ಜನರ ಪ್ರಾಣ ರಕ್ಷಣೆಗೆ ಜಂಬೋ ಸಿಲಿಂಡರ್ ವಿತರಣೆ

ರಾಯಚೂರು.ಮೇ.೧೮- ಆಕ್ಸಿಜನ್ ಕೊರತೆಯಿಂದ ತೀವ್ರ ತೊಂದರೆಗೆ ಗುರಿಯಾಗಿದ್ದ ಕೊರೊನಾ ಸೋಂಕಿತರನ್ನು ರಕ್ಷಿಸುವ ಉದ್ದೇಶದಿಂದ ನವೋದಯ ವೈದ್ಯಕೀಯ ಆಸ್ಪತ್ರೆಗೆ ಜಂಬೋ ಸಿಲಿಂಡರ್‌ಗಳನ್ನೇ ಪೂರೈಸಲಾಯಿತೆಂದು ಯುವ ಕಾಂಗ್ರೆಸ್ಸಿನ ಜಿಲ್ಲಾಧ್ಯಕ್ಷ ಅರುಣ್ ದೋತರಬಂಡಿ ಅವರು, ಶಾಸಕ ಡಾ.ಶಿವರಾಜ ಪಾಟೀಲ್ ಅವರ ಹೇಳಿಕೆಗೆ ತಿರುಗೇಟು ನೀಡಿದ್ದಾರೆ.
ನವೋದಯ ಶಿಕ್ಷಣ ಸಂಸ್ಥೆಯ ಮುಖ್ಯಸ್ಥರು, ಜಿಲ್ಲಾಧಿಕಾರಿಗಳಿಗೆ ದೂರವಾಣಿ ಕರೆ ಮಾಡಿದ ಮಾಹಿತಿ ಮತ್ತು ನಮ್ಮ ನಾಯಕರಾದ ರವಿ ಬೋಸರಾಜು ಅವರ ಸೂಚನೆ ಹಿನ್ನೆಲೆಯಲ್ಲಿ ನಗರದಲ್ಲಿ ಲಭ್ಯವಿರುವ ಜಂಬೋ ಆಕ್ಸಿಜನ್ ಸಿಲಿಂಡರ್‌ಗಳನ್ನು ಆಸ್ಪತ್ರೆಗೆ ಸಾಗಿಸಲಾಯಿತು. ಆಟೋದಲ್ಲಿ ೩ ಜಂಬೋ ಸಿಲಿಂಡರ್‌ಗಳಂತೆ ಒಟ್ಟು ೨೬ ರಿಂದ ೨೭ ಸಿಲಿಂಡರ್‌ಗಳನ್ನು ಆಸ್ಪತ್ರೆಗೆ ತಲುಪಿಸಲಾಯಿತು. ಜನರ ಪ್ರಾಣ ಉಳಿಸುವ ಏಕಮಾತ್ರ ಉದ್ದೇಶದಿಂದ ಈ ಸಿಲಿಂಡರ್ ಪೂರೈಸಲಾಗಿತ್ತು. ಶಾಸಕರೇ ನಾವು ಡೋಂಗಿ ಮಾಡುವ ಉದ್ದೇಶದಿಂದ ಈ ಕೆಲಸ ಮಾಡಿಲ್ಲ. ಇಂತಹ ಹೇಳಿಕೆಗಳನ್ನು ನೀಡುವಾಗ ವಾಸ್ತವ ಸ್ಥಿತಿ ಅರಿಯುವುದು ಅತ್ಯವಶ್ಯಕವಾಗಿದೆ.
ಆಕ್ಸಿಜನ್ ಕೊರತೆಯ ಸಂದರ್ಭದಲ್ಲಿ ಎಷ್ಟೋ ಜನರ ಪ್ರಾಣ ಸಂಕಷ್ಟದಲ್ಲಿತ್ತು. ಆದರೆ, ತಾವ್ಯಾರು ಇದಕ್ಕೆ ಸ್ಪಂದಿಸಲಿಲ್ಲ. ನಾವು ಮತ್ತು ಜಿಲ್ಲಾಡಳಿತ ಅಂದು ಕೈಗೊಂಡ ತುರ್ತು ಕ್ರಮದಿಂದ ಅನೇಕ ಜನರ ಪ್ರಾಣ ಉಳಿಯಲು ಕಾರಣವಾಯಿತು. ಇದು ನಾಟಕವಲ್ಲ, ಮಾನವೀಯತೆಯ ಪ್ರತೀಕವಾಗಿದೆಂದು ಅವರು, ಶಾಸಕ ಡಾ.ಶಿವರಾಜ ಪಾಟೀಲ್ ಅವರಿಗೆ ಉತ್ತರಿಸಿದ್ದಾರೆ.