ಜನರಿಗೆ ಆಕಾಶ ಕಡೆ ಬೆರಳು ತೋರಿಸುತ್ತಿರುವ ಖೂಬಾ: ಅರಳಿ ವಾಗ್ದಾಳಿ

ಬೀದರ್:ಜು.12: ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಬಿ. ಖಂಡ್ರೆ ಹಾಗೂ ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಖಾತೆ ರಾಜ್ಯ ಸಚಿವ ಭಗವಂತ ಖೂಬಾ ನಡುವಿನ ಶೀತಲ ಸಮರ ಸದ್ಯ ನಿಲ್ಲುವ ಲಕ್ಷಣಗಳು ಕಾಣಿಸುತ್ತಿಲ್ಲ.

ದಿನೇ ದಿನೇ ಇದು ಬೇರೆಯ ಸ್ವರೂಪ ಪಡೆದುಕೊಳ್ಳುತ್ತಿದೆ. ಸೋಮವಾರವಷ್ಟೇ ಖಂಡ್ರೆ ವಿರುದ್ಧ ವಾಗ್ದಾಳಿ ನಡೆಸಿದ್ದ ಖೂಬಾ ವಿರುದ್ಧ ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಬಸವರಾಜ ಜಾಬಶೆಟ್ಟಿ, ವಿಧಾನ ಪರಿಷತ್ ಸದಸ್ಯ ಅರವಿಂದಕುಮಾರ ಅರಳಿ ಅವರು ಮಂಗಳವಾರ ವಾಕ್ಪ್ರಹಾರ ಮಾಡಿದ್ದಾರೆ.

‘ತಾನು ಕಳ್ಳ ಪರರನ್ನು ನಂಬ ಎಂಬಂತೆ ಬರೀ ಸುಳ್ಳಿನ ಸಾಮ್ರಾಜ್ಯ ಕಟ್ಟುತ್ತಿರುವ, ಜನರಿಗೆ ಆಕಾಶ ತೋರಿಸುತ್ತಿರುವ ಭಗವಂತ ಖೂಬಾ ಅವರಿಗೆ ಖಂಡ್ರೆಯವರ ಬಗ್ಗೆ ಮಾತನಾಡುವ ಯೋಗ್ಯತೆಯೇ ಇಲ್ಲ. ಖಾಲಿ ಡಬ್ಬ ಸದಾ ಸದ್ದು ಮಾಡುತ್ತದೆ’ ಎಂದು ಟೀಕಿಸಿದ್ದಾರೆ.

ಬೀದರ್ -ಕಮಲನಗರ, ನೌಬಾದ್- ಹುಮನಾಬಾದ್ ರಾಜ್ಯ ಹೆದ್ದಾರಿಯಿಂದ ರಾಷ್ಟ್ರೀಯ ಹೆದ್ದಾರಿಗೆ ಮೇಲ್ದರ್ಜೆಗೇರಿಸಿದ್ದು ಕಾಂಗ್ರೆಸ್ ಸರ್ಕಾರ. ನಂತರ ಈ ಕಾಮಗಾರಿ ಟೆಂಡರ್ ಆದಾಗ ನೀವೇ ಸಂಸದರಾಗಿದ್ದೀರಿ. ಗುಣಮಟ್ಟದ ಕಾಮಗಾರಿ ಹೊಣೆ ನಿಮ್ಮ ಹೆಗಲ ಮೇಲಿತ್ತು. ಆದರೆ, ಕಳಪೆ ಕಾಮಗಾರಿ ಮಾಡಿದ ಗುತ್ತಿಗೆದಾರರೊಂದಿಗೆ ಶಾಮೀಲಾಗಿ ಜಿಲ್ಲೆಯ ಜನತೆಗೆ ದ್ರೋಹ ಮಾಡಿದವರು ನೀವು. ಕಳಪೆ ಕಾಮಗಾರಿ ಮತ್ತು ಲೋಪವನ್ನು ಬಯಲು ಮಾಡಿದ್ದೇ ಈಶ್ವರ ಖಂಡ್ರೆ ಅವರು. ಈಗ ಅವರ ವಿರುದ್ಧ ಮಾತನಾಡಲು ನಿಮಗೆ ಯಾವ ನೈತಿಕತೆ ಇದೆ? ಎಂದು ಪ್ರಶ್ನಿಸಿದ್ದಾರೆ.

ಬೀದರ್ ರಿಂಗ್ ರೋಡ್‍ಗೆ ಕೆಕೆಆರ್‍ಡಿಬಿಯಿಂದ ?50 ಕೋಟಿ ಮಂಜೂರು ಮಾಡಿಸಿದವರೇ ಖಂಡ್ರೆ ಮತ್ತು ಮಾಜಿ ಶಾಸಕ ರಾಜಶೇಖರ ಪಾಟೀಲ ಅವರು. ಆದರೆ, ಆಗ ಅಕಾಲಿಕ ಮಳೆ ಬಂದು ರಸ್ತೆಗಳು ಹದಗೆಟ್ಟಾಗ, ಜನರ ಸುಗಮ ಸಂಚಾರ ಮತ್ತು ಅನುಕೂಲಕ್ಕಾಗಿ ?10 ಕೋಟಿ ಅನುದಾನ ಬಳಸಿಕೊಂಡು ಜನದಟ್ಟಣೆಯ ರಸ್ತೆಗಳನ್ನು ದುರಸ್ತಿ ಮಾಡಿಸಿದ ಖಂಡ್ರೆ ಅವರ ಕೆಲಸವನ್ನು ಮಾಧ್ಯಮಗಳೇ ಹಾಡಿ ಹೊಗಳಿವೆ. ಅವರ ಏಳಿಗೆ ಸಹಿಸಲಾರದೆ ಅವರ ವಿರುದ್ಧ ಆರೋಪ ಮಾಡುತ್ತಿರುವುದು ನೋಡಿದರೆ ಅಯ್ಯೋ ಪಾಪ ಎನಿಸುತ್ತದೆ ಎಂದು ವ್ಯಂಗ್ಯವಾಡಿದ್ದಾರೆ.

ಎರಡು ಸಲ ಸಂಸತ್ ಸದಸ್ಯರಾದರೂ ಜಿಲ್ಲೆಗೆ ಏನೂ ಕೊಡುಗೆ ನೀಡಿಲ್ಲ. ?50 ಕೋಟಿ ಅನುದಾನ ತಂದು ಸಿಪೆಟ್ ಕೆಲಸ ಆರಂಭಿಸುತ್ತೇನೆ ಎಂದು ಹೇಳಿದ್ದೀರಿ. ಆದರೆ, ಆ ಕೆಲಸವಾಗಿಲ್ಲ. ಆ ಹಣ ಎಲ್ಲಿಗೆ ಹೋಗಿದೆ. ಫಸಲ್ ವಿಮೆ ಯೋಜನೆ ರೈತರ ಪಾಲಿಗೆ ಸಂಜೀವಿನಿ ಎಂದು ಹೇಳುತ್ತಿದ್ದೀರಿ. ಈವರೆಗೆ ಬೀದರ್ ಜಿಲ್ಲೆಯಲ್ಲಿ ಕೇಂದ್ರ ಸರ್ಕಾರ, ರಾಜ್ಯ ಸರ್ಕಾರ ಮತ್ತು ರೈತರು ಪಾವತಿಸಿರುವ ಕಂತಿನ ಹಣ ಎಷ್ಟು? ವಿಮಾ ಕಂಪನಿಗಳು ರೈತರಿಗೆ ನೀಡಿರುವ ಪರಿಹಾರದ ಮೊತ್ತ ಎಷ್ಟು ಎಂಬುದರ ಬಗ್ಗೆ ಶ್ವೇತಪತ್ರ ಹೊರಡಿಸಬೇಕು. ಈ ಯೋಜನೆ ಸಂಜೀವಿನಿಯೋ ಅಥವಾ ಹಾಲಾಹಲವೋ ಎಂಬುದು ಗೊತ್ತಾಗುತ್ತದೆ ಎಂದು ಸವಾಲು ಹಾಕಿದ್ದಾರೆ.

ವೀರಶೈವ ಲಿಂಗಾಯತ ಮಹಾಸಭಾದ ಮಹಾ ಪ್ರಧಾನಕಾರ್ಯದರ್ಶಿಯಾದ ಖಂಡ್ರೆ ಅವರು ಸಮುದಾಯಕ್ಕೆ ಏನೂ ಮಾಡಿಲ್ಲ ಎನ್ನುವುದು ಶುದ್ಧ ಸುಳ್ಳು. ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮಕ್ಕೆ ಈ ಬಾರಿಯ ಬಜೆಟ್ ನಲ್ಲಿ ಸಿದ್ದರಾಮಯ್ಯ ಅವರು ಅನುದಾನ ನೀಡಿದ್ದಾರೆ. ಹಿಂದಿನ ಸರ್ಕಾರ ತೋರಿಕೆಗಾಗಿ ಮೊದಲ ವರ್ಷ ಬಸವಕಲ್ಯಾಣದ ಅನುಭವ ಮಂಟಪಕ್ಕೆ ?500 ಕೋಟಿ, ನಂತರದ ಎರಡು ವರ್ಷಗಳಲ್ಲಿ ತಲಾ ?100 ಕೋಟಿ ಘೋಷಿಸಿದರೂ ಈವರೆಗೆ ಖರ್ಚು ಮಾಡಿರುವುದು ?10 ಕೋಟಿಯಷ್ಟೇ. ಲಿಂಗಾಯತ ಸಮುದಾಯಕ್ಕೆ ನೀವು ಮತ್ತು ನಿಮ್ಮದೇ ಪಕ್ಷದ ಸರ್ಕಾರ ಮಾಡಿದ ದ್ರೋಹವಲ್ಲವೇ? ಎಂದು ಕೇಳಿದ್ದಾರೆ.

ಕಾಂಗ್ರೆಸ್ ಸರ್ಕಾರ ನುಡಿದಂತೆ ನಡೆಯುತ್ತಿದೆ. ಎಲ್ಲಾ ಗ್ಯಾರಂಟಿಗಳನ್ನು ಈಡೇರಿಸುತ್ತಿದೆ. ಸರ್ವರಿಗೂ ಸಮಪಾಲು, ಸರ್ವರಿಗೂ ಸಹಬಾಳ್ವೆ ಎನ್ನುವ ರೀತಿಯಲ್ಲಿ ?52 ಸಾವಿರ ಕೋಟಿ ವೆಚ್ಚ ಮಾಡಿ ಜನ ಕಲ್ಯಾಣ, ಸಾಮಾಜಿಕ ಭದ್ರತೆಗೆ ಮುಂದಾಗಿದೆ. ರಾಜ್ಯದಲ್ಲಿ ಜನರಿಗೆ ಕಾಂಗ್ರೆಸ್ ಸರ್ಕಾರದ ಮೇಲೆ ವಿಶ್ವಾಸ ಹೆಚ್ಚಿದೆ. ಬರುವ ಲೋಕಸಭೆ ಚುನಾವಣೆಯಲ್ಲಿ ಸೋಲುವ ಭೀತಿಯಿಂದ ಬಾಯಿಗೆ ಬಂತಂತೆ ಮಾಡನಾಡುತ್ತಿದ್ದೀರಿ ಎಂದು ತಿಳಿಸಿದ್ದಾರೆ.

ಭಾಲ್ಕಿಯಲ್ಲಿ ಕ್ರೀಡಾಂಗಣ ಇಲ್ಲ ಎಂದು ಖೂಬಾ ಟೀಕಿಸಿದ್ದಾರೆ. ನಿಮ್ಮದೇ ಡಬಲ್ ಎಂಜಿನ್ ಸರ್ಕಾರವಿದ್ದಾಗ ಏನು ಮಾಡುತ್ತಿದ್ದೀರಿ. ನೀವು ಭಾಲ್ಕಿ ಜನರಿಂದ ಮತ ಪಡೆದು ಸಂಸದರಾಗಿಲ್ಲವೇ? ಈಶ್ವರ ಖಂಡ್ರೆ ಅವರು ಕ್ರೀಡಾಂಗಣಕ್ಕೆ ಜಾಗ ಗುರುತಿಸಿ, ಅದನ್ನು ನೀಡುವಂತೆ ಸರ್ಕಾರಕ್ಕೆ ಪದೇ ಪದೇ ಕೋರಿದರೂ ಮಾಡಿಲ್ಲ. ಭಾಲ್ಕಿಯ ಯುವ ಪೀಳಿಗೆಗೆ ಘೋರ ಅನ್ಯಾಯ ಮಾಡಿದವರು ನೀವು. ಬೇರೆಯವರ ವಿರುದ್ಧ ಆರೋಪ ಮಾಡುವುದು ಎಷ್ಟರಮಟ್ಟಿಗೆ ಸರಿ? ಎಂದು ಪ್ರಶ್ನಿಸಿದ್ದಾರೆ.