ಜನರ ಜತೆ ಸರ್ಕಾರದ ಚೆಲ್ಲಾಟ: ಡಿಕೆಶಿ ಆಕ್ರೋಶ

ಬೆಂಗಳೂರು,ಏ.೧೮- ರಾಜ್ಯದಲ್ಲಿ ಕೊರೊನಾ ಪರಿಸ್ಥಿತಿ ಕೈ ಮೀರಿದೆ. ಸರ್ಕಾರ ಜನರ ಜೀವನದ ಜತೆ ಚೆಲ್ಲಾಟವಾಡುತ್ತಿದೆ ಎಂದು ದೂರಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಜನ ಇದ್ದರೆ ಜೀವನ, ಅವರಿದ್ದರೆ ರಾಜ್ಯ, ಜನರಿದ್ದರೇ ಮಾತ್ರ ಆರ್ಥಿಕತೆ, ಮೊದಲು ಜನರ ಜೀವ ಉಳಿಸುವ ಕೆಲಸ ಮಾಡಬೇಕಿದೆ ಎಂದಿದ್ದಾರೆ.
ಅಭಿವೃದ್ಧಿ ಕೆಲಸಗಳನ್ನು ನಿಲ್ಲಿಸಿ, ಆರೋಗ್ಯಕ್ಕೆ ಒತ್ತು ಕೊಡುವಂತೆ ಒತ್ತಾಯಿಸಿರುವ ಡಿ.ಕೆ ಶಿವಕುಮಾರ್ ಕೋವಿಡ್ ನಿಯಂತ್ರಣ ಚಿಕಿತ್ಸೆಗೆ ೩೦೦ ಕೋಟಿ ಹಣ ಮೀಸಲಿಟ್ಟು, ಬೇರೆ ಇಲಾಖೆ ಅಧಿಕಾರಿಗಳನ್ನು ನಿಯಂತ್ರಣಕ್ಕೆ ಬಳಸಿಕೊಳ್ಳಿ. ಬರೀ ಸಭೆ ನಡೆಸಿದರೆ ಪ್ರಯೋಜನ ಇಲ್ಲ ಎಂದರು.
ಕೊರೊನಾ ಪರಿಸ್ಥಿತಿಯನ್ನು ನಿಯಂತ್ರಿಸಲು ಸರ್ಕಾರಕ್ಕೆ ಒಂದು ವರ್ಷದಿಂದ ಸಹಕಾರ ಕೊಟ್ಟಿದ್ದೇವೆ, ಲಾಕ್‌ಡೌನ್ ಮಾಡಿದರು ಅದನ್ನು ಪಾಲಿಸಿದೆವು. ಚಪ್ಪಾಳೆ ಹೊಡಿಸಿದರು, ದೀಪಾ ಹಚ್ಚಿಸಿದರೂ ಎಲ್ಲ ಮಾಡಿದರೂ ಆರೋಗ್ಯ ಸಚಿವರು ಈಗ ಪರಿಸ್ಥಿತಿ ಕೈಮೀರಿದೆ ಎಂದು ಹೇಳುತ್ತಿದ್ದಾರೆ. ಸರ್ಕಾರ ಇದೆಯೋ ಇಲ್ಲವೋ ಗೊತ್ತಾಗುತ್ತಿಲ್ಲ ಎಂದು ಟೀಕಿಸಿದರು.
ರಾಮನಗರದ ಜೆಡಿಎಸ್‌ನ ಮಾಜಿ ಶಾಸಕ ಕೆ. ರಾಜು ಮತ್ತವರ ಬೆಂಬಲಿಗರ ಕಾಂಗ್ರೆಸ್ ಸೇರ್ಪಡೆ ಕಾರ್ಯಕ್ರಮದ ನಂತರ ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಲಾಕ್‌ಡೌನ್‌ಗೆ ನಮ್ಮ ವಿರೋಧವಿದೆ. ಲಾಕ್‌ಡೌನ್‌ನಿಂದ ಪ್ರಯೋಜನ ಇಲ್ಲ. ಜನರ ಜೀವದ ಜತೆಗೆ ಬದುಕು ಮುಖ್ಯ. ಹಾಗಾಗಿ ಲಾಕ್‌ಡೌನ್‌ಗೆ ನಮ್ಮ ವಿರೋಧವಿದೆ ಎಂದರು.
ನಾಳೆ ಬೆಂಗಳೂರು ಜನಪ್ರತಿನಿಧಿಗಳ ಸಭೆಯಲ್ಲಿ ಕಾಂಗ್ರೆಸ್ ಶಾಸಕರು ಪಾಲ್ಗೊಳ್ಳುತ್ತಾರೆ ಅಲ್ಲಿ ಏನು ಹೇಳಬೇಕೋ ಅದನ್ನು ಹೇಳುತ್ತಾರೆ ಎಂದರು.
ಸರ್ಕಾರಕ್ಕೆ ಕೊರೊನಾ ನಿಯಂತ್ರಣ ವಿಚಾರದಲ್ಲಿ ಸರಿಯಾದ ಯೋಜನೆ ಇಲ್ಲ. ಆಸ್ಪತ್ರೆಗಳಲ್ಲಿ ಹಾಸಿಗೆಗಳು ಸಿಗುತ್ತಿಲ್ಲ. ರೆಮಿಡಿಸಿವಿರ್ ಇಂಜೆಕ್ಷನ್ ಇಲ್ಲ, ದೇಶದಲ್ಲಿ ಹೆಚ್ಚು ಆಸ್ಪತ್ರೆ ಮತ್ತು ಹೆಚ್ಚು ತಜ್ಞ ವೈದ್ಯರು ರಾಜ್ಯದಲ್ಲಿದ್ದಾರೆ. ಆದರೂ ಸರ್ಕಾರ ಕೈಚೆಲ್ಲಿ ಕುಳಿತಿದೆ ಎಂದು ಟೀಕಿಸಿದರು.
ಸರ್ಕಾರ ಕೋವಿಡ್ ರೋಗಿಗಳಿಗೆ ಉಚಿತ ಚಿಕಿತ್ಸೆ ನೀಡಬೇಕು. ಸಂಕಷ್ಟದಲ್ಲಿರುವವರಿಗೆ ಆರ್ಥಿಕ ನೆರವನ್ನು ನೀಡಬೇಕು, ಮನೆಗೆ ಬೆಂಕಿ ಬಿದ್ದಾಗ ಬಾವಿ ತೋಡುವ ಕೆಲಸವನ್ನು ಸರ್ಕಾರ ಮಾಡುತ್ತಿದೆ. ಅಭಿವೃದ್ಧಿ ಕೆಲಸ ನಿಲ್ಲಿಸಿ ಆರೋಗ್ಯಕ್ಕೆ ಒತ್ತು ಕೊಡಿ ಎಂದರು.
ಇದಕ್ಕೂ ಮೊದಲು ಮಾಜಿ ಶಾಸಕ ಡಿ.ಕೆ ರಾಜು ಅವರನ್ನು ಶಾಲು ಹೊದಿಸಿ ಪಕ್ಷಕ್ಕೆ ಬರಮಾಡಿಕೊಂಡರು. ಈ ಸಂದರ್ಭದಲ್ಲಿ ಸಂಸದ ಡಿ.ಕೆ. ಸುರೇಶ್, ವಿಧಾನ ಪರಿಷತ್ ಸದಸ್ಯರುಗಳಾದ ಸಿ.ಎಂ ಲಿಂಗಪ್ಪ, ಎಸ್. ರವಿ, ಮಾಜಿ ಶಾಸಕ ಬಾಲಕೃಷ್ಣ ಉಪಸ್ಥಿತರಿದ್ದರು.

ಜಿ.ಪಂ. ಚುನಾವಣೆ ಮುಂದೂಡಿ
ರಾಜ್ಯದಲ್ಲಿ ಕೊರೊನಾ ಸೋಂಕು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲಾಪಂಚಾಯಿತಿ ಮತ್ತು ತಾಲ್ಲೂಕು ಪಂಚಾಯಿತಿ ಚುನಾವಣೆಗಳನ್ನು ಮುಂದೂಡುವಂತೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಆಗ್ರಹಿಸಿದ್ದಾರೆ.
ಇಂತಹ ಪರಿಸ್ಥಿತಿಯಲ್ಲಿ ಚುನಾವಣೆಗಳು ಬೇಕಾ ಎಂದು ಪ್ರಶ್ನಿಸಿರುವ ಅವರು, ಒಂದಾರು ತಿಂಗಳು ಚುನಾವಣೆ ಮುಂದೂಡುವಂತೆ ಒತ್ತಾಯಿಸಿದರು.
ಮೇ ಅಂತ್ಯಕ್ಕೆ ಜಿಲ್ಲಾ ಪಂಚಾಯಿತಿಗಳ ಅವಧಿ ಮುಗಿಯುವ ಕಾರಣ ಚುನಾವಣೆಗಳನ್ನು ನಡೆಸಲು ರಾಜ್ಯ ಚುನಾವಣಾ ಆಯೋಗ ಸಿದ್ಧತೆ ನಡೆಸಿರುವ ಬೆನ್ನಲ್ಲೆ ಡಿ.ಕೆ ಶಿವಕುಮಾರ್ ಚುನಾವಣೆ ಮುಂದೂಡುವಂತೆ ಆಗ್ರಹಿಸಿದ್ದಾರೆ.