ಜನರಲ್ಲಿ ಭಯ ಮೂಡಿಸುವ ವಾತಾವರಣ ಕಾಂಗ್ರೆಸ್ ಮಾಡುತ್ತಿದೆ

ಮೈಸೂರು,ಏ.30: ಕೊರೋನಾವನ್ನು ಅಸ್ತ್ರ ಮಾಡಿಕೊಂಡು ಇಡೀ ದೇಶದ ಜನರಲ್ಲಿ ಭಯ ಮೂಡಿಸುವ ವಾತಾವರಣವನ್ನು ಕಾಂಗ್ರೆಸ್ ಮಾಡುತ್ತಿದೆ ಎಂದು ಬಿಜೆಪಿ ರಾಜ್ಯ ವಕ್ತಾರ ಎಂ.ಜಿ.ಮಹೇಶ್ ಗಂಭೀರವಾಗಿ ಆರೋಪಿಸಿದರು.
ಮೈಸೂರು ಬಿಜೆಪಿ ಕಛೇರಿಯಲ್ಲಿಂದು ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಇಂತಹ ಸಂಕ್ರಮಣ ಸಂಕಷ್ಟದ ಕಾಲದಲ್ಲಿ ದೇಶ ಎದುರಿಸತಕ್ಕ ದೊಡ್ಡ ಸಂಕಷ್ಟದ ಪರಿಸ್ಥಿತಿಯಲ್ಲಿ ತನ್ನ ರಾಜಕೀಯವನ್ನು ಮಾಡುವ ಪ್ರಯತ್ನ ಕಳೆದ 6ವರ್ಷಗಳಲ್ಲಿ ಯಾವುದೇ ಅವಕಾಶ ಕಾಣದೆ ಒಂದು ಬಹುಮತ ಪಡೆದ ಜನರಿಂದ ಜನಾದೇಶ ಪಡೆದ ಸರ್ಕಾರವನ್ನು ಅಸ್ಥಿರ ಮಾಡುವಂತಹ ಕೆಲಸವನ್ನು ಕಾಂಗ್ರೆಸ್ ಮಾಡುತ್ತಿದೆ ಎಂದು ವಾಗ್ದಾಳಿ ನಡೆಸಿದರು.
ಪತ್ರಿಕಾಗೋಷ್ಠಿ ಮಾಡುವುದನ್ನೇ ಒಂದು ಕಾಯಕ ಮಾಡಿಕೊಂಡಿದ್ದಾರೆ ಕಾಂಗ್ರೆಸ್ ನವರು. ಅಸ್ಥಿರ ಮಾಡುವ ಅನೇಕ ಪ್ರಯತ್ನ ವನ್ನು ಕಾಂಗ್ರೆಸ್ ಈ ಹಿಂದೆ ಮಾಡಿತ್ತು. ಅದು ಸಿಎಎ ವಿರುಧ್ಧ ಹೋರಾಟ ಇರಬಹುದು, ಭೂ ಸುಧಾರಣೆಯ ಕಾನೂನು ಮಾಡಿದ ಸಂದರ್ಭದಲ್ಲಿ ಕೂಡ ರೈತರ ದಾರಿ ತಪ್ಪಿಸಿ ಇಡೀ ದೇಶದಲ್ಲಿ ಅಶಾಂತಿ ಸೃಷ್ಟಿಸುವ ಕೆಲಸ ಮಾಡುತ್ತಾ ಬಂತು. ಯಾವೆಲ್ಲ ಪ್ರಯತ್ನ ಮಾಡಿತ್ತೋ ಜನ ಅದನ್ನು ಒಪ್ಪದೆ ಪ್ರಧಾನಿ ಮೋದಿಯವರ ಬಿಜೆಪಿಗೆ ಮನ್ನಣೆ ಕೊಟ್ಟ ಸಂದರ್ಭದಲ್ಲಿ ಈಗ ಕೊರೋನಾ ವನ್ನು ಅಸ್ತ್ರ ಮಾಡಿಕೊಂಡು ಇಡೀ ದೇಶದ ಜನರಲ್ಲಿ ಭಯ ಮೂಡಿಸುವ ವಾತಾವರಣ ವನ್ನು ಕಾಂಗ್ರೆಸ್ ಮಾಡುತ್ತಿದೆ. ಜಗತ್ತು ಒಂದಾಗಿ ಕೊರೋನಾ ವಿರುದ್ಧ ಹೊರಾಡುವ ಸಂಕಲ್ಪ ಮಾಡಿದ್ದರೆ ಕಾಂಗ್ರೆಸ್ ಭಾರತದ ಎಲ್ಲ ಪ್ರಯತ್ನ ಗಳನ್ನು ಅಪಹಾಸ್ಯ ಮಾಡುವಂತದ್ದು, ಪ್ರಶ್ನೆ ಮಾಡುವಂತದ್ದು ಜನರಲ್ಲಿ ಭಯದ ವಾತಾವರಣ ಮುಡಿಸುವಂತಹ ಕೆಲಸ ಮಾಡುತ್ತಿದೆ ಎಂದು ವಗ್ದಾಳಿ ನಡೆಸಿದರು.
ವ್ಯಾಕ್ಸಿನ್ ತಯಾರಿಸಿದ್ರೆ ವ್ಯಾಕ್ಸಿನ್ ಬಗ್ಗೆ ಪ್ರಶ್ನೆ ಕೇಳುವಂತದ್ದು. ಜಗತ್ತು ಕೋವಾಕ್ಸಿನ್ ಪ್ರಭಾವ ಒಪ್ಪಿದರೆ ಕಾಂಗ್ರೆಸ್ ಅದರ ಬಗ್ಗೆ ಪ್ರಶ್ನೆಯನ್ನು ಮಾಡುವಂತದ್ದು. ಒಟ್ಟು ಕಾಂಗ್ರೆಸ್ ಈ ದೇಶದಲ್ಲಿ ಒಂದು ಅಶಾಂತಿ ಯನ್ನು ನಿರ್ಮಾಣ ಮಾಡಬೇಕು. ದೇಶದ ಜನರ ಮಧ್ಯದಲ್ಲಿ ಒಂದು ಪ್ರಕ್ಷುಬ್ಧ ತೆಯನ್ನು ತರಬೇಕು. ಜನ ಪ್ಯಾ ನಿಕ್ ಆಗಬೇಕು. ಪ್ಯಾನಿಕ್ ಮೂಲಕ ಸರ್ಕಾರದ ವಿರುಧ್ಧ ದಂಗೆ ಏಳಬೇಕು. ಆ ರೀತಿಯ ಪಿತೂರಿಯನ್ನು ಕಾಂಗ್ರೆಸ್ ಇಡೀ ದೇಶಾದ್ಯಂತ ಮಾಡುತ್ತಿರುವುದು ಕಂಡು ಬರುತ್ತಿದೆ.
ರಾಹುಲ್ ಗಾಂಧಿಯವರ ಟ್ವೀಟ್ ಇರಬಹುದು. ಕೊರೋನಾ ವಾರಿಯರ್ಸ್ ಇನ್ಶುರೆನ್ಸ ರದ್ದು ಮಾಡತ್ತೆ ಅಂತ ಸಂದೇಹ ಮೂಡಿಸುವ ಕೆಲಸ ಮಾಡುವಂತದ್ದು, 130ಕೋಟಿ ಜನರಿರುವ ದೇಶದಲ್ಲಿ ಕೊರೋನಾ ವಿರುದ್ಧ ಸಂಘಟಿತರಾಗಿ ಹೋರಾಡುವ ವೇಳೆ ಪ್ರಿಯಾಂಕಾ ಗಾಂಧಿಯವರು ಟ್ವೀಟ್ ಮಾಡುತ್ತಾರೆ ಈ ದೇಶದ ಆಕ್ಸಿಜನ್ ನ್ನು ಬೇರೆ ದೇಶಕ್ಕೆ ರಫ್ತು ಮಾಡಿದ್ದಾರೆ ಅಂತ, ನಾನು ಯಾಕೆ ಇದನ್ನು ಉಲ್ಲೇಖ ಮಾಡುತ್ತಿದ್ದೇನೆ ಎಂದರೆ ಕೊರೋನಾ ಸಮಯದಲ್ಲಿ ಕಾಂಗ್ರೆಸ್ ವಕ್ತಾರರು ಕಳೆದ ಹಲವು ದಿನಗಳಿಂದ ಬಿಜೆಪಿ ಸರ್ಕಾರದ ವಿರುದ್ಧ , ಬಿಜೆಪಿ ಪಕ್ಷದ ಬಗ್ಗೆ ಅಸಂಸದೀಯ, ಅನಾಗರಿಕ ಪದಗಳನ್ನು ಬಳಸಿ ಬಿಜೆಪಿಯ ಕುರಿತು ಜನರಿಗೆ ಗಾಬರಿ ಮೂಡಿಸುವ ಕೆಲಸವನ್ನು ಬೇಕಂತಲೇ ಪ್ರಕ್ಷುಬ್ಧ ಸ್ಥಿತಿಯನ್ನು ನಿರ್ಮಾಣ ಮಾಡುತ್ತಿದ್ದಾರೆ ಎಂದು ಗಂಭೀರ ಆರೋಪ ಮಾಡಿದರು.
ಮಾಜಿ ಪ್ರಧಾನಿ ದೇವೇಗೌಡರು ಇತ್ತೀಚೆಗೆ ಪ್ರಧಾನಿಯವರಿಗೆ ಪತ್ರ ಬರೆದಿದ್ದು, ಪ್ರಧಾನಿಯವರು ನೀವು ನೀಡಿದ ಸಲಹೆ ಸೂಚನೆ ಯಂತೆ ಕಾರ್ಯ ಮಾಡುತ್ತೇನೆ ಎಂದು ಹೇಳಿದ್ದಾರೆನ್ನುವುದನ್ನು ಖುದ್ದು ದೇವೇಗೌ ಡರೇ ತಿಳಿಸಿರುವುದನ್ನು ಮಾಧ್ಯಮದಲ್ಲಿ ನೋಡಿದ್ದೇವೆ ಎನ್ನುವ ಮೂಲಕ ದೇವೇಗೌಡರ ಕಾರ್ಯವನ್ನು ಶ್ಲಾಘಿಸಿದರು.
ಕಾಂಗ್ರೆಸ್ ಗೆ ಪತ್ರಿಕಾಗೋಷ್ಠಿ ಮಾಡೋದೇ ಒಂದು ಕಾಯಕ, ಆತ್ಮ ವಿಶ್ವಾಸ ಮೂಡಿಸಬೇಕಾಗಿತ್ತೋ ಆ ಕೆಲಸ ಮಾಡುತ್ತಿಲ್ಲ. ರಾಜಕೀಯ ಸಭ್ಯತೆಯೇ ಗೊತ್ತಿಲ್ಲದ ನೂರು ವರ್ಷದ ಪಕ್ಷ ಅಂದರೆ ಕಾಂಗ್ರೆಸ್ . ಜನರಿಂದ ಮತ್ತೆ ಮತ್ತೆ ಯಾಕೆ ತಿರಸ್ಕಾರವಾಗುತ್ತಿದೆ ಎಂದರೆ ತಿರಸ್ಕಾರದ ಹಿಂದಿರುವ ಈ ಮನಸ್ಥಿತಿ. ದೇಶವನ್ನು ದುರ್ಬಲಗೊಳಿಸುವ ಸಿಎಎ, ರೈತರ ಹೋರಾಟ ಇರಬಹುದು, ಮೋದಿಯವರನ್ನು ಸಂಕಷ್ಟಕ್ಕೀಡುಮಾಡಲು ಈ ರೀತಿ ಕೆಲಸ ಮಾಡುತ್ತಿರುವುದನ್ನು ನೋಡುತ್ತಿದ್ದೇವೆ. ಪತ್ರಿಕಾಗೋಷ್ಠಿ ಮಾಡುವ ಹಿಂದಿರುವ ದುರುದ್ದೇಶ ಜನತೆಗೆ ತಿಳಿಯಬೇಕಿದೆ.
ಬಿಜೆಪಿ ನಗರಾಧ್ಯಕ್ಷ ಟಿ.ಎಸ್. ಶ್ರೀವತ್ಸ ಮಾತನಾಡಿ ಜನರು ಪ್ಯಾನಿಕ್ ಆಗುತ್ತಿದ್ದಾರೆ. ಜನರು ಆತಂಕಕ್ಕೆ ಒಳಗಾಗುವುದು ಬೇಡ. ಆಕ್ಸಿಜನ್ ಲೆವೆಲ್ 92ರಲ್ಲಿದ್ದರೆ ಹೋಂ ಐಸೋಲೇಶನ್ ನಲ್ಲಿ ಇರಬಹುದು. ಪ್ಯಾನಿಕ್ ಆಗಬೇಡಿ. ಐಸಿಯು ಬೇಕು, ಆಕ್ಸಿಜನ್ ಬೆಡ್ ಬೇಕು ಎಂದು ಭಯದಿಂದ ಕೇಳುತ್ತಿದ್ದಾರೆ. ರೆಮಿಡಿಸಿವಿರ್ ತರಿಸುವಂತಹ ಕೆಲಸದಲ್ಲಿ ಈಗಾಗಲೇ ಕೈಜೋಡಿಸಿದ್ದೇವೆ. 75 ರೆಮಿಡಿಸಿವಿರ ನ್ನು ಪಕ್ಷದ ವತಿಯಿಂದ ತರಿಸುವ ಕೆಲಸವನ್ನು ಮಾಡುತ್ತಿದ್ದೇವೆ. ಸಹಾಯವಾಣಿ ಜೊತೆಗೆ ಆರು ಆಸ್ಪತ್ರೆಗಳು ಕೈಜೋಡಿಸುವ ಕೆಲಸ ಮಾಡಿವೆ ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾಧ್ಯಮ ನಗರ ವಕ್ತಾರರಾದ ಮೋಹನ್, ಮಾಧ್ಯಮ ಪ್ರಮುಖ ರಾಜ್ ಕುಮಾರ್ ,ಮಾಧ್ಯಮ ಜಿಲ್ಲಾ ವಕ್ತಾರರು ಡಾ. ಕೆ ವಸಂತಕುಮಾರ್ ,ಮಾಧ್ಯಮ ಸಹ ಸಂಚಾಲಕರು ಗಿರೀಶ್ ಉಪಸ್ಥಿತರಿದ್ದರು.