ಜನರ ಅಂತರಂಗ ನಾಳೆ ಬಹಿರಂಗ

ಬೆಂಗಳೂರು,ಮೇ೧೨:ರಾಜ್ಯ ವಿಧಾನಸಭೆಯ ಚುನಾವಣೆಯಲ್ಲಿ ಮತ ಹಾಕಿರುವ ಮತದಾರರ ಅಂತರಂಗ ನಾಳೆ ಬಹಿರಂಗವಾಗಲಿದೆ. ಮತದಾರರು ಯಾವ ಪಕ್ಷಕ್ಕೆ ಜನಾದೇಶ ನೀಡಲಿದ್ದಾರೆ. ಅತಿರಥ ಮಹಾರಥರ ರಾಜಕೀಯ ಭವಿಷ್ಯ ಏನಾಗಲಿದೆ ಎಂಬುದು ನಾಳೆ ಗೊತ್ತಾಗಲಿದೆ.
ವಿಧಾನಸಭಾ ಚುನಾವಣೆಗೆ ಮೇ ೧೦ ರಂದು ನಡೆದ ಚುನಾವಣೆಯ ಮತಗಳ ಎಣಿಕೆ ನಾಳೆ ನಡೆಯಲಿದ್ದು, ನಾಳೆ ಮತದಾರರ ಅಂತರಂಗದ ಗುಟ್ಟು ರಟ್ಟಾಗಲಿದೆ. ಕಣದಲ್ಲಿರುವ ೨,೬೧೫ ಅಭ್ಯರ್ಥಿಗಳ ರಾಜಕೀಯ ಭವಿಷ್ಯವೂ ಜಗಜ್ಜಾಹೀರಾಗಲಿದೆ.
ಮತಗಟ್ಟೆ ಸಮೀಕ್ಷೆಗಳು ಅತಂತ್ರ ವಿಧಾನಸಭೆಯ ರಚನೆಯಾಗಬಹುದು ಎಂಬ ಭವಿಷ್ಯ ನುಡಿದಿರುವುದರಿಂದ ನಾಳಿನ ಮತ ಎಣಿಕೆಯತ್ತ ಎಲ್ಲರ ಚಿತ್ತ ನೆಟ್ಟಿದೆ. ಫಲಿತಾಂಶಕ್ಕಾಗಿ ಎಲ್ಲರೂ ಚಾತಕ ಪಕ್ಷಿಯಂತೆ ಕಾಯುತ್ತಿದ್ದಾರೆ. ಮತದಾರರ ತೀರ್ಪು ಏನಿರಬಹುದು ಎಂಬುದು ಕುತೂಹಲಕ್ಕೆಡೆ ಮಾಡಿಕೊಟ್ಟಿದೆ.
ರಾಜ್ಯದ ೨೨೪ ಕ್ಷೇತ್ರಗಳಿಗೆ ಮೇ ೧೦ ರಂದು ಮತದಾನ ನಡೆದು ಬೆಂಗಳೂರು ನಗರ ಹೊರತು ಪಡಿಸಿದರೆ ಉಳಿದೆಡೆ ದಾಖಲೆಯ ಮತದಾನವಾಗಿದ್ದು, ಒಟ್ಟಾರೆ ಶೇ. ೭೩.೧೯ ರಷ್ಟು ಮತದಾನ ಆಗಿತ್ತು. ಈ ಮತಗಳ ಎಣಿಕೆ ನಾಳೆ ಬೆಳಿಗ್ಗೆ ೮ ಗಂಟೆಗೆ ರಾಜ್ಯದ ಎಲ್ಲ ಮತ ಎಣಿಕೆ ಕೇಂದ್ರಗಳಲ್ಲಿ ಏಕಕಾಲದಲ್ಲಿ ಆರಂಭವಾಗಲಿದ್ದು, ಮಧ್ಯಾಹ್ನದ ಹೊತ್ತಿಗೆ ಫಲಿತಾಂಶ ಹೊರ ಬೀಳಲಿದೆ. ನಾಳೆ ಮಧ್ಯಾಹ್ನ ೨ರ ಸುಮಾರಿಗೆ ರಾಜ್ಯದ ಆಡಳಿತ ಚುಕ್ಕಾಣಿ ಯಾವ ಪಕ್ಷ ಹಿಡಿಯಲಿದೆ. ಯಾವ ಪಕ್ಷದ ಸರ್ಕಾರ ರಚನೆಯಾಗುತ್ತದೆಯೋ ಇಲ್ಲ ಅತಂತ್ರ ವಿಧಾನಸಭೆ ಸೃಷ್ಟಿಯಾಗುತ್ತದೆಯೋ ಎಂಬ ಕುತೂಹಲಕ್ಕೆ ತೆರೆ ಬೀಳಲಿದೆ.
ಮತ ಎಣಿಕೆಗೆ ಸರ್ವ ಸಿದ್ಧತೆ
ರಾಜ್ಯ ವಿಧಾನಸಭೆಯ ಚುನಾವಣೆಗಳು ಶಾಂತಿಯುತವಾಗಿ ನಡೆದ ಬೆನ್ನಲ್ಲೆ ಚುನಾವಣಾ ಆಯೋಗ ಮತ ಎಣಿಕೆಗೂ ಸರ್ವ ಸಿದ್ಧತೆಗಳನ್ನು ನಡೆಸಿದ್ದು, ನಾಳೆ ನಡೆಯಲಿರುವ ಮತ ಎಣಿಕೆಗೆ ಎಲ್ಲ ರೀತಿಯ ತಯಾರಿಯನ್ನೂ ಮಾಡಿಕೊಂಡು ಫಲಿತಾಂಶ ಪ್ರಕಟಿಸಲು ಆಯೋಗ ಸಿದ್ಧತೆ ನಡೆಸಿದೆ.
ಮೇ ೧೦ ರಂದು ನಡೆದ ಚುನಾವಣೆಯ ವಿಧ್ಯುನ್ಮಾನ ಯಂತ್ರಗಳನ್ನು ಆಯಾ ಜಿಲ್ಲೆಗಳಲ್ಲಿ ಸ್ಥಾಪಿಸಿರುವ ಸ್ಟ್ರಾಂಗ್ ರೂಂಗಳಲ್ಲಿ ಇಡಲಾಗಿದ್ದು, ನಾಳೆ ೩೪ ಮತ ಎಣಿಕೆ ಕೇಂದ್ರಗಳಲ್ಲಿ ಮತ ಎಣಿಕೆ ನಡೆಯಲಿದೆ.
ಬೆಂಗಳೂರು ನಗರದಲ್ಲಿ ೪ ಕೇಂದ್ರಗಳಲ್ಲಿ ಮತ ಎಣಿಕೆ ನಡೆಯಲಿದೆ. ಪ್ರತಿ ವಿಧಾನಸಭಾ ಕ್ಷೇತ್ರಗಳ ಮತ ಎಣಿಕೆ ಆಯಾ ಮತ ಎಣಿಕೆ ಕೇಂದ್ರಗಳಲ್ಲಿ ಪ್ರತ್ಯೇಕವಾಗಿ ನಡೆಯಲಿದೆ.
ಪ್ರತಿ ಕೊಠಡಿಗೆ ೧೦ ರಿಂದ ೧೪ ಟೇಬಲ್‌ಗಳನ್ನು ವ್ಯವಸ್ಥೆ ಮಾಡಿ, ಮತ ಎಣಿಕೆಗೆ ಅಗತ್ಯ ಸಿಬ್ಬಂದಿಗಳನ್ನು ಒದಗಿಸಲಾಗಿದೆ.ಮತ ಎಣಿಕೆ ಕೇಂದ್ರಗಳಿಗೆ ಪೊಲೀಸ್ ಬಂದೋಬಸ್ತ್‌ನ್ನು ನಿಯೋಜಿಸಲಾಗಿದ್ದು, ಸಿಸಿ ಟಿವಿ ಕ್ಯಾಮರಾಗಳನ್ನು ಅಳವಡಿಸಲಾಗಿದೆ.

ರಾಜಕೀಯ ಚಟುವಟಿಕೆ ಬಿರುಸು
ಮತಗಟ್ಟೆ ಸಮೀಕ್ಷೆಗಳಲ್ಲಿ ಅತಂತ್ರ ವಿಧಾನಸಭೆ ರಚನೆಯಾಗಬಹುದು ಎಂಬ ಸೂಚನೆಗಳು ಸಿಕ್ಕಿರುವ ಹಿನ್ನೆಲೆಯಲ್ಲಿ ರಾಜಕೀಯ ಪಕ್ಷಗಳು ಅಧಿಕಾರ ಹಿಡಿಯುವ ನಿಟ್ಟಿನಲ್ಲಿ ಏನೆಲ್ಲ ಮಾಡಬೇಕು ಎಂಬ ಬಗ್ಗೆ ರಾಜಕೀಯ ನಾಯಕರುಗಳು ಸಭೆ-ಸಮಾಲೋಚನೆಗಳನ್ನು ನಡೆಸಿದ್ದು, ರಾಜಕೀಯ ಪಕ್ಷಗಳಲ್ಲಿ ಚಟುವಟಿಕೆಗಳು ಬಿರುಸಾಗಿವೆ.
ಸೋಲು-ಗೆಲುವಿನ ಲೆಕ್ಕಾಚಾರ ಜೋರಾಗಿದ್ದು, ಸರಳ ಬಹುಮತ ಸಿಗಬಹುದು ಎಂಬ ನಿರೀಕ್ಷೆಯಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿ ಇವೆಯಾದರೂ ಒಳಗೊಳಗೆ ಈ ಪಕ್ಷಗಳಿಗೂ ಅತಂತ್ರ ವಿಧಾನಸಭೆಯ ಭೀತಿ ಕಾಡುತ್ತಿವೆ. ಹಾಗಾಗಿ. ಈಗಿನಿಂದಲೇ ಗೆಲ್ಲುವ ಅಭ್ಯರ್ಥಿಗಳ ಜತೆ ಈ ಪಕ್ಷಗಳ ನಾಯಕರುಗಳು ಸಂಪರ್ಕದಲ್ಲಿದ್ದು, ಶತಾಯ-ಗತಾಯ ತಮ್ಮ ಪಕ್ಷವೇ ಆಡಳಿತ ಹಿಡಿಯಲು ಏನೆಲ್ಲ ಮಾಡಲು ಸಾಧ್ಯವೋ ಅದನ್ನೆಲ್ಲ ಈಗಿನಿಂದಲೇ ಆರಂಭಿಸಿವೆ.
ಒಂದು ವೇಳೆ ಅತಂತ್ರ ವಿಧಾನಸಭೆ ಸೃಷ್ಟಿಯಾದರೆ ತಮ್ಮ ಪಕ್ಷಗಳ ಕಾಂಗ್ರೆಸ್ ನಾಯಕರು ಈಗಾಗಲೇ ತಮ್ಮ ಎಲ್ಲ ಅಭ್ಯರ್ಥಿಗಳ ಜತೆ ನಿನ್ನೆಯೇ ಝೂಂ ಮೀಟಿಂಗ್ ನಡೆಸಿದ್ದಾರೆ.ರಾಜ್ಯ ಕಾಂಗ್ರೆಸ್ ಉಸ್ತುವಾರಿ ಸುರ್ಜೇವಾಲಾ ಅವರೇ ಖುದ್ದು ಅಭ್ಯರ್ಥಿಗಳ ಜತೆ ಮಾತನಾಡಿ, ’ಪಾಠ’ ಹೇಳುವ ಜತೆಗೆ ಖಡಕ್ ಸೂಚನೆ ನೀಡಿದ್ದಾರೆ.
ಬಿಜೆಪಿಯಲ್ಲೂ ಸಭೆ
ಬಿಜೆಪಿ ನಾಯಕರೂ ಸಹ ಫಲಿತಾಂಶಕ್ಕೂ ಮೊದಲೇ ಸಭೆಗಳನ್ನು ನಡೆಸಿ ಚರ್ಚಿಸಿದ್ದು, ಇಂದು ಸಂಜೆ ಸಹ ಬಿಜೆಪಿ ನಾಯಕರುಗಳ ಸಭೆ ನಡೆಯಲಿದ್ದು, ಈ ಸಭೆಯಲ್ಲಿ ಅತಂತ್ರ ವಿಧಾನಸಭೆ ಸೃಷ್ಟಿಯಾದರೆ, ಪಕ್ಷದ ಮುಂದಿನ ದಿಕ್ಕು ದಿಸೆಯ ಬಗ್ಗೆ ಚರ್ಚೆಗಳು ನಡೆಯಲಿವೆ.
ಅತಂತ್ರ ವಿಧಾನಸಭೆ ಸೃಷ್ಟಿಯಾದರೆ ಕಿಂಗ್ ಮೇಕರ್ ಆಗಲಿರುವ ಜೆಡಿಎಸ್‌ನಲ್ಲಿ ಮಾತ್ರ ಯಾವುದೇ ಎದ್ದು ಕಾಣುವ ಸಭೆಗಳು ನಡೆದಿಲ್ಲ. ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಸಿಂಗಾಪುರಕ್ಕೆ ತೆರಳಿರುವುದರಿಂದ ಜೆಡಿಎಸ್ ನಾಯಕರುಗಳು ಸಭೆ ಸೇರಿಲ್ಲ ಎನ್ನಲಾಗಿದೆ.
ಅತಂತ್ರವಾದರೆ ರೆಸಾರ್ಟ್ ರಾಜಕೀಯ ಮುನ್ನೆಲೆಗೆ
ನಾಳೆ ಅತಂತ್ರ ವಿಧಾನಸಭೆಯ ಫಲಿತಾಂಶ ಹೊರ ಬಿದ್ದರೆ ರಾಜಕೀಯ ಪಕ್ಷಗಳು ಶಾಸಕರ ಒಗ್ಗಟ್ಟನ್ನು ಕಾಪಾಡಿಕೊಳ್ಳಲು ಹಾಗೂ ಪಕ್ಷಗಳ ಆಪರೇಷನ್‌ಗಳಿಂದ ಶಾಸಕರನ್ನು ದೂರವಿಡಲು ನಾಳೆಯಿಂದಲೇ ರೆಸಾರ್ಟ್ ರಾಜಕೀಯವನ್ನು ಆರಂಭಿಸಿದರೂ ಅಚ್ಚರಿ ಇಲ್ಲ. ಎಲ್ಲ ಪಕ್ಷಗಳು ತಮ್ಮ ತಮ್ಮ ಶಾಸಕರುಗಳನ್ನು ರೆಸಾರ್ಟ್‌ಗೆ ಕರೆದೊಯ್ಯಲು ಸಿದ್ಧವಾಗಿವೆ. ಫಲಿತಾಂಶ ಹೊರ ಬಿದ್ದ ನಂತರ ಗೆದ್ದ ಅಭ್ಯರ್ಥಿಗಳು ಸಂಜೆಯೊಳಗೆ ಬೆಂಗಳೂರಿಗೆ ಬರಬೇಕು ಎಂದು ಮೂರೂ ಪಕ್ಷಗಳ ನಾಯಕರುಗಳು ಅಭ್ಯರ್ಥಿಗಳಿಗೆ ಈಗಾಗಲೇ ಸೂಚನೆಯನ್ನೂ ನೀಡಿದ್ದಾರೆ. ಅತಂತ್ರ ವಿಧಾನಸಭೆ ಸೃಷ್ಟಿಯಾದರೆ ರೆಸಾರ್ಟ್ ರಾಜಕೀಯ ಮತ್ತೆ ಮುನ್ನೆಲೆಗೆ ಬರಲಿದೆ.