ಜನರಿಗಾಗುವ ತೊಂದರೆ ತಪ್ಪಿಸಲು ತಹಸೀಲ್ದಾರ್‌ಗೆ ಕಾಂಗ್ರೆಸ್ ಮನವಿ

ಲಸಿಕಾ ಕೇಂದ್ರದಲ್ಲಿ ಬಿಜೆಪಿ ಕಾರ್ಯಕರ್ತರಿಂದ ಅಧಿಕಾರಿಗಳ ಮೇಲೆ ಒತ್ತಡದ ಆರೋಪ
ಸುಳ್ಯ , ಜೂ.೧- ಕೋವಿಡ್ ಲಸಿಕೆ ಸರಕಾರ ಉಚಿತವಾಗಿ ನೀಡುತ್ತಿದ್ದು ಸುಳ್ಯ ಕೆ.ವಿ.ಜಿ. ಪುರಭವನದಲ್ಲಿ ಲಸಿಕೆ ವಿತರಣೆ ನಡೆಯುತ್ತಿದೆ. ಆದರೆ ಇಲ್ಲಿ ಬಿಜೆಪಿ ಪಕ್ಷದ ಕಾರ್ಯಕರ್ತರು ಲಸಿಕಾ ಕೇಂದ್ರದ ಅಧಿಕಾರಿಗಳ ಮೇಲೆ ಒತ್ತಡ ಹೇರುತ್ತಿದ್ದಾರೆ ಇದರಿಂದ ಜನ ಸಾಮಾನ್ಯರಿಗೂ ತೊಂದರೆ ಆಗುತ್ತಿದೆ. ಆದ್ದರಿಂದ ಲಸಿಕಾ ಕೇಂದ್ರದಲ್ಲಿ ಅಧಿಕಾರಿಗಳು ಮಾತ್ರ ಕೆಲಸ ನಿರ್ವಹಿಸುವಂತೆ ಅವರಿಗೆ ಅನುಕೂಲ ಮಾಡಿಕೊಡಬೇಕು ಎಂದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪಿ.ಸಿ. ಜಯರಾಮರ ನೇತೃತ್ವದಲ್ಲಿ ಕಾಂಗ್ರೆಸ್ ನಿಯೋಗ ತಹಸೀಲ್ದಾರ್ ಮೂಲಕ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿತು.
ಕೊರೊನಾ ಹಿಮ್ಮೆಟ್ಟಿಸುವ ಸಲುವಾಗಿ ಲಸಿಕೆ ಹಾಕಿಸಿಕೊಳ್ಳಲು ಜನರು ಲಸಿಕಾ ಕೇಂದ್ರಕ್ಕೆ ಬರುತ್ತಿದ್ದಾರೆ. ಬಹಳಷ್ಟು ಜನ ಎರಡು ಮೂರು ಬಾರಿ ಬಂದರೂ ಲಸಿಕೆ ಸಿಗುತ್ತಿಲ್ಲ. ಇದರ ಮಧ್ಯೆ ನಮ್ಮ ತಾಲೂಕಿನ ಕೆಲವು ಕಡೆ ಬಿಜೆಪಿ ಪಕ್ಷದ ಕಾರ್ಯಕರ್ತರು ಅಧಿಕಾರಿಗಳು ಮಾಡಬೇಕಾದ ಜವಾಬ್ದಾರಿಯುತ ಕೆಲಸಗಳನ್ನು ತಾವೇ ಮುಂದೆ ನಿಂತು ಲಸಿಕೆಯನ್ನು ತಾವೇ ನೀಡುತ್ತಿರುವುದಾಗಿ ಅಕ್ಷರಶಃ ಒಂದು ರಾಜಕೀಯ ಪಕ್ಷವೇ ನಡೆಸುತ್ತಿರುವುದಾಗಿ ಪ್ರಚಾರ ಗಿಟ್ಟಿಸಿಕೊಳ್ಳುವುದಕ್ಕೆ ಲಸಿಕಾ ಕೇಂದ್ರವನ್ನು ಬಳಸಿಕೊಂಡಿದ್ದು ನಿಜಕ್ಕೂ ದುರಾದೃಷ್ಟಕರ. ಇದು ಆಡಳಿತದ ಮತ್ತು ಅಧಿಕಾರಿಗಳ ವೈಫಲ್ಯ.ಇದರಿಂದ ಲಸಿಕಾ ಕೇಂದ್ರಕ್ಕೆ ಲಸಿಕೆಗೆ ಹೋಗುವ ಜನಸಾಮಾನ್ಯರು ಕಿರಿಕಿರಿ ಮತ್ತು ಮುಜುಗರಕ್ಕೀಡಾಗುವ ಪ್ರಸಂಗ ಉಂಟಾಗಿದೆ. ಜನಪ್ರತಿನಿಧಿಯಲ್ಲದಿದ್ದರೂ ಅಂತವರು ಒಂದು ಪಕ್ಷದ ಕಾರ್ಯಕರ್ತರಾಗಿ ಲಸಿಕಾ ಕೇಂದ್ರದ ಒಳಗಡೆ ನಿಂತು ಪಕ್ಷದ ಕೆಲಸ ಮಾಡುತ್ತಿರುವುದು ಆಕ್ಷೇಪಾರ್ಹ.ಇಂತಹ ಸಂದರ್ಭದಲ್ಲಿ ಬೆಂಗಳೂರು ಮಹಾನಗರದಲ್ಲಿ ಸಂಸದ ತೇಜಸ್ವಿಸೂರ್ಯ ಸಂಬಂಧಿ ಆಡಳಿತ ಪಕ್ಷದ ಶಾಸಕ ರವಿ ಸುಬ್ರಹ್ಮಣ್ಯರಿಗೆ ಒಂದು ವ್ಯಾಕ್ಸಿನ್‌ನಲ್ಲಿ ರೂ. ೭೦೦ ಕಮಿಷನ್ ಹೋಗುತ್ತದೆ ಎಂಬ ಸುದ್ದಿ ಮಾಧ್ಯಮಗಳಲ್ಲಿ ನೋಡಿದ್ದೇವೆ.
ಈ ಭಾಗದಲ್ಲಿ ಆಡಳಿತ ಪಕ್ಷದ ಕಾರ್ಯಕರ್ತರು ಲಸಿಕೆ ಕೊಡುವ ನೆಪದಲ್ಲಿ ಪಕ್ಷ ಕಟ್ಟುವ ಕೆಲಸ ಮಾಡುತ್ತಾರೋ ಅಥವಾ ಬೆಂಗಳೂರು ಬಿಬಿಎಂಪಿಯಲ್ಲಿ ಲಸಿಕೆಯಲ್ಲಿ ಆಡಳಿತ ಪಕ್ಷದ ಶಾಸಕರಿಗೆ ಕಮಿಷನ್ ಹೋದಂತೆ ಇಲ್ಲಿಯೂ ಹೋಗುತ್ತದೋ ಎಂಬಂತೆ ಸಂಶಯ ಪಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಹಾಗಾಗಿ ಲಸಿಕಾ ಕೇಂದ್ರದಲ್ಲಿ ಪಾರದರ್ಶಕತೆ ಕಾಪಾಡುವ ದೃಷ್ಟಿಯಿಂದ ಅಧಿಕಾರಿಗಳೇ ಕರ್ತವ್ಯ ನಿರ್ವಹಿಸುವಂತೆ ಕಾಂಗ್ರೆಸ್ ಒತ್ತಾಯಿಸುತ್ತದೆ. ಇಲ್ಲದಿದ್ದಲ್ಲಿ ಪಕ್ಷ ಬೀದಿಗಿಳಿದು ಹೋರಾಟ ಮಾಡಬೇಕಾಗುತ್ತದೆ ಎಂದು ತಹಸೀಲ್ದಾರರಿಗೆ ಸಲ್ಲಿಸಿದ ಮನವಿಯಲ್ಲಿ ತಿಳಿಸಲಾಗಿದೆ.
ಮನವಿಯನ್ನು ಸ್ವೀಕರಿಸಿದ ತಹಸಿಲ್ದಾರ್ ಲಸಿಕಾ ಕೇಂದ್ರದಲ್ಲಿ ಲಸಿಕ ನೇತೃತ್ವವನ್ನು ಸುಳ್ಯ ವೈದ್ಯಾಧಿಕಾರಿಗಳ ನೇತೃತ್ವದಲ್ಲಿ ನಡೆಯುತ್ತಿದ್ದು ಯಾವುದೇ ರೀತಿಯ ಪಕ್ಷದ ಕಾರ್ಯಕ್ರಮಕ್ಕೆ ಅನುಮತಿ ನೀಡಿಲ್ಲ. ಲಸಿಕಾ ಕೇಂದ್ರದಲ್ಲಿ ಜನರ ಬಿಡು ಹೆಚ್ಚಾದಾಗ ಸ್ವಯಂಸೇವಕರಾಗಿ ಸಂಘಟನೆಯ ಕಾರ್ಯಕರ್ತರು ಸಹಾಯ ಮಾಡಲು ಮುಂದೆ ಬಂದಿದ್ದರು. ಈ ವಿಷಯ ತಿಳಿದ ಕೂಡಲೇ ಇದನ್ನು ಸರಿಪಡಿಸುವ ಕಾರ್ಯ ತಾಲೂಕು ಆಡಳಿತದಿಂದ ನಡೆದಿದೆ ಎಂದು ಹೇಳಿದರು.
ಪಿ.ಎಸ್.ಗಂಗಾಧರರು, ನನ್ನ ಪತ್ನಿ ಲಸಿಕಾ ಕೇಂದ್ರಕ್ಕೆ ಬಂದಾಗ ಸಮಸ್ಯೆಯಾಗಿದೆ. ಅಲ್ಲಿದ್ದವರು ವಾಪಾಸು ಕಳುಹಿಸಿದ್ದಾರೆ ಎಂದು ಹೇಳಿದಾಗ, ಯಾರು ಕಳುಹಿಸಿದ್ದಾರೆ ಎಂದು ನನಗೆ ಸ್ಪಷ್ಟವಾಗಿ ಹೇಳಿ. ನಾನು ಅಕ್ಷನ್ ತೆಗೆದುಕೊಳ್ಳುತ್ತೇನೆ. ಜನರಲ್ ಆಗಿ ಹೇಳುವುದು ಬೇಡ ಎಂದು ಹೇಳಿದರು. ಆಗ ವೆಂಕಪ್ಪ ಗೌಡರು ಮತ್ತು ಪಿ.ಸಿ.ಜಯರಾಮರು ಕೌಂಟರ್‌ನಲ್ಲಿ ಬಿಜೆಪಿ ಕಾರ್ಯಕರ್ತರು ಕುಳಿತಿರುತ್ತಾರೆ. ಇದು ಸರಿಯಲ್ಲ. ಲಸಿಕೆಯ ಬಗ್ಗೆ ಗ್ರೂಪ್‌ಗಳಿಗೆ ಅವರೇ ಮೆಸೇಜ್ ಹಾಕುತ್ತಾರೆ. ಇದೆಲ್ಲಾ ನಮ್ಮ ಗಮನಕ್ಕೆ ಬಂದಿದೆ. ಇದೆಲ್ಲವನ್ನೂ ಅಧಿಕಾರಿಗಳು ಮಾಡಬೇಕು. ಇಲ್ಲದಿದ್ದರೆ ನಾವು ಪ್ರತಿಭಟಿಸುತ್ತೇವೆ. ಲಸಿಕೆ ಎಲ್ಲರಿಗೂ ದೊರೆಯುವ ವ್ಯವಸ್ಥೆ ಸಮರ್ಪಕವಾಗಿ ಆಗಬೇಕು ಎಂದು ಅವರು ಹೇಳಿದಾಗ, ತಹಶೀಲ್ದಾರರು ಅಲ್ಲಿ ಇಲಾಖೆಯ ಅಧಿಕಾರಿಗಳೇ ಕರ್ತವ್ಯದಲ್ಲಿದ್ದಾರೆ. ಪೊಲೀಸರು ಕೂಡಾ ಇರುವ ವ್ಯವಸ್ಥೆ ಮಾಡಲಾಗುವುದು ಎಂದು ಹೇಳಿದರು
ಮನವಿಯ ಸಂದರ್ಭದಲ್ಲಿ ಕಾಂಗ್ರೆಸ್ ಪ್ರಮುಖರಾದ ಎಂ.ವೆಂಕಪ್ಪ ಗೌಡ, ಪಿ.ಎಸ್.ಗಂಗಾಧರ್, ಎಂ.ಜೆ.ಶಶಿಧರ, ದಿನೇಶ್ ಅಂಬೆಕಲ್ಲು, ಕೆ.ಗೋಕುಲ್‌ದಾಸ್, ಶರೀಫ್ ಕಂಠಿ, ನಾರಾಯಣ ಜಟ್ಟಿಪಳ್ಳ, ನಂದರಾಜ ಸಂಕೇಶ, ಧನಂಜಯ ಅಂಬೆಕಲ್ಲು, ಕೀರ್ತನ್ ಕೊಡಪಾಲ, ಭವಾನಿಶಂಕರ್ ಕಲ್ಮಡ್ಕ, ಶಾಹುಲ್ ಹಮೀದ್, ಚೇತನ್ ಕಜೆಗದ್ದೆ ಇದ್ದರು.