ಜನರಿಗೆ ಆರೋಗ್ಯ ಸೌಲಭ್ಯಗಳನ್ನು ಒದಗಿಸಿ: ಪರಮೇಶ್ವರನ್ ಅಯ್ಯರ್

ನೀತಿ ಆಯೋಗದ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಿಂದ ವಿವಿಧ ಕಡೆ ಭೇಟಿ, ಪರಿಶೀಲನೆ
ರಾಯಚೂರು.ಜು.೧೭- ಜನರಿಗೆ ಉತ್ತಮ ಆರೋಗ್ಯ ಸೌಲಭ್ಯಗಳನ್ನು ಒದಗಿಸುವ ಉದ್ದೇಶದೊಂದಿಗೆ ಕೇಂದ್ರ ಸರ್ಕಾರವು ಹಲವಾರು ಯೋಜನೆಗಳನ್ನು ಜಾರಿಗೆ ತಂದಿದ್ದು, ಪ್ರತಿಯೊಬ್ಬ ಭಾರತೀಯನು ಸದುಪಯೋಗಪಡಿಸಿಕೊಳ್ಳಬಹುದಾಗಿದೆ ಎಂದು ಕೇಂದ್ರ ನೀತಿ ಆಯೋಗದ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಪರಮೇಶ್ವರನ್ ಅಯ್ಯರ್ ಅವರು ಹೇಳಿದರು.
ಅವರು ಜು.೧೬ರ ಶನಿವಾರ ದಂದು ತಾಲೂಕಿನ ಚಂದ್ರಬಂಡ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿ, ರೋಗಿಗಳಿಗೆ ವಿತರಿಸಲಾಗುತ್ತಿರುವ ಸೌಲಭ್ಯವನ್ನು ವೀಕ್ಷಣೆ ಮಾಡಿ, ಮಾತನಾಡಿದರು.
ಈ ವೇಳೆ ಆಸ್ಪತ್ರೆಯ ಶೌಚಾಲಯಗಳು, ಔಷಧಿ, ಆರೋಗ್ಯ ಯಂತ್ರೋಪಕರಣಗಳನ್ನು ವೀಕ್ಷಣೆ ಮಾಡಿ, ಆರೋಗ್ಯ ಇಲಾಖೆಯಿಂದ ಸಾರ್ವಜನಿಕರಿಗೆ ಬೇಕಾಗುವ ಅಗತ್ಯ ನೆರೆವನ್ನು ದಿನದ ೨೪ಗಂಟೆಗಳ ಕಾಲ ನೀಡುವಂತೆ ಆರೋಗ್ಯ ಇಲಾಖೆಯ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಅಂಗನವಾಡಿ ಕೇಂದ್ರಕ್ಕೆ ಭೇಟಿ: ನಗರದ ಪೊಲೀಸ್ ಕಾಲೋನಿಯ ಅಂಗನವಾಡಿ ಕೇಂದ್ರಕ್ಕೆ ನೀತಿ ಆಯೋಗದ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಪರಮೇಶ್ವರನ್ ಅಯ್ಯರ್ ಭೇಟಿ ನೀಡಿ, ಅಂಗನವಾಡಿ ಕೇಂದ್ರದ ಮಕ್ಕಳ ಕಾರ್ಯ ಚಟುವಟಿಕೆಗಳನ್ನು ಪರಿಶೀಲನೆ ಮಾಡಿದರು.
ಅಂಗನವಾಡಿ ಕೇಂದ್ರದ ಮಕ್ಕಳೊಂದಿಗೆ ಕೆಲಕಾಲ ಸಮಯವನ್ನು ಕಳೆದರು. ಅಲ್ಲದೆ ಅಂಗನವಾಡಿ ವಾತಾವರಣ ನೋಡಿ ಸಂಬಂಧಿಸಿದ ಅಧಿಕಾರಿಗಳಿಗೆ ಪ್ರಶಂಸೆ ವ್ಯಕ್ತಪಡಿಸಿದರು.
ಇದಕ್ಕೂ ಮುಂಚೆ ಬೆಳಿಗ್ಗೆ ೬ಗಂಟೆಗೆ ನಗರದ ಹೊರವಲಯದ ಸರ್ಕಿಟ್ ಹೌಸ್ ಸಭಾಂಗಣದಲ್ಲಿ ಮಹತ್ವಾಕಾಂಕ್ಷಿ ಜಿಲ್ಲೆ ಯೋಜನೆಯ ಕುರಿತು ಪ್ರಗತಿ ಪರಿಶೀಲನಾ ಸಭೆಯನ್ನು ಜಿಲ್ಲಾ ಮಟ್ಟದ ಅಧಿಕಾರಿಗಳೊಂದಿಗೆ ನಡೆಸಿ, ಕೇಂದ್ರ ನೀತಿ ಆಯೋಗದಿಂದ ಜಾರಿಯಾಗುವ ಯೋಜನೆಗಳನ್ನು ಪರಿಣಾಮಕಾರಿ ಅನುಷ್ಠಾನಗೊಳಿಸುವ ಮೂಲಕ ಮಹತ್ವಕಾಂಕ್ಷಿ ಯೋಜನೆಯ ಪಟ್ಟಿಯಿಂದ ರಾಯಚೂರು ಜಿಲ್ಲೆಯನ್ನು ಹೊರಗಡೆ ತರಲು ಅಧಿಕಾರಿಗಳು ಶ್ರಮಿಸಿಬೇಕೆಂದರು.
ಇದೇ ಸಂದರ್ಭದಲ್ಲಿ ಕೇಂದ್ರ ಜಲಶಕ್ತಿ ಸಚಿವಾಲಯದ ಹಿರಿಯ ವಿಜ್ಞಾನಿ ಎಚ್.ಪ್ರಕಾರಂ, ಕೇಂದ್ರ ಜಲಶಕ್ತಿ ಇಲಾಖೆ ಜಂಟಿ ಕಾರ್ಯದರ್ಶಿ ಸುಭೋದ್ ಯಾದವ್, ಆರೋಗ್ಯ ಇಲಾಖೆಯ ಜಂಟಿ ಕಾರ್ಯದರ್ಶಿ ಅಶೋಕ ಬಾಬು, ನೀತಿ ಆಯೋಗದ ಯೋಜನಾ ನಿರ್ದೇಶಕ ರಾಕೇಶ್ ರಾಜನ್, ಜಿಲ್ಲಾಧಿಕಾರಿ ಎಲ್.ಚಂದ್ರಶೇಖರ ನಾಯಕ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ನೂರ್ ಜಹರಾ ಖಾನಂ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಿಖಿಲ್.ಬಿ, ಅಪರ ಜಿಲ್ಲಾಧಿಕಾರಿ ಡಾ.ಕೆ.ಆರ್.ದುರುಗೇಶ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅಧಿಕಾರಿ ಡಾ.ಸುರೇಂದ್ರ ಬಾಬು, ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ವೃಷಬೇಂದ್ರಯ್ಯ ಸ್ವಾಮಿ, ನಗರಾಭಿವೃದ್ಧಿ ಕೋಶದ ಯೋಜನಾಧಿಕಾರಿ ಮಹೇಂದ್ರ ಕುಮಾರ್, ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಅಧಿಕಾರಿ ಬಿಲಾಸ್, ರಾಯಚೂರು ತಹಸೀಲ್ದಾರ್ ರಾಜಶೇಖರ ಸೇರಿದಂತೆ ಇತರರು ಇದ್ದರು.