ಜನರಿಕ್ ಔಷಧ ಮಳಿಗೆ ನಿರ್ಲಕ್ಷಿಸಿದೆ ಸಾಲಸೌನಭ್ಯ ಕಡಿತ

ಕೋಲಾರ.ಏ.೨೩- ಬಡವರಿಗೆ ಆರೋಗ್ಯ ಸೇವೆ ಒದಗಿಸುವ ಪುಣ್ಯದ ಕೆಲಸವಾದ ಜನರಿಕ್ ಔಷಧ ಮಳಿಗೆ ಆರಂಭಿಸುವ ಕುರಿತು ನಿರ್ಲಕ್ಷ್ಯ ವಹಿಸುವ ಸೊಸೈಟಿಗಳಿಗೆ ಸಾಲ ಸೌಲಭ್ಯ ಕಡಿತಗೊಳಿಸುವುದಾಗಿ ಕೋಲಾರ,ಚಿಕ್ಕಬಳ್ಳಾಪುರ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಬ್ಯಾಲಹಳ್ಳಿ ಗೋವಿಂದಗೌಡ ಎಚ್ಚರಿಕೆ ನೀಡಿದರು. ನಗರದ ಡಿಸಿಸಿ ಬ್ಯಾಂಕ್ ಸಭಾಂಗಣದಲ್ಲಿ ಜನರಿಕ್ ಔಷಧ ಮಳಿಗೆಗಳನ್ನು ಜಿಲ್ಲೆಯ ಸೊಸೈಟಿಗಳಲ್ಲಿ ಶೀಘ್ರ ಆರಂಭಿಸುವ ಕುರಿತು ಬ್ಯಾಂಕ್ ಅಧಿಕಾರಿಗಳೊಂದಿಗೆ ನಡೆದ ಆನ್‌ಲೈನ್ ಸಭೆಯಲ್ಲಿ ಅವರು ಮಾತನಾಡಿದರು.
ಇಡೀ ವಿಶ್ವವನ್ನು ಕೋವಿಡ್ ಕಾಡುತ್ತಿದೆ, ರಾಜ್ಯದಲ್ಲೂ ಈ ಮಾರಿ ಜನರನ್ನು ಸಂಕಷ್ಟಕ್ಕೆ ದೂಡಿದೆ, ಇಂತಹ ಸಂದರ್ಭದಲ್ಲಿ ಜನತೆಗೆ ಸಾಲ ನೀಡುವುದರ ಜತೆಗೆ ಅವರ ಆರೋಗ್ಯದ ಕುರಿತು ಕಾಳಜಿ ವಹಿಸುವ ಅವಕಾಶ ಸಿಕ್ಕಿದೆ, ಕಡಿಮೆ ದರದಲ್ಲಿ ಗ್ರಾಮೀಣ ಜನತೆಗೆ ಔಷಧಿಗಳನ್ನು ಒದಗಿಸಿ ಅವರ ಜೀವ ಕಾಪಾಡುವ ಪುಣ್ಯದ ಕೆಲಸದ ಬಗ್ಗೆ ನಿರ್ಲಕ್ಷ್ಯ ತೋರದಿರಿ ಎಂದರು.
ರೈತರು, ಮಹಿಳೆಯರಿಗೆ ಸಾಲಸೌಲಭ್ಯ ನೀಡಿ ಆರ್ಥಿಕ ಶಕ್ತಿಯನ್ನು ಡಿಸಿಸಿ ಬ್ಯಾಂಕ್, ಸೊಸೈಟಿಗಳ ಮೂಲಕ ತುಂಬುತ್ತಿದ್ದೇವೆ, ಇದೀಗ ಬಡವರ ಆರೋಗ್ಯ ರಕ್ಷಣೆಗೆ ನೆರವಾಗುವ ಸೌಭಾಗ್ಯವೂ ಸೊಸೈಟಿಗಳಿಗೆ ಸಿಕ್ಕಿದೆ ಎಂದರು.
೧೪.೨೪ ಕೋಟಿ ರೂಬಡ್ಡಿ ಲಾಭ ಹಂಚಿಕೆಕಳೆದ ಏಳು ವರ್ಷಗಳ ಹಿಂದೆ ದಿವಾಳಿಯಾಗಿದ್ದ ಸೊಸೈಟಿಗಳು ಈಗ ಸದೃಢವಾಗಿವೆ, ಡಿಸಿಸಿ ಬ್ಯಾಂಕ್ ನಿಮಗೆ ಎಲ್ಲಾ ರೀತಿಯ ನೆರವು ಒದಗಿಸಿದೆ, ಕೆಸಿಸಿ ಹಾಗೂ ಸ್ವಸಹಾಯ ಗುಂಪುಗಳಿಗೆ ನೀಡಿರುವ ಸಾಲದ ಬಡ್ಡಿ ಲಾಭದಲ್ಲಿ ಈಗಾಗಲೇ ೧೪,೨೩,೯೬೫೯೮ ರೂಗಳನ್ನು ಸೊಸೈಟಿಗಳಿಗೆ ಹಂಚಿಕೆ ಮಾಡಲಾಗಿದೆ ಎಂದರು.ಈ ಹಣದಲ್ಲೇ ಜನರಿಕ್ ಮಳಿಗೆ ಆರಂಭಿಸಲು ಅಗತ್ಯವಾದ ಮೂಲಭೂತ ಸೌಲಭ್ಯ ಪಡೆದುಕೊಳ್ಳಿ ಎಂದು ತಾಕೀತು ಮಾಡಿ, ಕೂಡಲೇ ಓರ್ವ ಡಿ-ಫಾರ್ಮ ಮುಗಿಸಿದ ಫಾರ್ಮಾಸಿಸ್ಟ್‌ರನ್ನು ನೇಮಿಸಿಕೊಳ್ಳಿ ಎಂದು ಸೂಚಿಸಿದರು.
ಪ್ರಾಥಮಿಕ ಆರೋಗ್ಯ ಕೇಂದ್ರಗಳ ಆವರಣದಲ್ಲೇ ಜನರಿಕ್ ಔಷಧ ಮಳಿಗೆ ಆರಂಭಿಸಲು ಒತ್ತು ನೀಡಿ, ಈ ಸಂಬಂಧ ಅನುಮತಿ ಹಾಗೂ ಜಾಗ ಪಡೆದುಕೊಳ್ಳಿ, ಇದಕ್ಕೆ ಸರ್ಕಾರದ ಅನುಮತಿಯೂ ಸುಲಭವಾಗಿ ಸಿಗುತ್ತದೆ ಎಂದು ತಿಳಿಸಿದರು.ಜನರಿಕ್ ಮಳಿಗೆ ಆರಂಭಕ್ಕೆ ಸಹಕಾರ ಮಹಾಮಂಡಳದ ನೆರವಿನ ಜತೆಗೆ ಡಿಸಿಸಿ ಬ್ಯಾಂಕ್ ಮತ್ತು ಅಫೆಕ್ಸ್ ಬ್ಯಾಂಕಿನಿಂದಲೂ ನೆರವು ಬೇಕಾದಲ್ಲಿ ಒದಗಿಸುವುದಾಗಿ ಭರವಸೆ ನೀಡಿ, ಸೊಸೈಟಿಗಳಿಗೆ ಸಂಪನ್ಮೂಲ ಕ್ರೋಢೀಕರಣಕ್ಕೆ ಇದೊಂದು ಉತ್ತಮ ಯೋಜನೆಯಾಗಿದೆ, ಬಡವರ ಸೇವೆಯ ಜತೆಗೆ ಹೆಚ್ಚಿನ ಲಾಭವೂ ಸಿಗಲಿದೆ ಎಂದರು. ಜನರಿಕ್ ಮಳಿಗೆ ಆರಂಭಿಸುವ ಸಂಬಂಧ ಜಿಲ್ಲೆಗೆ ಡಿಸಿಸಿ ಬ್ಯಾಂಕ್ ಎಜಿಎಂ ಶಿವಕುಮಾರ್ ಅವರನ್ನು ನೋಡಲ್ ಅಧಿಕಾರಿಯನ್ನಾಗಿ ನೇಮಿಸಲಾಗಿದೆ, ಸೊಸೈಟಿಗಳ ಕಾರ್ಯದರ್ಶಿಗಳು ಅಗತ್ಯ ಮಾಹಿತಿ, ಸಹಕಾರಕ್ಕಾಗಿ ಅವರನ್ನು ಸಂಪರ್ಕಿಸಿ ಎಂದು ತಿಳಿಸಿದರು. .
ಸಭೆಯಲ್ಲಿ ಎಜಿಎಂಗಳಾದ ಶಿವಕುಮಾರ್,ಬೈರೇಗೌಡ, ನಾಗೇಶ್, ಹುಸೇನ್ ದೊಡ್ಡಮನಿ, ಅಮರೇಶ್,ಶುಭ, ಮಮತಾ, ಹ್ಯಾರೀಸ್, ಜಬ್ಬಾರ್, ಬಾಲಾಜಿ ಮತ್ತಿತರರು ಉಪಸ್ಥಿತರಿದ್ದರು.