ಜನರಿಗೆ ಉಚಿತ ಚಿಕಿತ್ಸೆ ಆಸ್ಪತ್ರೆ ನಿರ್ಮಾಣ

ಸಿಂಧನೂರು,ಫೆ.೨೫- ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ಸಂಸ್ಥಾಪಕ ಅಧ್ಯಕ್ಷರಾದ ಗಾಲಿ ಜನಾರ್ಧನ್ ರೆಡ್ಡಿಯವರ ಗರಡಿಯಲ್ಲಿ ಬೆಳೆದ ನಾನು ಅವರಂತೆ ಜನಪರ ಕೆಲಸ ಮಾಡುವ ಇಚ್ಚೆ ಹೊಂದಿದ್ದು, ನಿಮ್ಮ ಸೇವೆ ಮಾಡಲು ನನಗೊಂದು ಅವಕಾಶ ಕೊಡುವಂತೆ ಪಕ್ಷದ ಸಿಂಧನೂರು ವಿಧಾನ ಸಭಾ ಕ್ಷೇತ್ರದ ಅಭ್ಯರ್ಥಿಯಾದ ಮಲ್ಲಿಕಾರ್ಜುನ ನೆಕ್ಕುಂಟಿ ಜನರಲ್ಲಿ ಮನವಿ ಮಾಡಿಕೊಂಡರು.
ನಗರದ ಪಕ್ಷದ ಕಛೇರಿಯಲ್ಲಿ ಪಕ್ಷ ಸೇರ್ಪಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕ್ಷೇತ್ರದ ಜನರ ಆರೋಗ್ಯ ನನಗೆ ಮುಖ್ಯ ಅದಕ್ಕಾಗಿ ಉತ್ತಮ ಗುಣಮಟ್ಟದ ಆಸ್ಪತ್ರೆಯ ನಿರ್ಮಾಣ ಮಾಡಿ, ಎಲ್ಲ ತರಹದ ರೋಗಿಗಳಿಗೆ ಉಚಿತ ಚಿಕಿತ್ಸೆ ನೀಡುವ ಮನಸ್ಸು ಮಾಡಿದ್ದೇನೆ ಎಂದರು.
ಸದಾ ಜನರ ಸೇವೆಗಾಗಿ ಇರುವ ಪಕ್ಷ ನಮ್ಮದು. ಅಧಿಕಾರ ಇರಲಿ, ಬಿಡಲಿ ಜನರ ಧ್ವನಿಯಾಗಿ ನಾನು ಕೆಲಸ ಮಾಡುವೆ ಜನರಿಗೆ ಸುಳ್ಳು ಹೇಳಿ ಮೋಸ ಮಾಡುವ ರಾಷ್ಟ್ರೀಯ ಪಕ್ಷಗಳನ್ನು ಬೆಂಬಲಿಸದೆ ಜನಪರವಾಗಿ ಕೆಲಸ ಮಾಡುವ ಪ್ರಾದೇಶಿಕ ಪಕ್ಷವಾದ ಕೆಆರ್‌ಪಿಪಿ ಪಕ್ಷಕ್ಕೆ ಬೆಂಬಲಿಸಬೇಕು ಎಂದು ಅವರು ಜನರಲ್ಲಿ ಮನವಿ ಮಾಡಿಕೊಂಡರು.
೧೦ ಸಾವಿರ ಮಹಿಳೆಯರು ಒಂದೆಡೆ ಸೇರಿ ಕೆಲಸ ಮಾಡುವ ಗಾರ್ಮಂಟ್ ಫಾಕ್ಟರಿಯನ್ನು ಸಿಂಧನೂರಿನಲ್ಲಿ ಆರಂಭಿಸಿ ಮಹಿಳೆಯರಿಗೆ ಉದ್ಯೋಗ ನೀಡಿ ಅವರನ್ನು ಸ್ವಾವಲಂಬಿಗಳನ್ನಾಗಿ ಮಾಡಲಾಗುವುದು ಎಂದು ಅವರು ಮಹಿಳೆಯರು, ವಿದ್ಯಾರ್ಥಿ, ಯುವಜನರು, ಕೃಷಿ ಕಾರ್ಮಿಕರು,ರೈತರು ಸೇರಿದಂತೆ ಎಲ್ಲ ವರ್ಗದ ಜನರಿಗಾಗಿ ಪಕ್ಷ ಶ್ರಮಿಸುತ್ತಿದೆ ಎಂದರು.
ಪಕ್ಷದ ಯುವ ಘಟಕದ ತಾಲುಕಾ ಅಧ್ಯಕ್ಷರಾದ ಹನುಮನಗೌಡ ಹಟ್ಟಿ, ಗ್ಯಾನಪ್ಪ, ವೀರಬಾಬು, ಪರ್ವತ ರೆಡ್ಡಿ, ನವೀನ್, ಮೌನೇಶ, ನಟರಾಜ ಸೇರಿದಂತೆ ಇನ್ನಿತರರು ಇದ್ದರು.
ಇಂದಿರಾ ನಗರ, ವೆಂಕಟೇಶ್ವರ ಕಾಲೋನಿ, ಗಂಗಾನಗರ, ಸುಕಾಲ ಪೇಟೆ, ಫಿಡ್ಲಬ್ಯೂಡಿ ಕ್ಯಾಂಪ, ಸೇರಿದಂತೆ ಇನ್ನಿತರ ಏರೀಯಾಗಳ ನೂರಾರು ಮಹಿಳೆಯರನ್ನು ಮಲ್ಲಿಕಾರ್ಜುನ ನಕ್ಕಂಟಿ ಪಕ್ಷಕ್ಕೆ ಬರಮಾಡಿಕೊಂಡರು.