ಜನರ ಆರೋಗ್ಯದ ವಿಚಾರದಲ್ಲಿ, ಆಟ ಆಡಬೇಡಿ, ಕೆಲಸ ಮಾಡಿ

ಬಂಟ್ವಾಳ, ಮೇ ೨೭-ಅಧಿಕಾರಿಗಳು ಜನಪ್ರತಿನಿಧಿಗಳನ್ನು ವಿಶ್ವಾಸಕ್ಕೆ ಪಡೆದುಕೊಂಡು ಜವಬ್ದಾರಿಯಿಂದ ಕೆಲಸ ಮಾಡಿ, ಜನರ ಆರೋಗ್ಯದ ವಿಚಾರದಲ್ಲಿ, ಆಟ ಆಡಬೇಡಿ, ಉದಾಸೀನ ಮಾಡಬೇಡಿ – ಇದು ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಬಂಟ್ವಾಳ ಪುರಸಭೆಯ ಅಧಿಕಾರಿಗಳಿಗೆ ಹೇಳಿದ ಖಡಕ್ ಮಾತು.
ಬಂಟ್ವಾಳ ಪುರಸಭೆಯ ಸಭಾಂಗಣದಲ್ಲಿ ಪುರಸಭಾ ವ್ಯಾಪ್ತಿಯ ೧ ರಿಂದ ೫ ನೇ ವಾರ್ಡ್ ವ್ಯಾಪ್ತಿಯ ಟಾಸ್ಕ್ ಫೋರ್ಸ್ ಸಮಿತಿಗಳ ಪ್ರಗತಿಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಇದು ಕೋವಿಡ್ ಸಂಕಷ್ಟದ ಕಾಲ ಇಂತಹಾ ಸಮಯದಲ್ಲೂ,ಎಲ್ಲವೂ ನಾನೇ ಮಾಡಿದ್ದು, ನಾನು ಮಾಡಿದ್ದೇ ಸರಿ ಎನ್ನುವ ರೀತಿಯಲ್ಲಿ ಅಧಿಕಾರ ಚಲಾಯಿಸಬೇಡಿ, ಅಧಿಕಾರಿಗಳು- ಜನಪ್ರತಿನಿಧಿಗಳು ಸಮನ್ವಯದಿಂದ ಕೆಲಸ ಮಾಡಬೇಕೆಂದು ಅವರು ಕಿವಿಮಾತು ಹೇಳಿದರು. ಪುರಸಭಾ ಮುಖ್ಯಾಧಿಕಾರಿಯನ್ನು ತರಾಟೆಗೆ ತೆಗೆದುಕೊಂಡ ಶಾಸಕರು, ಟಾಸ್ಕ್ ಫೋರ್ಸ್ ಸಮಿತಿ ಯ ಕುರಿತು ಸದಸ್ಯರಿಗೆ ಮಾಹಿತಿ ನೀಡದಿರುವುದಕ್ಕೆ ಅಸಮಾಧಾನ ವ್ಯಕ್ತಪಡಿಸಿದರು. ಯಾವುದೇ ವೈಮನಸ್ಸು ಇದ್ದರೂ, ಎಲ್ಲವನ್ನು ಬದಿಗಿಟ್ಟು ಕೆಲಸ ಮಾಡಿ, ಜನರಿಗೋಸ್ಕರ ಕೆಲಸ ಮಾಡಿ ಎಂದರು.
ಪುರಸಭೆಯ ಟಾಸ್ಕ್ ಫೋರ್ಸ್ ಸಮಿತಿಗೆ ಸಂಬಂಧಪಟ್ಟ ವಾರ್ಡ್ ಸದಸ್ಯರೇ
ಮುಖ್ಯಸ್ಥರು. ಅದರ ಕಾರ್ಯವೈಖರಿಯ ಬಗ್ಗೆ ಪುರಸಭಾ ಅಧ್ಯಕ್ಷರು ಮೇಲ್ವಿಚಾರಣೆ ಮಾಡಬೇಕು ಎಂದರು.
ಕಷ್ಟಕಾಲದಲ್ಲಿ ಜನರ ಸೇವೆ ಮಾಡುವ ಸಮಯ, ಏನೇ ಇದ್ದರೂ ಬದಿಗಿಟ್ಟು ಕೊರೊನಾ ವಿರುದ್ಧದ ಹೋರಾಟದಲ್ಲಿ ಭಾಗಿಯಾಗಬೇಕು , ಕೋವಿಡ್ ನಿಯಮಗಳನ್ನು ಉಲ್ಲಂಘಿಸಿದವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಿ, ಜನಪ್ರತಿನಿಧಿಗಳಿಗೆ ದಾಕ್ಷಿಣ್ಯ ಎನ್ನಿಸಿದರೆ ಅಂತಹ ಸಮಯದಲ್ಲಿ ಅಧಿಕಾರಿಗಳಿಗೆ ಸೂಚಿಸಿ ಎಂದರು.
ತಹಶೀಲ್ದಾರ್ ರಶ್ಮೀ ಎಸ್.ಆರ್ ಮಾತನಾಡಿ, ಟಾಸ್ಕ್ ಫೋರ್ಸ್ ಸಮಿತಿಯನ್ನು ಹೆಚ್ಚು ಸಕ್ರೀಯವಾಗಿಸಬೇಕು ಎಂದು ಸಲಹೆ ನೀಡಿದರು.
ಪುರಸಭಾ ಅಧ್ಯಕ್ಷ ಮಹಮ್ಮದ್ ಶರೀಫ್ ಮಾತನಾಡಿ, ಮುಂದಿನ ಒಂದು ವಾರದ ಒಳಗಾಗಿ ಪುರಸಭೆಯ ಎಲ್ಲಾ ಸದಸ್ಯರಿಗೆ ಟಾಸ್ಕ್ ಫೋರ್ಸ್ ಸಮಿತಿಯ ಕುರಿತಾಗಿ ಮಾಹಿತಿನೀಡಿ ಹೆಚ್ಚು ಸಕ್ರೀಯಗೊಳಿಸಲಾಗುವುದು ಎಂದರು.
ಪುರಸಭಾ ವ್ಯಾಪ್ತಿಯಲ್ಲಿ ಒಟ್ಟು ೧೦೭ ಪಾಸಿಟಿವ್ ಪ್ರಕರಣಗಳು ವರದಿಯಾಗಿದ್ದು, ಪ್ರಸ್ತುತ ೫೨ ಸಕ್ರೀಯ ಪ್ರಕರಣಗಳಿದೆ ಎಂದು ನಗರ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಅಶ್ವಿನಿ ಮಾಹಿತಿ ನೀಡಿದರು.
ಪುರಸಭಾ ಉಪಾಧ್ಯಕ್ಷೆ ಜೆಸಿಂತಾ, ಬೂಡ ಅಧ್ಯಕ್ಷ ದೇವದಾಸ ಶೆಟ್ಟಿ, ಪುರಸಭಾ ಸದಸ್ಯ ರಾದ ಜನಾರ್ಧನ ಚೆಂಡ್ತಿಮಾರ್, ಗಂಗಾಧರ ಪೂಜಾರಿ, ಮೀನಾಕ್ಷಿ ಗೌಡ, ರೇಖಾ ಪೈ, ದೇವಕಿ, ಸಿ.ಡಿ.ಪಿ.ಒ ಗಾಯತ್ರಿ ಕಂಬಳಿ, ಪುರಸಭಾ ಮುಖ್ಯಾಧಿಕಾರಿ ಲೀನಾಬ್ರಿಟ್ಟೋ, ಎ.ಎಸ್.ಐ.ಜಿನ್ನಪ್ಪ ಗೌಡ,ಶಾಸಕರ ವಾರ್ ರೂಮ್ ಪ್ರಮುಖರಾದ ದೇವಪ್ಪ ಪೂಜಾರಿ, ಡೊಂಬಯ್ಯ ಅರಳ ಮತ್ತಿತರ ರು ಉಪಸ್ಥಿತರಿದ್ದರು.