ಜನರ ಆಶೀರ್ವಾದದಿಂದ ಗ್ಯಾರಂಟಿ ಯೋಜನೆ ಜಾರಿ

(ಸಂಜೆವಾಣಿ ಪ್ರತಿನಿಧಿಯಿಂದ)
ಬೆಂಗಳೂರು,ಆ.೨೯:ನಾಡದೇವತೆ ಚಾಮುಂಡೇಶ್ವರಿ ಹಾಗೂ ಜನರ ಆರ್ಶೀವಾದದಿಂದ ಕಾಂಗ್ರೆಸ್ ಸರ್ಕಾರ ಗ್ಯಾರಂಟಿ ಯೋಜನೆಗಳನ್ನು ಯಶಸ್ವಿಯಾಗಿ ಜಾರಿ ಮಾಡಿದೆ ಎಂದು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಹೇಳಿದರು.
ಮೈಸೂರಿನ ಚಾಮುಂಡಿಬೆಟ್ಟದಲ್ಲಿಂದು ನಾಡದೇವತೆ ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಚುನಾವಣೆಗೆ ಮುನ್ನ ಚಾಮುಂಡಿ ಸನ್ನಿದ್ಧಾನದಲ್ಲಿ ಗ್ಯಾರಂಟಿ ಯೋಜನೆಗಳ ಬಗ್ಗೆ ವಾಗ್ದಾನ ಮಾಡಿದ್ದೆವು. ಅದರಂತೆ ಸರ್ಕಾರ ವಾಗ್ದಾನ ಈಡೇರಿಸಿದೆ. ದೇವಿ ಸನ್ನಿಧಾನದಲ್ಲಿ ಕೊಟ್ಟ ಮಾತಿನಂತೆ ನಡೆದಿದೆ ಎಂದರು.ಗೃಹಲಕ್ಷ್ಮಿ ಯೋಜನೆ ರಾಜ್ಯದ ೧.೧೦ ಕೋಟಿ ಮಹಿಳೆಯರನ್ನು ತಲುಪಲಿದೆ. ಗೃಹಜ್ಯೋತಿ ಯೋಜನೆ ೧.೪೧ ಕೋಟಿ ಮನೆಗಳಿಗೆ ತಲುಪಿದೆ. ೪೬ ಕೋಟಿ ಹೆಣ್ಣು ಮಕ್ಕಳು ಉಚಿತವಾಗಿ ಬಸ್‌ನಲ್ಲಿ ಪ್ರಯಾಣ ಮಾಡಿದ್ದಾರೆ. ೧.೩೯ ಕೋಟಿ ಕುಟುಂಬಗಳಿಗೆ ಅನ್ನಭಾಗ್ಯದ ಲಾಭ ಸಿಕ್ಕಿದೆ ಎಂದರು.
ನೂರು ದಿನಗಳಲ್ಲಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಭರ್ಜರಿ ಕೊಡುಗೆಗಳನ್ನು ನೀಡಿದೆ. ನುಡಿದಂತೆ ನಡೆದಿರುವುದೇ ಸರ್ಕಾರದ ಸಾಧನೆ ಎಂದರು. ಕಾವೇರಿ ವಿಚಾರದಲ್ಲಿ ರಾಜ್ಯದ ಹಿತಾಸಕ್ತಿಗೆ ಧಕ್ಕೆಯಾಗದಂತೆ ನೋಡಿಕೊಳ್ಳುತ್ತೇವೆ ಎಂದು ಹೇಳಿದರು.
ವಿರೋಧ ಪಕ್ಷಗಳು ಮುಖ್ಯಮಂತ್ರಿ ಹಾಗೂ ನನ್ನ ನಡುವೆ ಸಂಬಂಧ ಸರಿ ಇಲ್ಲ ಎಂದು ಅನುಮಾನ ಪಡುತ್ತಲೇ ಇರಲಿ. ಅವರು ಅನುಮಾನ ಪಟ್ಟಷ್ಟು ನಾವಿಬ್ಬರು ಹತ್ತಿರವಾಗುತ್ತಲೇ ಇದ್ದೇವೆ ಎಂದು ಡಿ.ಕೆ ಶಿವಕುಮಾರ್ ಹೇಳಿದರು.