ಜನರ ಜೀವನವನ್ನು ಬೆಲೆಯೇರಿಕೆ ನರಕಕ್ಕೆ ತಳ್ಳಿದೆ: ನವೀನ್ ಕುಮಾರ್

ಮೈಸೂರು, ಜೂ.11: ಯೂತ್ ಕಾಂಗ್ರೆಸ್ ವತಿಯಿಂದ ವಿದ್ಯಾರಣ್ಯಪುರಂನ ಮಾನಂದವಾಡಿ ರಸ್ತೆಯಲ್ಲಿರುವ ಪೆಟ್ರೋಲ್ ಬಂಕ್ ಮುಂಭಾಗ ಪೆಟ್ರೋಲ್ ಮತ್ತು ಡೀಸೆಲ್ ಹಾಗೂ ವಿದ್ಯುತ್ ದರ ಹಾಗೂ ದಿನನಿತ್ಯ ವಸ್ತುಗಳ ಬೆಲೆ ಏರಿಕೆ ವಿರೋಧಿಸಿ ಪ್ರತಿಭಟನೆ ನಡೆಯಿತು.
ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ಕಾಂಗ್ರೆಸ್ ಯುವ ಮುಖಂಡರಾದ ಎನ್ ಎಂ ನವೀನ್ ಕುಮಾರ್ ಜನರನ್ನು ಬದುಕಲು ಬಿಡಿ. ರಾಜ್ಯದಲ್ಲಿ ಈಗಾಗಲೇ ಕೊರೋನಾ ಲಾಕ್ ಡೌನ್ ನಿಂದಾಗಿ ಜನರು ಸರಿಯಾದ ಕೆಲಸ ಮತ್ತು ವ್ಯಾಪಾರವಿಲ್ಲದೆ ಸಂಕಷ್ಟಕ್ಕೆ ಸಿಲುಕಿದ್ದು, ಸರ್ಕಾರ ತೈಲ, ಅಡುಗೆ ಅನಿಲ ಮತ್ತು ದಿನಬಳಕೆ ವಸ್ತುಗಳ ಬೆಲೆ ಏರಿಸಿದ್ದು ಸಾಲದೆ ಮತ್ತೆ ಈಗ ವಿದ್ಯುತ್ ದರ ಯೂನಿಟ್ ಗೆ 30 ಪೈಸೆ ಹೆಚ್ಚಿಸಿರುವುದು ಸರಿಯಲ್ಲ. ಜನರ ಜೀವನವನ್ನು ಬೆಲೆಯೇರಿಕೆ ನರಕಕ್ಕೆ ತಳ್ಳಿದೆ. ವರ್ಷಗಳು ಕಳೆದರೂ ಒಮ್ಮೆಯೂ ಯಾವ ವಸ್ತುವಿನ ಬೆಲೆಯನ್ನೂ ಕೂಡ ಇಳಿಕೆ ಮಾಡದ ಸರ್ಕಾರ ಪದೇ ಪದೇ ಬೆಲೆ ಏರಿಸುತ್ತಿರುವುದು ನೋಡಿದರೆ ಇದು ಜನಪರವಲ್ಲದ ಸರ್ಕಾರ ಎನ್ನುವುದು ಗೊತ್ತಾಗುತ್ತದೆ. ಬಡ ಜನರ ಪರಿಸ್ಥಿತಿಯಂತೂ ನೀರಿನ ಮೇಲಿನ ಗುಳ್ಳೆಯಂತೆ ಆಗಿದ್ದು, ಒಪ್ಪತ್ತಿನ ಊಟಕ್ಕೂ ಪರದಾಡುವಂತಾಗಿದೆ. ಅಧಿಕಾರದಲ್ಲಿರುವ ಸರ್ಕಾರ ಅಚ್ಛೇ ದಿನ್ ಬರುತ್ತದೆ ಎಂದು ಜನರ ಮುಂದೆ ಸುಳ್ಳು ಆಶ್ವಾಸನೆ ಕೊಟ್ಟು ನಿರಂತರವಾಗಿ ಕೆಟ್ಟದಿನಗಳು ಬರುವಂತೆ ಮಾಡಿದೆ ಎಂದು ಆರೋಪಿಸಿದರು.
ಸರ್ಕಾರ ನಿದ್ದೆಯಿಂದ ಎಚ್ಚೆತ್ತು ಈಗಲಾದರೂ ಜನರ ಸಂಕಷ್ಟ ಅರಿತು ಬೆಲೆ ಇಳಿಕೆ ಯತ್ತ ಗಮನ ಹರಿಸಬೇಕಾಗಿದೆ. ಇಲ್ಲದಿದ್ದರೆ ದೇಶದಲ್ಲಿ ಕೊರೋನಾ ಗಿಂತ ಹೆಚ್ಚು ಹಸಿವು ಬಡತನದ ಸಾವುಗಳು ಕಂಡು ಬರಲಿದೆ ಎಂದು ಹೇಳಿದರು
ಪ್ರತಿಭಟನೆಯಲ್ಲಿ ಕಾಂಗ್ರೆಸ್ ಮುಖಂಡರಾದ ಯೂತ್ ಕಾಂಗ್ರೆಸ್ ಅಧ್ಯಕ್ಷ ರಾದ ಎಂ ಹ್ಯಾರಿಸ್, ನೌಫಿಲ್, ಇನಾಯತ್, ಭರತ್ ಮನೋಜ್ ,ಶಶಾಂಕ್’ ಇಕ್ರಂ, ಚಂದ್ರು, ವಿಷ್ಣು ,ರಿಜ್ವಾನ್, ಪೈಲ್ವಾನ್ ಸುನೀಲ್ ಹರ್ಷ ಇನ್ನಿತರರು ಭಾಗಿಯಾಗಿದ್ದರು.