ಜನರ ದಿಕ್ಕು ತಪ್ಪಿಸಲು ಸೋನಿಯಾಗಾಂಧಿಗೆ ಇಡಿ ಕಿರುಕುಳ

ತುಮಕೂರು, ಜು. ೨೯- ಬೆಲೆ ಹೆಚ್ಚಳ, ನಿರುದ್ಯೋಗ ಸಮಸ್ಯೆ,ಆರ್ಥಿಕ ಕುಸಿತದಂತಹ ವಿಷಯಗಳಿಂದ ಜನರ ಮನಸ್ಸನ್ನು ಬೇರೆಡೆಗೆ ಸೆಳೆಯುವ ಉದ್ದೇಶದಿಂದ ಕೇಂದ್ರ ಸರ್ಕಾರ ಇಡಿ ಮೂಲಕ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಗಾಂಧಿ ಅವರಿಗೆ ಕಿರುಕುಳ ನೀಡುತ್ತಿದೆ ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಆರ್.ರಾಮಕೃಷ್ಣ ಆರೋಪಿಸಿದರು.
ನಗರದ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಎಐಸಿಸಿ ಮತ್ತು ಕೆಪಿಸಿಸಿ ಕರೆಯ ಮೇರೆಗೆ, ಕಾಂಗ್ರೆಸ್ ಪಕ್ಷದ ಅಧ್ಯಕ್ಷೆ ಸೋನಿಯ ಗಾಂಧಿ ಅವರಿಗೆ ವಿಚಾರಣೆಗಾಗಿ ನೋಟಿಷ್ ನೀಡಿರುವುದನ್ನು ಖಂಡಿಸಿ ಹಮ್ಮಿಕೊಂಡಿದ್ದ ಮೌನ ಪ್ರತಿಭಟನೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ದೇಶದಲ್ಲಿ ಬಡತನ, ನಿರುದ್ಯೋಗ, ಹಸಿವು ತಾಂಡವವಾಡುತ್ತಿದೆ. ಅಪೌಷ್ಟಿಕತೆಯಿಂದ ಹಿಂದೆಂದಿಗಿಂತಲೂ ಹೆಚ್ಚು ಜನರು ಬಳಲುತಿದ್ದಾರೆ. ತನ್ನ ವೈಫಲ್ಯತೆಯನ್ನು ಮುಚ್ಚಿಕೊಳ್ಳಲು ಈಗಾಗಲೇ ಮುಚ್ಚಿ ಹೋಗಿರುವ ಕೇಸನ್ನು ರೀ ಓಪನ್ ಮಾಡಿ, ಅನಗತ್ಯ ತೊಂದರೆ ನೀಡುತ್ತಿದೆ ಎಂದರು.
ಇಂಧನ ಬೆಲೆ ಹೆಚ್ಚಳದಿಂದ ಜನಸಾಮಾನ್ಯರು, ಅದರಲ್ಲಿಯೂ ಮಧ್ಯಮ ವರ್ಗದ ಜನರು ತೀವ್ರ ಸಂಕಷ್ಟ ಅನುಭವಿಸುತ್ತಿದ್ದಾರೆ. ಪೆಟ್ರೋಲ್ ಮತ್ತು ಡಿಸೇಲ್ ಬೆಲೆ ಹೆಚ್ಚಳದ ಫಲವಾಗಿ ಅಡುಗೆ ಎಣ್ಣೆ, ಅಡುಗೆ ಅನಿಲ, ಅಕ್ಕಿ ಸೇರಿದಂತೆ ಆಹಾರ ಪದಾರ್ಥಗಳ ಬೆಲೆ ಹೆಚ್ಚಳವಾಗಿದ್ದು, ಬಡವರು, ಕೂಲಿ ಕಾರ್ಮಿಕರು ಬದುಕುವುದೇ ಕಷ್ಟವಾಗಿದೆ. ಇಂತಹ ಸಂದರ್ಭದಲ್ಲಿ ಜನಸಾಮಾನ್ಯರ ನೆರವಿಗೆ ಬರಬೇಕಾದ ಸರ್ಕಾರ ಆಹಾರ ಪದಾರ್ಥಗಳ ಮೇಲು ಜಿ.ಎಸ್.ಟಿ ವಿಧಿಸಿ, ಗಾಯದ ಮೇಲೆ ಬರೆ ಎಳೆದಿದೆ. ಈ ವಿಚಾರಗಳಲ್ಲಿ ಎಲ್ಲಿ ವಿರೋಧ ಪಕ್ಷಗಳು, ಜನರು ಸರ್ಕಾರದ ವಿರುದ್ದ ತಿರುಗಿ ಬೀಳುತ್ತಾರೋ ಎಂಬ ಹೆದರಿಕೆಯಿಂದ ಕಾಂಗ್ರೆಸ್ ಮುಖಂಡರ ವಿರುದ್ದ ಇಡಿ, ಐಟಿ, ಸಿಬಿಐ ಸಂಸ್ಥೆಗಳನ್ನು ಅಸ್ತ್ರವಾಗಿ ಬಳಕೆ ಮಾಡುತ್ತಿದೆ. ಇದರ ವಿರುದ್ದ ಇಡೀ ದೇಶದಲ್ಲಿ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಮೌನ ಪ್ರತಿಭಟನೆ ನಡೆಸುತಿದ್ದಾರೆ ಎಂದರು.
ಮಾಜಿ ಶಾಸಕ ಡಾ.ಎಸ್.ರಫೀಕ್ ಅಹಮದ್ ಮಾತನಾಡಿ, ನ್ಯಾಷನಲ್ ಹೆರಾಲ್ಡ್ ಪ್ರಕರಣಕ್ಕೆ ಈಗಾಗಲೇ ಐಟಿ ಟ್ರುಬ್ಯನಲ್, ಚುನಾವಣಾ ಆಯೋಗದಲ್ಲಿ ಸಂಪೂರ್ಣವಾಗಿ ತೆರೆಬಿದ್ದಿದೆ. ಸ್ವತಃ ಮಾಜಿ ಹಣಕಾಸು ಮಂತ್ರಿ ಅರುಣ್‌ಜಟ್ಲಿ ಅವರು ಸಂಸತ್ ಅಧಿವೇಶನದಲ್ಲಿಯೇ ಯಾವುದೇ ಅವ್ಯವಹಾರ ನಡೆದಿಲ್ಲ ಎಂದು ಹೇಳಿಕೆ ನೀಡಿದ್ದರು ಸಹ, ಕಾಂಗ್ರೆಸ್ ನೇತೃತ್ವ ವಹಿಸಿರುವ ರಾಹುಲ್‌ಗಾಂಧಿ, ಸೋನಿಯಾಗಾಂಧಿ ಅವರಿಗೆ ಕಿರುಕುಳ ನೀಡಲಾಗಿದೆ. ೧೫ ದಿನಗಳ ಹಿಂದೆಯೇ ಸುಮಾರು ೫೦ ಗಂಟೆ ವಿಚಾರಣೆ ನಡೆಸಿದ್ದು, ಅದರ ವರದಿ ಹೊರಬಂದಿಲ್ಲ. ಕಳೆದ ಎರಡು ದಿನಗಳಿಂದ ಸೋನಿಯಗಾಂಧಿ ಅವರನ್ನು ಹಲವು ಗಂಟೆಗಳ ಕಾಲ ವಿಚಾರಣೆ ನಡೆಸಿದ್ದು, ಯಾವುದೇ ಮಾಹಿತಿ ಇಲ್ಲ. ಪ್ರಜಾಸತ್ತಾತ್ಮಕ ವಿಚಾರಣೆಗೆ ನಮ್ಮ ವಿರೋಧವಿಲ್ಲ. ಅನಗತ್ಯ ಕಿರುಕುಳ ನೀಡುತ್ತಿರುವುದಕ್ಕೆ ನಮ್ಮ ವಿರೋಧವಿದೆ ಎಂದರು.
ಪ್ರತಿಭಟನೆಯಲ್ಲಿ ಕಾಂಗ್ರೆಸ್ ಮುಖಂಡರಾದ ಹೆಚ್.ಸಿ.ಹನುಮಂತಯ್ಯ, ಶಿವಾಜಿ, ಶ್ರೀನಿವಾಸಕುಮಾರ್, ಸಿಮೆಂಟ್ ಮಂಜುನಾಥ್, ಆಟೋ ರಾಜು, ನಟರಾಜಶೆಟ್ಟಿ, ಸುವರ್ಣಾದೇವಿ, ಸುಜಾತ, ಕೃಷ್ಣಪ್ಪ, ಡಾ.ಇಂತಿಯಾಜ್ ಅಹಮದ್, ಸಂಜೀವಕುಮಾರ್, ಮರಿಚನ್ನಮ್ಮ, ಹಿದಾಯತ್, ಕೆಂಪಣ್ಣ, ಕುಮಾರಸ್ವಾಮಿ ಮತ್ತಿರರು ಪಾಲ್ಗೊಂಡಿದ್ದರು.