ಜನರ ದಾಹ ನೀಗಿಸುತ್ತಿರುವ ಅರವಟ್ಟಿಗೆ

ಕಲಬುರಗಿ,ಏ.2-ನಗರದ ಕೆಲ ಪ್ರಮುಖ ಸ್ಥಳಗಳು ಮತ್ತು ರಸ್ತೆಗಳ ಬದಿ ಕೂರಿಸಿರುವ ಅರವಟ್ಟಿಗೆಕೆಗಳು ಜನರ ಕುಡಿಯುವ ನೀರಿನ ದಾಹವನ್ನು ನೀಗಿಸುತ್ತಲಿವೆ.
ನಗರದ ಕೇಂದ್ರ ಬಸ್ ನಿಲ್ದಾಣದಿಂದ ಶರಣಬಸವೇಶ್ವರ ದೇವಸ್ಥಾನಕ್ಕೆ ಹೋಗುವ ರಸ್ತೆಯಲ್ಲಿ ಕೂರಿಸಿರುವ ಅರವಟ್ಟಿಗೆಗಳು ಈ ಮಾರ್ಗವಾಗಿ ಸಂಚರಿಸುವ ಜನರು, ವಿದ್ಯಾರ್ಥಿಗಳಿಗೆ ಮತ್ತು ಶರಣಬಸವೇಶ್ವರ ದೇವಸ್ಥಾನಕ್ಕೆ ಹೋಗುವ ಭಕ್ತಾಧಿಗಳಿಗೆ ಅನುಕೂಲ ಒದಗಿಸಿವೆ. ಬಿರು ಬಿಸಿಲಿನಿಂದ ಕಂಗೆಟ್ಟ ಜನ ತಂಪಾದ ನೀರು ಕುಡಿದು ದಾಹ ತಣಿಸಿಕೊಳ್ಳುತ್ತಿದ್ದಾರೆ. ಇದೇ ರೀತಿ ನಗರದ ವಿವಿಧ ಸ್ಥಳ ಮತ್ತು ಪ್ರಮುಖ ರಸ್ತೆಗಳಲ್ಲಿ ಅರವಟ್ಟಿಗೆÉಗಳನ್ನು ಕೂರಿಸುವುದರ ಮೂಲಕ ಕೆಲವರು ಪರೋಪಕಾರದ ಕೆಲಸ ಮಾಡುತ್ತಿರುವುದು ಶ್ಲಾಘನೀಯ ಕಾರ್ಯವಾಗಿದೆ. ಬೇಸಿಗೆಯಲ್ಲಿ ಕುಡಿಯವ ನೀರು ಒದಗಿಸುವುದು ಒಂದು ಪುಣ್ಯದ ಕೆಲಸ ಎಂದರಿತೇ ಹಲವಾರು ಜನ ಸ್ವಯಂ ಪ್ರೇರಿತವಾಗಿ ಯಾವುದೇ ನಿರೀಕ್ಷೆಯಿಲ್ಲದೇ ಅರವಟ್ಟಿಗೆಗಳನ್ನು ಕೂರಿಸಿ ಜನರ ಕುಡಿಯುವ ನೀರಿನ ದಾಹ ನೀಗಿಸುತ್ತಿರುವುದಕ್ಕೆ ಜನರಿಂದ ಮೆಚ್ಚುಗೆ ವ್ಯಕ್ತವಾಗಿದೆ. ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಕೆಲವರು ಪಕ್ಷಿಗಳಿಗೆ ಪರಿಸರ ಸ್ನೇಹಿ ಮಣ್ಣಿನ ತಟ್ಟೆಗಳಲ್ಲಿ ನೀರು ಹಾಕಿ ಇಡುವುದರ ಮೂಲಕ ಪಕ್ಷಿಗಳ ನೀರಿನ ದಾಹ ನೀಗಿಸುವ ಕೆಲಸ ಮಾಡುತ್ತಿದ್ದಾರೆ. ಕೆಲವು ಕಡೆ ಪ್ರಾಣಿಗಳಿಗೂ ಕುಡಿಯುವ ನೀರು ಒದಿಸುವ ಕೆಲಸವನ್ನು ಕೆಲವರು ಮಾಡುತ್ತಿರುವುದು ವರದಿಯಾಗಿದೆ. ಬೇಸಿಗೆ ಕಾಲದಲ್ಲಿ ಮನುಷ್ಯ ಮಾತ್ರವಲ್ಲದೆ ಪಶು, ಪಕ್ಷಿ, ಪ್ರಾಣಿಗಳಿಗೆ ನೀರು, ಆಹಾರ ಒದಗಿಸುವುದರ ಮೂಲಕ ಕೆಲವರು ಮಾನವೀಯತೆ ಮೆರೆಯುತ್ತಿದ್ದಾರೆ.ಈ ಬಾರಿ ಮಳೆ ಕೊರತೆ ಮತ್ತು ಬಿಸಿಲು ಹೆಚ್ಚಾಗಿರುವುದರಿಂದ ಅನೇಕ ಕಡೆ ಜಲ ಮೂಲಗಳಾದ ನದಿ, ಹಳ್ಳ, ಕೆರೆ, ಭಾವಿಗಳು ಬತ್ತಿ ಹೋಗಿವೆ. ಇದರಿಂದ ಜನ-ಜಾನುವಾರು ಕುಡಿಯುವ ನೀರಿಗೆ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ಜನರ ಕುಡಿಯುವ ನೀರಿನ ಸಮಸ್ಯೆ ನಿವಾರಣೆಗೆ ಜಿಲ್ಲಾಡಳಿತ ಅಗತ್ಯ ಕ್ರಮಗಳನ್ನು ಕೈಗೊಂಡಿದೆ. ಪಶು, ಪಕ್ಷಿ, ಜಾನುವಾರುಗಳಿಗೆ ನೀರು ಒದಗಿಸಿ ಅವುಗಳ ಜೀವ ರಕ್ಷಣೆ ಮಾಡಬೇಕಾದ ಜವಾಬ್ದಾರಿ ಎಲ್ಲರ ಮೇಲಿದೆ.