
ಕಲಬುರಗಿ,ಆ.15:ಜನರ ನಿರೀಕ್ಷೆಗೆ ತಕ್ಕಂತೆ ಕಾರ್ಯನಿರ್ವಹಿಸುವುದರ ಜೊತೆಗೆ ಜನರಿಗೆ ನಿರ್ದಿಷ್ಟ ಉತ್ತರ ನೀಡಲು ‘ಕಲಬುರಗಿ ಕನೆಕ್ಟ್’ ಜಾಲತಾಣ ರೂಪಿಸಲಾಗಿದ್ದು, ಇಂದಿನಿಂದಲೇ ತಾಣ ಕಾರ್ಯನಿರ್ವಹಿಸಲಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ಅವರು ಹೇಳಿದರು.
ಇಲ್ಲಿನ ಜಿಲ್ಲಾಧಿಕಾರಿಗಳ ಕಚೇರಿಯ ಸಭಾಂಗಣದಲ್ಲಿ ಸಾರ್ವಜನಿಕರ ಕುಂದುಕೊರತೆ ನಿವಾರಣೆಗೆ ಪೂರಕವಾಗಿ ರೂಪಿಸಿರುವ ಕಲಬುರಗಿ ಕನೆಕ್ಟ್ ಜಾಲತಾಣ ಲೋಕಾರ್ಪಣೆಗೊಳಿಸಿ ಅವರು ಮಾತನಾಡಿದರು. ಇಂದು ಜನರಿಗೆ ಜನಪ್ರತಿನಿಧಿಗಳಿಂದ ಸಾಕಷ್ಟು ನಿರೀಕ್ಷೆಯಿದೆ. ಅದರಲ್ಲೂ ಮುಖ್ಯವಾಗಿ ಆಯಾ ರಾಮ್ ಗಯಾ ರಾಮ್ ಧೋರಣೆಯನ್ನು ಜನರು ಒಪ್ಪುವುದಿಲ್ಲ. ಹೀಗಾಗಿ ಜನರ ನಿರೀಕ್ಷೆಗಳಿಗೆ ನಿಗದಿತ ಸಮಯದಲ್ಲಿ ಸ್ಪಂದಿಸಲು ಅನುಕೂಲ ಆಗುವಂತೆ ಈ ಜಾಲತಾಣ ಪರಿಚಯಿಸಲಾಗಿದೆ. ಇದರಿಂದ ಜನರು ತಮ್ಮ ಹಣ ಮತ್ತು ಸಮಯ ವ್ಯರ್ಥ ಮಾಡಿಕೊಂಡು ಸಚಿವರನ್ನು ಹುಡುಕಿಕೊಂಡು ಬರುವುದು ತಪ್ಪುತ್ತದೆ ಎಂದರು.
ಜನರು ಸಲ್ಲಿಸುವ ಮನವಿ ಮತ್ತು ದೂರುಗಳನ್ನು ಮಾನಿಟರ್ ಮಾಡಲು ಒಟ್ಟು 71 ನೋಡಲ್ ಅಧಿಕಾರಿಗಳು ಕಾರ್ಯನಿರ್ವಹಿಸಲಿದ್ದಾರೆ. ಮೇಲಾಗಿ, ಮನವಿ ಸಲ್ಲಿಸಿದ ವ್ಯಕ್ತಿಗಳು ವೆಬ್ ಸೈಟ್ ನಲ್ಲಿ ತಮ್ಮ ಮನವಿಯ ವಿಲೇವಾರಿ ಯಾವ ಹಂತದಲ್ಲಿದೆ ಎಂಬುದನ್ನು ಸಹ ಟ್ರ್ಯಾಕ್ ಮಾಡಬಹುದಾಗಿದೆ ಎಂದು ವಿವರಿಸಿದರು.
ಕೇವಲ ಮನವಿ ಸಲ್ಲಿಸುವುದು ಮಾತ್ರವಲ್ಲ; ದೂರು ಸಲ್ಲಿಸಲು ಸಹ ಜನರಿಗೆ ಅವಕಾಶವಿದೆ. ಹೀಗೆ ದೂರು ಸಲ್ಲಿಸುವ ವ್ಯಕ್ತಿಯ ಹೆಸರು ಮತ್ತು ಪರಿಚಯವನ್ನು ಗೌಪ್ಯವಾಗಿಡುವ ವ್ಯವಸ್ಥೆಯೂ ಜಾಲತಾಣದಲ್ಲಿದೆ ಎಂದು ಮಾಹಿತಿ ನೀಡಿದರು.
ಪ್ರಸ್ತುತ ಕನೆಕ್ಟ್ ಜವಾಬ್ದಾರಿ ನಿರ್ವಹಿಸುವ ಅಧಿಕಾರಿಗಳು ವೇಗ ಹಾಗೂ ನಿಗದಿತ ಸಮಯದಲ್ಲಿ ಅರ್ಜಿಗಳನ್ನು ವಿಲೇವಾರಿ ಮಾಡಿದರೆ ಅಂತಹ ಅಧಿಕಾರಿಗಳಿಗೆ ರ್ಯಾಂಕ್ ನೀಡಿ ಪುರಸ್ಕರಿಸಲಾಗುವುದು ಎಂದು ಸಚಿವ ಪ್ರಿಯಾಂಕ್ ಒತ್ತಿ ಹೇಳಿದರು.
ಆರಂಭದಲ್ಲಿ ಸಚಿವ ಪ್ರಿಯಾಂಕ್ ಖರ್ಗೆಯವರ ಆಪ್ತ ಕಾರ್ಯದರ್ಶಿ ಭೀಮಾಶಂಕರ್ ತೆಗ್ಗಳ್ಳಿ ಹಾಗೂ ಜಿಲ್ಲಾಧಿಕಾರಿ ಫೌಜಿಯಾ ತರನ್ನುಮ್ ಅವರು ‘ಕಲಬುರಗಿ ಕನೆಕ್ಟ್’ ಜಾಲತಾಣದ ಕಾರ್ಯಶೈಲಿ ಕುರಿತು ವಿವರಿಸಿದರು.
ಕಲಬುರಗಿ ದಕ್ಷಿಣ ಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ್, ಎಂ.ಎಲ್.ಸಿ. ತಿಪ್ಪಣಪ್ಪ ಕಮಕನೂರ, ಚಂದ್ರಶೇಖರ ಪಾಟೀಲ್ ಹುಮನಾಬಾದ್, ಕಲಬುರಗಿ ನಗರ ಪೆÇಲೀಸ್ ಆಯುಕ್ತ ಚೇತನ ಆರ್., ಎಸ್.ಪಿ. ಇಶಾ ಪಂತ್, ಜಿಲ್ಲಾ ಪಂಚಾಯತ್ ಸಿ.ಇ.ಒ ಡಾ.ಭವರ್ ಸಿಂಗ್ ಮೀನಾ, ಮಹಾನಗರ ಪಾಲಿಕೆ ಆಯುಕ್ತ ಭುವನೇಶ್ ಪಾಟೀಲ್ ದೇವಿದಾಸ್ ಇದ್ದರು.
ಕಲಬುರಗಿ ಕನೆಕ್ಟ್ ಕಾರ್ಯಶೈಲಿ: ರಾಜ್ಯದಲ್ಲಿ ಮೊದಲ ಬಾರಿಗೆ ಜಿಲ್ಲಾ ಉಸ್ತುವಾರಿ ಕಚೇರಿಯಲ್ಲಿ ಸಾರ್ವಜನಿಕರ ಕುಂದುಕೊರತೆಗಳನ್ನು ಆನ್ ಲೈನ್ ಮುಖಾಂತರ ಸ್ವೀಕರಿಸಿ ಜಿಲ್ಲಾಮಟ್ಟದ ಇಲಾಖಾವಾರು ನೋಡಲ್ ಅಧಿಕಾರಿಗಳನ್ನು ನೇಮಿಸಿ ಅರ್ಜಿದಾರರ ಅರ್ಜಿಗಳನ್ನು ನಿಯಮಾನುಸಾರ ಪರಿಶೀಲಿಸಿ ವಿಲೇವಾರಿಗೊಳಿಸಲು ‘ಕಲಬುರಗಿ ಕನೆಕ್ಟ್’ ಜಾಲತಾಣ ರಚಿಸಲಾಗಿದೆ.
ಈ ವೆಬ್ ಸೈಟ್ ಮೂಲಕ ಸಾರ್ವಜನಿಕರು ಹಾಗೂ ಜನಪ್ರತಿನಿಧಿಗಳು ತಮ್ಮ ಅರ್ಜಿಗಳನ್ನು ಕ್ಯೂ.ಆರ್. ಕೋಡ್ ಸ್ಕ್ಯಾನ್ ಮಾಡುವ ಮೂಲಕ ತಮ್ಮ ಮನೆಯಲ್ಲಿಯೇ ಕುಳಿತು ಅರ್ಜಿ ಸಲ್ಲಿಸಬಹುದಾಗಿದೆ. ಅರ್ಜಿದಾರರು ಈ ವೆಬ್ ಸೈಟ್ ನಲ್ಲಿ ತಮ್ಮ ವಿವರಗಳನ್ನು ದಾಖಲಿಸಿ ದಾಖಲೆಗಳನ್ನು ಪಿಡಿಎಫ್ ಮೂಲಕ ಅಥವಾ ಸ್ಕ್ಯಾನ್ ಮಾಡಿ ಆನ್ ಲೈನ್ ಮೂಲಕ ಸಲ್ಲಿಸಬಹುದಾಗಿದೆ.
ಈ ಅರ್ಜಿಯನ್ನು ಸಲ್ಲಿಸಿದ ನಂತರ ಜಿಲ್ಲಾ ಉಸ್ತುವಾರಿ ಸಚಿವರ ಕಚೇರಿಯ ಸಿಬ್ಬಂದಿಗಳು ಸಂಬಂಧಪಟ್ಟ ಇಲಾಖೆಯ ಮುಖ್ಯಸ್ಥರಿಗೆ ( ನೋಡಲ್ ಅಧಿಕಾರಿಗಳಿಗೆ) ಆನ್ ಲೈನ್ ಮೂಲಕ ವರ್ಗಾಯಿಸುತ್ತಾರೆ. ನಂತರ ನೋಡಲ್ ಅಧಿಕಾರಿಗಳು ಸದರಿ ಅರ್ಜಿಗಳನ್ನು ಪರಿಶೀಲಿಸಿ ನಿಯಮಾನುಸಾರ ವಿಲೇವಾರಿ ಮಾಡಿ ಸದರಿ ಅರ್ಜಿದಾರರಿಗೆ ಆನ್ ಲೈನ್ ಮೂಲಕ ಮಾಹಿತಿ ಒದಗಿಸುತ್ತಾರೆ.
ಈ ಪ್ರಕ್ರಿಯೆಗೆ 70 ಜಿಲ್ಲಾಮಟ್ಟದ ನೋಡಲ್ ಅಧಿಕಾರಿಗಳನ್ನು ಗುರುತಿಸಲಾಗಿದೆ. ಪ್ರತಿಯೊಬ್ಬರಿಗೂ ಪ್ರತ್ಯೇಕ ಲಾಗಿನ್ ಪಾಸ್ ವರ್ಡ್ ಒದಗಿಸಲಾಗಿದೆ. ಸಾರ್ವಜನಿಕರು ತಮ್ಮ ಅರ್ಜಿಯ ಸಂಖ್ಯೆ ನಮೂದಿಸಿ ಅರ್ಜಿಯ ಸ್ಥಿತಿಗತಿ ಅರಿತುಕೊಳ್ಳಬಹುದು. ಜಿಲ್ಲಾಮಟ್ಟದಲ್ಲಿ ಇಲಾಖಾವಾರು ಅರ್ಜಿಗಳ ಸ್ವೀಕೃತಿ, ಬಾಕಿ ಮತ್ತು ವಿಲೇವಾರಿಗೊಳಿಸಲಾದ ಸ್ಥಿತಿಗತಿ ನೋಡಲು ಜಿಲ್ಲಾಧಿಕಾರಿಗೆ ವಿಶೇಷ ಅಡ್ಮಿನ್ ಲಾಗಿನ್ ನೀಡಲಾಗಿದೆ. ಜೊತೆಗೆ ಜಿಲ್ಲಾಧಿಕಾರಿಗಳು ‘ಕಲಬುರಗಿ ಕನೆಕ್ಟ್’ ಮೇಲುಸ್ತುವಾರಿ ನೋಡಿಕೊಳ್ಳಲಿದ್ದಾರೆ.