ಮಡಿಕಟ್ಟೆ ಸಮಿತಿ ಇವರ ವತಿಯಿಂದ ಆಯೋಜಿಸಲಾಗಿದ್ದ ಶ್ರೀ ಮಡಿವಾಳ ಮಾಚಿದೇವರ ಶ್ರಾವಣ ಮಾಸದ ಸ್ಮರಣೋತ್ಸವ ಕಾರ್ಯಕ್ರಮ ಹಾಗೂ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.ಬಟ್ಟೆಗಳನ್ನು ಶುಭ್ರ ಮಾಡುವ ಮಡಿವಾಳ ಸಮುದಾಯ ಒಂದು ವೇಳೆ ಇರಲಿಲ್ಲ ಎನ್ನುವಂತೆ ಆಗಿದ್ದರೆ ನಾವೆಲ್ಲರೂ ಯಾರ ರೀತಿ ಇರುತ್ತಿದ್ದೆವು ಎನ್ನುವುದನ್ನೂ ಊಹಿಸಲು ಸಾಧ್ಯವಿಲ್ಲ. ಬಟ್ಟೆಗಳನ್ನು ಶುಭ್ರ ಮಾಡುವ ಜೊತೆ ಶೈಕ್ಷಣಿಕವಾಗಿ ಮುಂದೆ ಬರಬೇಕೆಂದು ಸಲಹೆ ನೀಡಿದರು.ಸಮುದಾಯದಲ್ಲಿ ಪೋಷಕರು ತಮ್ಮ ಮಕ್ಕಳಿಗೆ ಶಿಕ್ಷಣ ಕೊಡಿಸಿ. ಶಿಕ್ಷಣವಿದ್ದರೆ ಯಾವುದೇ ಕ್ಷೇತ್ರದಲ್ಲಿ ಸಾಧನೆ ಮಾಡಬಹುದು. ದುಡ್ಡೇ ದೊಡ್ಡಪ್ಪ ಎನ್ನುತ್ತಾರೆ. ಆದರೆ ವಿದ್ಯೆ ಅವರಪ್ಪ. ಕಾರಣ ಸರ್ಕಾರದಿಂದ ಸಿಗುವ ಸೌಲಭ್ಯಗಳ ಸದುಪಯೋಗ ಮಾಡಿಕೊಂಡು ಉತ್ತಮ ವಿದ್ಯೆ ಕಲಿತರೆ ಉನ್ನತ ಸ್ಥಾನಗಳಿಗೆ ಏರಬಹುದು. ಆ ಮೂಲಕ ಸಮುದಾಯಕ್ಕೆ ಮಾತ್ರವಲ್ಲದೇ ರಾಜ್ಯ, ದೇಶಕ್ಕೆ ದೊಡ್ಡ ಕೊಡುಗೆ ನೀಡಿದಂತೆ ಆಗುತ್ತದೆ ಎಂದು ಹೇಳಿದರು. ಪ್ರಾಸ್ತಾವಿಕವಾಗಿ ಮಾತನಾಡಿದ ಸಮಾಜದ ಜಿಲ್ಲಾ ಕಾರ್ಯಾಧ್ಯಕ್ಷ ಹೆಚ್.ಜಿ.ಉಮೇಶ್, ಸಮಾಜ ಸದೃಢವಾಗಿದ್ದರೆ ಯಾವುದೇ ಸರ್ಕಾರಗಳು ತಾವೇ ಮುಂದೆ ಬಂದು ಸೌಲಭ್ಯಗಳನ್ನು ನೀಡುತ್ತವೆ. ಕಾರಣ ಸಮಾಜದ ಕಾರ್ಯಕ್ರಮಗಳಲ್ಲಿ ನಾವೆಲ್ಲರೂ ಒಂದೆಡೆ ಸೇರಿ ಒಗ್ಗಟ್ಟು ಪ್ರದರ್ಶನ ಮಾಡಬೇಕು. ಪರಿಶಿಷ್ಟರಂತೆ ಜೀವನ ಸಾಗಿಸುತ್ತಿರುವ ಮಡಿವಾಳ ಸಮುದಾಯವನ್ನು ಪರಿಶಿಷ್ಟ ಜಾತಿ ಪಟ್ಟಿಗೆ ಸೇರಿಸುವಂತೆ ನಮ್ಮನ್ನು ಆಳುವ ಸರ್ಕಾರಗಳಿಗೆ ಹಲವಾರು ಬಾರಿ ಮನವಿ ಮಾಡಿದ್ದರೂ ಸಹ ಯಾವುದೇ ಪ್ರಯೋಜನ ಅಗಿಲ್ಲ. ಶೈಕ್ಷಣಿಕವಾಗಿ ಹಿಂದುಳಿದ ನಮ್ಮ ಸಮುದಾಯವನ್ನು ಮೇಲಕ್ಕೆತ್ತಲು ಎಲ್ಲಾ ಪೋಷಕರು ಕಡ್ಡಾಯವಾಗಿ ಶಿಕ್ಷಣ ಕೊಡಿಸಲು ಮುಂದಾಗಬೇಕೆಂದು ಹೇಳಿದರು.ಪಾಲಿಕೆ ಸದಸ್ಯ ಪ್ರಸನ್ನಕುಮಾರ್ ಮಾತನಾಡಿ, ಮಾಚಿದೇವ ಸಮುದಾಯ ಭವನದ ಮುಂದಿನ ಮುಖ್ಯ ರಸ್ತೆಗೆ ಶರಣ ಮಡಿವಾಳ ಮಾಚಿದೇವ ರಸ್ತೆ ಎಂದು ನಾಮಕರಣ ಮಾಡಲಾಗಿದೆ. ಈ ಹೆಸರು ಇಡಲು ಕೆಲವು ಸ್ವಹಿತಾಸಕ್ತಿ, ವ್ಯಕ್ತಿಗತವಾಗಿ ಇದ್ದವರು ವಿರೋಧಿಸಿದರು. ಆದರೂ ನಾಮಕರಣ ಮಾಡಲಾಗಿದೆ ಎಂದರು.ವಿನೋಬಾ ನಗರದ ಶ್ರೀಜಡೇಸಿದ್ದ ಯೋಗೀಶ್ವರ ಮಠದ ಶ್ರೀಶಿವಾನಂದ ಸ್ವಾಮೀಜಿ ಹಾಗೂ ರಾಣೇಬೆನ್ನೂರು ವಿರಕ್ತ ಮಠದ ಗುರು ಬಸವ ಶ್ರೀಗಳು ಸಾನಿಧ್ಯ ವಹಿಸಿದ್ದರೆ, ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷ ಎಂ.ನಾಗೇಂದ್ರಪ್ಪ ವಹಿಸಿದ್ದರು.ವೇದಿಕೆಯಲ್ಲಿ ಓಂಕಾರಪ್ಪ, ಜಿ.ಬಿ.ವಿನಯ್ ಕುಮಾರ್, ವನಜಾಕ್ಷಮ್ಮ ಪಾಂಡುರಂಗಪ್ಪ, ನೇತ್ರಾವತಿ ನಾಗರಾಜ್, ಜಿ.ಹೆಚ್.ನಾಗರಾಜ್, ಹುಲಿಕಟ್ಟೆ ರಾಮಚಂದ್ರಪ್ಪ, ಕಿಶೋರ್ ಕುಮಾರ್, ಪರಶುರಾಮ, ನಾಗಮ್ಮ, ಬಸವರಾಜ್, ಬಾತಿ ಶಂಕರ್, ಡೈಮಂಡ್ ಮಂಜುನಾಥ್, ಶ್ವೇತಾ ಗಾಂಧಿ, ಅನ್ನಪೂರ್ಣಮ್ಮ ಬಸವರಾಜ್, ಎ.ಮಲ್ಲಪ್ಪ, ಪ್ರಸನ್ನ ಕುಮಾರ್, ಸುರೇಶ್ ಗಂಡಗಾಳೆ, ಶಿವಾನಂದ, ಆರ್.ಎನ್.ಧನಂಜಯ, ಸುರೇಶ್ ಕೋಗುಂಡೆ, ವಿಜಯ್‌ಕುಮಾರ್, ಅಜೇಯ, ಸುಭಾಷ್, ಪಿ.ಮಂಜುನಾಥ್, ಪತ್ರಕರ್ತ ಎಂ.ವೈ.ಸತೀಶ್, ದುಗ್ಗಪ್ಪ, ಪೂಜಾರ್ ಅಂಜಿನಪ್ಪ, ಪ್ರಕಾಶ್, ರುದ್ರೇಶ್, ಗೋಪಾಲ್, ರವಿ ಚಿಕ್ಕಣ್ಣ ಇತರರು ಇದ್ದರು.