ಜನರ ನಡುವೆ ಮುಖಾ-ಮುಖಿಯಾದದ್ದು ವಚನ ಸಾಹಿತ್ಯ

ಬಳ್ಳಾರಿ, ಮಾ.27: ರಾಜರ ಆಡಳಿತದಿಂದ ಹೊರಬಂದು ಜನರ ನಡುವೆ ಮುಖಾ-ಮುಖಿಯಾದದ್ದು ವಚನ ಸಾಹಿತ್ಯ ಎಂದು ಬಾಲಕೀಯರ ಸರ್ಕಾರಿ ಪಿಯು ಕಾಲೇಜಿನ ಪ್ರಾಂಶುಪಾಲ ಕೆ.ಎಂ.ಮಹಾಲಿಂಗನಗೌಡ ಅಭಿಪ್ರಾಯಪಟ್ಟರು.
ಶರಣ ಸಾಹಿತ್ಯ ಪರಿಷತ್ ಜಿಲ್ಲಾ ಘಟಕ ಕಾಲೇಜಿನಲ್ಲಿ ಆಯೋಜಿಸಿದ್ದ ದತ್ತಿ ಉಪನ್ಯಾಸಕ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ವಿದ್ಯಾರ್ಥಿಗಳಲ್ಲಿ ವೈಚಾರಿಕತೆ ಮೂಡಿಸುವಲ್ಲಿ ವಚನಗಳು ಆಗಾಧವಾದ ಕೆಲಸ ಮಾಡುತ್ತವೆ. ವಚನಗಳು ಸಮ ಸಮಾಜದ ನಿರ್ಮಾಣಕ್ಕೆ ಬುನಾದಿಯಾಗಿವೆ. ಜನರ ನೋವು ಸಲಹೆಗೆ ಹುಟ್ಟಿದ ಸಾಹಿತ್ಯವಾಗಿದೆ. ಎಲ್ಲರನ್ನು ಇವ ನಮ್ಮವ… ಇವ ನಮ್ಮವ… ಎಂದು ಅಪ್ಪಿಕೊಂಡ ಸಾಹಿತ್ಯ ವಚನ ಸಾಹಿತ್ಯವಾಗಿದೆ ಎಂದರು.
ವ್ಯಕ್ತಿಯ ಬದುಕಿನಲ್ಲಿ ತಿರುವು ಅನೇಕ ಘಟನೆಗಳಿಂದ ಬರುತ್ತದೆ. ಕಳ್ಳನೊಬ್ಬ ಶ್ರೇಷ್ಠ ಚಿಂತಕ ಆಧ್ಯಾತ್ಮ ಜೀವಿಯಾಗಿ ಪರಿವರ್ತನೆಯಾದದ್ದು ಕನ್ನಡ ನಾಡಿನ ವಿಶೇಷ ಉರಿಲಿಂಗ ಪೆದ್ದಿ ನಿಶ್ಚಿಂತ ಭಾವ ನಿರ್ಮಲ ಮನಸ್ಸು, ಗುರು ಮಹಿಮೆ ಮೆರದ ವ್ಯಕ್ತಿ ಎಂದು ವೀರಶೈವ ವಿದ್ಯಾವರ್ಧಕ ಸಂಘದ ಸ್ವತಂತ್ರ ಪೂರ್ವ ಕಾಲೇಜಿನ ಕನ್ನಡ ಉಪನ್ಯಾಸಕ ಎ.ಎಂ.ಪಿ ವೀರೇಶಸ್ವಾಮಿ ಅಭಿಪ್ರಾಯಪಟ್ಟರು.
ಸಾಂದೇಡಿನ ನಂದದ ದೀಪವಿರಿ ಲಿಂಗಪೆದ್ದಿ ವಿಷಯದ ಬಗ್ಗೆ ಮಾತನಾಡುತ್ತಾ, ಜಾತಿ, ಲಿಂಗ, ಅಂತಸ್ತುಗಳ ತಾರತಮ್ಯ ಆತ್ಮ ವಿಕಾಸಕ್ಕೆ ಅಡ್ಡಿಯಾಗಲಾರವೆಂದರು.
ಪ್ರಾಸ್ತಾವಿಕದೊಂದಿಗೆ ದತ್ತಿ ಧಾತೃಗಳ ಪರಿಚಯವನ್ನು ಕೆ.ಬಿ.ಸಿದ್ದಲಿಂಗಪ್ಪ ಮಾಡಿದರು. ವಿದ್ಯಾರ್ಥಿನಿ ಬಸಮ್ಮ ಪ್ರಾರ್ಥನೆ ಮಾಡಿದರು. ಡಾ|| ಯು.ಶ್ರೀನಿವಾಸಮೂರ್ತಿ ಸ್ವಾಗತಿಸಿದರು. ಚಾಂದ್ ಬಾಷಾ ಕಾರ್ಯಕ್ರಮ ನಿರ್ವಹಣೆ ಮಾಡಿದರು. ಸಭೆಯಲ್ಲಿ ಉಪನ್ಯಾಸಕ ಶಾಮಣ್ಣ, ಬ್ಯಾಂಕ್ ಅಧಿಕಾರಿ ರಾಮಕೃಷ್ಣರೆಡ್ಡಿ ಮತ್ತಿತರರು ಉಪಸ್ಥಿತರಿದ್ದರು.