ಜನರ ದೇವರೆ ಕಾಪಾಡಬೇಕು


ಬೆಂಗಳೂರು, ಏ. ೨೧- ರಾಜ್ಯದಲ್ಲಿ ಕೊರೊನಾ ತಡೆಯಲು ಲಾಕ್‌ಡೌನ್ ಜಾರಿ ಮಾಡಬೇಕು ಎಂಬ ಚಿಂತನೆ ಇತ್ತು. ಕೊನೆಗಳಿಗೆಯಲ್ಲಿ ಪ್ರಧಾನಿ ಅವರ ಸೂಚನೆಯಂತೆ ಲಾಕ್‌ಡೌನ್ ತೀರ್ಮಾನದಿಂದ ಸರ್ಕಾರ ಹಿಂದೆ ಸರಿದಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹೇಳಿದರು.
ಸದಾಶಿವನಗರದ ತಮ್ಮ ನಿವಾಸದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೊರೊನಾ ನಿಯಂತ್ರಿಸುವಲ್ಲಿ ರಾಜ್ಯ ಹಾಗೂ ಕೇಂದ್ರ ಸರ್ಕಾರ ಸಂಪೂರ್ಣ ವಿಫಲವಾಗಿವೆ. ಈ ಸಂದರ್ಭದಲ್ಲಿ ರಾಜಕಾರಣ ಮಾಡಬಾರದು ಎಂದು ಸುಮ್ಮನಿದ್ದೇವೆ. ಜನರನ್ನು ದೇವರೆ ಕಾಪಾಡಬೇಕು ಎಂದರು.
ರಾಜ್ಯದಲ್ಲಿ ಕೊರೊನಾ ತಡೆಗೆ ಲಾಕ್‌ಡೌನ್ ಅಗತ್ಯ ಎಂಬುದನ್ನು ತಜ್ಞರ ವರದಿಯಲ್ಲಿ ಶಿಫಾರಸ್ಸು ಮಾಡಿದ್ದರು. ರಾಜ್ಯಪಾಲರ ನೇತೃತ್ವದಲ್ಲಿ ನಿನ್ನೆ ನಡೆದ ಸಭೆಯಲ್ಲೂ ಲಾಕ್‌ಡೌನ್ ಬಗ್ಗೆಯೂ ಚರ್ಚೆಗಳು ಆಗಿದ್ದವು. ಆದರೆ ಕೊನೆಗಳಿಗೆಯಲ್ಲಿ ಸರ್ಕಾರ ಲಾಕ್‌ಡೌನ್ ಜಾರಿಯಿಂದ ಹಿಂದೆ ಸರಿದಿದೆ. ಇದಕ್ಕೆ ಪ್ರಧಾನಿ ಮೋದಿ ಅವರ ಸೂಚನೆಯೇ ಕಾರಣ ಇರಬಹುದು ಎಂದರು.
ಸರ್ಕಾರ ಏನೇ ಮಾಡಲಿ ಜನ ನಿಯಮಗಳನ್ನು ಪಾಲಿಸಬೇಕು. ಪರಿಸ್ಥಿತಿ ಕೈಮೀರಿದೆ. ಸರ್ಕಾರಗಳು ಏನು ಮಾಡುತ್ತಿಲ್ಲ ಎಂದರು.
ಸರ್ಕಾರದ ವೈಫಲ್ಯದ ಬಗ್ಗೆ ನಿನ್ನೆ ರಾಜ್ಯಪಾಲರಿಗೂ ತಿಳಿಸಿದ್ದೇವೆ ಎಂದು ಅವರು ಹೇಳಿದರು.
ಕೊರೊನಾ ನಿಯಂತ್ರಣದಲ್ಲಿ ಸರ್ಕಾರ ವಿಫಲವಾಗಿರುವುದನ್ನು ಸಂಖೆಗಳೇ ಹೇಳುತ್ತಿವೆ. ದಿನದಿಂದ ದಿನಕ್ಕೆ ಕೊರೊನಾ ಹೆಚ್ಚಾಗುತ್ತಿದೆ. ಸರ್ಕಾರದ ವೈಫಲ್ಯಕ್ಕೆ ಇದಕ್ಕಿಂತ ಸಾಕ್ಷಿ ಬೇಕೆ ಎಂದರು.
ಪ್ರಧಾನಿ ಮೋದಿ ಅವರು ನಿನ್ನೆ ಪ್ರವಚನ ಮಾಡಿದ್ದಾರೆ. ಆಕ್ಸಿಜನ್, ಔಷಧಿ ಕೊರತೆ ಎಲ್ಲವನ್ನು ಸರಿ ಮಾಡುವುದಾಗಿ ಹೇಳಿದ್ದಾರೆ. ಇಷ್ಟು ದಿನ ಇವರು ಏನು ಮಾಡುತ್ತಿದ್ದರು. ದೊಡಸ್ಥಿಕೆ ತೋರಿಸಿಕೊಳ್ಳಲು ಅಂತಾರಾಷ್ಟ್ರೀಯ ಮಟ್ಟದಲ್ಲಿ ನಾಯಕರಾಗಲು ಬೇರೆ ಬೇರೆ ದೇಶಗಳಿಗೆ ಲಸಿಕೆ, ಔಷಧಿಗಳನ್ನು ರಫ್ತು ಮಾಡಿದರು. ಇದರ ಅಗತ್ಯವಿತ್ತೆ ಎಂದು ಪ್ರಶ್ನಿಸಿದ ಅವರು, ಹೊರ ದೇಶಕ್ಕೆ ಔಷಧಿ ಕಳುಹಿಸಿ ನಮ್ಮ ಜನರನ್ನು ಕಷ್ಟಕ್ಕೆ ಸಿಲುಕಿಸಿದ್ದಾರೆ. ಮೊದಲು ನಿಮಗೆ ಮತ ಹಾಕಿದವರಿಗೆ ಔಷಧಿ ಕೊಡಿ ಎಂದು ಆಗ್ರಹಿಸಿದರು
ಸರ್ಕಾರದ ಸಚಿವರುಗಳು ಎಲ್ಲಿಯೂ ಹೋಗುತ್ತಿಲ್ಲ. ಯಾವ ಆಸ್ಪತ್ರೆಗೂ ಭೇಟಿ ನೀಡುತ್ತಿಲ್ಲ. ನಿನ್ನೆ ಸಹ ರಾಜ್ಯಪಾಲರ ಸಭೆ ನಂತರ ಮುಖ್ಯಮಂತ್ರಿಯಾಗಲಿ, ಸಚಿವರಾಗಲಿ ಸುದ್ದಿಗೋಷ್ಠಿ ಮಾಡುವ ಧೈರ್ಯ ತೋರಲಿಲ್ಲ. ಮುಖ್ಯಕಾರ್ಯದರ್ಶಿ ಕೈಲಿ ಸುದ್ದಿಗೋಷ್ಠಿ ನಡೆಸಿದರು. ಅಷ್ಟರ ಮಟ್ಟಿಗೆ ಜನ ಸಚಿವರುಗಳ ವಿರುದ್ಧ ಸಿಟ್ಟಾಗಿರುವುದು ಸರ್ಕಾರಕ್ಕೆ ಮನವರಿಕೆಯಾಗಿದೆ ಎಂದರು.
ಈಗಲಾದರೂ ಸರ್ಕಾರ ಎಚ್ಚೆತ್ತು ಅಗತ್ಯ ಕ್ರಮ ಕೈಗೊಳ್ಳಲಿ. ಜನ ಪರದಾಡುತ್ತಿದ್ದಾರೆ. ಚಿಕಿತ್ಸೆಗೆ ವ್ಯವಸ್ಥೆ ಮಾಡಬೇಕು ಎಂದು ಒತ್ತಾಯಿಸಿದರು.
ಬೇರೆ ಬೇರೆ ಇಲಾಖೆಗಳಲ್ಲಿ ಅಧಿಕಾರಿಗಳಿದ್ದಾರೆ. ಅವರುಗಳನ್ನು ಕೊರೊನಾ ನಿಯಂತ್ರಣಕ್ಕೆ ಬಳಸಿಕೊಳ್ಳಬೇಕು. ಸೋಂಕಿನಿಂದ ಸತ್ತವರ ಬಗ್ಗೆಯೂ ಆಡಿಟ್ ಆಗಲಿ. ಯಾರು ಯಾವ ಕಾರಣಕ್ಕೆ ಸತ್ತಿದ್ದಾರೆ. ಚಿಕಿತ್ಸೆ ಸಿಕ್ಕಿದೆಯೇ ಇಲ್ಲವೆ ಎಲ್ಲ ಸತ್ಯವೂ ಹೊರ ಬರುತ್ತದೆ ಎಂದು ಅವರು ಹೇಳಿದರು.