ಜನರ ಕ್ಷಮೆ ಕೇಳಲು ಕಾಂಗ್ರೆಸ್‌ಗೆ ಸುನಿಲ್ ಆಗ್ರಹ


ಬೆಂಗಳೂರು, ಜು. ೨೧- ಕಾಂಗ್ರೆಸ್ ನಾಯಕರ ಇ.ಡಿ. ವಿಚಾರಣೆಯನ್ನು ಮುಂದಿಟ್ಟುಕೊಂಡು ಕಾಂಗ್ರೆಸ್ ಕಾರ್ಯಕರ್ತರು ಕಾನೂನಿಗೆ ಗೌರವ ಕೊಡದೆ ಬೀದಿಗಿಳಿದು ಹೋರಾಟ ಮಾಡುತ್ತಿರುವ ಬಗ್ಗೆ ದೇಶದ ಜನರ ಕ್ಷಮೆ ಯಾಚಿಸಬೇಕೆಂದು ಇಂಧನ ಸಚಿವ ಸುನಿಲ್ ಕುಮಾರ್‌ರವರು ಆಗ್ರಹಿಸಿದ್ದಾರೆ.
ಬೆಂಗಳೂರಿನಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇ.ಡಿ. ವಿರುದ್ಧ ಕಾಂಗ್ರೆಸ್ ಪಕ್ಷ ಪ್ರತಿಭಟನೆ ನಡೆಸುತ್ತಿರುವುದು ಸರಿಯಲ್ಲ. ಕಾಂಗ್ರೆಸ್ ಕಾನೂನಿಗೆ ವಿರುದ್ಧವಾಗಿ ತುರ್ತು ಪರಿಸ್ಥಿತಿ ಹೇರಿತ್ತು. ಇಂಥವರು ಈಗ ಪ್ರತಿಭಟನೆ ನಡೆಸುವುದು ಎಷ್ಟರ ಮಟ್ಟಿಗೆ ಸರಿ ಎಂದರು.
ತಪ್ಪು ಮಾಡಿಲ್ಲ ಎಂದರೆ ಭಯ ಏಕೆ, ತನಿಖೆ ಎದುರಿಸಲಿ ಎಂದು ಅವರು ಹೇಳಿದರು.
ಈ ಹಿಂದೆ ಭ್ರಷ್ಟಾಚಾರ ಮಾಡಿ ಜೈಲಿಗೆ ಹೋಗಿ ಬಂದವರು ಈಗ ಪ್ರತಿಭಟನೆ ಮಾಡುತ್ತಿದ್ದಾರೆ ಎಂದು ಪರೋಕ್ಷವಾಗಿ ಡಿ.ಕೆ. ಶಿವಕುಮಾರ್ ಅವರನ್ನು ಗುರಿಯಾಗಿಸಿ ಸುನೀಲ್‌ಕುಮಾರ್ ವಾಗ್ದಾಳಿ ನಡೆಸಿದರು.
ತಪ್ಪು ಮಾಡಿದವರು ಸಹಜವಾಗಿ ತನಿಖೆ ಎದುರಿಸಲು ಭಯಪಡುತ್ತಾರೆ. ಕಾಂಗ್ರೆಸ್ ನಾಯಕರ ವರ್ತನೆ ನೋಡಿದರೆ ತಪ್ಪು ಮಾಡಿದ್ದಾರೆ ಎನಿಸುತ್ತದೆ. ತಪ್ಪು ಮಾಡಿಲ್ಲ ಎಂದರೆ ತನಿಖೆ ಎದುರಿಸಲಿ ಎಂದು ಸವಾಲು ಹಾಕಿದರು.
ದೇಶದಲ್ಲಿ ಭ್ರಷ್ಟಾಚಾರ ಮಾಡಿರುವುದು ಕಾಂಗ್ರೆಸ್ ಸರ್ಕಾರ. ಪ್ರಧಾನಿ ಮೋದಿಯವರ ಅವಧಿಯಲ್ಲಿ ಒಂದೇ ಒಂದು ಭ್ರಷ್ಟಾಚಾರ ಹಗರಣ ನಡೆದಿಲ್ಲ ಎಂದು ಹೇಳಿದರು.
ಭಾರತವನ್ನು ಮುರಿದಿದ್ದೇ ಕಾಂಗ್ರೆಸ್ ಪಕ್ಷ. ಈಗ ಭಾರತ್ ಜೋಡೋ ಯಾತ್ರೆ ನಡೆಸುತ್ತಿದ್ದಾರೆ ಎಂದು ವ್ಯಂಗ್ಯವಾಡಿದರು.
ಮುಂದಿನ ಸಚಿವ ಸಂಪುಟ ಸಭೆಯಲ್ಲಿ ಲೋಕಾಯುಕ್ತಕ್ಕೆ ಹೆಚ್ಚಿನ ಅಧಿಕಾರ ನೀಡುವ ಬಗ್ಗೆ ಚರ್ಚೆ ಮಾಡುತ್ತೇವೆ ಎಂದು ಅವರು ಪ್ರಶ್ನೆಯೊಂದಕ್ಕೆ ಉತ್ತರಿಸುತ್ತಾ ಹೇಳಿದರು.
ಬಿಜೆಪಿ ರಾಜ್ಯಾಧ್ಯಕ್ಷರ ಬದಲಾವಣೆ ವಿಚಾರದ ಬಗ್ಗೆ ಪ್ರತಿಕ್ರಿಯಿಸಿದ ಅವರು, ಇದೆಲ್ಲಾ ಪಕ್ಷದ ಆಂತರಿಕ ವಿಚಾರ. ನಮ್ಮಲ್ಲಿ ಆಂತರಿಕ ಪ್ರಜಾಪ್ರಭುತ್ವವಿದೆ. ಕಾಲಕಾಲಕ್ಕೆ ಪಕ್ಷ ತೀರ್ಮಾನ ಮಾಡುತ್ತದೆ. ನಮ್ಮ ಪಕ್ಷ ಒಂದು ಜಾತಿ, ಸಮುದಾಯ, ಕುಟುಂಬಕ್ಕೆ ಸೀಮಿತವಾದ ಪಕ್ಷವಲ್ಲ ಎಂದರು.