ಜನರ ಜೀವದ ಜೊತೆ ಚೆಲ್ಲಾಟ ಎಚ್‌ಡಿಕೆ ಕಿಡಿ

ಬೆಂಗಳೂರು, ಮೇ ೩- ರಾಜ್ಯ ಸರ್ಕಾರ ಜನರ ಜೀವದ ಜತೆ ಚೆಲ್ಲಾಟವಾಡುತ್ತಿದೆ. ಸಚಿವರುಗಳ್ಯಾರೂ ತಮ್ಮ ಜವಾಬ್ದಾರಿ ನಿರ್ವಹಿಸುತ್ತಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಹರಿಹಾಯ್ದಿದ್ದಾರೆ.
ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಖ್ಯಮಂತ್ರಿ ಯಡಿಯೂರಪ್ಪ ಅವರು ಸಭೆಗಳ ಮೇಲೆ ಸಭೆ ನಡೆಸಿ ಸೌಲಭ್ಯ ಒದಗಿಸುವುದಾಗಿ ಹೇಳುತ್ತಾರೆ. ಸೌಲಭ್ಯ ಒದಗಿಸಿದ್ದರೆ ಚಾಮರಾಜನಗರ ಜಿಲ್ಲಾ ಆಸ್ಪತ್ರೆಯಲ್ಲಿ ದುರಂತ ಆಗುತ್ತಿರಲಿಲ್ಲ. ಸಚಿವರುಗಳ್ಯಾರೂ ಜವಾಬ್ದಾರಿ ನಿಭಾಯಿಸುತ್ತಿಲ್ಲ ಎಂದು ಟೀಕಿಸಿದರು.
ಸರ್ಕಾರ ಹಾಗೂ ಸಚಿವರುಗಳು ಉದಾಸೀನ ಮನೋಭಾ ತಾಳಿದ್ದಾರೆ. ಸರ್ಕಾರದಲ್ಲಿ ಹಣದ ಕೊರತೆಯಿಲ್ಲ. ಆದರೆ ಕೆಲಸ ಆಗುತ್ತಿಲ್ಲ ಎಂದರು.
ಸರ್ಕಾರದಲ್ಲಿರುವವರ ಉದಾಸೀನತೆಯಿಂದ ಚಾಮರಾಜನಗರದಲ್ಲಿ ದುರಂತ ಸಂಭವಿಸಿದೆ. ಸರ್ಕಾರ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿಲ್ಲ ಎಂದು ಅವರು ಟೀಕಿಸಿದರು.
ಚಾಮರಾಜನಗರದ ಜಿಲ್ಲಾಸ್ಪತ್ರೆಯಲ್ಲಿ ಆಕ್ಸಿಜನ್ ಕೊರತೆಯಿಂದ ೨೨ ಜನ ಮೃತಪಟ್ಟಿರುವ ಘಟನೆಗೆ ಸರ್ಕಾರವೇ ಹೊಣೆ ಎಂದು ಅವರು ಹೇಳಿದರು.
ಇವರ ಕೈಯಲ್ಲಿ ಆಡಳಿತ ನಡೆಸಲು ಸಾಧ್ಯವಾದರೆ ನಡೆಸಲಿ, ಇಲ್ಲದಿದ್ದರೆ ಅಧಿಕಾರದಿಂದ ಕೆಳಗಿಳಿಯಲಿ ಎಂದು ಹೇಳಿದ ಅವರು, ರಾಜ್ಯ ಸರ್ಕಾರ ಏನಾಗಿದೆ ಎಂಬುದೇ ಗೊತ್ತಾಗುತ್ತಿಲ್ಲ. ಯಾರೂ ಜವಾಬ್ದಾರಿಯಿಂದ ಕೆಲಸ ಮಾಡುತ್ತಿಲ್ಲ ಎಂದು ವಾಗ್ದಾಳಿ ನಡೆಸಿದರು.