ಜನರ ದಿಕ್ಕು ತಪ್ಪಿಸಲು ಪಾಟೀಲ ಪಾದಯಾತ್ರೆ: ಹರ್ಷಾನಂದ

ಆಳಂದ:ಫೆ.24: ಚುನಾವಣೆ ಸಮಯದಲ್ಲಿ ಜನರ ದಿಕ್ಕು ತಪ್ಪಿಸಲು ಮಾಜಿ ಶಾಸಕ ಬಿ.ಆರ್ ಪಾಟೀಲ ಪಾದಯಾತ್ರೆ ಶುರು ಮಾಡಿದ್ದಾರೆಂದು ಜಿ.ಪಂ ಮಾಜಿ ಉಪಾಧ್ಯಕ್ಷ ಹರ್ಷಾನಂದ ಗುತ್ತೇದಾರ ಆರೋಪಿಸಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ತಡಕಲ ಗ್ರಾ.ಪಂ ವ್ಯಾಪ್ತಿಯಲ್ಲಿ ರೈತರು ತಮ್ಮ ಸ್ವಂತ ಹಣದಿಂದ ತಮ್ಮ ಹೊಲಗಳಿಗೆ ಹೋಗಲು ಜೆಸಿಬಿ ಹಚ್ಚಿ ಕೆಲಸ ಮಾಡಿಕೊಳ್ಳುತ್ತಿದ್ದಾರೆ. ಇಲ್ಲಿಯವರೆಗೆ ಗ್ರಾ.ಪಂ ವತಿಯಿಂದ ಜೆಸಿಬಿ ಹಚ್ಚಿರುವುದರ ಕುರಿತು ಹಣವೂ ಪಾವತಿಯಾಗಿರುವುದಿಲ್ಲ ಚುನಾವಣೆ ಹತ್ತಿರ ಬಂದಾಗೊಮ್ಮೆ ಈ ರೀತಿ ಆರೋಪಗಳನ್ನು ಮಾಡುವುದು ನಮ್ಮಗೆ ಗೂಬೆ ಕೂರಿಸುವ ಅವರ ಕೆಲಸವಾಗಿದೆ ಎಂದು ಪ್ರತಿಕ್ರಿಯೆ ನೀಡಿದ್ದಾರೆ.
ಆಳಂದ ತಾಲೂಕಿನಲ್ಲಿ ಯಂತ್ರಗಳನ್ನು ಬಳಸಿ ನರೇಗಾ ಯೋಜನೆಯಲ್ಲಿ ಕಾಮಗಾರಿ ಮಾಡಿಸಿರುವುದು ಅವರದೇ ಸ್ವಂತ ಗ್ರಾಮ ಸರಸಂಬಾ ಪಂಚಾಯತಿಯಿಂದಲೇ ಆರಂಭ ಮಾಡಿರುವುದು ತಾಲೂಕಿನ ಜನತೆಗೆ ಗೊತ್ತಿರುವ ವಿಚಾರವೇ ಅಲ್ಲದೇ ಒಂದೇ ದಿನದಲ್ಲಿ ಕೋಟ್ಯಾಂತರ ರೂ, ಹಣ ಡ್ರಾ ಮಾಡಿ ಅದು ಲೋಕಾಯುಕ್ತ ತನಿಖೆಗೂ ಹೋಗಿದ್ದು ಇದೆ. ತಡಕಲ ಗ್ರಾ.ಪಂ ವ್ಯಾಪ್ತಿಯಲ್ಲಿ ಯಾವ ಕಾಮಗಾರಿಯೂ ನಿಯಮ ಮೀರಿ ನಡೆದಿಲ್ಲ ಕೇವಲ ಚುನಾವಣೆ ದೃಷ್ಟಿಯಿಂದ ನಮ್ಮ ಮೇಲೆ ಆರೋಪ ಮಾಡುತ್ತಿದ್ದಾರೆ. ಅಲ್ಲದೇ ಈಗಲೂ ಪಾಟೀಲ ಸ್ವಗ್ರಾಮ ಸರಸಂಬಾ ಪಚಾಯತಿ ವ್ಯಾಪ್ತಿಯಲ್ಲಿ ಯಂತ್ರಗಳನ್ನು ಬಳಸಿಯೇ ಕಾಮಗಾರಿ ನಿರ್ವಹಿಸಲಾಗುತ್ತಿದೆ ಎಂದು ತಿಳಿಸಿದ್ದಾರೆ.