ಜನರಿಗೆ ಗಾಯದ ಮೇಲೆ ಬರೆ ಏಳೆದಂತಾಗಿದೆ ಪೆಟ್ರೋಲ್ ಬೆಲೆ ಏರಿಕೆ: ಅಬ್ದುಲ್ ಹಮೀದ್ ಮುಶ್ರೀಫ್ ಆಕ್ರೋಶ

ವಿಜಯಪುರ, ಜೂ.8-ಪೆಟ್ರೋಲ್ ಬೆಲೆ ಏರಿಸುವ ಮೂಲಕ ಸರಕಾರ ಜನರನ್ನು ಮತ್ತಷ್ಟು ಸಂಕಷ್ಟಕ್ಕೀಡು ಮಾಡುತ್ತಿದೆ ಎಂದು ಕಾಂಗ್ರೆಸ್ ಮುಖಂಡ ಅಬ್ದುಲ್ ಹಮೀದ್ ಮುಶ್ರೀಫ್ ಪ್ರಕಟಣೆಯಲ್ಲಿ ಆರೋಪಿಸಿದ್ದಾರೆ.
ಪ್ರಕಟಣೆ ನೀಡಿರುವ ಅವರು, ಈಗಾಗಲೇ ಕೊರೊನಾದಿಂದ ಲಾಕ್‍ಡೌನ್‍ನಿಂದ ಜನರು ತತ್ತರಿಸಿ ಹೋಗಿದ್ದಾರೆ. ಇಂತಹ ಕಷ್ಟದ ದಿನಗಳಲ್ಲಿ ಪೆಟ್ರೋಲ್ ದರ 100 ರೂ. ದಾಟಿರುವುದು ಜನರ ಗಾಯದ ಮೇಲೆ ಬರೆ ಎಳೆದಂತಾಗಿದೆ ಎಂದು ಹೇಳಿದ್ದಾರೆ.
ಅಚ್ಛೆ ದಿನ್ ಲಾಯೆಂಗೆ ಎಂದು ದೇಶದ ಜನರನ್ನು ಮರಳು ಮಾಡಿ ಅಧಿಕಾರಕ್ಕೆ ಬಂದ ಬಿಜೆಪಿ ಸರಕಾರ, ಜನರನ್ನು ಕಷ್ಟದ ದಿನಗಳಲ್ಲಿ ಜೀವನ ನಡೆಸುವಂತೆ ಮಾಡುತ್ತಿದೆ. ಕಳೆದ 13 ತಿಂಗಳಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಪ್ರತಿ ಲೀಟರ್‍ಗೆ ಕ್ರಮವಾಗಿ ರೂ.25.72 ಮತ್ತು ರೂ.23.93ರಷ್ಟು ಹೆಚ್ಚಾಗಿದೆ. ಇದು ಕೇಂದ್ರ ಸರ್ಕಾರ ಸಾರ್ವಜನಿಕರನ್ನು ಹೆಚ್ಚುವರಿಯಾಗಿ ಜನರನ್ನು ಲೂಟಿ ಮಾಡುತ್ತಿದೆ ಎಂದು ಅವರು ದೂರಿದ್ದಾರೆ.
ಕರ್ನಾಟಕ ಸೇರಿದಂತೆ ಕೆಲವು ರಾಜ್ಯಗಳಲ್ಲಿ ಪೆಟ್ರೋಲ್ ದರ ಲೀಟರ್‍ಗೆ 100 ರೂ. ದಾಟಿದೆ. ಇದು ಮೋದಿ ಸರ್ಕಾರ ಹೆಚ್ಚಿಸಿರುವ ತೆರಿಗೆಯಿಂದ ಆಗಿರುವ ತೈಲ ಬೆಲೆ ಏರಿಕೆಯೇ ಹೊರತು, ಕಚ್ಚಾ ತೈಲ ಬೆಲೆ ಏರಿಕೆಯಿಂದಲ್ಲ ಎಂದು ಅವರು ತಿಳಿಸಿದ್ದಾರೆ.
ಕೊರೊನಾ ಲಾಕ್‍ಡೌನ್‍ನಿಂದ ಸಂಕಷ್ಟದಲ್ಲಿ ಸಿಲುಕಿರುವ ಜನರಿಗೆ ಬೆಲೆ ಏರಿಕೆಯ ಶಾಕ್ ಕೂಡ ಉಂಟಾಗಿದೆ.
ಕೊರೊನಾ ಮಹಾಮಾರಿಯಿಂದ ಜನ ಸಾಯುತ್ತಿದ್ದಾರೆ. ಲಾಕ್‍ಡೌನ್?ನಿಂದ ಕೋಟ್ಯಾಂತರ ಜನಕ್ಕೆ ನಿತ್ಯದ ಜೀವನ ನಿರ್ವಹಣೆಯೇ ದುಸ್ತರವಾಗಿದೆ. ದೇಶದ ಆರ್ಥಿಕ ಚಟುವಟಿಕೆಗೆ ಗರ ಬಡಿದಿದೆ. ಆದರೂ ಪೆಟ್ರೋಲ್ ಬೆಲೆ ಮಾತ್ರ ಕಡಿಮೆಯಾಗಿಲ್ಲ. ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಕೆಯಾದರೆ ಸಹಜವಾಗಿ ನಿತ್ಯ ಬಳಕೆಯ ಬೇರೆಲ್ಲಾ ವಸ್ತುಗಳ ಬೆಲೆ ಹೆಚ್ಚಳವಾಗುತ್ತದೆ. ಇದರಿಂದ ಜನಸಾಮಾನ್ಯರಿಗೆ ಮತ್ತಷ್ಟು ಹೊರೆಯಾದಂತಾಗಿದೆ. ಆದ್ದರಿಂದ ಕೂಡಲೇ ಸರಕಾರ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯನ್ನು ಇಳಿಸುವಲ್ಲಿ ಕ್ರಮ ತೆಗೆದುಕೊಳ್ಳಬೇಕು ಎಂದು ಮುಶ್ರೀಫ್ ಆಗ್ರಹಿಸಿದ್ದಾರೆ.