ಜನರ ಆರೋಗ್ಯದ ಕುರಿತು ಜಾಗೃತಿ ಮೂಡಿಸುವಲ್ಲಿ ಮಾಧ್ಯಮಗಳ ಪಾತ್ರ ಅಪಾರ: ಡಾ.ಸುರೇಂದ್ರಬಾಬು

ರಾಯಚೂರು,ಮಾ.೧೦- ಸರ್ಕಾರದಿಂದ ಸಾರ್ವಜನಿಕರಿಗಾಗಿ ಇರುವ ಆರೋಗ್ಯ ಇಲಾಖೆಯ ಯೋಜನೆಗಳು ಮತ್ತು ಕಾರ್ಯಕ್ರಮಗಳನ್ನು ಜನರಲ್ಲಿಗೆ ಮುಟ್ಟಿಸಲು ಮಾಧ್ಯಮಗಳ ಪಾತ್ರ ಅತಿ ಮುಖ್ಯವಾಗಿದ್ದು, ಜನರ ಆರೋಗ್ಯ ರಕ್ಷಣೆಯಲ್ಲಿ ಆರೋಗ್ಯ ಇಲಾಖೆಯ ಜೊತೆಗೆ ಮಾಧ್ಯಮಗಳ ಸಹಕಾರ ಅತ್ಯಗತ್ಯವೆಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಸುರೇಂದ್ರಬಾಬು ಅವರು ಹೇಳಿದರು.
ಅವರು ಮಾ.೦೯ರ(ಗುರುವಾರ) ನಗರದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸಬಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ವತಿಯಿಂದ ಹಮ್ಮಿಕೊಂಡಿದ್ದ ಮಾಧ್ಯಮ ಮಿತ್ರರಿಗೆ ರಾಷ್ಟ್ರೀಯ ಆರೋಗ್ಯ ಕಾರ್ಯಕ್ರಮಗಳ ಕುರಿತು ಕಾರ್ಯಾಗಾರವನ್ನು ಉದ್ದೇಶಿಸಿ ಮಾತನಾಡಿದರು.
ಹಲವಾರು ಸಮಸ್ಯೆಗಳಿದ್ದರೂ ದಿನವಿಡಿ ಕಾರ್ಯನಿರ್ವಹಿಸುವ ವಲಯಗಳಲ್ಲಿ ಪ್ರಮುಖವಾದದ್ದು ಮಾಧ್ಯಮ ವಲಯ ಆದ್ದರಿಂದ ಮಾಧ್ಯಮದಲ್ಲಿ ಕಾರ್ಯನಿರ್ವಹಿಸುವ ಪತ್ರಕರ್ತರು, ಛಾಯಾಗ್ರಾಹಕರು ತಮ್ಮ ಆರೋಗ್ಯಕ್ಕೆ ಹೆಚ್ಚಿನ ಒತ್ತು ನೀಡಬೇಕು ಎಂದರು.
ಇತ್ತೀಚೆಗೆ ಜಿಲ್ಲೆಯಲ್ಲಿ ಝೀಕಾ ವೈರಸ್ ಪತ್ತೆಯಾದ ಸಂದರ್ಭದಲ್ಲಿ ಮಾಧ್ಯಮದ ಸಹಕಾರ ಮತ್ತು ಸಲಹೆಗಳಿಂದ ಝೀಕಾ ವೈರಸ್ ಕುರಿತು ಜಿಲ್ಲೆಯ ಜನರಿಗೆ ಜಾಗೃತಿಯನ್ನು ಮೂಡಿಸಲು ಮತ್ತು ಝೀಕಾ ವೈರಸ್ ಹರಡದಂತೆ ಮುನ್ನೆಚರಿಕೆ ಕ್ರಮಗಳನ್ನು ವಹಿಸಲು ಮಾಧ್ಯಮಗಳು ಇಲಾಖೆಯ ಜೊತೆಗೆ ಹೆಚ್ಚಿನ ರೀತಿಯಲ್ಲಿ ಕಾರ್ಯ ನಿರ್ವಹಿಸಿತ್ತು ಆದ್ದರಿಂದಲೇ ಝೀಕಾ ವೈರಸ್‌ಅನ್ನು ನಿಯಂತ್ರಣ ಮಾಡಲಾಯಿತು ಎಂದು ತಿಳಿಸಿದರು.
ಇದೇ ವೇಳೆ ಜಿಲ್ಲಾ ಸರ್ವೇಕ್ಷಣಾ ಅಧಿಕಾರಿ ಡಾ.ಗಣೇಶ ಉಪನ್ಯಾಸ ನೀಡಿ, ಜಿಲ್ಲೆಯಲ್ಲಿ ಮಲೇರಿಯಾ, ಫೆಲೆರಿಯಾ, ಕಾಲಾ ಅಜಾರ, ಝೆ.ಇ, ಡೆಂಗ್ಯೂ, ಚಿಕನ್ ಗುನ್ಯ ಹಾಗೂ ಝೀಕಾದಂತಹ ವೈರಸ್‌ಗಳು ಸೊಳ್ಳೆಗಳಿಂದ ಹರಡುತ್ತವೆ ಹಾಗೂ ಅತಿ ವೇಗವಾಗಿ ಹರುಡತ್ತವೆ ಆದ್ದರಿಂದ ಜನರು ಈ ರೋಗಗಳ ಲಕ್ಷಣಗಳು ಕಂಡು ಬಂದಲ್ಲಿ ಮುಜಾಗೃತಾ ಕ್ರಮ ವಹಿಸಿ ಆಸ್ಪತ್ರೆಗೆ ತೆರಳಿ ಸರಿಯಾದ ಚಿಕಿತ್ಸೆ ಪಡೆದುಕೊಳ್ಳಬೇಕು ಎಂದು ತಿಳಿಸಿದರು.
ಜಿಲ್ಲೆಯಲ್ಲಿ ೨೦೧೨ರಿಂದ ಮಲೇರಿಯಾ ಪ್ರಕರಣಗಳು ಕಡಿಮೆಯಾಗುತ್ತಾ ಬಂದಿದ್ದು, ೨೦೧೨ರಲ್ಲಿ ಜಿಲ್ಲೆಯ ೫ ತಾಲೂಕುಗಳಲ್ಲಿ ೭೨೨ ಮಲೇರಿಯಾ ಪ್ರಕರಣಗಳು ದಾಖಲಾದರೆ ಪ್ರಸ್ತುತ ೨೦೨೨ರಲ್ಲಿ ಕೇವಲ ೧೦ ಪ್ರಕರಣಗಳು ದಾಖಲಾಗಿವೆ ಎಂದು ತಿಳಿಸಿದರು.
ಜಿಲ್ಲೆಯಲ್ಲಿ ೨೦೧೮ರಲ್ಲಿ ೨೨ ಡೆಂಗ್ಯೂ ಪ್ರಕರಣಗಳು ದಾಖಲಾಗಿದ್ದು, ೨೦೨೩ರ ಈವರೆಗೆ ಕೇವಲ ೮ ಪ್ರಕರಣಗಳು ದಾಖಲಾಗಿವೆ. ಅದೇ ರೀತಿ ಫೆಲೇರಿಯಾ ಪ್ರಕರಣಗಳು ೨೦೧೮ರಲ್ಲಿ ೪೧ ಇದ್ದು, ಈವರೆಗೆ ಯಾವುದೇ ಪ್ರಕರಣಗಳು ಕಂಡುಬಂದಿಲ್ಲ ಎಂದು ಹೇಳಿದರು.
ಸೊಳ್ಳೆಗಳು ಹೆಚ್ಚಾಗದಂತೆ ತಡೆಗಟ್ಟಲು ಜನರು ತಮ್ಮ ಸುತ್ತಮುತ್ತಲಿನ ಪ್ರದೇಶಗಳಲ್ಲಿ ನೀರು ನಿಲ್ಲದಂತೆ ನೋಡಿಕೊಳ್ಳಬೇಕು. ಸುತ್ತಮುತ್ತಲಿನ ಪರಿಸರವನ್ನು ಸ್ವಚ್ಛವಾಗಿಟ್ಟುಕೊಳ್ಳಬೇಕು ಎಂದು ಸಲಹೆ ನೀಡಿದರು.
ಈ ಸಂದರ್ಭದಲ್ಲಿ ಜಿಲ್ಲಾ ಆರ್.ಸಿ.ಎಚ್ ಅಧಿಕಾರಿ ಡಾ.ನಂದಿತಾ, ತಾಲೂಕು ವೈದ್ಯಾಧಿಕಾರಿ ಡಾ.ಶಾಖೀರ, ಕಾರ್ಯನಿರತ ಪತ್ರಕರ್ತರ ಸಂಘದ ಕಾರ್ಯದರ್ಶಿ ಪಾಷಾ ಹಟ್ಟಿ, ರಾಯಚೂರು ರಿಪೋಟರ್‍ಸ್ ಗೀಲ್ಡ್ ಕಾರ್ಯದರ್ಶಿ ವಿಜಯ ಜಾಗಟಗಲ್, ವಾರ್ತಾ ಇಲಾಖೆಯ ಪ್ರಥಮ ದರ್ಜೆ ಸಹಾಯಕ ಲಿಂಗರಾಜ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.