ಜನರ ದುಶ್ಚಟ ಬಿಡಿಸುವಲ್ಲಿ ಶ್ರೀಗಳು ಸಫಲ: ಅಪರ ಜಿಲ್ಲಾಧಿಕಾರಿ ಡಾ.ದುರುಗೇಶ್

ಜಿಲ್ಲಾಡಳಿತದಿಂದ ಮಹಾಂತ ಶಿವಯೋಗಿಗಳ ಜನ್ಮ ದಿನಾಚರಣೆಯ ಅಂಗವಾಗಿ ವ್ಯಸನ ಮುಕ್ತ ದಿನ ಆಚರಣೆ
ರಾಯಚೂರು ಆ.02- ಇಳಕಲ್‌ನ ವಿಜಯ ಮಹಾಂತೇಶ ಪೀಠದ ಡಾ.ಮಹಾಂತ ಸ್ವಾಮೀಜಿ ಅವರು ಮಹಾಂತ ಜೋಳಿಗೆ ಎಂಬ ವಿಶಿಷ್ಟ ಪರಿಕಲ್ಪನೆ ಮೂಲಕ ದೇಶ, ವಿದೇಶಗಳಲ್ಲಿ ಜನರ ದುಶ್ಚಟ ಬಿಡಿಸುವಲ್ಲಿ ಶ್ರೀಗಳು ಸಫಲರಾಗಿದ್ದರು ಎಂದು ಅಪರ ಜಿಲ್ಲಾಧಿಕಾರಿ ಡಾ.ಕೆ.ಆರ್.ದುರುಗೇಶ್ ಅವರು ಹೇಳಿದರು.
ಅವರು ಆ.೦೧ರ ಸೋಮವಾರ ದಂದು ನಗರದ ಜಿಲ್ಲಾಧಿಕಾರಿಗಳ ಕಚೇರಿಯ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಸಾರ್ವಜನಿಕ ಶಿಕ್ಷಣ ಇಲಾಖೆ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಂಯುಕ್ತಾಶ್ರಯದಲ್ಲಿ ಶ್ರೀಮ.ನಿ.ಪ್ರ ಡಾ||ಮಹಾಂತ ಶಿವಯೋಗಿಗಳ ಜನ್ಮ ದಿನಾಚರಣೆಯ ಅಂಗವಾಗಿ “ವ್ಯಸನ ಮುಕ್ತ” ದಿನಾಚರಣೆಯನ್ನು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ, ಮಾತನಾಡಿದರು.
ತಮ್ಮ ಜೋಳಿಗೆಯನ್ನು ಹಿಡಿದು ಶ್ರೀಗಳು ಗ್ರಾಮ, ನಗರ ಸೇರಿದಂತೆ ರಾಜ್ಯಾದ್ಯಂತ ಸಂಚಾರ ನಡೆಸಿ, ಸಾವಿರಾರು ಜನ ತಮ್ಮ ದುಶ್ಚಟಗಳನ್ನು ಜೋಳಿಗೆಗೆ ಹಾಕಿ ಮುಕ್ತಿ ಪಡೆದಿದ್ದರು. ಶ್ರೀಗಳು ಶ್ರಮದಿಂದ ಸಾವಿರಾರು ಜನ ಮದ್ಯಪಾನ ತ್ಯಜಿಸಿದ್ದರು, ಶ್ರೀಗಳು ಸಮಾಜ ಸೇವೆ ಕಂಡ ರಾಜ್ಯ ಸರಕಾರ ಅವರ ಜನ್ಮದಿನವಾದ ಆ.೧ರಂದು ವ್ಯಸನಮುಕ್ತ ದಿನವಾಗಿ ಘೋಷಿಸಲಾಗಿದೆ ಎಂದರು.
ಇತ್ತೀಚಿನ ದಿನಗಳಲ್ಲಿ ಯುವಕರು ವ್ಯಸನಕ್ಕೊಳಗಾಗಿ ತಮ್ಮ ಜೀವನವನ್ನು ಹಾಳು ಮಾಡಿಕೊಳ್ಳುತ್ತಿದ್ದು, ಮಾದಕ ವಸ್ತುಗಳು ಮಾತ್ರ ಬಳಸುವುದು ವ್ಯಸನವಲ್ಲ. ಆಧುನಿಕ ಯುಗದಲ್ಲಿ ಚಿಕ್ಕಮಕ್ಕಳು ತಿನ್ನುವ ಆಹಾರವು ವ್ಯಸನವಾಗಿಬಿಟ್ಟಿದ್ದು, ರಾಸಾಯಿನಿಕ ವಸ್ತುಗಳನ್ನು ಬಳಸಿ ತಯಾರಿಸಲಾದ ಆಹಾರವನ್ನು ಮಕ್ಕಳು ಹೆಚ್ಚಾಗಿ ತಿನ್ನುವ ಮೂಲಕ ಆರೋಗ್ಯವನ್ನು ಹಾಳು ಮಾಡಿಕೊಳ್ಳುತ್ತಿದ್ದಾರೆ ಎಂದರು.
ಜಿಲ್ಲೆಯಲ್ಲಿ ಸೇಂದಿ ಹಾಗೂ ಸಿ.ಎಚ್ ಪೌಡರ್ ಹಾವಳಿ ಹೆಚ್ಚಾಗಿದ್ದು, ಇದನ್ನು ತಡೆಗಟ್ಟಲು ಸಮಾಜದ ಪಾತ್ರವೂ ಮುಖ್ಯವಾಗುತ್ತದೆ. ಇಂತಹ ವ್ಯಸನಕ್ಕೊಳಪಡಿಸುವ ಮಾದಕ ವಸ್ತುಗಳು ಸುತ್ತ ಮುತ್ತ ಕಂಡುಬಂದಲ್ಲಿ ಸಂಬಂಧಪಟ್ಟ ಇಲಾಖೆಗೆ ಮಾಹಿತಿ ನೀಡಬೇಕು ಆಗ ಮಾತ್ರ ವ್ಯಸನಮುಕ್ತ ದಿನಾಚರಣೆ ಯಶಸ್ವಿಯಾಗುತ್ತದೆ ಎಂದು ತಿಳಿಸಿದರು.
ಈ ವೇಳೆ ಮಾನಸಿಕ ರೋಗ ತಜ್ಞರಾದ ಡಾ.ಅನಿಲ್ ಗುಮಾಸ್ತೆ ಮಾತನಾಡಿ, ದಿನನಿತ್ಯ ಬಳಸುವ ಆಹಾರ ಪದಾರ್ಥಗಳು, ವಸ್ತುಗಳನ್ನು ಹೆಚ್ಚಾಗಿ ಬಳಸಿದರೆ ಸಾಕು ಎನಿಸುತ್ತದೆ ಆದರೆ ಮಾದಕ ವಸ್ತುಗಳನ್ನು ಬಳಿಸಿದರೆ ಇನ್ನೂ ಹೆಚ್ಚು ಬಳಸಬೇಕೆಂದು ಅನಿಸುತ್ತದೆ ಆದ್ದರಿಂದ ಪ್ರತಿ ನಿತ್ಯ ಮಾದಕ ವಸ್ತುಗಳನ್ನು ಬಿಡುವ ದೃಢ ನಿರ್ಧಾರ ಮಾಡಿಕೊಂಡು ವಸ್ಯನದಿಂದ ಮುಕ್ತವಾಗಲು ಬದ್ಧರಾಗಬೇಕು. ಹಿಂದೆ ಆಲ್ಕೋಹಾಲ್ ಶರೀರಕ್ಕೆ ಅವಶ್ಯಕ ಎಂದು ಹೇಳಲಾಗುತ್ತಿತ್ತು ಆದರೆ ಇತ್ತೀಚೆಗೆ ಕಡಿಮೆ ಪ್ರಮಾಣಲ್ಲೂ ಆಲ್ಕೋಹಾಲ್ ಸೇವೆನೆ ಮಾಡುವುದರಿಂದ ವ್ಯಕ್ತಿಯ ಶರೀರದ ಮೇಲೆ ದುಷ್ಪರಿಣಾಮ ಬೀರುತ್ತದೆ ಆದ್ದರಿಂದ ಮಾದಕ ವಸ್ತಗಳಿಂದ ದೂರವಿರಬೇಕು ಎಂದರು.
ಅಬಕಾರಿ ಇಲಾಖೆಯ ಅಧಿಕಾರಿ ಹನುಮಂತ ಗುತ್ತೇದಾರ್ ಮಾತನಾಡಿ, ಮಾದಕ ವಸ್ತುಗಳನ್ನು ಬಳಸಿದ ವ್ಯಕ್ತಿಯನ್ನು ವಾಸನೆ, ದೇಹದ ಸ್ಥಿತಿ, ಮಾತನಾಡುವ ಶೈಲಿಯಿಂದ ಕಂಡುಹಿಡಿಯಬಹುದು ಆದರೆ ಇತ್ತಿಚಿನ ದಿನಗಳಲ್ಲಿ ನಿದ್ರೆ ಮಾತ್ರೆಯನ್ನು ಬಳಸುವುದರ ಮೂಲಕ ನಶೆಯನ್ನು ಯುವಕರು ಪಡೆದುಕೊಳ್ಳುತ್ತಿದ್ದು, ನಿದ್ರೆ ಮಾತ್ರೆಯನ್ನು ತೆಗೆದುಕೊಂಡ ವ್ಯಕ್ತಿಯಿಂದ ಯಾವುದೇ ನಶೆಯ ಲಕ್ಷಣಗಳು ಕಂಡು ಬರುವುದಿಲ್ಲ. ಆದ್ದರಿಂದ ಕುಟುಂಬದಲ್ಲಿ ಈ ರೀತಿಯ ಘಟನೆಗಳು ಸಂಭವಿಸಿದರೆ ಕೂಡಲೇ ಸಂಬಂಧಪಟ್ಟ ಇಲಾಖೆಗೆ ಹಾಗೂ ವೈದ್ಯರನ್ನು ಸಂಪರ್ಕಿಸಬಹುದು ಎಂದು ಹೇಳಿದರು.
ಈ ಸಂದರ್ಭದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅಧಿಕಾರಿ ಡಾ.ಸುರೇಂದ್ರ ಬಾಬು, ಜಿಲ್ಲಾ ಹಿಂದುಳಿಗ ವರ್ಗಗಳ ಕಲ್ಯಾಣ ಇಲಾಖೆಯ ಅಧಿಕಾರಿ ಬಿಲಾಲ್ ಅಮಹದ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ಮಂಗಳ ನಾಯಕ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಪ್ರಥಮ ದರ್ಜೆ ಸಹಾಯಕ ಲಿಂಗರಾಜ್, ಸಿನಿ ಚಾಲಕ ಎ.ಪ್ರಕಾಶ್, ಬೆರಳಚ್ಚುಗಾರ ರಮೇಶ ಗೌಡೂರು ಜಾಲಹಳ್ಳಿ, ಟ್ರೈನಿ ಚನ್ನಬಸವ ಸೇರಿದಂತೆ ವಿವಿಧ ಸರ್ಕಾರಿ ಪ್ರೌಢ ಶಾಲೆಗಳ ಮುಖ್ಯೋಪದ್ಯಾಯರು ಹಾಗೂ ವಿವಿಧ ಇಲಾಖೆಯ ಅಧಿಕಾರಿಗಳು ಇದ್ದರು. ಕಾರ್ಯಕ್ರಮ ನಿರೂಪಣೆಯನ್ನು ಮುರಳೀಧರ್ ಕುಲಕರಣಿ ಅವರು ನೆರವೆರಿಸಿದರು.